ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..

ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..

ಬರಹ

I cried when I did not have shoes.
I stopped my crying when I saw a man having one leg.
Life is full of mysteries. Sometimes we understand;
and most of the times we do not!

ಎಂಬ ಕಿರು ಸಂದೇಶ ಹೊತ್ತ ಎಸ್.ಎಂ.ಎಸ್ ಬೆಳಿಗ್ಗೆ ನನ್ನ ಮೊಬೈಲ್ ಗೆ ತೂರಿಬಂತು. ಭಾರವಾಗಿದ್ದ ಮನಸ್ಸು ನಿರಾಳವಾಗಿ ಜೀವನ್ಮುಖಿಯಾಗಿತ್ತು. ಅಷ್ಟರಲ್ಲಿಯೇ ನನ್ನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬಂತು. ಸಹಿಸಲು ಅಸಾಧ್ಯವಾದ ವೇದನೆಯಾಯಿತು. ಇನ್ನು ಹೆತ್ತೊಡಲಿನ ಸಂಕಟ, ಸ್ನೇಹಿತರ, ಸಂಬಂಧಿಕರ ನೋವು ಆ ದೇವರಿಗೇ ಪ್ರೀತಿ. ಬೇಕು ಎಂಬ ಬೆಂಕಿ, ಬೇಡ ಎಂಬ ಗಾಳಿ ಕೂಡಿಕೊಂಡು ದೊಡ್ಡದೊಂದು ಜ್ವಾಲೆ ಭುಗಿಲೆದ್ದು ಎಲ್ಲರ ಸದುದ್ದೇಶಗಳನ್ನು ಭಸ್ಮ ಮಾಡುತ್ತದೆ ಅನ್ನಿಸಿತು.

ಈ ಅಸಾಧ್ಯ ತಳಮಳದ ಹಿನ್ನೆಲೆಯಲ್ಲಿ, ಶಿಕ್ಷಕರ ದಿನಾಚರಣೆಯ ಔಚಿತ್ಯದ ವರ್ತಮಾನದಲ್ಲಿ, ತಮ್ಮ ಅನುಕರಣೀಯ ಆತ್ಮಸ್ಥೈರ್ಯದಿಂದ ಬದುಕಿಗೆ ಗೌರವ ತಂದು ಕೊಟ್ಟ, ಶಿಕ್ಷಕರಿಗೂ ಶಿಕ್ಷಕರಾಗಿರುವ ಇಬ್ಬರು ಶಿಕ್ಷಕ ಮಹನೀಯರರನ್ನು ಇಲ್ಲಿ ಪರಿಚಯಿಸುತ್ತಿದ್ದೇನೆ. ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವವರಿಗೆ ಈ ಸಾಧಕರ ಜೀವನ ಪ್ರೇರಣೆಯಾಗಲಿ. ‘ಈ ಬದುಕು ಬಾಳಲಾಗದಷ್ಟು ಮತ್ತು ಬಾಳಬಾರದಷ್ಟು ಕೇವಲವೂ ಅಲ್ಲ, ಕನಿಷ್ಠವೂ ಅಲ್ಲ’ ಎಂಬುದರ ಸಾರ ಅರ್ಥವಾಗಬೇಕು. ಅವರಿಬ್ಬರ ಪರಿಶ್ರಮದ ಜೀವನ, ಹೋರಾಟದ ಹಾದಿ ನಮಗೆ ಪ್ರೇರಣೆ ನೀಡಬಲ್ಲುದು.

‘ಈಸಬೇಕು, ಇದ್ದು ಜಯಿಸಬೇಕು’ ಎಂಬ ವಾಣಿಯನ್ನು ಸಾಧಿಸಿ ತೋರಿಸಿದ ಅ ಇಬ್ಬರು ಸಾಧಕರು ಧಾರವಾಡದ ಶ್ರೀನಗರ ನಿವಾಸಿ ಚಂದ್ರಶೇಖರ ಕುಬ್ಯಾಳ ಹಾಗು ರಾಧಾಕೃಷ್ಣ ನಗರದ ನಿವಾಸಿ ಡಾ.ಮಹೇಶಕುಮಾರ್ ಪಾಟೀಲ.

