ಎರಡು ರಾಜಕೀಯ ಟಿಪ್ಪಣಿಗಳು

ಎರಡು ರಾಜಕೀಯ ಟಿಪ್ಪಣಿಗಳು

ಬರಹ

ಎರಡು ರಾಜಕೀಯ ಟಿಪ್ಪಣಿಗಳು

1. ಇವರಿಗೆ ಅಧಿಕಾರವೇ ಸಿದ್ಧಾಂತ!

ಬೆಳ್ಳುಬ್ಬಿ ರಾಜೀನಾಮೆ ಪ್ರಕರಣ ಕಳೆದ ಹತ್ತು ವರ್ಷಗಳಲ್ಲಿಎಸ್.ಎಂ.ಕೃಷ್ಣರ ಮುಖ್ಯಮಂತ್ರಿತ್ವದ ಕಾಲದಿಂದ-ಅತಿ ಭ್ರಷ್ಟಗೊಳ್ಳುತ್ತಾ ಬಂದ ಕರ್ನಾಟಕ ರಾಜಕಾರಣದ ನಿರ್ಣಾಯಕ ಘಟ್ಟ ಎಂದು ನಾನು ಭಾವಿಸಿದ್ದೇನೆ. ಭ್ರಷ್ಟರಿಗೆ ಜಾಗ ಮಾಡಿಕೊಡಲು ಸಜ್ಜನರ ಬಲಿ ಬೇಡುವ ಈ ರಾಜಕಾರಣ ಎಲ್ಲ ನೈತಿಕತೆಯನ್ನೂ ಕಳೆದುಕೊಂಡಿದೆ. ಇಷ್ಟರವರೆಗೆ ಯಾರೆಲ್ಲ, ಎಷ್ಟೇ ಭ್ರಷ್ಟ ರಾಜಕಾರಣ ಮಾಡಿದ್ದರೂ, ನಮ್ಮ ರಾಜಕಾರಣಿಗಳು ರಾಜಕೀಯ ನೈತಿಕತೆಯ ಬಗ್ಗೆ ಬಹಿರಂಗದಲ್ಲಾದರೂ ಕಾಳಜಿ ವ್ಯಕ್ತಪಡಿಸುತ್ತಾ ಅದರ ಉಸಿರನ್ನಾದರೂ ಉಳಿಸಿದ್ದರು. ಆದರೆ ಈ ವಿಷಯದಲ್ಲಿ ಯಡಿಯೂರಪ್ಪನವರು ಮತ್ತು ಅವರ ಪಕ್ಷದ ಅಧ್ಯಕ್ಷರು ಸಾರ್ವಜನಿಕರ ಮತ್ತು ಮಾಧ್ಯಮಗಳ ಸತತ ಛೀಮಾರಿಯ ನಡುವೆಯೂ ಪ್ರದರ್ಶಿಸುತ್ತಿರುವ ಭಂಡತನ, ರಾಜ್ಯದ ರಾಜಕಾರಣದ ಮಟ್ಟವನ್ನು ಒಮ್ಮೆಗೇ ರಸಾತಳ-ಪಾತಾಳಕ್ಕೆ ಇಳಿಸಿದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದೇ ದೈವ ಕೃಪೆಯಿಂದಾಗಿ ಎಂದು ನಂಬಿದಂತಿರುವ ಯಡಿಯೂರಪ್ಪ, ಈ ದೈವ ಕೃಪೆಯನ್ನು ಕಾಪಾಡಿಕೊಂಡು ಹೋಗಲು ಮಾಡುವುದೆಲ್ಲವೂ ದೇವರ ಕೆಲಸವೇ ಎಂದು ತಿಳಿದು ಈ ರಾಜಕೀಯ ಅನಾಚಾರಕ್ಕೆ ಕೈ ಹಾಕಿದಂತಿದ್ದಾರೆ. ಹೀಗಾಗಿ, ಬಿಜೆಪಿಯವರ ಈ ದೈವ-ಧರ್ಮಗಳ ಮಾತೇ ಎಷ್ಟು ವಿಕ್ಷಿಪತ್ತೆಯಿಂದ ಕೂಡಿದುದು ಎಂಬುದು ಗೊತ್ತಾಗುತ್ತದೆ. ಸಂಘಪರಿವಾರದ ಧರ್ಮದುರಂಧರರಿಗೆ ನೈತಿಕತೆ-ಅನೈತಿಕತೆಗಳೆಲ್ಲ ಇತರರ ಬಗ್ಗೆ ಮಾತನಾಡುವುದಕ್ಕ ಷ್ಟೇ ಇರುವುದೆಂದು ತೋರುತ್ತದೆ.

