ಭಾಗ - ೭
೧೯೮೫ರಲ್ಲಿ ಕ್ಯಾಷ್ ಡಿಪಾರ್ಟ್‍ಮೆಂಟಿನಿಂದ ಜನರಲ್ ಸೈಡ್‍ಗೆ ಪೋಸ್ಟ್ ಮಾಡಿದ್ದರು. ಅಲ್ಲಿ ಪಬ್ಲಿಕ್ ಡೆಟ್ ಆಫೀಸ್ ಎನ್ನುವಲ್ಲಿ ಒಂದೂವರೆ ವರ್ಷಗಳ ಕಾಲ ಕೆಲಸ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಲವನ್ನು ತೆಗೆದುಕೊಳ್ಳಲು ಮತ್ತು ಅದರ ಲೆಕ್ಕಾಚಾರದ ಬಗ್ಗೆ ಕೆಲಸ ಮಾಡುವ ವಿಭಾಗ ಇದು. ನನಗೇನೂ ಅಂತಹ ಘನಂದಾರಿ ಕೆಲಸ ಕೊಟ್ಟಿರಲಿಲ್ಲ. ನಾನು ಮಾಡುತ್ತಿದ್ದುದು ಕ್ಲರಿಕಲ್ ಕೆಲಸ. ಮೊದಲಿಗೆ ವಿಭಾಗದ ಬಗ್ಗೆ ತಿಳಿದುಕೊಳ್ಳಲು ತರಬೇತಿ ಕೊಡುವರು. ಇದಕ್ಕಾಗಿ ಚೆನ್ನೈಗೆ ಕಳುಹಿಸಿದ್ದರು. ಅದೇ ಮೊದಲ ಬಾರಿಗೆ ಚೆನ್ನೈಗೆ ಹೋಗಿದ್ದು. ಸ್ವಲ್ಪ ಕಾಲದ ಮೊದಲು ಹೋಗಿದ್ದ ಮುಂಬೈನಲ್ಲಿ ನನಗೆ ಬರುತ್ತಿದ್ದ ಅಲ್ಪ ಸ್ವಲ್ಪ ಹಿಂದಿಯಲ್ಲಿ ಹೇಗೋ ನನ್ನ ಬೇಳೆ ಬೇಯಿಸಿಕೊಂಡಿದ್ದೆ. ಆದರೆ ಈ ಚೆನ್ನೈನಲ್ಲಿ ಹಿಂದಿ ನಡೆಯುವುದಿಲ್ಲ ಎಂದು ತಿಳಿದಿತ್ತು. ಇಲ್ಲಿ ಹಿಂದಿ ಮಾತನಾಡಿದರೆ ಏಟು ಬೀಳುವುದು ಗ್ಯಾರಂಟಿ. ಕನ್ನಡದವರಿಗೆ ತಮಿಳು ಕಲಿಯುವುದು ಸುಲಭ.
ಈ ಟ್ರೈನಿಂಗ್ ೨ ವಾರಗಳದ್ದಾಗಿದ್ದಿತು. ಬೆಂಗಳೂರಿನಿಂದ ಮೊದಲ ಬಾರಿಗೆ ರಾತ್ರಿಯ ಟ್ರೈನಿನ ಹವಾನಿಯಂತ್ರಿತ ಬೋಗಿಯಲ್ಲಿ ೪ ಸಹಕರ್ಮಚಾರಿಗಳೊಂದಿಗೆ ಚೆನ್ನೈಗೆ ಹೊರಟೆ. ಭಾನುವಾರ ಮಧ್ಯಾನ್ಹದ ಟ್ರೈನ್ ರಾತ್ರಿ ೯ಕ್ಕೆ ಚೆನ್ನೈ ತಲುಪಿತ್ತು. ಆಗ ಅಲ್ಲಿಯ ನಗರ ಬಸ್ ಸಂಚಾರ ವ್ಯವಸ್ಥೆ ಬಹಳ ಚೆನ್ನಾಗಿತ್ತು. ಪೂನಮಲೈ ಹೈ ರಸ್ತೆಯಲ್ಲಿರುವ ನಮ್ಮ ಕ್ವಾರ್ಟರ್ಸಿನಲ್ಲಿ ನಮಗೆ ಇರಲು ಅವಕಾಶ ಮಾಡಿಕೊಟ್ಟಿದ್ದರು. ಬೆಳಗ್ಗಿನ ತಿಂಡಿಗೆ ಬ್ಯಾಂಕಿನ ಕ್ಯಾಂಟೀನಿಗೆ ಹೋಗುತ್ತಿದ್ದೆವು. ಅಲ್ಲಿಯೋ ಪ್ರತಿದಿನವೂ ಪೊಂಗಲ್ (ಹುಗ್ಗಿ) ಮಾಡುತ್ತಿದ್ದರು. ಬೆಂಗಳೂರಿನ ಬ್ಯಾಂಕಿನ ಕ್ಯಾಂಟೀನಿನಂತೆ ದೋಸೆ, ಇಡ್ಲಿ, ವಡೆ ಇತ್ಯಾದಿಗಳನ್ನು ಮಾಡ್ತಿರಲಿಲ್ಲ. ಮಧ್ಯಾಹ್ನದ ಊಟವೋ ದೇವರಿಗೇ ಪ್ರೀತಿ. ಮಾಂಸಾಹಾರ ಮತ್ತು ಸಸ್ಯಾಹಾರ ಎರಡನ್ನೂ ಒಟ್ಟಿಗೇ ಕೊಡುತ್ತಿದ್ದದ್ದನ್ನು ಅಲ್ಲಿಯೇ ಮೊದಲ ಬಾರಿಗೆ ನಾನು ನೋಡಿದ್ದು. ಸಂಜೆ ೫ ಘಂಟೆಗೆ ಬ್ಯಾಂಕಿನಿಂದ ಆಚೆ ಬಂದ ಕೂಡಲೇ ನಾನು ಊರು ಸುತ್ತಲು ಹೋಗುತ್ತಿದ್ದೆ. ಇನ್ನುಳಿದ ಸ್ನೇಹಿತರುಗಳಿಗೆ ಅವರುಗಳದ್ದೇ ಆದ ಲೋಕಗಳಿದ್ದವು. ನಾನೊಬ್ಬನೇ ಅವರೆಲ್ಲರಿಗಿಂತ ವಿಭಿನ್ನ. ಅವರೆಲ್ಲರೂ ಜೀವನವನ್ನು ಸವಿಯಲೇ ಹುಟ್ಟಿದವರಂತಿದ್ದರು.
ದಿನವೂ ಸಂಜೆ ಯಾವುದಾದರೊಂದು ಬಸ್ಸನ್ನು ಹತ್ತಿ ಕೊನೆಯ ನಿಲ್ದಾಣಕ್ಕೆ ಹೋಗಿ, ಅಲ್ಲಿ ಇಲ್ಲಿ ಸುತ್ತಾಡಿ ಮತ್ತೆ ಬಸ್ ಹತ್ತಿ ಪ್ಯಾರಿಸ್ ಕಾರ್ನರ್ ಗೆ ಬರ್ತಿದ್ದೆ. ಅಲ್ಲಿರುವ ಹರಿನಿವಾಸ ಎಂಬ ಹೊಟೆಲ್‍ನಲ್ಲಿ ಪ್ರತಿ ರಾತ್ರಿ ಊಟ. ಅಲ್ಲಿ ದೊಡ್ಡದಾದ ಬಾಳೆ ಎಲೆ ಹಾಕಿ, ಮೊರದಲ್ಲಿ ಅನ್ನವನ್ನು ತಳ್ಳುತ್ತಿದ್ದರು. ಅದನ್ನು ನೋಡುವುದೇ ಚಂದ. ಅಷ್ಟನ್ನೂ ಅದು ಹೇಗೆ ತಿನ್ನುತ್ತಿದ್ದೆನೋ ಏನೋ. ಹೊಟ್ಟೆಯೊಳಗೆ ಬೆಂಕಿ ಇದ್ದಿತ್ತು ಅನ್ಸತ್ತೆ, ಎಷ್ಟೇ ತಿಂದರೂ ಜೀರ್ಣವಾಗುತ್ತಿತ್ತು. ಈ ಹದಿನಾಲ್ಕು ದಿನಗಳಲ್ಲಿ ಚೆನ್ನೈನ ಪ್ರತಿ ಜಾಗವನ್ನೂ ನೋಡಿದ್ದೆ. ಹಾಗೂ ತಮಿಳನ್ನು ಮಾತನಾಡಲೂ ಕಲಿತಿದ್ದೆ.