ಅಂಗವೈಕಲ್ಯವಿದೆ; ದೇಹಕ್ಕೆ ಮಾತ್ರ. ಸಾಧನೆಯಲ್ಲಿ, ವೈಚಾರಿಕತೆಯಲ್ಲಿ ಶಿಕ್ಷಕರಾಗಿ ತಮ್ಮ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ, ಸ್ಪೂರ್ತಿನೀಡಬಲ್ಲ ಪ್ರೇರಣಾದಾಯಿ ಜೀವನ ಅವರದ್ದು. ಅಂಗವೈಕಲ್ಯಕ್ಕೇ ಸೆಡ್ಡು ಹೊಡೆದು, ಸಮಾಜದಲ್ಲಿ ಗೌರವದಿಂದ, ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬಾಳುತ್ತಿರುವ ಈ ಶಿಕ್ಷಕರ ಬದುಕು ನಮ್ಮೆಲ್ಲರಿಗೆ ದಾರಿದೀಪ. ಬದುಕಿನ ಎಲ್ಲ ವೈರುಧ್ಯಗಳನ್ನು ಮೆಟ್ಟಿನಿಂತು, ಅದಮ್ಯ ಜೀವನೋತ್ಸಾಹದ ಬದುಕಿಗೆ ಗೌರವ ತಂದುಕೊಟ್ಟ ಈ ಛಲದಂಕಮಲ್ಲರ ಹೋರಾಟದ ಹಾದಿ ಇಲ್ಲಿದೆ.

ಶಿಕ್ಷಕ ನಂ.೧: ಶ್ರೀ ಚಂದ್ರಶೇಖರ್ ಮಹಾರುದ್ರಪ್ಪ ಕುಬ್ಯಾಳ. ಮೂಲತ: ಕರ್ನಾಟಕದವರು. ಹುಟ್ಟಿದ್ದು, ಬೆಳೆದಿದ್ದು ಹಾಗು ಶಿಕ್ಷಣ ಪಡೆದಿದ್ದು ಮುಂಬೈ. ಇಂಗ್ಲೀಷ್ ಹಾಗು ಮರಾಠಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಚಂದ್ರಶೇಖರ್ ಕನ್ನಡದಲ್ಲೂ ತಪ್ಪುಗಳಿಲ್ಲದೇ ಮಾತನಾಡಬಲ್ಲರು! ಅತ್ಯಂತ ಪ್ರತಿಭಾಶಾಲಿ, ಬಹುಮುಖ ಪ್ರತಿಭೆಯ ಗಣಕಯಂತ್ರ ಶಿಕ್ಷಕ ಇವರು.

ಬಾಲಕನಾಗಿದ್ದಾಗ ಪಾದರಸದಷ್ಟು ಚಂಚಲವಾಗಿದ್ದರು ಚಂದ್ರಶೇಖರ್. ವಿಧಿಗೆ ಬಹುಶ: ಇದು ಸಹ್ಯವಾಗಲಿಲ್ಲ. ೧೦ ವರ್ಷದವರಿದ್ದಾಗ ಕಾಣಿಸಿಕೊಂಡ ಬೆನ್ನುಹುರಿ ಸಮಸ್ಯೆ ಕ್ರಮೇಣ ನಡೆದಾಡಲು ಸಾಧ್ಯವಾಗದ ಸ್ಥಿತಿಗೆ ತಂದಿಟ್ಟಿತು. ತಜ್ನ ವೈದ್ಯರ ಸಲಹೆಯ ಮೇರೆಗೆ ೧೧ ವರ್ಷದವರಾಗಿದ್ದಾಗ ಮುಂಬೈನ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ನಡೆಸಿದ ಚಿಕಿತ್ಸೆ ಫಲಕಾರಿಯಾಗದೇ, ವಿಧಿ ಅವರನ್ನು ಗಾಲಿ ಖಿರ್ಚಿಗೆ ತಂದು ಅಂಟಿಸಿತು. ಶಸ್ತ್ರ ಚಿಕಿತ್ಸೆಯ ನಂತರ ಚಂದ್ರಶೇಖರ್, ಸೊಂಟದ ಕೆಳಭಾಗದ ಸಂಪೂರ್ಣ ನಿಯಂತ್ರಣ ಕಳೆದುಕೊಂಡರು. ವೈದ್ಯರ ನಿರ್ಲಕ್ಷ್ಯ ಅವರನ್ನು ಶಾಶ್ವತವಾಗಿ ಅಂಗವೈಕಲ್ಯಕ್ಕೆದೂಡಿತು.