ಯಡಿಯೂರಪ್ಪ ತಾವು ಮುಖ್ಯಮಂತ್ರಿಯಾಗಿ ಈವರೆಗೆ ಯಾರೂ ಮಾಡದ ಸಾಧನೆಯನ್ನು ಮಾಡಹೊರಟಿರುವುದಾಗಿಯೂ, ಇದಕ್ಕೆ ಸುಭದ್ರ ಸರ್ಕಾರ ಅಗತ್ಯವಾಗಿದೆಯೆಂದೂ;ತಮ್ಮ ಪಕ್ಷದ ತತ್ವ-ಸಿದ್ಧಾಂತಗಳನ್ನು ಒಪ್ಪಿ ತಮ್ಮೆಡೆಗೆ ಬರುತ್ತಿರುವವರಿಗೆ ಜಾಗ ಕಲ್ಪಿಸಿಕೊಡಲು ಸ್ವಲ್ಪ ಮಟ್ಟಿನ ತ್ಯಾಗ ಅಗತ್ಯವೆಂದು ತಮ್ಮ ಪಕ್ಷದ ಇತರ ನಾಯಕರಿಗೆ-ಕಾರ್ಯಕರ್ತರಿಗೆ ಬುದ್ಧಿ ಹೇಳುತ್ತಿದ್ದಾರೆ. ಇವರು ಜನ ಕಿವಿಯಲ್ಲಿ ಹೂವಿಟ್ಟುಕೊಂಡು ಕೂತಿದ್ದಾರೆ ಎಂದು ಭಾವಿಸಿದಂತಿದೆ. ಇವರ ಪಕ್ಷಕ್ಕೆ ಬರುತ್ತಿರುವ ಲಫಂಗರು ನಿನ್ನೆ ಮೊನ್ನೆಯವರೆಗೆ ಒಪ್ಪಿದ್ದ ಸಿದ್ಧಾಂತವನ್ನು ಇದ್ದಕ್ಕಿದ್ದಂತೆ ತಿರಸ್ಕರಿಸಿ ಈಗ ಯಾವ ಸಿದ್ಧಾಂತವನ್ನು ಒಪ್ಪಿ ಬರುತ್ತಿದ್ದಾರೆ ಎಂಬುದು, ಬಂದೊಡನೆ ಅವರಿಗೆ ನೀಡಲಾಗುತ್ತಿರುವ ಅಧಿಕಾರದ ಸ್ಥಾನಮಾನಗಳೇ ಸಾರಿ ಹೇಳುತ್ತಿವೆ. ಸಾರ್ವಜನಿಕ ಹಣ ಲೂಟಿ ಮಾಡಿ ತಂತಮ್ಮ ಕ್ಷೇತ್ರಗಳಲ್ಲಿ ಆಧುನಿಕ ಪಾಳೇಗಾರರಾಗಿ ಮೆರೆಯಬಯಸುವ ಇವರ ಘಾತುಕತನವನ್ನೇ ಯಡಿಯೂರಪ್ಪ ಒಂದು ಸಿದ್ಧಾಂತವನ್ನಾಗಿ ಪರಿವರ್ತಿಸಿ, ತಮ್ಮ ಪಕ್ಷದ ಕಾರ್ಯಕರ್ತರೂ ಸೇರಿದಂತೆ ಜನ ಬಡಿದುಕೊಳ್ಳಬಾರದ್ದನ್ನು ಬಡಿದುಕೊಂಡು ನಗುವಂತೆ ಮಾಡಿದ್ದಾರೆ! ಆ ಮೂಲಕ ತಮ್ಮ ಪಕ್ಷ ಮತ್ತು ಅದರ ಸಿದ್ಧಾಂತಗಳೆರಡನ್ನೂ ಅಪಹಾಸ್ಯಕ್ಕೀಡುಮಾಡಿದ್ದಾರೆ. 'ವಿಜಯ ಕರ್ನಾಟಕ'ದ ತ್ಯಾಗರಾಜ್ ಕೇಳಿರುವಂತೆ, ಸಿದ್ಧರಾಮಯ್ಯ ಇವರ ಸಿದ್ಧಾಂತವನ್ನೊಪ್ಪಿ ಇವರ ಪಕ್ಷವನ್ನು ಬಲಪಡಿಸಲು ಬರುವುದಾದರೆ, ಯಡಿಯೂರಪ್ಪ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಲು ಸಿದ್ಧರಾಗಿದ್ದಾರೆಯೇ?

