ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ

ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ

ಇದು ಶೋಭೆ ತರುವ ಸಂಗತಿಯಲ್ಲ

ಇದೊಂದು ಚರ್ಚಾಸ್ಪದ ಸಂಗತಿ. ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಕೆಂಗೇರಿ ಪ್ರದೇಶದಲ್ಲಿ ಕಾಣಿಸಿಕೊಂಡರು. ಅದು ಅವರ ಕ್ಷೇತ್ರದ ಒಂದು ಭಾಗ. ಕಾರಿನಿಂದಿಳಿದ ಸಚಿವೆ ಬೀದಿ ವ್ಯಾಪಾರಿಗಳ ಬಳಿ ತೆರಳಿ, ’ಬಿಹಾರ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಂಗ್ರಹಿಸುತ್ತಿದ್ದೇನೆ. ನಿಮ್ಮ ಕೈಲಾದಷ್ಟು ನೆರವು ನೀಡಿ’ ಎಂದು ವಿನಂತಿಸಿಕೊಂಡರು.

ಜನರಿಗೆ ಆಶ್ಚರ್ಯ. ಬಹುತೇಕ ಪತ್ರಕರ್ತರಿಗೆ ಪುಳಕ. ಸಚಿವೆಯೊಬ್ಬರಿಗೆ ಎಂಥಾ ಸಾಮಾಜಿಕ ಕಳಕಳಿ ಇದೆ ನೋಡ್ರೀ ಎಂಬಂತೆ ಮಾತಾಡಿಕೊಂಡರು. ಆಟೊದಲ್ಲಿ ಧ್ವನಿವರ್ಧಕ ಬಳಸಿ ಸಚಿವೆಯ ಉದ್ದೇಶವನ್ನು ಅವರ ಅಭಿಮಾನಿಗಳು ಸಾರುತ್ತಿದ್ದರು. ಬೀದಿ ವ್ಯಾಪಾರಿಗಳಿಂದ ಹಣ ಸಂಗ್ರಹಿಸಿದ ಸಚಿವೆ, ಅದನ್ನೆಲ್ಲ ಬಿಹಾರ ಪ್ರವಾಹ ಸಂತ್ರಸ್ತರಿಗೆ ಕಳಿಸಿಕೊಡಲಾಗುವುದು ಎಂದು ಬೀಗಿದರು.

ಆದರೂ ಕೆಲ ಪತ್ರಕರ್ತರಿಗೆ ಸಂಶಯ. ಅಲ್ರೀ, ನೀವು ಅಧಿಕಾರದಲ್ಲಿ ಇದ್ದೀರಿ. ಬೀದಿಗೆ ಇಳಿದು ಹಣ ಸಂಗ್ರಹಿಸಿದ್ದು ಏಕೆ? ಇದು ಸರಿಯಾ? ಎಂದರು. ಅವರ ಪ್ರಶ್ನೆಯ ಹಿನ್ನೆಲೆ ಸಚಿವೆಗೆ ತಿಳಿಯಿತೋ ಇಲ್ಲವೋ. ’ಹಾಗೇನಿಲ್ಲ, ಅಧಿಕಾರದಲ್ಲಿರಲಿ ಇಲ್ಲದಿರಲಿ, ಜನಪರ ಕೆಲಸಕ್ಕೆ ನಾನು ಸದಾ ಮುಂದು’ ಎಂದರು.

ಸಚಿವೆ ಶೋಭಾ ಕರಂದ್ಲಾಜೆ ಅವರ ಉದ್ದೇಶ ಒಳ್ಳೆಯದೇ ಇರಬಹುದು. ಆದರೆ ಅದಕ್ಕಾಗಿ ಹಿಡಿದ ದಾರಿ ಮಾತ್ರ ಖಂಡಿತ ಸರಿಯಲ್ಲ. ಏಕೆಂದರೆ, ಅಧಿಕಾರದಲ್ಲಿರುವ ವ್ಯಕ್ತಿ ಬಹಿರಂಗವಾಗಿ ದೇಣಿಗೆ ಸಂಗ್ರಹಕ್ಕೆ ಮುಂದಾದರೆ, ಜನರಿಗೆ ಯಾವ ಸಂದೇಶ ಹೋಗುತ್ತದೆ? ಹೀಗೆ ಸಂಗ್ರಹಿಸಿದ ಹಣದ ಲೆಕ್ಕ ಕೊಡುವವರು ಯಾರು? ಸಚಿವರ ಹೆಸರಲ್ಲಿ ಅವರ ಹಿಂಬಾಲಕರು ಅಥವಾ ಕಿಡಿಗೇಡಿಗಳು ಒತ್ತಾಯದಿಂದ ಹಣ ಸಂಗ್ರಹಕ್ಕೆ ಮುಂದಾಗುತ್ತಾರೆ. ಆಗ ಇಲ್ಲ ಎನ್ನುವ ಧೈರ್ಯ ಯಾರಿಗಿರುತ್ತದೆ?

ಏಕೆಂದರೆ, ಬೆಳಿಗ್ಗೆ ತಾನೆ ಸಚಿವರು ಬಂದು ಬಹಿರಂಗವಾಗಿ ದೇಣಿಗೆ ಸಂಗ್ರಹಿಸಿರುತ್ತಾರೆ. ’ಅದು ಪ್ರಾರಂಭ. ಮುಂದಿನ ಸಂಗ್ರಹದ ಕೆಲಸ ನಮ್ಮದು’ ಎಂದು ಈ ಬೆಂಬಲಿಗರು ಹೊರಡುತ್ತಾರೆ. ಅವರನ್ನು ತಡೆಯುವವರು ಯಾರು? ಒಂದು ವೇಳೆ ಹಿರಿಯ ಪೊಲೀಸ್ ಅಧಿಕಾರಿ ಅಥವಾ ಎಂಜನಿಯರ್ ಹೀಗೆ ಹಣ ಸಂಗ್ರಹಿಸಲು ಹೋದರೆ ಅದನ್ನು ಸಮರ್ಥಿಸಿಕೊಳ್ಳಲು ಆದೀತೆ? ಜನ ಭಯಪಟ್ಟುಕೊಂಡು ಹಣ ಕೊಡಬೇಕಾಗುತ್ತದೆ. ಕೊಡದಿದ್ದರೆ ಸಚಿವರ, ಅಧಿಕಾರಿಗಳ ಬೆಂಬಲಿಗರು ಬಿಡಬೇಕಲ್ಲ?

ಈ ರೀತಿಯ ಕ್ರಮಗಳು ಬಹಿರಂಗ ಭ್ರಷ್ಟಾಚಾರಕ್ಕೆ, ಅಧಿಕಾರ ದುರ್ಬಳಕೆಗೆ ಇದು ದಾರಿ ಮಾಡಿಕೊಟ್ಟಂತೆ ಎಂಬ ಸರಳ ಸತ್ಯ ಸಚಿವೆ ಶೋಭಾ ಅವರಿಗೆ ಏಕೆ ಹೊಳೆಯಲಿಲ್ಲ?

- ಚಾಮರಾಜ ಸವಡಿ

Rating
No votes yet