ವಿಲಕ್ಷಣ ಚಿಂತನೆ
ಬರಹ
ಈ ದೇಹದಲಿಹ ಆತ್ಮ
ನಿನ್ನಲಿಹ ಚಿಂತನೆ
ಅವನಲ್ಲಿಹ ಮನ
ಅವಳಲ್ಲಿಹ ಗುಣ
ಪ್ರಾಣಿಗಳಲಿರುವ ಪ್ರಾಣ
ತರುಗಳಲಿರುವ ಶ್ವಾಸೋಚ್ಛ್ವಾಸ
ನಿಸರ್ಗದಲಿಹ ಅನವರತ ಸ್ಪಂದನ
ಅಚಲ ನೆಲ ನಡುಗಿ ನಲುಗಿಸಿತು
ಶಾಂತ ಸಮುದ್ರ ಎದ್ದು ಎದ್ದವರ ಮಲಗಿಸಿತು
ತಟಸ್ಥ ಪರ್ವತ ಹೊಗೆಯುಗುಳಿತು
ಬೂದಿ ಕಾರಿತು ಕೆಂಡ ಉದುರಿಸಿತು
ಅವುಗಳ ಚೇತನ ಸ್ವರೂಪವೂ ಆತ್ಮವೇ?
ಗೋರಿಯಲಿ ಮಲಗಿಹ ಶವ ಎದ್ದು ಬಂದೀತೇ?
ತಟಸ್ಥನಾಗಿರುವನ ತಟ್ಟಿ ಎಬ್ಬಿಸೀತೇ?
ಅಚಲ ಮೇಜು ಗಣಕ ಚಿಂತಿಸೀತೇ
ಮುಖಕೆ ಮುಖ ಕೊಟ್ಟು ಸವಾಲೆಸೆದೀತೇ?
ಪ್ರಾಣವಿಹೀನ ಶರೀರ
ಕತ್ತರಿಸಿದ ಮರದ ಕೊರಡು
ತತ್ತರಿಸುತಿರುವ ನಿಸರ್ಗ
ಒಡೆದ ಮನ
ಮುರಿದ ಸಂಬಂಧ
ಇರುವುದೇನು ಇಲ್ಲದಿರುವುದೇನು?
ಒಮ್ಮೆ ಎಲ್ಲ ಒಂದಾಗುವುದೇ?
ಒಂದಕೊಂದು ಸಂಬಂಧ ಕಲ್ಪಿಸಬಹುದೇ?
ಭ್ರಮೆಯಾಗಿರುವುದು ನಿಜವಾದೀತೇ?
ನಿಜವೆನುವುದು ಭ್ರಮೆಯಾಗುವುದೇ?