ಯಡಿಯೂರಪ್ಪ, ತಮ್ಮ ಪಕ್ಷಕ್ಕೆ ಜನತೆ ಪೂರ್ಣ ಬಹುಮತ ಕೊಡದಿದ್ದುದರಿಂದ ಇದು ಅಗತ್ಯವಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ! ಜನತೆಗೆ ತಮ್ಮ ಪಕ್ಷದ ಮೇಲೆ ಪೂರ್ಣ ನಂಬಿಕೆ ಇಲ್ಲದಿದ್ದುದರಿಂದಲೇ ಪೂರ್ಣ ಬಹುಮತ ನೀಡಿಲ್ಲ ಎಂಬ ಸರಳ ಸತ್ಯವನ್ನು ಅರಿಯಲಾಗದ ಇವರು, ಜನತೆಯ ತೀರ್ಪನ್ನೇ 'ಖರೀದಿ'ಯ ಮೂಲಕ ಬದಲಾಯಿಸಹೊರಟು, ಪ್ರಜಾಪ್ರಭುತ್ವದ ಮೂಲಾಧಾರಗಳನ್ನೇ ಅಲುಗಾಡಿಸತೊಡಗಿದ್ದಾರೆ. ಈ ಬಾರಿ ಬಿಜೆಪಿಗೆ ಅಷ್ಟೊಂದು ಸ್ಥಾನಗಳು ದೊರಕಿರುವುದು ತಮ್ಮ ಮತ್ತು ತಮ್ಮ ಪಕ್ಷದ ಮೇಲಿನ ಜನತೆಯ ಅಭಿಮಾನದಿಂದಾಗಿ ಎಂದು ಯಡಿಯೂರಪ್ಪನವರು ನಂಬಿದ್ದರೆ, ಆ ನಂಬಿಕೆಯಿಂದ ಅವರು ಆದಷ್ಟು ಬೇಗ ಹೊರಬರುವುದು ಅವರ ಮತ್ತು ಅವರ ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು. ದೇವೇಗೌಡರ ಕುಟುಂಬ ರಾಜಕಾರಣದಿಂದಾಗಿ ಯಡಿಯೂರಪ್ಪನವರಿಗೆ ದ್ರೋಹವೆಸಗಲಾಗಿದೆೆಎಂದು ಸಾಮಾನ್ಯ ಜನತೆ, ವಿಶೇಷವಾಗಿ ಲಿಂಗಾಯಿತ ಸಮುದಾಯ ಭಾವಿಸಿದ್ದರಿಂದಾಗಿ ಮತ್ತು ಕಾಂಗ್ರೆಸ್ ತನ್ನ ಅಭ್ಯಥಿಗಳ ಆಯ್ಕೆ ಮತ್ತು ಪ್ರಚಾರ ಕಾರ್ಯದಲ್ಲ್ಲಿ ತನ್ನ ಹಳೆಯ ಚಾಳಿಗಳನ್ನು ಬಿಡಲು ನಿರಾಕರಿಸಿದ್ದರಿಂದಾಗಿ, ಬಿಜೆಪಿ ಅಧಿಕಾರದ ಹೊಸ್ತಿಲಿಗೆ ಬಂದು ನಿಲ್ಲುವಂತಾಯಿತಷ್ಟೆ. ಈ ಸುಸಂದರ್ಭವನ್ನು ದೀರ್ಘಕಾಲಿಕ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸದುಪಯೋಗಪಡಿಸಿಕೊಳ್ಳುವ ಬದಲು, ಯಡಿಯೂರಪ್ಪ ಅಲ್ಪಕಾಲಿಕ ರಾಜಕೀಯ ಕಾರ್ಯಕ್ರಮಗಳ ಮೂಲಕ ಹಾಳುಗೆಡಿಹಿಕೊಳ್ಳುತ್ತಿದ್ದಾರೆ.