ಚಂದ್ರಶೇಖರ್ ಧೃತಿಗೆಡಲಿಲ್ಲ. ಅವರ ತಂದೆ ತಾಯಿ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳಲಿಲ್ಲ. ತಂದೆ ರಸಾಯನಶಾಸ್ತ್ರಜ್ನ ಮಹಾರುದ್ರಪ್ಪ ಕುಬ್ಯಾಳ ಹಾಗು ತಾಯಿ ಶ್ರೀಮತಿ ಶಾರದಾ ಕುಬ್ಯಾಳ ಅವರ ಪ್ರೀತಿ, ವಿಶ್ವಾಸದ ಮಾತು, ಸಹಕಾರ ಹಾಗು ಪ್ರೋತ್ಸಾಹದಿಂದ ಚಂದ್ರಶೇಖರ್ ಸ್ವಾವಲಂಬಿ ಜೀವನ ನಡೆಸಲು ತಯಾರಾದರು. ೧೮ ತಿಂಗಳುಗಳ ಕಾಲ ಮುಂಬೈನ ‘ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಫಿಸಿಕಲ್ ಮೆಡಿಸಿನ್ ಆಂಡ್ ರಿಹ್ಯಾಬಿಲಿಟೇಷನ್ ಸೆಂಟರ್, ಮಹಾಲಕ್ಷ್ಮಿ’ ಸಂಸ್ಥೆಯಲ್ಲಿ ತಜ್ನ ತರಬೇತುದಾರರಿಂದ ಮಾರ್ಗದರ್ಶನ ಪಡೆದು ತಮ್ಮೆಲ್ಲ ಕೆಲಸಗಳನ್ನು ಸ್ವತ: ಮಾಡಿಕೊಳ್ಳುವ ಮನೋಬಲ ಪಡೆದರು.

ಇಷ್ಟೆಲ್ಲ ದೈಹಿಕ, ಮಾನಸಿಕ ತೊಳಲಾಟದ ಮಧ್ಯೆ ಶೃದ್ಧೆಯಿಂದ ಓದಿದ ಅವರು, ಮುಂಬೈ ವಿಶ್ವವಿದ್ಯಾಲಯದಿಂದ ಪ್ರಥಮ ಶ್ರೇಣಿಯಲ್ಲಿ ಬಿ.ಎಸ್ಸಿ.(ಗಣಿತ) ಪದವಿ ಪಡೆದರು. ೧೯೯೬ರಲ್ಲಿ Department of Electronics accredited- Government of India ವತಿಯಿಂದ ದೇಶದಾದ್ಯಂತ ನಡೆಸಲ್ಪಟ್ಟ 'A-level Exam- PGDCA' ಪೂರ್ಣಗೊಳಿಸಿದರು. ತದನಂತರ ಎರಡು ವರ್ಷಗಳ ಕಾಲ ವಿವಿಧ ಕಂಪೆನಿಗಳಲ್ಲಿ ಕಂಪ್ಯೂಟರ್ ತಜ್ನರಾಗಿ ಕಾರ್ಯನಿರ್ವಹಿಸಿದರು. ಮುಂಬೈ ಮಹಾನಗರಿಯ ಎಲ್ಲ ಕಂಪೆನಿಗಳೂ ಬೃಹತ್ ವಾಣಿಜ್ಯ ಸಂಕೀರ್ಣಗಳಲ್ಲಿ ಇರುವುದರಿಂದ ಸದಾ ಪರಾವಲಂಬಿಯಾಗಿ ನೌಕರಿಗೆ ಹೋಗಬೇಕಾಗುತ್ತಿತ್ತು. ಹಾಗಾಗಿ ಮುಂಬೈಯಲ್ಲಿ ನೌಕರಿ ಮಾಡುವ ವಿಚಾರವನ್ನು ಅಷ್ಟಕ್ಕೆ ಕೈಬಿಟ್ಟು ೧೯೯೮ರಲ್ಲಿ ಚಂದ್ರಶೇಖರ್ ಧಾರವಾಡಕ್ಕೆ ಬಂದರು.

