ಭಾಗ ೬

ಭಾಗ ೬

ಭಾಗ - ೬

೧೯೮೪ರ ಡಿಸೆಂಬರ್ ವೇಳೆಗೆ ನನಗೆ ಎಲ್.ಎಫ್.ಸಿ. (ಲೀವ್ ಫೇರ್ ಕನ್ಸೆಷನ್) ತೆಗೆದುಕೊಳ್ಳುವ ಅವಕಾಶ ಸಿಕ್ಕಿತ್ತು. ಅಂದರೆ ಎಲ್.ಎಫ್.ಸಿ ಯಲ್ಲಿ ಬ್ಯಾಂಕಿನ ಹಣದಲ್ಲಿ ರಜೆಯ ಮೇಲೆ ಬೇರೆ ಊರಿಗೆ ರೈಲಿನಲ್ಲಿ ಹವಾನಿಯಂತ್ರಿತ ಅಥವಾ ಮೊದಲ ದರ್ಜೆಯಲ್ಲಿ ಬೇರೆ ಊರಿಗೆ ಹೋಗಿ ಬರಬಹುದು. ಮೊದಲ ಅವಕಾಶ ಸಿಕ್ಕಿದಾಗ ದೂರದೂರಿಗೆ ಹೋಗುವುದೆಂದರೆ, ನನಗೆ ಮೊದಲು ತೋಚಿದ್ದು ಮುಂಬೈಗೆ ಹೋಗೋಣ ಅಂತ. ಏಕೆಂದರೆ ಅಲ್ಲಿ ಆಗ ನನ್ನಣ್ಣ ಕೆಲಸ ಮಾಡುತ್ತಿದ್ದ. ಅಲ್ಲಿಯವರೆವಿಗೆ ನಾನು ಕರ್ನಾಟಕ ಬಿಟ್ಟು ಆಚೆ ಹೋಗಿದ್ದವನಲ್ಲ.

ಮುಂಬೈಗೆ ಹೋಗಲು ಹವಾನಿಯಂತ್ರಿತ ತರಗತಿಯಲ್ಲಿ ಮುಂಗಡ ಟಿಕೆಟ್ ಮಾಡಿಸಿದೆ. ಅಣ್ಣನಿಗಾಗಿ ಬೆಂಗಳೂರಿನಲ್ಲಿ ಸಿಗುವ ವಿಶೇಷ ತಿನಿಸುಗಳನ್ನು ಕೊಂಡಿದ್ದೆ. ಆಗಿನ್ನೂ ಹೊಸದಾಗಿ ಉದ್ಯಾನ್ ಎಕ್ಸ್ಪ್ರೆಸ್ ದಿನವಹೀ ಬೆಂಗಳೂರಿನಿಂದ ರಾತ್ರಿ ೮ಕ್ಕೆ ಹೊರಟು ಮರುದಿನ ರಾತ್ರಿ ೮ಕ್ಕೆ ಮುಂಬೈ ತಲುಪುತ್ತಿತ್ತು. ಅದೇ ಮೊದಲ ಬಾರಿಗೆ ಹವಾನಿಯಂತ್ರಿತ ಬೋಗಿಯೊಳಗೆ ಕಾಲಿಡುತ್ತಿದ್ದೆ. ಅಲ್ಲಿ ಬರುವವರೆಲ್ಲರೂ ಆಗರ್ಭ ಶ್ರೀಮಂತರಿರಬೇಕೆಂದು ಎಣಿಸಿದ್ದೆ. ಅವರೊಂದಿಗೆ ನಗೆಪಾಟಲಾಗಬಾರದೆಂದು ಪ್ರಯಾಣಕ್ಕಾಗಿಯೆ ಹೊಸ ಬಟ್ಟೆಯನ್ನು ಧರಿಸಿದ್ದೆ. ನನ್ನಲ್ಲೂ ಅಂತಸ್ತಿದೆ ಎಂದು ತೋರ್ಪಡಿಸಿಕೊಳ್ಳುವ ಸಲುವಾಗಿ ಒಂದು ಒಳ್ಳೆಯ ಲೇಖನಿ ಮತ್ತು ಡೈರಿಯನ್ನು ಕೈನಲ್ಲಿ ಹಿಡಿದಿದ್ದೆ. ಟ್ರೈನ್ ಬೆಂಗಳೂರು ಬಿಡುತ್ತಿದ್ದಂತೆಯೇ ಒಂದೇ ಸಮನೆ ಡೈರಿಯಲ್ಲಿ ಬರೆಯುತ್ತಿದ್ದೆ. ಮಧ್ಯೆ ಮಧ್ಯೆ ಆಚೀಚೆ ನೋಡುತ್ತಿದ್ದೆ. ನಂತರ ತಿಳಿದು ಬಂದ ವಿಷಯವೆಂದರೆ ಹೆಚ್ಚಿನ ಜನ ನನ್ನಂತೆಯೇ ಎಲ್.ಎಫ್.ಸಿ, ಎಲ್.ಟಿ.