ನೈತಿಕ ಸೂಕ್ಷ್ಮಗಳಿಲ್ಲದ ಯಾವ ರಾಜಕಾರಣವೂ ಬಹುಕಾಲ ಬಾಳುವುದಿಲ್ಲ. ಅದು ಜನತೆಯ ನೈತಿಕತೆಯನ್ನೂ ಅಸೂಕ್ಷ್ಮಗೊಳಿಸಿ ಸ್ವಲ್ಪ ಕಾಲ ಬಾಳಬಹುದಷ್ಟೆ. ಇದು ಈಗಾಗಲೇ ಇತ್ತೀಚಿನ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರಗಳ ಆಡಳಿತಗಳಲ್ಲೇ ಸಾಬೀತಾಗಿದೆ. ಈಗ ಬಿಜೆಪಿ, ಅಧಿಕಾರದ ಮೊದಲ ಅವಕಾಶದಲ್ಲೇ ಆ ಆಟಕ್ಕಿಳಿದಂತಿದೆ. ಅಷ್ಟೇ ಅಲ್ಲ, ತನ್ನ 'ಸರ್ವಶೇಷ್ಠತನ'ದ ಹುಸಿ ಹಮ್ಮಿನಲ್ಲಿ ಅತಿ ಭಂಡತನ ಪ್ರದರ್ಶಿಸುತ್ತಾ, ಈ ಆಟದಲ್ಲಿ ಎಲ್ಲರನ್ನೂ ಮೀರಿಸಿದೆ. ಇದು ಇಂತಹ ಆಟಗಳನ್ನು ಆರಂಭಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ನವರಿಗೆ ಒಳ್ಳೆಯ ಪಾಠವೂ ಹೌದು. ಹಾಗೆ ನೋಡಿದರೆ, ಇನ್ನೊಂದು ರೀತಿಯಲ್ಲಿ ಇದು ಕಾಂಗ್ರೆಸ್ ಮತ್ತು ಜೆಡಿಎಸ್ಗಳ ನಿರ್ಮಲೀಕರಣ ಕಾರ್ಯಕ್ರಮವೂ ಆಗಬಹುದು. ಆದರೆ ಈ ನಿರ್ಮಲೀಕರಣ ಹೀಗೇ ಮುಂದುವರೆದರೆ, ಈ ಎರಡೂ ಪಕ್ಷಗಳ ನಿರ್ಮೂಲನೀಕರಣವೂ ಆದರೆ ಆಶ್ಚರ್ಯವಿಲ್ಲ! ಆದುದರಿಂದ ಈ ಎರಡೂ ಪಕ್ಷಗಳು ಈಗಲಾದರೂ ಅತಿಯಾದ ವ್ಯಾವಹಾರಿಕ ರಾಜಕಾರಣವನ್ನು ತೊರೆದು-ಕಷ್ಟದ ಸಮಯದಲ್ಲಿ ಎಲ್ಲ ಪಕ್ಷಗಳನ್ನೂ ಕಾಪಾಡಬಲ್ಲ-ಒಂದಿಷ್ಟು ನೀತಿ ರಾಜಕಾರಣವನ್ನೂ ಅಳವಡಿಸಿಕೊಳ್ಳಲಾರಂಭಿಸಿದರೆ ಒಳ್ಳೆಯದು.

ಬೆಳ್ಳುಬ್ಬಿ ರಾಜೀನಾಮೆ ಅವರೂರಿನಲ್ಲಿ ಪಕ್ಷದ ಕೆಲವು ತರುಣ ಕಾರ್ಯಕರ್ತರನ್ನು ದುರದೃಷ್ಟವಶಾತ್, ವಿಷ ಸೇವಿಸುವಷ್ಟರ ಮಟ್ಟಿಗೆ ಪ್ರೇರೇಪಿಸಿದೆ. ಇದು ಜಾತಿ ಅಭಿಮಾನದಿಂದ ಉಂಟಾದುದೋ ಅಥವಾ ಪಕ್ಷದ ಅಭಿಮಾನದಿಂದ ಉಂಟಾದುದೋ ತಿಳಿಯದು! ಪಕ್ಷದ ಅಭಿಮಾನದಿಂದಲೇ ಉಂಟಾಗಿದ್ದರೆ, ಅದು ನಮ್ಮಲ್ಲಿ ನೀತಿ ರಾಜಕಾರಣದ ಜೀವ ಇನ್ನೂ ಉಳಿದಿರುವ ಸೂಚನೆಯೆಂದೇ ನಾನು ಭಾವಿಸಿದ್ದೇನೆ. ಆದರೆ ಈ ಬೆಳ್ಳುಬ್ಬಿ ಪ್ರಕರಣದಲ್ಲಿ ಅಂರ್ತಗತವಾಗಿರುವ ಅನೀತಿಯತ ರಾಜಕಾರಣವನ್ನು ಬಿಜೆಪಿಯ ಯಾವೊಬ್ಬ ನಾಯಕನೂ ಕ್ರಿಯಾತ್ಮಕವಾಗಿ ಪ್ರತಿಭಟಿಸದಿರುವುದು, ಆ ಪಕ್ಷವನ್ನು ಆವರಿಸಿಕೊಂಡಿರುವ ಅಧಿಕಾರದ ಅಮಲು ಎಂತಹುದು ಎಂಬುದರ ಸೂಚನೆಯೇ ಆಗಿದೆ. ಹಾಗಾಗಿ ಇದು ಪಕ್ಷ ಹೇಳಿಕೊಂಡಂತೆ 'ಆಪರೇಷನ್ ಕಮಲ' ಅಲ್ಲ, ನಮ್ಮ ಎಚ್. ಆನಂದರಾಮ ಶಾಸ್ತ್ರಿಗಳು ಮೊನ್ನೆ 'ಪ್ರಜಾವಾಣಿ'ಯಲ್ಲಿ ಅಣಕವಾಡಿದಂತೆ 'ಆಪರೇಷನ್ ಮಲ'!