ತಂದೆ ಮಹಾರುದ್ರಪ್ಪ ಹಾಗು ಅವರ ಸ್ನೇಹಿತರ ಸಹಾಯ, ಸಹಕಾರದಿಂದ ಶ್ರೀನಗರದ ವೃತ್ತದಲ್ಲಿ ‘ಸಾಫ್ಟೆಕ್ ಕಂಪ್ಯೂಟರ್ ಎಜುಕೇಶನ್ ಸೆಂಟರ್’ ತಲೆ ಎತ್ತಿತು. ಈ ಕೇಂದ್ರದ ಮೂಲಕ ಎಂ.ಸಿ.ಎ., ಎಂ.ಎಸ್ಸಿ. (ಗಣಕಯಂತ್ರ) ಹಾಗು ಬಿಎಸ್ಸಿ ಸೇರಿದಂತೆ ಡಿಪ್ಲೋಮಾ, ಸ್ನಾತಕೋತ್ತರ ಡಿಪ್ಲೋಮಾ ಹಾಗು ಪಿ.ಜಿ.ಡಿ.ಸಿ.ಏ. ಕೋರ್ಸ್ ಗಳಿಗೆ ಸಂಬಂಧಿಸಿದ ೩೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಹೆಗ್ಗಳಿಕೆ ಅವರದ್ದು.

೨೦೦೦ನೇ ಇಸ್ವಿಯಲ್ಲಿ ಶಾಲಾ-ಕಾಲೇಜುಗಳ ಕೋರಿಕೆಯ ಮೇರೆಗೆ ‘ಟೈಮ್ ಟೇಬಲ್ ಮ್ಯಾನೇಜ್ಮೆಂಟ್ ಸಾಫ್ಟವೇರ್’ ತಯಾರಿಸಿದ ಕುಬ್ಯಾಳ್ ಅವರು, ಈ ತಂತ್ರಾಂಶವನ್ನು ಹುಬ್ಬಳ್ಳಿ-ಧಾರವಾಡ ಹಾಗು ಬೆಳಗಾವಿಯ ಶಾಲೆಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮೀಣ ಪ್ರದೇಶದ ಸ್ವಯಂ ಸೇವಾ ಸಂಸ್ಥೆ, ಸಂಘಗಳ ಲೆಕ್ಕ-ಪತ್ರ, ವ್ಯವಹಾರ ಸರಳೀಕೃತಗೊಳಿಸಲು, ನೌಕರರ ಸಹಕಾರಿ ಪತ್ತಿನ ಬ್ಯಾಂಕುಗಳಿಗೆ, ಲೆಕ್ಕಪತ್ರ, ವಸ್ತುಬಟವಾಡೆ, ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ತಂತ್ರಾಂಶ ಅಭಿವೃದ್ಧಿಪಡಿಸಿ ನೀಡಿದ್ದಾರೆ.

ಸಧ್ಯ ಲಾಜಿಸ್ಟಿಕ್ಸ್ - ಸ್ಟಾಕ್ ಮೆಂಟೆನನ್ಸ್ ಸಾಫ್ಟವೇರ್ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಚಂದ್ರಶೇಖರ್, ತಾವು ಸಿದ್ಧಪಡಿಸಿರುವ ಎಲ್ಲ ಸಾಫ್ಟವೇರ್ ಗಳನ್ನು ೧೨ನೇಯ ತರಗತಿಯ ವಿದ್ಯಾರ್ಥಿಗಳೂ ಬಳಸಬಹುದಾದಷ್ಟು ಸರಳ ಎನ್ನುತ್ತಾರೆ. ಡಾ.ಸರ್ವಪಳ್ಳಿ ರಾಧಕೃಷ್ಣಣ್ ಅವರ ಜನ್ಮದಿನದಂದು ಅವರಿಗೆ ಅತ್ಮೀಯ ಅಭಿನಂದನೆ. ನೀವು ಅಭಿನಂದಿಸಬೇಕೆ? ಭೇಟಿ ನೀಡಿ: www.geocities.com-softech1010 ಅಥವಾ ಕರೆ ಮಾಡಿ:94483 41869 (ದಯವಿಟ್ಟು ಎಸ್.ಎಂ.ಎಸ್ ಮಾತ್ರ).

