ಉಳಿದವರ ನಡುವೆ...

ಉಳಿದವರ ನಡುವೆ...

ಬರಹ

ತುಂಟತನ ಹಾಸ್ಯಗಳೆಲ್ಲ ಮುಗಿದಿತ್ತು ಮುಕ್ತಾಯ ಸನಿಹವಾದಂತಿತ್ತು...
ಆಗಿರುವುದೇನು?! ಮೊನ್ನೆಯ ತನಕ ನಾನು ನಾನಾಗಿದ್ದೆ.
ಓಡುವಮನಸಿನೊಡನೆ ಆಡುತ್ತಾ ಹುಡುಗಾಟದ ಕ್ಷಣಗಳನ್ನು ಕಳೆಯುತ್ತಿದ್ದೆ.
ಆಡುವ ಮಾತುಗಳಿಗೆ ಅರ್ಥವಿರಲಿಲ್ಲ. ಕಾಣುವ ಕನಸುಗಳಿಗೆ ಎಲ್ಲೆಯಿರಲಿಲ್ಲ. ದುಮ್ಮಿಕ್ಕುವ ಅಲೆಯೊಡನೆ ಅಲೆಯಾಗಿ ಸಂಭ್ರಮಿಸುತ್ತಿದ್ದೆ,ಆಗಸವ ಚುಂಬಿಸುವ ಸಾಗರನ ದೂರಕ್ಕೆ ಕಣ್ಣೋಟವನ್ನು ಸ್ಪರ್ಶಿಸುತ್ತಿದ್ದೆ.ಹೊಂಗಿರಣಗಳ ಹೊಳಪಿನಲ್ಲಿ ತಂಗಾಳಿಯ ತಂಪಿನಲ್ಲಿ ಮರಳಿಗೆ ಮೈಯ್ಯೊಡ್ಡಿ ಮಲಗುತ್ತಿದ್ದೆ.

ಎಲ್ಲಿಹೋಯಿತು?! ಆ ಸುಂದರ ಕ್ಷಣಗಳು,ಸಂತಸದ ದಿನಗಳು. ಒಂದು ಕ್ಷಣ ಎಲ್ಲೆ ಮೀರಿ ಮುಗಿಲೆತ್ತರಕ್ಕೆದ್ದ ಆ ಭಯಂಕರ ಅಲೆಗಳು ಎಲ್ಲವನ್ನೂ ಕೊಚ್ಚಿಕೊಂಡು ಹೋದವೇ! ಪ್ರಾಣ ಪಕ್ಷಿಯನು ಹೊತ್ತು, ಭಯವೆಂಬ ಬೀಜವನ್ನು ಬಿತ್ತಿ,ಸಂಬಂಧದ ಎಳೆಗಳನ್ನು ಶವವಾಗಿಸಿ,ನನ್ನ ಮನದ ಕನಸ ಕೂಸುಗಳು ಕಣ್ಬಿಡದಂತೆ ಕತ್ತಲಲ್ಲಿ ಕರಗಿಸಿ,ನನ್ನದಾದ ಎಲ್ಲವನ್ನೂ ಕಬಳಿಸಿ, ಕಣ್ಣೀರಿದಲು ಈ ಜೀವವನ್ನು ಮಾತ್ರ ಉಳಿಸಿ ಹೊರಟುಹೋಯಿತು. ಚೀರಿಟ್ಟ ಪ್ರಕೃತಿಯ ಧನಿಯಲ್ಲಿ ನನ್ನ ಬದುಕು, ನನ್ನಂತೆ ಅದೆಷ್ಟೋ ಜನರ ಬದುಕು ಹೇಳಹೆಸರಿಲ್ಲದ ಧೂಳಾಯಿತು.