ನನ್ನ ಕಣ್ಣಿಗೆ ಕಂಡ ಚೆನ್ನೈ ಅಂದರೆ - ಎಲ್ಲೆಲ್ಲಿ ನೋಡಿದರೂ ಗಲೀಜು. ಕ್ರೋಮ್‍ಪೇಟೆಯಂತೂ ಬೆಂಗಳೂರಿನ ಕಲಾಸಿಪಾಳ್ಯಕ್ಕಿಂತ ಗಲೀಜು. ಮುದ ಕೊಡುವ ಸ್ಥಳಗಳು ಅಂದರೆ, ತ್ಯಾಗರಾಯನಗರ, ಅಡ್ಯಾರ್, ಬೆಸೆಂಟ್‍ನಗರ್. ಬಹುಶ: ಈ ಜಾಗಗಳಲ್ಲಿ ವಾಸಿಸುವ ಜನರ ಪ್ರಭಾವದಿಂದ ಈ ಸ್ಥಳಗಳು ಹೀಗಿರಬಹುದು ಅನ್ಸತ್ತೆ.
ಅದೇ ಮೊದಲ ಬಾರಿಗೆ ಐ.ಐ.ಟಿ.ಯನ್ನು ಪ್ರವೇಶಿಸುವ ಅವಕಾಶವೂ ಸಿಕ್ಕಿತ್ತು. ನನ್ನ ಗೆಳೆಯ ಕೇಶವಕುಮಾರ ಅಲ್ಲಿ ಎಂ.ಟೆಕ್ ಮಾಡ್ತಿದ್ದ. ಒಂದು ದಿನಕ್ಕಾದ್ರೂ ಅವನ ಹಾಸ್ಟೆಲ್ಲಿನಲ್ಲಿ ತಂಗುವಂತೆ ಕೇಳಿಕೊಂಡಿದ್ದ. ಒಂದು ಸಂಜೆ ಬ್ಯಾಂಕಿನಿಂದ ನೇರವಾಗಿ ಅಲ್ಲಿಗೆ ಹೋದವನು ಒಂದಲ್ಲ ಮೂರು ದಿನಗಳು ಅಲ್ಲಿಯೇ ಇದ್ದೆ. ಎಂತಹ ಪ್ರಶಾಂತ ಮತ್ತು ಆನಂದದಾಯಕ ಕ್ಯಾಂಪಸ್. ಆ ಸ್ಥಳ ಚೆನ್ನೈನಲ್ಲಿ ಇದೆ ಅಂದ್ರೆ ಈಗಲೂ ನಂಬುವುದಕ್ಕೆ ಆಗುವುದಿಲ್ಲ. ಅಲ್ಲಿಯ ಹಾಸ್ಟೆಲ್ಲುಗಳಿಗೆ ನದಿಯ ಹೆಸರುಗಳನ್ನೂ ಮತ್ತು ಒಳಗೆ ಓಡಾಡುವ ಕ್ಯಾಂಪಸ್ಸಿನ ಬಸ್ಸುಗಳಿಗೆ ಪರ್ವತಗಳ ಹೆಸರನ್ನೂ ಇಟ್ಟಿದ್ದಾರೆ. ಇದು ಏಕೆ ಎಂದು ನನ್ನ ಸ್ನೇಹಿತನನ್ನು ಕೇಳಿದ್ದಕ್ಕೆ, ಅವನ ಪ್ರೊಫೆಸರ್ ಒಬ್ಬರು ಹೇಳಿದ್ದ ಮಾತುಗಳನ್ನು ಅವನು ನನಗೆ ಹೇಳಿದ್ದ, ' ನಮ್ಮಲ್ಲಿ ಕಲಿತ ಹುಡುಗ / ಹುಡುಗಿಯರು ಪರ್ವತಗಳನ್ನು ಚಲಿಸುವಂತೆ ಮಾಡುವರು ಮತ್ತು ನದಿಗಳನ್ನು ತಟಸ್ಥ ಆಗುವಂತೆ ಮಾಡುವರು' ಎಂದು. ಎಂತಹ ಆದರ್ಶವನ್ನು ಮುಂದಿಟ್ಟುಕೊಂಡು ನಡೆಯುತ್ತಿದ್ದಾರೆ. ಈಗಲೂ ಚೆನ್ನೈನ ಐ.ಐ.ಟಿ.ಗೆ ಜಗತ್ತಿನಲ್ಲಿ ಶ್ರೇಷ್ಠ ಸ್ಥಾನವಿದೆ. ಬೆಳಗ್ಗೆ ಮತ್ತು ಸಂಜೆ ಕ್ಯಾಂಪಸ್ ಸುತ್ತು ಹಾಕುವವರಿಗೆ ಕಿವಿಗೆ ಕೇಳುವುದು ವೇದಘೊಷ. ಅಲ್ಲಿಯ ಕೆಲವು ಪ್ರೊಫೆಸರ್ ಗಳು ವೇದವಿದ್ಯಾ ಪಾರಂಗತರಾಗಿದ್ದರು. ಬಿಡುವಿನ ವೇಳೆಯಲ್ಲಿ ಕ್ಯಾಂಪಸ್ಸಿನಲ್ಲಿರುವ ಉತ್ಸುಕರಿಗೆ ವೇಡ ಪಾಠ ಕಲಿಸುತ್ತಿದ್ದರು. ಈ ಸ್ಥಳವನ್ನು ಸ್ವರ್ಗವನ್ನದೇ ಮತ್ತೇನನ್ನಬೇಕು ಅಲ್ಲವೇ?
ಇದೇ ಸಮಯದಲ್ಲಿ ನಮ್ಮ ಮನೆಯಲ್ಲೊಂದು ಅವಘಡ ಸಂಭವಿಸಿತ್ತು. ಒಂದು ದಿನ ಮಧ್ಯಾಹ್ನ ನನ್ನ ದೊಡ್ಡಣ್ಣ ಫೋನ್ ಮಾಡಿದ್ದ. ಅವನು ಬೆಂಗಳೂರಿನ ಕಾರ್ಪೋರೇಶನ್ ಆಫೀಸಿನ ಆವರಣದಲ್ಲಿರುವ ಅಂಚೆ ಕಛೇರಿಯಲ್ಲಿ ಸಬ್ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ. ನಮ್ಮ ತಂದೆಗೆ ಬಹಳ ಆರೋಗ್ಯ ಕೆಟ್ಟಿದೆಯೆಂದೂ, ತನಗೆ ಕೆಲಸ ಜಾಸ್ತಿಯಾಗಿ ಊರಿಗೆ ಹೋಗಲಾಗುವುದಿಲ್ಲ, ನಾನು ಹೋಗಬೇಕೆಂದು ಮಧ್ಯಾಹ್ನ ೩ ಘಂಟೆಗೆ ತಿಳಿಸಿದ್ದ. ತಂದೆಗೆ ಏನಾಗಿದೆ? ನಾನೇಕೆ ತಕ್ಷಣ ಊರಿಗೆ ಹೋಗಬೇಕು ಎನ್ನುವುದು ತಿಳಿಯಲಿಲ್ಲ. ಅಷ್ಟಲ್ಲದೇ ಎಷ್ಟು ಹಣವನ್ನು ತೆಗೆದುಕೊಂಡು ಊರಿಗೆ ಹೋಗಬೇಕೆಂದೂ ತಿಳಿದಿರಲಿಲ್ಲ.
ಆಗೆಲ್ಲಾ ನಾನು ಯುನಿಯನ್ ಕೆಲಸದಲ್ಲಿ ಬಹಳ ಸಕ್ರಿಯನಾಗಿದ್ದೆ. ಅಂದೂ ಸಂಜೆ ಯೂನಿಯನ್ ಆಫೀಸಿಗೆ ಹೋರಟಿದ್ದೆ. ದಾರಿಯಲ್ಲಿ ಹೋಗುವಾಗ ಈ ವಿಷಯವನ್ನು ನಮ್ಮ ಯೂನಿಯನ್ನಿನ ಅಧ್ಯಕ್ಷರಾಗಿದ್ದ ಶ್ರೀ ಪುತ್ತೂರಾಯರಿಗೆ ತಿಳಿಸಿದ್ದೆ. ಅವರು ನಮಗೆಲ್ಲರಿಗಿಂತಲೂ ಹಿರಿಯರು, ಮಾರ್ಗದರ್ಶಕರು, ನಮ್ಮೆಲ್ಲರ ಹಿತಚಿಂತಕರಾಗಿದ್ದರು. ನಾನು ತಿಳಿಸಿದ ವಿಷಯಕ್ಕೆ ಅವರು - ನಿಮ್ಮ ತಂದೆಯ ಆರೋಗ್ಯದಲ್ಲಿ ಏನೋ ಹೆಚ್ಚಿನ ತೊಂದರೆ ಆಗಿರಬೇಕು, ಈ ತಕ್ಷಣವೇ ನೀವು ಊರಿಗೆ ಹೊರಡಿ, ಸದ್ಯಕ್ಕೆ ಈ ಹಣ ನಿಮ್ಮಲ್ಲಿರಲಿ ಎಂದು ರೂ ೧೦೦೦ ವನ್ನು ಕೈನಲ್ಲಿಟ್ಟಿದ್ದರು. ಅಲ್ಲಿಂದ ಹಾಗೆಯೇ ಊರಿಗೆ ಹೋಗಿದ್ದೆ.