ನೀ ಎನ್ನ ಹಿಂದೆ
ಬರಹ
ಬರುವಾಗ ನಾ ಏನ ತರಲಿಲ್ಲ
ಹೋಗುವಾಗ ನಾ ಏನ ಒಯ್ಯುವದಿಲ್ಲ
ಅಲ್ಲಿ ನಿನಗೇನೂ ಕೊಡಲಾಗುವುದಿಲ್ಲ
ಆದರೂ ನೀ ಎನ್ನ ಹಿಂದೆ ಬರುವೆಯಾ?
ನನ್ನದೇನಿಲ್ಲವೆಂದು ತಿಳಿದವ ನಾ
ಅದಕಾಗಿಯೇ ಬಂದದೆಲ್ಲವನ್ನೂ
ಇರದವರಿಗೆ ನಾ ಕೊಡುತಿರುವೆ
ಅದಕಾಗಿ ನೀನೇಕೆ ಹಪಹಪಿಸುವೆ
ಉಣಲು ಕೊಡುತಿಹ ಆ ದೈವ
ಉಡಲು ಕೊಡುತಿಹ ಈ ನನ್ನ ದೇವ
ಎಲ್ಲ ನಡೆಯುತಿಹುದು ದೈವ ಸಂಕಲ್ಪದಂತೆ
ಇನ್ನೇಕೆ ಬೇಕು ನನಗೆ ಮನೆಯ ಚಿಂತೆ
ಇಲ್ಲದವರೇ ಬನ್ನಿ ನೀವೇ ನನ್ನ ಅತಿಥಿ
ಇಂದು ನನಗಿದೆ ಕೊಡುವ ಸ್ಥಿತಿ
ನಾಳೆ ಏನಾಗುವುದೋ ನನ್ನ ಗತಿ
ಅದ ಚಿಂತಿಸಲು ಎನಗಿಲ್ಲ ಮತಿ
ಇಷ್ಟಾದರೂ ಈ ಭಂಡನ ಕೈ ನೀ ಬಿಡುವುದಿಲ್ಲ
ನೀನೇ ನನಗೆ ತಕ್ಕುದಾದ ಆಸ್ತಿ ಅಂತಸ್ತು ಎಲ್ಲ
ನನಗಿನ್ಯಾವುದರ ಪರಿವೆ ಇಲ್ಲವೇ ಇಲ್ಲ
ನೀ ನನ್ನೊಂದಿಗಿರೆ ನನಗಷ್ಟೇ ಸಾಕಲ್ಲ