ಅದೇನೇ ಇರಲಿ, ಈ ಆಪರೇಷನ್-ಈಗಾಗಲೇ ಹಬ್ಬಿರುವ ವದಂತಿಗಳಂತೆ-ತಿರುಗುಬಾಣವಾಗಿಯೇನಾದರೂ ಪರಿಣಮಿಸಿದರೆ, ಆಗ ಬಿಜೆಪಿ ಸರ್ಕಾರದ ಪರವಾಗಿ ಕಿರುಚಲು ಅಥವಾ ಅಳಲು ಯಾರೂ ಇರುವುದಿಲ್ಲ ಎಂಬುದು ಆ ಪಕ್ಷದ ನಾಯಕರಿಗೆ ತಿಳಿದಿದ್ದರೆ ಒಳ್ಳೆಯದು.

2. ಶೂದ್ರ ರಾಜಕಾರಣದ ದುರಂತ ನಾಯಕರು...

ಕಾಗೋಡು ತಿಮ್ಮಪ್ಪನವರು ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ತಾವಿನ್ನು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ. ಈವರೆಗೆ ಈ ಕೆಲಸದಲ್ಲಿ ಗಂಭೀರವಾಗಿ ತೊಡಗಿಕೊಳ್ಳದಿದ್ದುದರಿಂದಲೇ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಪಕ್ಷದೊಳಗೇ ಇರುವ ಅವರ ರಾಜಕೀಯ ಶತ್ರುಗಳು ಹೇಳುತ್ತಿದ್ದಾರೆ! ಕಳೆದೆರಡು ಚುನಾವಣೆಗಳ ಸೋಲು ತಿಮ್ಮಪ್ಪನವರನ್ನು ಕಂಗೆಡಿಸಿದೆ. ಈ ಬಾರಿಯ ಸೋಲಂತೂ ಅವರನ್ನು ಮೌನಕ್ಕೆ ತಳ್ಳಿಬಿಟ್ಟಿದೆ. ಯಾಕೆ ಹೀಗಾಯಿತು ಎಂದು ಈವರೆಗೆ ತಮ್ಮನ್ನು ತಾವೇ ಕೇಳಿಕೊಳ್ಳುತ್ತಲೇ ಇದ್ದು, ಕೊನೆಗೂ ಉತ್ತರ ಸಿಗದೆ ಅವರು ನಿವೃತ್ತಿ ಘೋಷಿಸಿದಂತಿದೆ.

ಹಾಗೆ ನೋಡಿದರೆ, ಇಂದಿನ ರಾಜಕೀಯ ಸಂದರ್ಭದಲ್ಲಿ ತಿಮ್ಮಪ್ಪ ಸೋಲಿಸ್ಪಡಬೇಕಾದ ರಾಜಕಾರಣೀಯೇನೂ ಅಲ್ಲ. ಇವರು ಮಂತ್ರಿಯಾಗಿದ್ದಾಗ ಮಾತ್ರವಲ್ಲ, ಬರೀ ಶಾಸಕರಾಗಿದ್ದಾಗಲೂ ಕ್ಷೇತ್ರಕ್ಕೆ ಕೆಲಸ ಮಾಡಿದವರು. ಮಂತ್ರಿಯಾಗಿ ದಕ್ಷರೆನಿಸಿಕೊಂಡಿದ್ದವರು ಕೂಡ. ಭ್ರಷ್ಟತೆಯ ವಿಷಯಕ್ಕೆ ಬಂದರೆ, ಇಂದಿನ ರಾಜಕಾರಣಿಗಳಿಗೆ ಹೋಲಿಸಿದರೆ, ಅಷ್ಟೇನೂ ಹೆಸರು ಕೆಡಿಸಿಕೊಳ್ಳದ ವ್ಯಕ್ತಿ. ಆದರೂ ಅವರು ಹೀಗೆ ಸತತವಾಗಿ ಸೋತರೇಕೆ? ಈ ಹಿಂದಿನ ಸೋಲಿಗೆ, ಚುನಾವಣೆಗೆ ಮುನ್ನ ಸಾಗರದಲ್ಲಿ ಕೋಮು ಗಲಭೆ ಸಂಭವಿಸಿ ಮತ್ತು ಅದೇ ಸಂದರ್ಭದಲ್ಲಿ ಬಂಗಾರಪ್ಪ ಬಿಜೆಪಿ ಸೇರಿ ಆ ಪಕ್ಷದ ಪರ ಅಲೆ ಸೃಷ್ಟಿಯಾದದ್ದು ಕಾರಣ ಎಂದು ಹೇಳಲಾಗುತ್ತಿದ್ದರೆ, ಈ ಬಾರಿ? ಅದೂ, ಕಳೆದ ಮೂರು ವರ್ಷಗಳಲ್ಲಿ ಮೂರು ಪಕ್ಷಗಳ ಹೊಸ್ತಿಲು ತುಳಿದು ವಿಶ್ವಾಸಾರ್ಹತೆ ಕಳೆದುಕೊಂಡಿದ್ದ ತಮ್ಮೆದುರಿನ ರಾಜಕೀಯ ಬಚ್ಚಾ ಹಾಗೂ ತಮ್ಮ ಭಾವಮೈದುನನ ಎದುರು ಮತ್ತೆ ಸೋಲುವುದೆಂದರೆ?

ಇದಕ್ಕೂ ಅವರ ಅಭಿಮಾನಿಗಳು ಮತ್ತು ಶತ್ರುಗಳು ಹಲವಾರು ಕಾರಣಗಳನ್ನು ಕೊಡುತ್ತಾರೆ. ಅಭಿಮಾನಿಗಳು ಕೊಡುವ ಕಾರಣವೆಂದರೆ, ಕ್ಷೇತ್ರ ಪುನಾರಚನೆಯಲ್ಲಿ ಹೊಸದಾಗಿ ಸೇರಿದ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ಸರಿಯಾಗಿ ಆಗದೇ ಇದ್ದದ್ದು ಮತ್ತು ಪಕ್ಕದ ಶಿಕಾರಿಪುರ ಕ್ಷೇತ್ರದಲ್ಲಿ ತಮ್ಮ ಪಾರಂಪರಿಕ ಶತ್ರು ಬಂಗಾರಪ್ಪನವರ ಸಮಾಜವಾದಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡ ಫಲವಾಗಿ ಬಂಗಾರಪ್ಪ ಮತ್ತು ಅವರ ಮಗ ಕಾಂಗ್ರೆಸ್ಸಿನವರೇ ಆದ ಕುಮಾರ್ ಬಂಗಾರಪ್ಪನವರ ನಡುವಣ ರಾಜಕೀಯ ಕದನದ ಅಡ್ಡ ಪರಿಣಾಮಗಳಿಗೆ ಇವರು ಸಿಕ್ಕಿಕೊಂಡರು ಎಂಬುದು. ಇನ್ನು ಇವರ ಶತ್ರುಗಳು ಕೊಡುವ ಕಾರಣವೆಂದರೆ, ತಿಮ್ಮಪ್ಪ ಶ್ರೀಸಾಮಾನ್ಯರ ಜೊತೆ ಬೆರೆಯದೆ ತಮ್ಮದೇ ಆಪ್ತಕೂಟವೊಂದರಲ್ಲಿ ಸೆರೆಯಾಗಿ ಗತ್ತಿನ ರಾಜಕಾರಣ ಮಾಡುತ್ತಲೇ ಹೋದದ್ದು!

