ಆ ಕಗ್ಗತ್ತಲ ರಾತ್ರಿ..

ಆ ಕಗ್ಗತ್ತಲ ರಾತ್ರಿ..

ಬರಹ

ಮುಳುಗಿದ್ದಾನೆ ಸೂರ್ಯ
ಹುಟ್ಟುವುದಿಲ್ಲ ಚಂದ್ರ
ಅಮಾವಸ್ಯೆಯ ರಾತ್ರಿ
ಅಂಧಕಾರದಲ್ಲಿ ಧರಿತ್ರಿ..
"ಅಬ್ಬಾ ಇದೆಂತಹ ವಿಪರ್ಯಾಸ",ಈ ಭುವಿ ನಗುತ್ತಲೇ ಇದೆ.ಮಲಗಿದವರೆಲ್ಲ ಮಲಗಿದಂತೇ ಇದ್ದಾರೆ..ಆ ಮಲ್ಲಿಗೆಯೊಬ್ಬಳು ಮಾತ್ರ ಘಮಘಮಿಸುತ್ತಿದ್ದಾಳೆ.ಮೊಗ್ಗೊಳಗಿನ ಮಕರಂದ ಎಸಳಿನಾಚೆ ಇಣುಕುತ್ತಿದೆ.
ದಿನವೂ ಹೀಗೆ,ಒಂದು ಹೆಚ್ಚು ಒಂದು ಕಡಿಮೆ.

ಆ ದೂರದ ಹೆಬ್ಬಂಡೆ ಇಂದು ಪರ್ವತದಂತೆ ಅನಿಸುತ್ತಿಲ್ಲ.ಅಸಲಿಗೆ ಅದಕ್ಕೀ ರಾತ್ರಿ ಅಸ್ತಿತ್ವವೇ ಇಲ್ಲ.ಎಲ್ಲವೂ ಕಪ್ಪು ಕಪ್ಪು,ಬೂದಿಯೂ ಆಗದ ಮಸಿಯಂತೆ,ಏನೂ ಇಲ್ಲ ;ಎಲ್ಲ ಅಗೋಚರ ಅಂಧಕಾರ..!ಕೊನೆಗೆ ಒಂದು ಚೂರು
ಶಬ್ದದ ಸುಳಿವೂ ಇಲ್ಲ.ಆ ನಿಶ್ಯಬ್ದದಲ್ಲಿ ನಾನೇ ಶಬ್ದ,ಈ ನನ್ನ ಎದೆ ಬಡಿತಗಳು ಎಡೆ ಬಿಡದೇ ಮೊಳಗುವ
ನಗಾರಿಯಂತೆ ಮೊಳಗುತ್ತಿದ್ದರೆ ಅದನ್ನು ನಾನು ಆಲಿಸಬೇಕೆ..? ಛೇ..ಬೆಳದಿಂಗಳಿಲ್ಲದ ಮೌನ
ಚಂದ್ರನಿಲ್ಲದ ರಾತ್ರಿ ಎಷ್ಟೊಂದು ಭಯಂಕರ..!!

ಕೆಲವೊಂದು ನಿಯಮ ಪಾಲನೆಗೆ ದಂಡನೆ ಅನಿವಾರ್ಯವೇ..?ಪ್ರಕೃತಿ ಹೀಗೆ ತನಗೆ ತಾನೇ
ದಂಡಿಸಿಕೊಂಡಿದೆಯೇನೋ ಅನಿಸುತ್ತಿದೆ,ಸೂರ್ಯನಿಲ್ಲದೆ,ಚಂದ್ರ ಬಾರದೆ,ಆಗಸದ ಅಸ್ತಿತ್ವವೇ ಇರದಂತೆ
ಒಬ್ಬಳೇ ಅಳುವುದು ನರಳುವುದು ಈ ಭೂಮಿಯ ಒಂದು ದಿನದ ಕಥೆಯಲ್ಲ. ಆ ಇಪ್ಪತ್ತೊಂಬತ್ತು ದಿನಗಳು
ಕ್ಷಣಗಳಂತೆ ಉರುಳಿಹೋದರೂ ಈ ಒಂದು ದಿನ ಅದೆಷ್ಟೋ ದಿನಗಳಂತನಿಸುತ್ತದೆ,ಪ್ರತಿ ಕ್ಷಣವೂ ತನ್ನ
ಇರುವಿಕೆಯ ಅರಿವು ಮೂಡಿಸುತ್ತದೆ.ಇಷ್ಟಾದರೂ ಇವಳು ಹೆಣ್ಣು,ನಿರೀಕ್ಷೆಯಲ್ಲ್ಲಿ ಅದೇನೋ ಸುಖ ಕಾಣುವವಳು,ಅನುಭವಗಳ ನೂಲನ್ನು ಹೊಸೆಯುವವಳು,ನೋವಲ್ಲೂ ನಗಬಲ್ಲವಳು,
ಈ ನರಳಾಟಗಳಾಚೆಯ ಬದುಕಿನ ಪ್ರತೀಕ್ಷೆಯಲ್ಲಿ ತನ್ನತನವ ಕಾಣುವವಳು.

