ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!

ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!

ಹೊರಗೆ ಹೊಟ್ಟೆಕಿಚ್ಚಾಗುವಷ್ಟು ಮಳೆ ಸುರೀತಿದೆ. ಇದೇ ಸರಿಯಾದ ಸಮಯ ಅಂದುಕೊಂಡ ನಿನ್ನ ನೆನಪುಗಳು ಅಂತ ಜಡಿಮಳೆಗೆ ಪ್ರತಿಸ್ಪರ್ದಿಯೇನೊ ಅನ್ನುವಂತೆ ಈ ಎದೆಯ ಹೊಲದೊಳಗೆ ಸುರೀತಿವೆ. ಅಲ್ಲಿ ಭೂರಮೆ ಹಚ್ಚ ಹಸಿರಿನಿಂದ ಶೃಂಗಾರಗೊಳ್ಳಲು ತಯಾರಿ ನಡೆಸುತ್ತಿದ್ದರೆ, ಇಲ್ಲಿ ನಿನ್ನ ಮಧುರ ನೆನಪುಗಳು ಈ ಎದೆಯೊಳಗಿಳಿದು ಈ ಜಗತ್ತಿಗೆ ಒಂದು ಪ್ರೇಮಗೀತೆಯನ್ನ ಬರೆಯಬಹುದಾದಷ್ಟು ಬೆಚ್ಚನೆಯ ಭಾವನೆಗಳನ್ನ ತಂದಿಟ್ಟಿವೆ. ಸುರೀತಿರುವ ಇಂತ ಮಳೆನಲ್ಲಿ ನಿನ್ನ ಬಂಗಾರದ ಬೆರಳಿಗೆ ನನ್ನ ಕಡುಕಪ್ಪು ಬೆರಳ ತಾಗಿಸಿಕೊಂಡು ನಡೆಯಬೇಕು, ಸುರೀತಿರುವ ಈ ಮಳೆನಲ್ಲಿ ನಿನಗೆ ಮಾತ್ರ ಕೇಳಿಸುವ ಹಾಗೆ ನಿನ್ನ ಹೆಸರ ಕೂಗಿ ಯಾವತ್ತು ನಾನು ನಿನ್ನವನು ಅಂದು ಬಿಡಬೇಕು, ಸುರೀತಿರುವ ಈ ಮಳೆನಲ್ಲಿ ನಿನ್ನ ಬಿಗಿದಪ್ಪಿ ಬೆಚ್ಚಗಾಗಬೇಕು, ಸುರೀತಿರುವ ಈ ಮಳೆನಲ್ಲಿ ನೀನು ಅಪ್ಪಣೆ ಕೊಟ್ಟರೇ ನಿನ್ನ ಕೆಂಪು ಕೆಂಪು ಕೆನ್ನೆಗೆ ಚಿಕ್ಕದೊಂದು ಗಾಯ ಮಾಡಿಬಿಡಬೇಕು, ನೀನು ಕೋಪಿಸಿಕೊಂಡರೆ “ಅಯ್ಯೋ ಪಾಪಚ್ಚಿ” ಅಂದು ಮತ್ತೊಂದು ಕೆನ್ನೆಗೂ ತಕ್ಕ ಶಾಸ್ತಿ ಮಾಡಿಬಿಡಬೇಕು. ನೀನು ಮತ್ತಷ್ಟು ಕೋಪಿಸಿಕೊಂಡರೆ ಲಜ್ಜೆಗೆಟ್ಟವನಂತೆ ನನ್ನೆರೆಡೂ ಕೆನ್ನೆಗಳನ್ನ ತೋರಿಸಿ “ಸೇಡು ತೀರಿಸಿಕೋ” ಅಂದು ನಿನ್ನ ಮತ್ತಷ್ಟು ಕಾಡಿಬಿಡಬೇಕು ನೋಡು.

