ಕಂದಾ ಅಲ್ಲಿ ನೀ ಹೇಗಿರುವೆ? ನಿನ್ನಮ್ಮನ ಒಡಲಲ್ಲಿ
ಕಂದಾ, ಅಲ್ಲೇನು ಮಾಡುತಿರುವೆ?
ನಿದ್ದೆಯೋ..? ಇಲ್ಲಾ ಬುದ್ಧನಂತೆ ವಿಶ್ವಶಾಂತಿಗಾಗಿ ತಪವೋ..?
ಕೈಗಳು ನೋವದೇ? ಕಾಲುಗಳ ಉದ್ದ ನೀಡಿ ಒಮ್ಮೆ ಮೈ ಮುರಿಯಬೇಕೆನಿಸದೇ?
ಕಣ್ಣು ರೆಪ್ಪೆ ಮುಚ್ಚಿ, ಮುಚ್ಚಿ ಬೋರಾಗದೆ?
ಬೋರಾಯ್ತಪ್ಪ ಎಂದು ಕಣ್ತೆರೆದು ಪಿಳಿ ಪಿಳಿ ನೋಡಲು
ಬೆಳಕು ಕಾಣಿಪುದೇ..?
ಬಲೂನಲಿ ಕುಳಿತು.. ಕುಳಿತು..ಬೆನ್ನು ನೋಯದೇ..? ಗೋಣು ಉಣುಕದೇ?
ನೀ ಎಚ್ಚರಗೊಂದಿದ್ದು ಎಂದು?
ಕುಳಿತೇ ತೂಕಡಿಸಿ
ಗೊರಕೆ ಹೊಡೆದದ್ದು ಎಂದು?
ನಿನ್ನ 'ಶೆಡ್ಯುಲ್' ಏನು? ಹೇಗೆ?
ನಿನ್ನಮ್ಮನ ಗೊರಕೆ ನಿನ್ನ ನಿದ್ದೆಗೆ
ಭಂಗ ತರದೆ?
ನಿನ್ನ 'ಢರ್ ಭರ್' ಎಂಬ ಹಿಂಬದಿಯ 'ಗಾಳಿ'
ನಿನ್ನಮ್ಮಗೆ 'ಗಪ್' ಎನಿಸದೆ..?
ಅಪ್ಪಾ ಬಂದು 'ಹಾಯ್' ಎಂದೂ ಹಿಂದೆಯೇ..
'ಬಾಯ್' ಎಂದು ಹೊರಟು ಮತ್ತೆ ಎಂದೋ ನಿದ್ದೆ ಮಂಪರಲಿ ಬಂದು
'ನಾನು ಕಂದಾ ನಿನ್ನ ಅಪ್ಪ'
ಎಂದರೆ ಕೋಪ ಬರುವುದಾ?
ಇಲ್ಲಾ, ಸಧ್ಯ ಬಂದೆಯಲ್ಲ..
ಇಲ್ಲೇ.. ಹೀಗೆ ಜೊತೆಗೇ ಇದ್ದು ಬಿಡಬಾರದೇ
ಎಂದೆನಿಸದೇ?
ಏಳು ಸಮುದ್ರಗಳ ಆಚೆ ಇರುವ
ಪರಿಚಯಸ್ಥ ಅಪರಿಚಿತನೊಂದಿಗೆ
'ಹೇಯ್' ಎಂದು ಆರಂಬಿಸಿ
ಗಂಟೆಗಟ್ಟಲೆ ಮಾತಿಸಬಹುದು
ಆದರೆ,
ಇಲ್ಲೇ ನಮ್ಮೊಳಗೊಬ್ಬನಾಗಿ
ಕೈಗೆಟಕುವ ಹಾಗೇ ಇದ್ದೂ
ನಮ್ಮೊಂದಿಗೆ ನಿನ್ನ ಭಾವನೆ
ಹಂಚಿಕೊಳ್ಳಲು ಸಾಧ್ಯವಿಲ್ಲವಲ್ಲ..!!
ಸರಿ ಬಿಡು...
ಇನ್ನೂ ಸ್ವಲ್ಪ ದಿನವಾದರೂ
ಈ ತಂತ್ರ-ಕುತಂತ್ರಗಳ
ಸಾಮ್ರಾಜ್ಯದಿಂದ ಹೊರತಾಗಿರು.
ಲೀಲಾ ವಿನೋದನೊಂದಿಗೆ
ಕೀಟಲೆ ಮಾಡುತ್ತಾ
ಕಿವಿ ಕಿತ್ತು ಚೇಷ್ಟೆ ಮಾಡುತಾ
ಆಗೊಮ್ಮೆ ಇಗೊಮ್ಮೆ
'ಮುರಳಿ' ನುಡಿಸುವ
ಮುರಳಿಗಾನವ ಆಲಿಸುತ್ತಾ
ನವಿಲುಗರಿಯ ನವಿರು
ಸ್ಪರ್ಶ ಆನಂದಿಸುತ್ತಾ..
ತುಳಸಿದಳವನು
ಕಿತ್ತು ತಿಂದು... ಉಗುಳಿ
ಉಗುಳಿದ್ದನ್ನೇ ಮತ್ತೆ ಹೊಸದೆಂಬಂತೆ
ಹೆಕ್ಕಿ ತಿಂದು....
ಹಳತು, ಹೊಸತು...
ಮೇಲು ಕೀಳು..
ಬಡವ, ಬಲ್ಲಿದ..
ಏನೂ ಅರಿಯದ ಕಂದ
ಇಲ್ಲಿ ಬಂದ ಮೇಲು ಹಾಗೇ ಇದ್ದು ಬಿಡು!
ನಾನು ನೀನು ನಿನ್ನಮ್ಮ
ಎಲ್ಲಾ.. ಎಲ್ಲವ..ಮರೆತು
ಹುಡುಕೋಣ
ಮತ್ತೇನೋ ಹೊಸತನು
ಹುಟ್ಟು ಹಾಕೋಣ
ಕಲ್ಮಶವೇ ಇರದ
ನಿರ್ಮಲ ಭಾವವ..!
ಚಿರಂತನ ಚೇತನವ..!!!
ಸಂಕೇತ್ ಗುರುದತ್ತ
ಹೈದರಾಬಾದ್