ಭಾಗ - ೫

ಭಾಗ - ೫

೧೯೮೪ ರ ಅಕ್ಟೋಬರ್ ೩೧ನೇ ತಾರ್‍ಈಖು, ಸಿ.ಎ.ಐ.ಐ.ಬಿ ಪರೀಕ್ಷೆಯಿದ್ದಿತು. ಮನೆಯ ಎದುರೇ ಇದ್ದ ನಾಷ್ಯನಲ್ ಕಾಲೇಜಿಗೆ ಹೋಗಿ ಪರೀಕ್ಷೆಯನ್ನು ಬರೆಯಬೇಕಿತ್ತು. ನಾಲ್ಕೈದು ದಿನಗಳ ಹಿಂದೆಯಷ್ಟೇ ಹಲ್ಲಿಗೆ ಸಿಲ್ವರ್ ತುಂಬಿಸಿದ್ದ ಸಮಯ. ಆಗ ನನಗೆ ಸ್ವಲ್ಪ ಜ್ವರವಿದ್ದಿತ್ತು. ಅಂದು ಪರೀಕ್ಷೆ ಇದ್ದುದರಿಂದ ಹೋಗಲೇ ಬೇಕಿತ್ತು. ಏನನ್ನೂ ತಿನ್ನಲು ಮನಸ್ಸಿರಲಿಲ್ಲ. ಅಷ್ಟು ಹೊತ್ತಿಗೆ ಸ್ನೇಹಿತ ರಾಘವೇಂದ್ರ (ಕಾಲೇಜಿನಿಂದ ಸ್ನೇಹಿತನಾಗಿದ್ದು ಒಟ್ಟಿಗೇ ಬ್ಯಾಂಕು ಸೇರಿದವನು), ಅವರ ತಾಯಿ ಕಳುಹಿಸಿದರೆಂದು ರವೆ ಗಂಜಿಯನ್ನು ತಂದಿದ್ದ. ಬೇರೆಯ ದಿನಗಳಲ್ಲಿ ಗಂಜಿಯನ್ನು ನೋಡಲೂ ಅಸಹ್ಯ ಪಡುತ್ತಿದ್ದವನು ಅಂದು ಚಪ್ಪರಿಸಿಕೊಂಡು ತಿಂದಿದ್ದೆ. ಅವನೊಡನೆ ನಾನು ಪರೀಕ್ಷೆಗೆ ಹೊರಟೆ. ಸರಿಯಾಗಿ ಓದಿರಲಿಲ್ಲ. ಏನು ಬರೆಯುವುದು ಎಂದು ಯೋಚಿಸುತ್ತಿರುವಷ್ಟರಲ್ಲೇ ಅಂದಿನ ಪರೀಕ್ಷೆ ಮುಂದೆ ಹೋಗಿದೆಯೆಂದೂ ತಿಳಿದಿತ್ತು. ಅಬ್ಬಾ! ಕೊನೆಗೂ ಓದಲು ಸಮಯ ಸಿಕ್ಕಿತು ಎಂದು ಸಂತಸ ಪಟ್ಟಿದ್ದೆ. ಏಕೆ ಪರೀಕ್ಷೆ ಮುಂದೆ ಹೋಗಿದೆ ಎಂದು ತಿಳಿಯಲೂ ವ್ಯವಧಾನವಿರಲಿಲ್ಲ.
ಎಂತಹ ವಿಪರ್ಯಾಸ ನಾಯಕಿಯನ್ನು ಕಳೆದುಕೊಂಡು ಇಡೀ ದೇಶವೇ ಶೋಕದಲ್ಲಿ ಮುಳುಗಿದ್ದಾಗ ನಾನು ಪರೀಕ್ಷೆ ಮುಂದಕ್ಕೆ ಹೋಗಿರುವುದರ ಬಗ್ಗೆ ಸಂತೋಷ ಪಡ್ತಿದ್ದೆ. ಮರುದಿನ ದಿನ ಪತ್ರಿಕೆಯನ್ನು ನೋಡಿದ ಮೇಲೆಯೇ ಇಂದಿರಾ ಗಾಂಧಿಯವರ ಕೊಲೆಯ ಬಗ್ಗೆ ತಿಳಿದದ್ದು.