ನನ್ನಲ್ಲಿ ದುಃಖ ಹುದುಗಿಹೋಗಿದೆ. ಅದರೆ ಎಲ್ಲವನ್ನೂ ಕಳೆದುಕೊಂಡಮೇಲೂ ಬದುಕುವ ಛಲವಿದೆ, ಹಂಬಲವಿದೆ ಇನ್ನೂಕರಗದೇ ಉಳಿದ ಪುಟ್ಟ ಅಸೆಯಿದೆ. ಈ ಭೂಮಿಯಮೇಲೆ ನಮಗಾಗಿ ಮಿಡಿವವರಿದ್ದಾರೆ. ಮುಳುಗುತ್ತಿರುವವರನ್ನು ಮೇಲೆತ್ತಿ ಜೀವತುಂಬುವ ಕನಿಕರತೆ ಇದೆ ಎಂಬ ನಂಬಿಕೆಯಿದೆ. ನಮ್ಮಬದುಕಲ್ಲಿ ಹೊಸ ಬೆಳಕು ಮೂಡಬೇಕು. ಮರುಜನ್ಮಪಡೆದ ನಾವು ಹೊಸಬದುಕಿನೆಡೆಗೆ ಪಯಣಿಸಬೇಕು. ಕಳೆದದಿನಗಳಲ್ಲಿ ಬರಿ ನಾನಾಗಿದ್ದವಳು ಈಗ ನಿಮ್ಮಲ್ಲಿ ಒಂದಾಗುತ್ತಿದ್ದೇನೆ. ನೀವು ನಮ್ಮವರಾಗಿ ನಿಮ್ಮಸಹಾಯ ಹಸ್ತವ ನೀಡಿ ಬದುಕಲು ಮಾರ್ಗದರ್ಶಿಗಳಾಗಿ.

ನಾನಾರೆಂದು ನಿಮಗೆ ತಿಳಿದಿಲ್ಲ ಅಲ್ಲವೆ ? ತ್ಸುನಾಮಿಯೆಂಬ ರಕ್ಕಸ ಅಲೆಗಳು ಎಬ್ಬಿಸಿದ ಪ್ರಳಯದಲ್ಲೂ ಉಳಿದ ಪ್ರಾಣ ನಾನು...

ಎಲ್ಲವೂ ನೆನಪು. ಎಂದೂಮಾಸದ ಭಯಂಕರವೆನಿಸುವ ತಲ್ಲಣ. ಅದೆಷ್ಟೋ ಮಾತುಗಳು ಅನರ್ಥವೆನಿಸುವ ಮೌನವೆನಿಸುವುದೆ? ಆ ಹರಿದ ಪುಟಗಳ ದುಃಖದ ಸಾಲುಗಳನ್ನು ತೆಗೆದುಕೊಳ್ಳುವರಿದ್ದರೆ ಸಿಕ್ಕಷ್ಟಕ್ಕೇ ಮಾರಿಬಿಡಬಹುದಿತ್ತು.ಸತ್ತಕನಸುಗಳೊಡನೆ ಈ ನೆನಪುಗಳೂ ಸಮಾಧಿಯನ್ನು ಸೇರುವಂತಿದ್ದರೆ..!
ಮುಂದೆ ಮಾತುಗಳೇ ಮೂಡಲಿಲ್ಲ. ನುಗ್ಗಿಬರುತ್ತಿದ್ದ ದುಃಖವನ್ನು ತಡೆಯಲು ಆಗಲೇ ಇಲ್ಲ.ನೆರೆದಿದ್ದ ಜನಸ್ಥೋಮವೂ ಸ್ತಬ್ಧವಾಗಿತ್ತು, ನಾಟಕದ ಮುಗಿಯದ ಅಂಖಕ್ಕೆ ಪರದೆ ಎಳೆದಿತ್ತು. ನೆರೆದ ಜನರಿಗೂ ಮುಕ್ತಾಯ ಬೇಕಿರಲಿಲ್ಲ. ಅದೀನೆನಿಸುತ್ತಿತ್ತೋ ಮಾತಿಲ್ಲದ ಮೌನದಲಿ ತೆರಳುತ್ತಿದ್ದರು.ನಾನು ಒಮ್ಮೆಲೇ ಪರದೆಯ ಹಿಂದೆ ಸರಿದುಹೋದ ಮಲ್ಲಿಕಾಳಿಗಾಗಿ ಹು
ದುಕುತ್ತಿದ್ದೆ. ಮಲ್ಲಿಕಾ ಶಬ್ಧಗಳು ಅರ್ಥವಾಗುವಷ್ಟು ಬೆಳೆದವಳಲ್ಲ. ಚಿಕ್ಕವಳು,ಮುಗ್ದ ಮನಸಿನ ಪುಟ್ಟ ಹುಡುಗಿ. ಆದರೆ ನಟಿಸಿದ್ದಾಳೆ ಮನಗಳಲಿ ಸೇರುವಂತೆ, ಜಾಲಿಯಮರದಡಿಯ ಬರಿ ಬೋಳು ಮಾತುಗಳೆನಿಸಲಿಲ್ಲ!