ಶಿಕ್ಷಕ ನಂ.೨: ಡಾ.ಮಹೇಶಕುಮಾರ್ ಹಂಪನಗೌಡ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದ ೫೪ನೇಯ ಘಟಿಕೋತ್ಸವದ ಅವಿಸ್ಮರಣೀಯ ಘಟನೆಯ ರುವಾರಿ ಇವರು. ಅಂದು ಡಾಕ್ಟರೇಟ್ ಪದವಿ ಪಡೆದ ೧೭೯ ಜನರಲ್ಲಿ ಮಹೇಶ ಕೂಡ ಒಬ್ಬರು. ಆದರೆ ಅವರ ಸಾಧನೆಗೆ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿಭವನದಲ್ಲಿ ನೆರೆದಿದ್ದ ಇಡೀ ಸಭಾಜನತೆ ಎದ್ದು ನಿಂತು, ಚಪ್ಪಾಳೆಯ ಮಳೆಗರೆದು ತನ್ನ ಗೌರವ, ಅಭಿನಂದನೆ ಸೂಚಿಸಿತ್ತು ಈ ವಾಮನಮೂರ್ತಿಗೆ!

ಕುಲಾಧಿಪತಿಗಳಾದ ರಾಜ್ಯಪಾಲರು ಸ್ವತ: ಎರಡು ಮೆಟ್ಟಿಲು ಕೆಳಗಿಳಿದು ಬಂದು ಮಹೇಶ ಅವರನ್ನು ವೇದಿಕೆಗೆ ಬರಮಾಡಿಕೊಂಡಿದ್ದರು. ಶಿಕ್ಷಣ ಸಚಿವರು, ಘಟಿಕೋತ್ಸವದ ವಿಶೇಷ ಆಹ್ವಾನಿತರು, ಗೌರವ ಡಾಕ್ಟರೇಟ್ ಗೆ ಭಾಜನರಾದ ನಾಡಿನ ಸಾಂಸ್ಕೃತಿಕ ರಾಯಭಾರಿಗಳು ಹಾಗು ಕುಲಪತಿಗಳು ಸ್ವತ: ಎದ್ದು ನಿಂತು ಮಹೇಶಗೆ ಪಿ.ಎಚ್.ಡಿ. ಪ್ರಮಾಣಪತ್ರ ಪ್ರದಾನ ಮಾಡಿದಾಗ, ಭಾವಪರವಶರಾದ ಸಭಿಕರ ಕಣ್ಣು ತೇವಗೊಂಡಿದ್ದವು.

ಈ ಚಪ್ಪಾಳೆ, ಗೌರವ, ಅಭಿನಂದನೆಗೆ ಭಾಜನರಾಗಲು ಮಹೇಶ ಕ್ರಮಿಸಿದ ಹಾದಿ ದುರ್ಗಮವಾದದ್ದು. ಮೂಲತ: ಮುದ್ದೇಬಿಹಾಳದವರಾದ ಮಹೇಶಕುಮಾರ್ ಅವರಿಗೆ ಅಂಗವೈಕಲ್ಯ ಹುಟ್ಟಿನಿಂದಲೇ ಬಂದದ್ದು. ಅವರ ತಂದೆ ಹಂಪನಗೌಡ ಹಾಗು ತಾಯಿ ನೀಲಮ್ಮ ಅವರದು ರಕ್ತಸಂಬಂಧದಲ್ಲೇ ಆದ ಮದುವೆ. ಅದೇ ಮಹೇಶ ಮತ್ತು ಅವರ ಸೋದರ ಸತೀಶ್ ಅವರ ಎರಡೂ ಕಾಲುಗಳಿಗೆ ಮುಳುವಾಗಿದ್ದು. ರಕ್ತ ಸಂಬಂಧಿಗಳ ನಡುವೆಯೇ ಸಂಬಂಧಗಳನ್ನು ಬೆಸೆಯಲು ಹೊರಟವರಿಗೆ ಇದು ಎಚ್ಚರಿಕೆಯ ಗಂಟೆಯಾಗಿರಲಿ!