ಇದಕ್ಕೆ ಒಂದು ವರ್ಷ ಮೊದಲು (ಸೆಪ್ತೆಂಬರ್ ೧, ೧೯೮೩) ನನ್ನ ತಾತ (ತಾಯಿಯ ತಂದೆ) ಕೂಡಾ ದೈವಾಧೀನರಾದದ್ದು. ಅವರ ಬಗ್ಗೆ ಒಂದೆರಡು ಮಾತುಗಳು. ನನ್ನ ತಾಯಿ ನನ್ನ ತಾತ ಅಜ್ಜಿಯರಿಗೆ ಮೊದಲನೆಯ ಮಗಳು. ನನ್ನ ತಾತ ಆರೋಗ್ಯ ಇಲಾಖೆಯಲ್ಲಿ ಆರೋಗ್ಯಾಧಿಕಾರಿಯಾಗಿ ನಿವೃತ್ತರಾದವರು. ನಾಟಕಗಳಲ್ಲಿ ಪಾತ್ರವಹಿಸಿ ಬಹಳ ಹೆಸರು ಮಾಡಿದ್ದರು. ಏ ವಿ ವರದಾಚಾರ್ಯರ ನಾಟಕಗಳನ್ನು ನೋಡಿ ಅದರಿಂದ ಪ್ರೇರಿತರಾಗಿದ್ದರು.
ಅಯ್ಯೋ! ಅವರ ಹೆಸರೇ ಹೇಳಲಿಲ್ಲ ಅಲ್ವೇ. ಸಿ.ಕೆ.ಸೂರ್ಯನಾರಾಯಣ ರಾವ್. ಚಿಕ್ಕ ವಯಸ್ಸಿನಿಂದಲೂ ಬಹಳ ಕಷ್ಟಪಟ್ಟು ಮೇಲೆ ಬಂದವರು. ಅವರು ನನ್ನ ತಾತ ಎಂದು ಹೇಳಿಕೊಳ್ಳಲು ಒಂದು ಬಗೆಯ ಹೆಮ್ಮೆ ಆಗುತ್ತದೆ. ಮಲೇರಿಯಾಲಜಿಯಲ್ಲಿ ಉನ್ನತ ತರಬೇತಿಗಾಗಿ ಇಂಡೋನೇಷಿಯಾಗೆ ಹೋಗಿ ಬಂದಿದ್ದರು. ಆಗ ಇಂಡೋನೇಷಿಯಾ ಜನ ಜೀವನದ ಬಗ್ಗೆ ಒಂದು ಸಣ್ಣ ಹೊತ್ತಿಗೆಯನ್ನು ಬರೆದು ಪ್ರಕಟಿಸಿದ್ದರು. ಇದಷ್ಟೇ ಅಲ್ಲ ವೃತ್ತಿಯಲ್ಲಿ ಆರೋಗ್ಯ ಅಧಿಕಾರಿಯಾಗಿ ಉತ್ತಮ ಹೆಸರನ್ನು ಪಡೆದಿದ್ದವರು, ನಾಟಕ ರಂಗದ ಜೀವನದ ಒಳ ಹೊರಗನ್ನು ತಿಳಿಸುವ ಲೇಖನವನ್ನು ಧಾರಾವಾಹಿಯಾಗಿ ಸುಧಾ ವಾರಪತ್ರಿಕೆಯಲ್ಲಿ ಬರೆದು ಪ್ರಕಟಿಸಿದ್ದರು. ದೂರ್ವಾಸ ಮುನಿಯ ಅಪರಾವತಾರವಾಗಿದ್ದ ಅವರನ್ನು ಕಂಡು ಎಂದಿಗೂ ದೂರವಿರುತ್ತಿದ್ದೆ. ಕೆಲಸ ಸಿಕ್ಕ ಮೇಲೆಯೇ ನಾನು ಅವರೊಂದಿಗೆ ಮುಕ್ತವಾಗಿ ಮಾತನಾಡಿದ್ದು. ನಾನು ಬಿ.ಕಾಂ. ಮೊದಲನೆಯ ದರ್ಜೆಯಲ್ಲಿ ಪಾಸಾಗಿದ್ದರೂ ಒಂದು ವರ್ಷದ ಕಾಲ ಸರಕಾರೀ ನೌಕರಿ ಸಿಕ್ಕದೇ ಒದ್ದಾಡಿತ್ತಿದ್ದು, ನಂತರ ಎ.ಜೀಸ್ ಆಫೀಸಿನಲ್ಲಿ ಕೆಲಸ ಸಿಕ್ಕಿದ ಹಿಂದೆಯೇ ರಿಸರ್ವ್ ಬ್ಯಾಂಕಿನಲ್ಲಿ ಮೆಡಿಕಲ್ ಎಕ್ಸಾಮಿನೇಷನ್ ಆದಾಗಲೇ, ಕಾರ್ಪೋರೇಷನ್ ಬ್ಯಾಂಕಿನಿಂದ ಕೆಲಸಕ್ಕೆ ಆರ್ಡರ್ ಬಂದು, ಆಗಲೇ ಕರ್ನಾಟಕ ಸರಕಾರದ ನೌಕರಿಯ ಆರ್ಡರ್ ಬಂದದ್ದು, ಕೇಳಿದ ಅವರು ಮೊದಲ ಬಾರಿಗೆ ಮನೆಯ ಅಂಗಳದ ಕಲ್ಲು ಹಾಸಿನ ಮೇಲೆ ಜೊತೆಗೆ ಕುಳ್ಳಿರಿಸಿಕೊಂಡು ಬಹಳ ಆಪ್ಯಾಯತೆಯಿಂದ ಮಾತನಾಡಿಸಿದ್ದು ಮರೆಯಲಾರದ ಘಟನೆ. ಅವರಾಡಿದ ಮಾತುಗಳು ಈಗಲೂ ಕಿವಿಯಲ್ಲಿ ಗುಂಯ್‍ಗುಡುತ್ತಿವೆ.