ಆ ದೃಶ್ಯದಿಂದ ಹೊರಬಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದವಳನ್ನು ಸಂತೈಸುತ್ತಿದ್ದೇವೆ.ಅಂತೂ ಮೌನವಾಗಿದ್ದಾಳೆ. ಆ ದಿನ ಅದೆಷ್ಟೋಹೊತ್ತು ಕಣ್ಣುತೆರೆದೇ ಮಲಗಿದ್ದಳು.

ದಿನಗಳು ಕಳೆಯುತ್ತಿವೆ,ಮುಗ್ಧಮನಸ್ಸಿನ ಮುದ್ದು ಗೌರಿ ಕಳೆದುಹೋಗಿದ್ದಾಳೆ.ಬಾಲ್ಯವೆಂಬುದು ಅದೆಲ್ಲೋ ಕೈಜಾರಿ ಹೋಗಿದೆ. ಆದಿನ ದಿನಪೂರ್ತಿ ಸುತ್ತಾಟ ಅದೆಷ್ಟೊ ದಿನದನಂತರ ಕೊನೆಗೆ ನಿಂತಿದ್ದೆವು ಸಾಗರ ತೀರದಲ್ಲಿ. ಬಾನಂಗಳದಲಿ ರವಿಬಣ್ಣದೋಕುಳಿ ಎರಚಿ ಹೊರಡಲು ಸನ್ನದ್ಧನಾಗುತ್ತಿದ್ದ. ಮಲ್ಲಿಕಾ ಭಾರವಾದ ಹೆಜ್ಜೆಗಳನ್ನಿಟ್ಟು ದಡದಲ್ಲಿ ದಡವಾಗಿ ಸಾಗುತ್ತಿದ್ದಳು. ಅವಳ ಹೆಜ್ಜೆಗುರುತುಗಳನ್ನೇ ನೋಡುತ್ತಿದ್ದೆ. ಅ ಹೆಜ್ಜೆಗುರುತುಗಳು ಸ್ಪಷ್ಟ ಮನಸಿನ ಅಸ್ಪಷ್ಟ ಮಾತಿನಂತಿದ್ದವು. ತೆರೆಗಳೊಡನೆ ಅವಳು ಆಡಲೇ ಇಲ್ಲಾ. ಕಪ್ಪೆಚಿಪ್ಪುಗಳೆಲ್ಲಾ ಜೀವ ಕಳೆದುಕೊಂಡು ಮರಳಿನಾಳದಲಿ ಹುದುಗಿಹೋಗುತ್ತಿದ್ದವು.

ನಮಗೆ ಅರ್ಥವಾಗಿತ್ತು ಆ ದಿನ ಅವಳು ನಟಿಸಿರಲಿಲ್ಲ. ಎಲ್ಲವೂ ಇದ್ದು ಏನೂ ಇರದಂತಾಗಿದ್ದಳು. ಈಗ ಅಳುವಸರದಿ ನಮ್ಮದು. ದೂರದಲ್ಲಿ ಸುಪ್ರಸಿದ್ದ ಮನೊರೋಗದ ಹೊಸ್ಪಿಟಲ್ ಬ್ರಹದಾಕಾರವಾಗಿ ಬೆಳೆದು ನಿಂತಿರುವುದು ಕಾಣುತ್ತಿತ್ತು.