ಸಿ ತೆಗೆದುಕೊಂಡು ಬರ್ತಿದ್ದಾರೆ ಅಂತ. ನಾನು ಡೈರಿಯಲ್ಲಿ ಬರೆಯುತ್ತಿದ್ದುದು ಏನೆಂದರೆ ಟ್ರೈನಿನಲ್ಲಿ ಹೋಗುವಾಗ ಬರುತ್ತಿದ್ದ ಸ್ಟೇಷನ್ನುಗಳ ಹೆಸರುಗಳನ್ನು. ಟ್ರೈನ್ ನಿಲ್ಲುತ್ತಿದ್ದ ಪ್ರತಿಯೊಂದು ಸ್ಟೇಷನ್ನಿನಲ್ಲೂ ನಾನಿಳಿದು ಅಕ್ಕ ಪಕ್ಕದ ಬೋಗಿಗಳ ಕಡೆ ಹೋಗಿ ಬರ್ತಿದ್ದೆ. ಮಾರನೆಯ ದಿನ ರಾತ್ರಿ ೭ಕ್ಕೆ ಸರಿಯಾಗಿ ಕಲ್ಯಾಣ ಸ್ಟೇಷನ್ ತಲುಪಿದ್ದೆ. ಬಾಗಿಲಿನಿಂದ ಇಳಿಯುತ್ತಿರುವಂತೆಯೇ ನನ್ನಣ್ಣ ಎದುರಾಗಿದ್ದ.

ಅಣ್ಣನೊಂದಿಗೆ ಅವನ ಕೊಠಡಿಗೆ ಹೋದಾಗ ಇಲ್ಲಿಯ ವಸತಿಯ ತೊಂದರೆ ಎಷ್ಟಿದೆ ಮತ್ತು ಬದುಕು ಎಷ್ಟು ದುಸ್ಸರವಾಗಿದೆ ಎಂದು ತಿಳಿಯಿತು. ನನ್ನಣ್ಣ ಇದ್ದದ್ದು ಮುಂಬೈನ ಕೇಂದ್ರ ಪ್ರದೇಶದಿಂದ ೬೦ ಕೊಲೋಮೀಟರ್ ದೂರದ ಉಲ್ಹಾಸ ನಗರದಲ್ಲಿ. ಅದೊಂದು ಚಾಲ್ ಅಂದರೆ ವಠಾರ. ಒಂದು ಮನೆಯನ್ನು ಇನ್ನೊಂದು ಮನೆಯೊಂದಿಗೆ ಬೇರ್ಪಡಿಸಲು ಒಂದೇ ಗೋಡೆ. ಆ ಮನೆಗಳಲ್ಲಿ ಮುಂಭಾಗದಲ್ಲಿ ಸಣ್ಣ ಕೊಠಡಿ - ಅಲ್ಲೇ ಒಂದು ಮೂಲೆಯಲ್ಲಿ ಅಡುಗೆ ಮಾಡುವ ಜಾಗ, ಕೊನೆಯಲ್ಲಿ ಒಂದು ಬಚ್ಚಲು. ಶೌಚಕ್ರಿಯೆಗೆ ಹಿಂದುಗಡೆ ಇರುವ ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸಬೇಕು. ಬೆಳಗ್ಗೆ ಆರು ಘಂಟೆಗೆ ಅಲ್ಲಿ ದೊಡ್ಡ ಕ್ಯೂ ಇರುತ್ತದೆ. ಅದಕ್ಕಾಗಿ ನನ್ನಣ್ಣ ಪ್ರತಿದಿನವೂ ೫ ಘಂಟೆಗೇ ಎದ್ದು ಶೌಚಕಾರ್ಯ ಮುಗಿಸಿ ಬರುತ್ತಿದ್ದ. ಮರುದಿನದಿಂದ ಮುಂಬೈ ಸುತ್ತುವುದರ ಬಗ್ಗೆ, ಎಲ್ಲೆಲ್ಲಿ ಏನೇನು ನೋಡುವುದಿದೆ, ಹೇಗೆ ಹೋಗಬೇಕು, ಲೋಕಲ್ ಟ್ರೈನಿನಲ್ಲಿ ಹೇಗೆ ಹತ್ತಬೇಕು, ಜೇಬುಗಳ್ಳರಿಂದ ಹೇಗೆ ಹುಷಾರಾಗಿರಬೇಕು ಎಂದೆಲ್ಲಾ ಹೇಳಿದ್ದ. ಮುಂಬೈನಲ್ಲಿ ದೊಡ್ಡ ಬಂಗಲೆಗಳು, ಐಷಾರಾಮೀ ಜೀವನ, ಕಾರುಗಳಲ್ಲಿ ಓಡಾಟ ಇತ್ಯಾದಿ ಬಗ್ಗೆ ಏನೇನೋ ಕನಸು ಕಂಡಿದ್ದೆ. ಎಲ್ಲವೂ ಒಂದೇ ದಿನದಲ್ಲಿ ಠುಸ್ ಎಂದು ಹೋಯಿತು. ೧೫ ದಿನಗಳು ಇರುವುದೆಂದು ಲೆಕ್ಕ ಹಾಕಿ ಬಂದಿದ್ದ ನಾನು ಮರುದಿನವೇ ಲೋಕಲ್ ಟ್ರೈನಿನಲ್ಲಿ ಓಡಾಡಲು ಪಾಸನ್ನು ಮಾಡಿಸಿದ್ದೆ.

ಶಾಲೆಯಲ್ಲಿದ್ದಾಗ ಹಿಂದಿ ಪರೀಕ್ಷೆಯನ್ನು ಪಾಸು ಮಾಡಿದ್ದ ನಾನು, ಹಿಂದಿ ಚೆನ್ನಾಗಿ ಅರ್ಥ ಆಗುತ್ತದೆ, ಮಾತನಾಡಲೂ ಬರುತ್ತದೆ ಎಂದೆಣಿಸಿದ್ದೆ. ಆದರಿಲ್ಲಿ ಮಾತನಾಡುವ ಹಿಂದಿಯೇ ಬೇರೆ. ನನಗೆ ಎಷ್ಟೋ ಪದಗಳು ಅರ್ಥವೇ ಆಗ್ತಿರ್ಲಿಲ್ಲ. ಮರಾಠಿ ಹಿಂದಿ ಮಿಶ್ರಣವಾಗಿ ಸ್ವಲ್ಪ ಒಡ್ಡು ಒಡ್ಡಾಗಿ ಮಾತನಾಡುವ ಭಾಷೆ ಇಲ್ಲಿಯದ್ದಾಗಿದೆ. ಪ್ರತಿದಿನ ಬೆಳಗ್ಗೆ ೮ ಘಂಟೆಗೆ ಉಲ್ಹಾಸನಗರ ಸ್ಟೇಷನ್ನಿನ ಮೊದಲನೆಯ ಪ್ಲಾಟ್‍ಫಾರಂನಲ್ಲಿ ಬರುವ ಅಂಬರನಾಥದ ಗಾಡಿಯನ್ನು ಹಿಡಿಯುತ್ತಿದ್ದೆವು. ಅದರಲ್ಲಿ ಒಳಗೆ ನುಸುಳಲು ಸ್ವಲ್ಪ ಅವಕಾಶ ಸಿಗುತ್ತಿತ್ತು. ಬದಲಾಪುರ ಅಥವಾ ಕರ್ಜತ್ ಗಾಡಿಗಳಲ್ಲಿ ಒಳಗೆ ಹೋಗಲಾಗುತ್ತಿರಲಿಲ್ಲ. ಪ್ರತಿ ದಿನವೂ ಹೀಗೆಯೇ ಲೋಕಲ್ ಟ್ರೈನಿನಲ್ಲಿ ಹತ್ತಿ ಇಳಿದು ಮುಂಬೈ ದರ್ಶನವನ್ನು ಮಾಡಿದ್ದಾಗಿತ್ತು. ವಾಪಸ್ಸು ಬರುವಾಗ ಬಸ್ಸಿನಲ್ಲಿ ಚಿತ್ರದುರ್ಗಕ್ಕೆ ಬಂದು ಅಲ್ಲಿಂದ ನನ್ನೂರಾದ ತಳುಕಿಗೆ ಹೋಗಿದ್ದೆ. ಅಲ್ಲೊಂದೆರಡು ದಿನಗಳಿದ್ದೆ. ಇನ್ನೂ ೧೦ ದಿನಗಳ ರಜೆ ಇದ್ದುದರಿಂದ ಏನು ಮಾಡಲಿ, ಎಲ್ಲಿಗೆ ಹೋಗಲಿ ಅಂತ ಯೋಚಿಸ್ತಿದ್ದಾಗ, ನನ್ನ ತಂದೆ ತಿರುಪತಿಗೆ ಹೋಗಿ ಬಾ, ಎಂದಿದ್ದರು. ಅದೇ ಮೊದಲ ಬಾರಿಗೆ ತಿರುಪತಿಗೆ ನಾನು ಹೋಗುತ್ತಿದ್ದುದು. ನನ್ನೂರಿನಿಂದ ೧೫ ಕಿಲೋಮೀಟರ್ ದೂರದ ಚಳ್ಳಕೆರೆಯಿಂದ ಬೆಳಗ್ಗೆ ೭ ಘಂಟೆಗೆ ತಿರುಪತಿಗೆ ಹೋಗಲು ನೇರ ಬಸ್ಸು ಇದ್ದಿತ್ತು. ಅದರಲ್ಲಿ ಹೊರಟು ಸಂಜೆ ೭ಕ್ಕೆ ತಿರುಪತಿಗೆ ಹೋಗಿ ಸೇರಿದ್ದೆ. ಅದೇ ಮೊದಲ ಬಾರಿಗೆ ಹೋಗುತ್ತಿದ್ದುದರಿಂದ ಎಲ್ಲಿ ಹೋಗುವುದು, ಏನು