ಇವೆಲ್ಲವೂ ನಿಜವಿರಬಹುದು. ಆದರೆ ಆಳವಾಗಿ ನೋಡಿದರೆ, ತಿಮ್ಮಪ್ಪನವರ (ಚುನಾವಣಾ)ರಾಜಕೀಯ ಜೀವನದ ಇಂತಹ ಅಶೋಭಾಯಮಾನ ಅಂತ್ಯಕ್ಕೆ ಜಿಲ್ಲೆಯ ಚಾರಿತ್ರಿಕ ರಾಜಕೀಯ ಕಾರಣವೂ ಇದ್ದಂತೆ ಕಾಣುತ್ತದೆ. ತಿಮ್ಮಪ್ಪ ಸುಪ್ರಸಿದ್ದ ಕಾಗೋಡು ಸತ್ಯಾಗ್ರಹದ ಸಮಾಜವಾದಿ ಉತ್ಪನ್ನ. ಕರ್ನಾಟಕದ ಸಮಾಜವಾದಿ ಚಳುವಳಿಯ ಪಿತಾಮಹ ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಯುವನಾಯಕನಾಗಿ ಬೆಳೆದ ರಾಜಕಾರಣಿ. ಆದರೆ ಗೋಪಾಲ ಗೌಡರು ಇವರ ಕೈಯಲ್ಲಿಟ್ಟು ಹೋದ ಸಮಾಜವಾದಿ ಆಂದೋಲನವನ್ನಾಗಲೀ, ಪಕ್ಷವನ್ನಾಗಲೀ ಕಾಗೋಡು ತಿಮ್ಮಪ್ಪ ಮತ್ತು ಅವರ ಗೆಳೆಯರಿಗೆ ಬೆಳೆಸುವುದು ಹೋಗಲಿ, ಉಳಿಸಲೂ ಸಾಧ್ಯವಾಗಲಿಲ್ಲ. ಗೌಡರು ನಿಧನರಾದ ನಂತರದಲ್ಲೇ ನಡೆದ ಚುನಾವಣೆಗಳಲ್ಲಿ ಇವರ ಪಕ್ಷ ಎಂದೂ ಗೆಲ್ಲಲಾಗದಿದ್ದಷ್ಟು ಸ್ಥಾನಗಳನ್ನು ಗೆದ್ದು, ವಿಧಾನಸಭೆಯಲ್ಲಿ ಗೌಡರಿಂದ ಕಲಿತ ಎಲ್ಲ ಶಾಸನಾತ್ಮಕ ರಾಜಕೀಯ ಪ್ರತಿಭೆಯನ್ನೂ ಪ್ರದರ್ಶಿಸುವ ಮೂಲಕ ಇಡೀ ರಾಜ್ಯದ ಜನರ ಗಮನ ಸೆಳೆಯುಂತಾಗಿದ್ದಾಗ ಪಕ್ಷ ಒಡೆಯಿತು. ಇದಕ್ಕೆ ತಿಮ್ಮಪ್ಪ ಮತ್ತು ಬಂಗಾರಪ್ಪನವರ ನಡುವಣ ವೈಯುಕ್ತಿಕ ಜಿದ್ದಾಜಿದ್ದಿಯೇ ಕಾರಣವೆಂದು ಹೇಳಲಾಗುತ್ತದೆ. ಅಂದು ಪಕ್ಷದ ನಾಶವನ್ನು ಆರಂಭಿಸಿದ ಈ ವೈಯುಕ್ತಿಕ ಜಿದ್ದಾಜಿದ್ದಿ ಇಂದಿನವರೆಗೂ ಹಲವು ರೂಪಗಳಲ್ಲಿ ಬೆಳೆಯುತ್ತಾ ಬಂದು, ಈ ಇಬ್ಬರು ಪ್ರತಿಭಾವಂತ ಶೂದ್ರ ಜನ ನಾಯಕರ ರಾಜಕೀಯ ಜೀವನವನ್ನೇ-ಬಂಗಾರಪ್ಪನವರ ಈ ಬಾರಿಯ ಸೋಲು 'ಸ್ವಯಂಪ್ರೇರಿತ' ಮತ್ತು 'ಪೂರ್ವ ನಿಯೋಜಿತ' ಎಂದು ಹೇಳಲಾಗುತ್ತಿದ್ದರೂ-ವಿಷಣ್ಣಮಯವಾದ ಅಂತ್ಯಕ್ಕೆ ಒಯ್ದಿದೆ.