ಎನ್ ಹುಡುಗನಪ್ಪ ಇವನು ಇಷ್ಟೊಂದು ಪೋಲಿ ಪೋಲಿ ಹಾಗಾಡ್ತಾನೆ ಅಂದುಕೊಂಡ್ಯ? ಹಾಗಾದ್ರೆ ತಪ್ಪು ಕಲ್ಪನೆ ಕಣೆ ನಿಂದು. ಅದೆಷ್ಟು ಹುಡುಗಿಯರನ್ನ ಈ ಕಣ್ಣುಗಳಲ್ಲಿ ತುಂಬಿಕೊಂಡಿದ್ದೇನೊ ಆ ಶ್ರೀ ಕ್ರಿಷ್ಣ ಪರಮಾತ್ಮನಿಗೆ ಗೊತ್ತು.ಆದರೆ ಇಲ್ಲಿ ಈ ಎದೆಯ ಬಾಗಿಲಿನ ಮುಂದೆ ರಂಗೋಲಿ ಇಡುವ ಹುಡುಗಿ ಮಾತ್ರ ನೀನಾಗಬೇಕು ಅಂದುಕೊಂಡಿದ್ದಂತು ನಿನ್ನ ಕೊರಳ ತಿರುವಿನಲ್ಲಿರುವ ಕಡುಗಪ್ಪು ಮಚ್ಚೆಯಷ್ಟೆ ಸತ್ಯ. ನಾನು ಎನ್ ಹೇಳಿದ್ರು ನೀನ್ ಕೇಳೊಲ್ಲ ಅಂತ ನನಗೆ ಗೊತ್ತಿದೆ ಬಿಡು. ಹೇಗಪ್ಪಾ ಅಂದ್ರೆ “ನಿನಗೆ ನೀಲಿ ಬಣ್ಣದ ಚೂಡಿದಾರ್ ಒಪ್ಪುತ್ತೆ ಕಣೆ, ಪ್ಲೀಸ್ ಪ್ಲೀಸ್ ಪ್ಲೀಸ್ ನಾಳೆ ಹಾಕೊಂಡು ಬರ್ತೀಯ ಅಂತ ಅದೆಷ್ಟು ಗೋಗರೆದಿದ್ದೆ ಹೇಳೂ? ಆದರೇ ನೀನು ಮಾಡಿದ್ದೇನು? ಅರವತ್ತು ವರ್ಷದ ಅಜ್ಜೀರು ಸುತ್ತಿಕೋತಾರಲ್ಲ ಕೆಂಪು ಕಲರ್ ಸೀರೆ! ಅದನ್ನ ಸುತ್ತಿಕೊಂಡು ಹರಳೆಣ್ಣೆ ಬೇರೆ ಹಾಕೊಂಡು ತಲೆಗ್ ದಾಸವಾಳ ಹೂವು ಮುಡಿದುಕೊಂಡು ಬಂದು ಹಂಗೆ ನನ್ನ ತಿಂದು ಬಿಡೋಳ್ ತರ ನೋಡ್ತ ಇದ್ದಾಗ್ಲೆ ಅನ್ಕೊಂಡೆ, ಸದ್ಯಕ್ಕೆ ನನ್ನ ಬಗೆಗಿರುವ ನಿನ್ನ ತಪ್ಪು ತಪ್ಪು ಕಲ್ಪನೆಗಳೆಲ್ಲ ಮಾಯವಾಗೋಕೆ ಸಮಯ ಬೇಕು ಅನ್ಸುತ್ತೆ ಅಲ್ವ? ಸರಿ ಅವತ್ತು ಹೇಗೆ ಕಾಣಿಸ್ತಿದ್ದೆ ಗೊತ್ತ? ಸುಮ್ಮನಿರು ನನಗೆ ನಗು ತಡಿಯೋಕೆ ಆಗ್ತ ಇಲ್ಲಪ್ಪ..!

ನೋಡು ಹೋದ ಸಲದ ಮಳೆಗಾಲದ ರಾತ್ರಿಗಳೆಲ್ಲ ನೀನಿಲ್ಲದೇ ಬರೀ ನಿನ್ನ ನೆನಪುಗಳಲ್ಲೇ ಬೆಚ್ಚಗಾದವು..ಈ ಸಲ ಹಾಗಾಗೋದು ಬೇಡ ಕಣೆ. ಇಂತಾ ರಾಕ್ಷಸ ಚಳಿಗೆ ನೀನೆ ಆಗಬೇಕು. ನಿನಗಿಷ್ಟವಾಗಿರುವ ಕೆಲವೇ ಕೆಲವು ಹಾಡುಗಳನ್ನ ತಂದಿಟ್ಟುಕೊಂಡಿದ್ದೇನೆ. ನನಗೇನು ದುರಾಸೆ ಇಲ್ವೆ ಒಂದೊಂದು ಹಾಡುಕೇಳಿಯಾದ ಮೇಲೆ ಒಂದೊಂದು ಪಪ್ಪಿ ಕೊಡಬೇಕಪ್ಪ ಅಷ್ಟೆ ಕಣೆ ನಿನ್ನ ಮುದ್ದು ಹುಡುಗ ಹದ್ದು ಮೀರೋದಿಲ್ಲ.! ಮದುವೆಯಾಗುವವರೆಗೂ ನೀನು ನನಗೆ ಪಕ್ಕದ ಮನೆಯ ಪಾಪು..! ನಿನ್ನನ್ನ ಆಕಾಶಬಣ್ಣದ ನೀಲಿ ನೀಲಿ ಚೂಡಿದಾರ್ನಲ್ಲಿ ನೋಡ್ಲೆಬೇಕು ಅಂತ ಹೊಸ ಚೂಡಿದಾರ್ ತಂದಿಟ್ಟುಕೊಂಡಿದ್ದೇನೆ. ನೀನು ಬಟ್ಟೆ ಬದಲಿಸುವಾಗ ನಾನು ಹುಟ್ಟುಕುರುಡನಾಗಿದ್ದು ಬಿಡ್ತೀನಿ ಸರೀ ನ ? ನಂಬ್ತೀಯ ತಾನೆ? ಯಾಕಂದ್ರೆ ನಂಬಿಕೆ ಅಂದ್ರೆ ನೀನು ಅಂತ ನಂಬಿರುವ ಪೆದ್ದು ಪೆದ್ದು ಹುಡುಗ ನಾನು..

ಅದೇ ನಿನ್ನ.. ಡಿಯರ್ ಡೆಡ್ಲಿ

Rating
No votes yet