ಮಾಡುವುದು ಎಂದು ಏನೂ ತಿಳಿದಿರಲಿಲ್ಲ. ನೇರವಾಗಿ ಹತ್ತಿರದ ಪೋಲಿಸ್ ಸ್ಟೇಷನ್ನಿಗೆ ಹೋದೆ. ತಿರುಮಲ ಬೇರೆ ತಿರುಪತಿ ಬೇರೆ ಎಂಬುದು ತಿಳಿದದ್ದೇ ಆಗ. ಅಲ್ಲಿಯವರೆವಿಗೆ ಇವೆರಡರ ವ್ಯತ್ಯಾಸ ತಿಳಿದೇ ಇರಲಿಲ್ಲ. ಅಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ತಕ್ಷಣವೇ ಬಸ್ಸನ್ನೇರಿ ತಿರುಮಲಕ್ಕೆ ಹೋಗಿದ್ದೆ. ಅಲ್ಲಿ ರಾತ್ರಿ ಕಳೆಯಲು ರೂಮು ಮಾಡಲು ಹೋದಾಗ ರೂ ೧೦ ಕ್ಕೆ ಕಾಟೇಜ್ ಸಿಗುವುದೆಂದು ತಿಳಿಯಿತು. ಹತ್ತಿರದಲ್ಲೇ ಇದ್ದ ಹೊಟೇಲ್ ಒಂದರಲ್ಲಿ ರಾತ್ರಿಯೂಟ ಮಾಡಿ ಕಾಟೇಜಿನಲ್ಲಿ ಮಲಗಿದೆ. ಬೆಳಗ್ಗೆ ಬೇಗನೆ ದೇವರ ದರ್ಶನ ಮಾಡಬೇಕೆಂಬ ಕಾತರದಲ್ಲಿ ರಾತ್ರಿ ನಿದ್ರೆಯೇ ಬಂದಿರಲಿಲ್ಲ. ನನಗೆ ಗಡಿಯಾರ ಕಟ್ಟುವ ಅಭ್ಯಾಸವಿಲ್ಲವಾಗಿ ಸಮಯ ಎಷ್ಟಾಗಿದೆ ಎಂದು ತಿಳಿಯುತ್ತಿರಲಿಲ್ಲ. ಸಾಮಾನ್ಯವಾಗಿ ಹೋದಲ್ಲೆಲ್ಲಾ ಗಡಿಯಾರು ಇರುತ್ತಿತ್ತು. ಮಲಗಿದ್ದವನಿಗೆ, ಹೊರಗಡೆ ಬೆಳಕು ಹರಿದಂತೆ ಅನ್ನಿಸಿತು. ತಕ್ಷಣ ಎದ್ದು ಸ್ನಾನ ಮಾಡಿ ದೇವರ ದರ್ಶನಕ್ಕೆ ಹೋಗೋಣ ಎಂದು ಸ್ನಾನದ ಮನೆಗೆ ಹೊರಟೆ. ನಲ್ಲಿ ತಿರುಗಿಸಿ ಕೆಳಗೆ ಕುಳಿತೆ. ಒಂದು ಕ್ಷಣ ಎಲ್ಲಿದ್ದೇನೆ ಎಂಬುದೇ ನೆನಪಿರಲಿಲ್ಲ. ಮೈಯೆಲ್ಲಾ ಮರತಟ್ಟಿ ಹೋಗಿತ್ತು. ಮಾಘ ಮಾಸದ ಛಳಿಗಾಲ. ಬೆಳಗ್ಗೆ ೩ ಘಂಟೆ ಸಮಯದಲ್ಲಿ ನೀರು ಎಷ್ಟು ತಣ್ಣಗಿದ್ದೀತು - ನೀವೇ ಊಹಿಸಿ. ನೀರು ಮಂಜಿನ ಗಡ್ಡೆಯಾಗಿರಲಿಲ್ಲ ಅಷ್ಟೆ. ಜನಸಂದಣಿ ಇಲ್ಲದ ಕಾರಣ ಮತ್ತು ಬೆಳಗಿನ ನಾಲ್ಕು ಘಂಟೆಯಾದ ಕಾರಣ ದೇವರ ದರ್ಶನ ಬಹಳ ಸುಲಭವಾಗಿ ಆಗಿತ್ತು. ಪ್ರಸಾದ ವಿತರಣೆ ಇನ್ನೂ ಆರಂಭಿಸಿರಲಿಲ್ಲ. ಹಾಗಾಗಿ ದೇಗುಲದ ಒಳಗೆಲ್ಲಾ ಸುತ್ತಾಡಿ ಬಂದೆ. ಪ್ರಸಾದ ಕೊಡುವಾಗ ಹೆಚ್ಚಿಗೆ ಖಾರದ ಪೊಂಗಲ್ ಸಿಹಿ ಪೊಂಗಲ್ ಬೇಕೆಂದು ಎರಡು ರೂಪಾಯಿಗಳನ್ನು ಕೌಂಟರಿನಲ್ಲಿ ಕೊಡಲು, ದೊಡ್ಡ ದೊಡ್ಡ ಎಲೆಯಲ್ಲಿ ತುಂಬಿ ಕೊಟ್ಟರು. ಅಷ್ಟೊಂದು ಹೇಗೆ ತಿನ್ನಲಿ. ಅಂದಿನ ರಾತ್ರಿಯವರೆವಿಗೂ ಅದನ್ನೇ ತಿಂದಿದ್ದೆ. ರಾತ್ರಿಯ ೯ ಘಂಟೆ ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟೆ.

ಬೆಳಗಿನ ಜಾವ ೫ಕ್ಕೆ ಬೆಂಗಳೂರು ತಲುಪಿದ್ದೆ. ಎಲ್.ಎಫ್.ಸಿಗಾಗಿ ತೆಗೆದುಕೊಂಡಿದ್ದ ಇನ್ನೂ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಿತ್ತು. ಅದನ್ನು ಖರ್ಚು ಮಾಡಲೆಂದೇ ಬಸ್ ಸ್ಟ್ಯಾಂಡಿನಿಂದ ನೇರವಾಗಿ ರೈಲ್ವೇ ನಿಲ್ದಾಣಕ್ಕೆ ಹೋಗಿ, ಫಸ್ಟ್ ಕ್ಲಾಸಿನಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಿದೆ. ಅಲ್ಲಿಯೂ ನಾನು ಕಂಪಾರ್ಟ್‍ಮೆಂಟಿನಲ್ಲಿ ಕುಳಿತುಕೊಳ್ಳದೇ ಬಾಗಿಲಿನಲ್ಲೇ ನಿಂತಿದ್ದೆ. ಅದರಲ್ಲಿದ್ದ ಅಟೆಂಡೆಂಟ್‍ಗಳಿಗೆ ನನ್ನ ವರ್ತನೆ ನೋಡಿ ಆಶ್ಚರ್ಯವೆನಿಸಿತ್ತು. ಯಾರೂ ಏನೂ ಕೇಳಲಿಲ್ಲ, ಮತ್ತು ನಾನೂ ಏನೂ ಹೇಳಲಿಲ್ಲ. ಮೈಸೂರಿನ ರೈಲ್ವೇ ಸ್ಟೇಷನ್ ತಲುಪುತ್ತಲೇ ರಿಟರ್ನ್ ಟಿಕೆಟ್ ತೆಗೆದುಕೊಂಡು, ಚಾಮುಂಡಿ ಬೆಟ್ಟಕ್ಕೆ ಹೋಗಿಬಂದು ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದೆ. ಎರಡು ದಿನಗಳಿಂದ ಸ್ನಾನವಿಲ್ಲದೇ ಅದು ಹೇಗೆ ಇದ್ದೆನೋ ಈಗಲೂ ನೆನೆಸಿಕೊಳ್ಳಲಾಗುವುದಿಲ್ಲ.

Rating
No votes yet