ಮಹೇಶ ಅವರ ಹೋರಾಟ, ಶೃದ್ಧೆಯನ್ನು ಗುರುತಿಸಿದ ಹಿರಿಯ ಇತಿಹಾಸ ತಜ್ನ ಡಾ.ಎಸ್.ರಾಜಶೇಖರ್ ಅವರು ಪಿ.ಎಚ್.ಡಿ ಅಧ್ಯಯನ ಕೈಗೊಳ್ಳಲು ಪ್ರೇರೇಪಿಸಿದರು. ಅವರ ಮಾರ್ಗದರ್ಶನದಲ್ಲಿಯೇ ಪಿ.ಎಚ್.ಡಿ ಅಧ್ಯಯನ ಕೈಗೊಂಡ ಮಹೇಶಗೆ ಬೆಂಬಲವಾಗಿ ನಿಂತವರು ತಾಯಿ ನೀಲಮ್ಮ. ‘ಕರ್ನಾಟಕದ ಸಾಮಂತ ಅರಸು ಮನೆತನಗಳು ಮತ್ತು ಅವರ ಆಳ್ವಿಕೆಯ ಪ್ರದೇಶದಲ್ಲಿ ಅವರು ಕೈಗೊಂಡ ಸಾಂಸ್ಕೃತಿಕ ಅಭಿವೃದ್ಧಿ’ ಎಂಬ ವಿಷಯ ಆಯ್ದುಕೊಂಡು ಪಿ.ಎಚ್.ಡಿ. ಪದವಿ ಸಂಪಾದಿಸಿದ ಮಹೇಶ, ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಚ್ಯವಸ್ತು ಅಧ್ಯಯನ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಕರ್ನಾಟಕ ಕಲಾ ಮಹಾವಿದ್ಯಾನಿಲಯದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸ್ವಂತ ದುಡಿಮೆಯಿಂದ ಮೂರು ವರ್ಷಗಳ ಕೆಳಗೆ ತ್ರಿಚಕ್ರ ವಾಹನ ಖರೀದಿಸಿರುವ ಅವರು, ‘ನನಗೆ ಅನುಕಂಪದ ಅಗತ್ಯವಿಲ್ಲ. ಅವಕಾಶ ಕೊಟ್ಟು ನೋಡಿ.’ ಎನ್ನುತ್ತಾರೆ. ಜೀವನದ ಬಗೆಗೆ ಅವರಿಗಿರುವ ಪ್ರೀತಿ, ಅದಮ್ಯ ವಿಶ್ವಾಸ, ಜಗತ್ತನ್ನೇ ಗೆಲ್ಲುವೆ ಎಂಬ ಹಂಬಲ ನಮಗೆ ಪ್ರೇರಣೆ. ಅವರು ವೃತ್ತಿಯಿಂದ ಶಿಕ್ಷಕರು; ಪ್ರವೃತ್ತಿಯಿಂದ ಒಳ್ಳೆಯ ಸುಗಮ ಸಂಗೀತ ಗಾಯಕ. ಕವಿ ಹೃದಯದ ಸರಳ ಸಜ್ಜನ. ಮಹೇಶರಿಂದ ಕವನಗಳನ್ನು ಬರೆಸುವುದೆಂದರೆ, ಹಿರಿಯ ಕವಿಗಳ ಹಾಡುಗಳನ್ನು ಹಾಡಿಸುವುದೆಂದರೆ ಅವರ ಸ್ನೇಹಿತರಿಗೆ ಎಲ್ಲಿಲ್ಲದ ಹುರುಪು.