'ಇಷ್ಟು ದಿನಗಳು ನಿಮ್ಮೆಲ್ಲರನ್ನೂ ಬಹಳ ಸ್ಟ್ರಿಕ್ಟ್ ಆಗಿ ನೋಡಿದ್ದು ನಿನಗೆ ವ್ಯಥೆ ತಂದಿದೆಯೇನಯ್ಯಾ. ಐ ಯಾಮ್ ಪ್ರೌಡ್ ಆಫ್ ಯು ಮೈ ಬಾಯ್. ಕೇಳು ಇವತ್ತು ಹೇಳ್ತಿದ್ದೀನಿ, ನೀವೆಲ್ಲರೂ ನಿಮ್ಮ ನಿಮ್ಮ ಕಾಲ ಮೇಲೆ ನಿಲ್ಲಲಿ, ಜೀವನದ ಅರಿವಾಗಿ, ಇತರರಿಗೆ ಭಾರವಾಗದೇ ಇತರರ ಭಾರವನ್ನು ಹೊರುವಂತಹ ಶಕ್ತಿಯನ್ನೂ ಬುದ್ಧಿಯನ್ನೂ ಹೊಂದಲಿ ಅಂತ ಅಷ್ಟೇ ನಾನು ನಿಮ್ಮಗಳನ್ನು ಸ್ವಲ್ಪ ನಿಕೃಷ್ಟವಾಗಿ ನೋಡುತ್ತಿದ್ದೆ. ನಿನಗೆ ಗೊತ್ತೇನಯ್ಯಾ, ನಾನೂ ವಾರಾನ್ನ ಮಾಡಿಯೇ ಬೆಳೆದವನು. ಎಲ್ಲೋ ಮೂಲೆಯಲ್ಲಿ ಬೆಳೆದವನು ವಿಲಾಯತಿಗೆ ಹೋಗಿ ಬರುವುದು ಎಂದರೇನು ಸುಲಭದ ವಿಷಯವೇ. ನನ್ನ ಹಾಗೆಯೇ ಜೀವನವನ್ನು ನೀನೂ ಅರಿಯುತ್ತಿರುವೆ. ನಿನಗೆ ಒಳ್ಳೆಯದಾಗಲಿ. ಇನ್ಮೇಲೆ ನೀನು ನನ್ನ ಸ್ನೇಹಿತನಿದ್ದ ಹಾಗೆ. ಆಗಾಗ ಬರ್ತಿರಯ್ಯ'.

ಏನೇ ಆಗಲಿ ಆ ತಾತನನ್ನು ಮರೆಯಲಾದೀತೇ? ಇಂದು ಈ ಮಟ್ಟಕ್ಕೆ ಬರಲು ಮನದಲ್ಲಿ ಛಲ ಬಂದಿದ್ದರೆ ಅದು ಅಂದು ಅವರು ಹೇಳಿದ ಮಾತುಗಳೇ ಕಾರಣ. ಅವರ ಆ ಮಾತುಗಳು ಆಪ್ಯಾಯತೆ ನನ್ನಲ್ಲಿ ಮಾನವೀಯತೆಯನ್ನು ಮೂಡಿಸಿತು. ನನ್ನ ದುರಾದೃಷ್ಟ, ನಾನು ಅವರೊಂದಿಗೆ ಹೆಚ್ಚಿನ ಕಾಲ ಕಳೆಯಲಾಗಲಿಲ್ಲ. ಅವರು ಸಾಯುವ ಮೊದಲು ಸ್ವಲ್ಪ ಕಾಲ ಆಸ್ಪತ್ರೆಯಲ್ಲಿ ಇದ್ದರು. ಆಗ ಕೆಲವು ದಿನಗಳ ಕಾಲ ಅವರೊಂದಿಗಿರುವ ಅವಕಾಶ ಸಿಕ್ಕಿತ್ತು. ಆಗಲೂ ಅವರು ಹೆಚ್ಚು ಮಾತನಾಡಲಿಲ್ಲ. ಅವರ ಕರಾರುವಾಕ್ಕಾದ ಜೀವನಕ್ರಮ, ಮಿತ ಆಹಾರ ಸೇವನೆಗಳು ನನಗೆ ಪಾಠ ಕಲಿಸಿದವು.

Rating
No votes yet