ವಚನ ಚಿಂತನ: ೯: ಸುಮ್ಮಸುಮ್ಮನೆ ದುಃಖ!

ವಚನ ಚಿಂತನ: ೯: ಸುಮ್ಮಸುಮ್ಮನೆ ದುಃಖ!

ಬರಹ
ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು ಆರಕ್ಕೆಯ ಬಡತನಕ್ಕೆ ಆರಕ್ಕೆ ಮರುಗುವರು ಇದಾರಕ್ಕೆ ಆರಕ್ಕೆ ಇದೇನಕ್ಕೆ ಏನಕ್ಕೆ ಮಾಯದ ಬೇಳುವೆ ಹುರುಳಿಲ್ಲ ಕೊಂದು ಕೂಗಿತ್ತು ನೋಡಾ ಗುಹೇಶ್ವರ ಯಾರಿಗೋ ಸಂಪತ್ತು ಬಂದರೆ ಯಾರೋ ಯಾತಕ್ಕೋ ಚಿಂತಿಸುತ್ತಾರೆ, ಯಾರಿಗೋ ಬಡತನ ಬಂದರೆ ಯಾಕೋ ಸುಮ್ಮನೆ ಮರುಗುತ್ತಾರೆ. ಇದು ಯಾಕೆ, ಇದು ಏಕೆ, ಇದೇ ಮಾಯೆ. ಎಲ್ಲರನ್ನೂ ಕಾಡಿಸುವ ಮಾಯೆ. ಜಗತ್ತಿನ ಅತಿ ಶ್ರೀಮಂತರ ಬಗ್ಗೆ ತಿಳಿಯುವ ಅಸೆ, ಅವರನ್ನು ಕುರಿತು ಕಾಮೆಂಟ್ ಮಾಡುವ ಚಪಲ. ಯಾರಿಗೋ ದುಃಖ ಒದಗಿದರೆ ಅವರಿಗಾಗಿ ಅಯ್ಯೋ ಅನ್ನುತ್ತಿದ್ದೇವೆ ನಾವು ಎಂಬುದು ಎಲ್ಲರಿಗೂ ತಿಳಿಯಲಿ ಎಂಬ ಚಪಲ. ಇತರರ ಶ್ರೀಮಂತಿಕೆ, ಇತರರ ದುಃಖ ಇವುಗಳೇ ನಮ್ಮ ಮನಸ್ಸಿನ ಲೋಕದ ಬಹುಪಾಲು ತುಂಬಿಕೊಂಡಿರುವುದೇ ಒಂದು ವಿಚಿತ್ರ. ಕೇವಲ ಅಯ್ಯೋ ಅನ್ನುವ ಸಹಾನುಭೂತಿಗೆ ಅರ್ಥವಿಲ್ಲ. ಹಾಗೆಯೇ ಇನ್ನೊಬ್ಬರ ಹಿರಿಮೆ ಕಂಡು ಕೊಂಡಾಡುವುದೋ ಕರುಬುವುದೋ, ಅದಕ್ಕೂ ಅರ್ಥವಿಲ್ಲ. ಆದರೆ ಈ ಅರ್ಥವಿಲ್ಲದ ಚಿಂತೆಗಳೇ ನಮ್ಮನ್ನು ಆಕ್ರಮಿಸಿಕೊಳ್ಳುವುದೇಕೆ? ಅಲ್ಲಮನಂತೆಯೇ ಬಸವ ಕೂಡ "ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮ" ಎಂದಿರುವುದುಂಟು. ನಾವು ಯಾವುದನ್ನು ತೀರ ಸರಳವಾಗಿ ಮರುಕ ಮತ್ತು ಸಂತೋಷ ಅನ್ನುತ್ತೇವೋ ಅವೆಲ್ಲ ಎಷ್ಟು ಅರ್ಥಹೀನ ಅನ್ನುವುದನ್ನು ಈ ವಚನ ಹೇಳುತ್ತಿದೆ.