ನೀವು ಮಹೇಶ ಅವರನ್ನು ಭೇಟಿ ಮಾಡಿದಾಗ ಜಿ.ಎಸ್.ಶಿವರುದ್ರಪ್ಪ ಅವರ ‘ಎಲ್ಲೋ ಹುಡುಕಿದೆ ಇಲ್ಲದ ದೇವರ’ ಗೀತೆಯನ್ನು ಹಾಡಿಸಿ, ಕೇಳಲು ಮರೆಯದಿರಿ. ಅವರು ಸದ್ಯದಲ್ಲೇ ತಮ್ಮ ಕವನ ಸಂಕಲನವನ್ನು ಹೊರತರುವ ತಯಾರಿಯಲ್ಲಿದ್ದಾರೆ. ತಾವೇ ಹಾಡಿದ ಹಾಡುಗಳ ಸಿ.ಡಿ.ಯನ್ನು ಹೊರ ತರಬೇಕು ಎಂಬುದು ಅವರ ಮನದಾಳದ ಹೆಬ್ಬಯಕೆ. ಈ ಬಾರಿಯ ಕೆ.ಪಿ.ಎಸ್.ಸಿ ಪರೀಕ್ಷೆಯಲ್ಲಿ ಸರಕಾರಿ ಕಾಲೇಜಿನ ಪ್ರಾಧ್ಯಾಪಕಾರಾಗುವ ಹಂಬಲದಲ್ಲಿದ್ದಾರೆ. ಅಧಿಕಾರಸ್ಥರು ಗಮನಿಸಿ ಅರ್ಹತೆಗೆ ಬೆಲೆ ನೀಡಬೇಕಷ್ಟೇ?

ಕಳೆದ ವರ್ಷ ಮಹೇಶ ಜಂಟಿಯಾಗಿದ್ದಾರೆ. ಪತ್ನಿ ಶ್ರೀರಕ್ಷಾ ಅವರ ಮಡಿಲಲ್ಲಿ ‘ಅಂಕಿತ’ ಆಡುತ್ತಿದ್ದಾನೆ. ಹೋರಾಟದ ಈ ಬದುಕಿಗೆ ಇದೋ ನಮ್ಮ ಶರಣು. ಮಹೇಶ ಅವರನ್ನು ಅಭಿನಂದಿಸಬೇಕೆ? ಸಂಪರ್ಕಿಸಿ: 98452 22271. (ದಯವಿಟ್ಟು ಕೇವಲ ಎಸ್.ಎಂ.ಎಸ್. ಮಾತ್ರ.)

ಸೆಪ್ಟೆಂಬರ್ ೫ ಶಿಕ್ಷಕರ ದಿನಾಚರಣೆ. ತಿರುಪಣಿತ್ತುರದ ಆದರ್ಶ ಶಿಕ್ಷಕ ಡಾ.ಸರ್ವಪಳ್ಳಿ ರಾಧಾಕೃಷ್ಣಣ್ ಅವರ ಜನ್ಮದಿನ. ಕಾಶಿ ವಿದ್ಯಾಪೀಠದ ಶ್ರೀಮನ್ನಾಯಸುಧಾಮಂಗಲೋತ್ಸವದಲ್ಲಿ ಪದವಿಧರರಿಗೆ ನೀಡಲಾಗುವ ಪದವಿಪತ್ರದ ಅರಿಕೆ ಹೀಗಿದೆ- ‘ನಾವು ಅಕ್ಷರ ದೀಪ ಹಚ್ಚಿದ್ದೇವೆ. ಆ ಅರಿವಿನ ಬೆಳಕಿನಲ್ಲಿ ಬದುಕಿನ ಹಣತೆ ಬೆಳಗಿಸಿಕೊಳ್ಳಬೇಕಾದವರು ನೀವು’. ಆ ಅರಿವಿನ ದೀಪ ಹಚ್ಚುವ ಅಧ್ಯಾಪಕರನ್ನು ಒಮ್ಮೆ ನೆನೆದು..ಅವರ ಶೃದ್ದೆಗೆ, ತಾಳ್ಮೆಗೆ, ತ್ಯಾಗಕ್ಕೆ ಈ ನುಡಿನಮನ.