ಎಲ್ಲಾ ಬರಿ ಅಂಧಕಾರವೆಂಬ ಮಾಯೆ,ಕಡುಗತ್ತಲು..!ಓ ಭೂದೇವಿಯೇ ಈ ಕ್ಷಣದಲ್ಲೂ ನೀನು ನಲುಗಿದಂತಸುತ್ತಿಲ್ಲ.ನಿನ್ನ ಸ್ಪರ್ಷದಲ್ಲಿ ಅದೇ ರೋಮಾಂಚನವಿದೆ ನಿನ್ನ ಎದೆಯಂಗಳದಲ್ಲಿ ನೋವಿನ ನರಗಳ ಅನುಭೂತಿಯಿಲ್ಲ.ನಿನ್ನೊಳಗಿಹ ಚೇತನ ಹೂನಗೆ ಬೀರುತ್ತಿರುವಂತೆನಿಸುತ್ತಿದೆ.ನೀನು ನನ್ನಂತೆಅಳಲಿಲ್ಲ,
ದೂಷಿಸಲಿಲ್ಲ.ಬದಲಾಗಿ ಎಲ್ಲವನ್ನೂ ಇಡಿಯಾಗಿ ಸ್ವೀಕರಿಸಿರುವೆ,ಈ ಚಂದ್ರ,ಆ ಸೂರ್ಯ,ಬಳಕು ಬದುಕು ಎಲ್ಲವನ್ನೂ...ನಾನು ಆಳಕ್ಕಿಳಿಯುವ ಯತ್ನವನ್ನೇ ಮಾಡಿರದವಳು.ಮೊದಲು ಕಂಡ ಆ ನಿನ್ನ ಮಂದನಗೆ ಆಶ್ಚರ್ಯಪಡಿಸಿದರೂ ಅರ್ಥವಾಗಿಲ್ಲ...! ಪ್ರಶ್ನೆಯ ಮೇಲೊಂದು ಪ್ರಶ್ನೆ,ಯೋಚನಾ ಲಹರಿ..

ಮೊದಲೆಲ್ಲಿಂದಲೋ ಹುಟ್ಟಿದ ಶಬ್ದ ಮೂಡಿದ ನೋವಿಗಿಂತಲೂ ಅಸಹ್ಯ.ಅದಕ್ಕಂಟಿಕೊಂಡು ಸುತ್ತಲೂ ಶುರುವಾದ ನಾಯಿಗಳ ಊಳಾಟ..ಈ ಕತ್ತಲು ರಾತ್ರಿಯ ರಾಗ ಅರ್ಥವಾಗದವಳಂತೆ ಸುಮ್ಮನೇ ಕ್ರಮಿಸುತ್ತಿದ್ದೆ;
ನಾ ತೆರಳುವಲ್ಲಿ ಏನೋ ನರಳಿದ ಶಬ್ದ, ತಿರುಗಿ ನೋಡಲೇ ಇಲ್ಲ.ಭ್ರಾಂತಿಯಲ್ಲಿರುವವಳಂತೆ ನಿರ್ಲಿಪ್ತತೆಯಿಂದ ಮರಳಿದೆ.ನನ್ನ ಅಪ್ಪಟ್ಟ ಬೆಚ್ಚನೆಯ ಗೂಡಿಗೆ.ಮಲಗಿದರೆ ಮುಚ್ಚಿದ ಕಂಗಳಿಗೆ ಎಲ್ಲ ಅಸ್ಪಶ್ಟ..ಅಳುವುದು,ನಗುವುದು,ಕಂಬನಿ,ಇಬ್ಬನಿ..!! ಕಣ್ ತೆರೆದಾಗ ಎಲ್ಲವೂ ಅರ್ಥವಾದಂತಿತ್ತು,ನನ್ನ ಮೊಗದೊಳಗೊಂದು ಮಂದಹಾಸ.ಈಗಷ್ಟೇ ಸೂರ್ಯ ಉದಯಿಸುತ್ತಿದ್ದ,ಮನವೂ ಸ್ವಲ್ಪ ಬದಲಾದಂತಿತ್ತು,ಈ ಭುವಿಯಂತೆ ನಾನೂ ಹೆಣ್ಣು..!!