ಲೋಹಿಯಾ, ಶೂದ್ರರು ಬೀಜವಾಗಿ ದ್ವಿಜರು-ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ-ಗೊಬ್ಬರವಾಗಿ ಹೊಸ ಭಾರತದ ಬೆಳೆ ಬೆಳೆಯಬೇಕೆಂದು ಆಶಿಸಿದ್ದರು. ಹೀಗೆ ಹಿಂದುಳಿದ ವರ್ಗಗಳ ಚಳುವಳಿ ಎಲ್ಲ ಜಾತಿ-ಜನವರ್ಗಗಳ ಚಳುವಳಿಯಾಗಿ, ಸಮಾಜವಾದಿ ಸಮಾಜವನ್ನು ನಿರ್ಮಿಸುವಲ್ಲಿ ನೆರವಾಗಬೇಕೆಂದು ಬಯಸಿದ್ದರು. ಅದು ಶಿವಮೊಗ್ಗ ಜಿಲ್ಲೆಯ ಮಟ್ಟಕ್ಕೆ ನಿಜವೂ ಆಗಿತ್ತು. ಎಷ್ಟೊಂದು ಜನ ದ್ವಿಜರು ಗೋಪಾಲಗೌಡ ಮತ್ತು ಅವರ ಶೂದ್ರ ಶಿಷ್ಯರ ಮೇಲೆ ಅಭಿಮಾನ ಮತ್ತು ವಿಶ್ವಾಸಗಳನ್ನಿಟ್ಟು, ತಾವು ಹಿಂದೆ ನಿಂತು ಅವರನ್ನು ಬೆಳೆಸಿದರು... ಆದರೆ ಗೋಪಾಲಗೌಡರ ನಂತರ ಅವರ ಈ ಶಿಷ್ಯರು ಅವರು ಬಳುವಳಿಯಾಗಿ ಬಿಟ್ಟುಹೋಗಿದ್ದ ಸಮಾಜವಾದಿ ವಾತಾವರಣದಲ್ಲಿ ಸಮೃದ್ಧವಾಗಿ ಬೆಳೆದು, ಕ್ರಮೇಣ ಸಮಾಜವಾದವನ್ನೇ ಮರೆತರು! ಈ ಬೆಳವಣಿಗೆಯ ಹಿಂದೆ ಎದ್ದು ಕಾಣುವುದು, ಶೂದ್ರ ಜಾತಿಗಳು-ಅವೆಷ್ಟೇ ಕೆಳ ಸ್ತರಕ್ಕೆ ಸೇರಿ ಕಷ್ಟ ಅವಮಾನಗಳನ್ನು ಅನುಭವಿಸಿದ್ದರೂ-ಅಧಿಕಾರ ಮತ್ತು ಸಂಪತ್ತಿನ ಸಂಪರ್ಕಕ್ಕೆ ಬಂದೊಡನೆ ಎಲ್ಲ ಮರೆತು, ವೈಯುಕ್ತಿಕ ಠೇಂಕಾರದ ಊಳಿಗಮಾನ್ಯಶಾಹಿಯಾಗಿ ಪರಿವರ್ತಿತವಾಗುವ ವೈಚಿತ್ರ್ಯ! ನಮ್ಮ ಈ ಸಮಾಜವಾದಿ ನಾಯಕರೂ-ಅಖಿಲ ಭಾರತ ಮಟ್ಟದಲ್ಲಿ, ನಿತೀಶ್ ಕುಮಾರ್ ಅಪವಾದವೊಂದನ್ನು ಬಿಟ್ಟು-ಇದರಿಂದ ಹೊರತಾಗಲಿಲ್ಲ. ರಾಜ್ಯದಲ್ಲಿ ಸಮಾಜವಾದಿಗಳ ಮಧ್ಯೆ ಮುಖ್ಯಮಂತ್ರಿಯಾಗಲು ನನ್ನ ಪ್ರಕಾರ ಜೆ.ಎಚ್.ಪಟೇಲರಗಿಂತ ಹಲವು ನೆಲೆಗಳಲ್ಲಿ ಹೆಚ್ಚು ಅರ್ಹರಾಗಿದ್ದ ಕಾಗೋಡು ತಿಮ್ಮಪ್ಪ, ಜಿಲ್ಲಾ ಮಟ್ಟದ ನಾಯಕರಾಗಿಯೇ ಉಳಿದು ಹೀಗೆ ಕರಗಿ ಹೋಗುವಂತಾಗಿರುವುದರ ಹಿಂದಿನ ಕಾರಣ, ಈ ವೈಯುಕ್ತಿಕ ಅಹಂಕಾರ ಮತ್ತು ಠೇಂಕಾರಗಳ ಶೂದ್ರ ರಾಜಕಾರಣವೇ ಆಗಿದೆ.
ಇದು ಸಮಾಜವಾದಿ ಚಳುವಳಿಯ ಜಾತಿ ನೀತಿಯ ಬಗ್ಗೆಯೇ ಇಂದು ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ ಎಂದು ನಾನು ಭಾವಿಸಿದ್ದೇನೆ. ಏಕೆಂದರೆ, ಈ ನೀತಿಯ ವೈಫಲ್ಯದಿಂದಾಗಿಯೇ ಇಂದು ದ್ವಿಜರೇ ಬೀಜವಾಗಿ, ಶೂದ್ರರನ್ನು ಗೊಬ್ಬರವಾಗಿ ಬಳಸಿಕೊಂಡು, ಯಾವುದನ್ನು ಸಮಾಜವಾದಿ ಚಳುವಳಿ ಹಿಂದೂ ಧರ್ಮದ ಸಂಕುಚಿತ ಧಾರೆಯೆಂದು ಕರೆದಿತ್ತೋ ಮತ್ತು ಯಾವ ಅಪಾಯದ ವಿರುದ್ಧ ಎಚ್ಚರಿಕೆಯಾಗಿ ತನ್ನ ಜಾತಿ ನೀತಿಯನ್ನು ರೂಪಿಸಿತ್ತೋ, ಅದು ಇಂದು ರಾಜ್ಯದಲ್ಲಿ ಕೋಮುವಾದಿ ರಾಜಕಾರಣದ ರೂಪದಲ್ಲಿ ಉಗ್ರವಾಗಿ ತಲೆ ಎತ್ತಿದೆ. ಇದರ ಜವಾಬ್ದಾರಿಯನ್ನು ಶಿವಮೊಗ್ಗ ಜಿಲ್ಲೆಯ ಮಟ್ಟಿಗಾದರೂ ಬಂಗಾರಪ್ಪ ಮತ್ತು ತಿಮ್ಮಪ್ಪ ಹೊರಬೇಕಾಗಿದೆ. ಇವರು ರಾಜಕಾರಣಕ್ಕೇ ತಿಲಾಂಜಲಿ ನೀಡುವ ಮುನ್ನ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ.