ಭಾಗ - ೮

ಭಾಗ - ೮

ಊರಿಗೆ ಹೋದ ತಕ್ಷಣ ತಿಳಿದ ವಿಷಯವೇನೆಂದರೆ - ೨-೩ ದಿನಗಳ ಹಿಂದೆ ನನ್ನ ತಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ೨೦ ವರ್ಷಗಳ ಹಿಂದೆ ಅಂದರೆ ೧೯೬೪ರಲ್ಲಿ ನನಗಿನ್ನೂ ೪ ವರ್ಷವಾಗಿದ್ದಾಗ ಹೀಗೊಮ್ಮೆ ಆಗಿತ್ತಂತೆ. ಆಗ ಎಡಭಾಗಕ್ಕೆ ಪಾರ್ಶ್ವವಾಯುವಾಗಿ ಅಂಕೋಲಕ್ಕೆ ಹೋಗಿ ನಾಟಿ ವೈದ್ಯರಿಂದ ಔಷೋಧೋಪಚಾರ ಮಾಡಿಸಿ ಸರಿ ಹೋಗಿದ್ದರಂತೆ. ಈಗ ಮತ್ತೆ ಹೀಗಾಗಿದ್ದಾಗ (ಈ ಸಲ ಶರೀರದ ಬಲಭಾಗಕ್ಕೆ ಅಟ್ಯಾಕ್ ಆಗಿತ್ತು), ತಮ್ಮನ್ನು ಅಂಕೋಲಕ್ಕೆ ಕರೆದೊಯ್ಯು ಎಂದು ನನಗೆ ಹೇಳಿದ್ದರು. ಆಸ್ಪತ್ರೆಗೆ ಕರೆದೊಯ್ಯುವುದಾಗಿ ನಾನು ಹೇಳಲು, ನನ್ನ ತಾಯಿಯೂ ತಂದೆಯವರು ಹೇಳಿದಂತೆಯೇ ಕೇಳಲು ಹೇಳಿದ್ದರು. ಮಾರನೆಯ ದಿನ ಬೆಳಗ್ಗೆ ಶಿವಮೊಗ್ಗ ಮುಖಾಂತರ ಅಂಕೋಲಕ್ಕೆ ಪ್ರಯಾಣ ಬೆಳೆಸಿದೆವು. ರಾತ್ರಿ ೮.೩೦ರ ಹೊತ್ತಿಗೆ ಅಂಕೋಲಾ ತಲುಪಿ ಬಸ್ ನಿಲ್ದಾಣದ ಹತ್ತಿರವಿರುವ ಒಂದು ಹೊಟೆಲ್‍ಗೆ ಊಟಕ್ಕೆಂದೆ ಹೋದರೆ, ಇನ್ನೇನು ಹೊಟೆಲ್ ಮುಚ್ಚುವ ವೇಳೆ ಆಗಿದೆಯೆಂದೂ ತಿನ್ನಲು ಅವಲಕ್ಕಿ ಮಾತ್ರವಿದೆಯೆಂದೂ ಅದರ ಮಾಲಿಕ ಹೇಳಿದ್ದರು. ಅದನ್ನೇ ತಿಂದು ಉಳಿಯಲು ಹತ್ತಿರದಲ್ಲೇ ಇದ್ದ ಒಂದು ಲಾಡ್ಜ್‍ನಲ್ಲಿ ಕೋಣೆಯನ್ನು ಹಿಡಿದಿದ್ದೆವು.

ಅಂಕೋಲಾಕ್ಕೆ ಈ ಔಷಧಿಗಾಗಿಯೇ ಬರುವ ಜನರು ಬಹಳ. ಆ ಊರಿನಲ್ಲಿ ಬಸ್ ನಿಲ್ದಾಣದ ಹತ್ತಿರ ಔಷಧದ ಅಂಗಡಿಗಳು ಬಹಳವಾಗಿವೆ. ಹಾಗೂ ಊರಿಗೆ ಬರುವ ಹೊಸಬರನ್ನು ತಮ್ಮಲ್ಲಿಗೆ ಔಷಧಕ್ಕಾಗಿ ಮತ್ತು ಮಾಲೀಷ್‍ಗಾಗಿ ಬರಲು ಕರೆಯುತ್ತಾರೆ. ಇವರೆಲ್ಲರು ಔಷಧ ಅಷ್ಟು ಪರಿಣಾಮಕಾರಿಯಲ್ಲವಂತೆ. ಇದನ್ನು ನನ್ನ ತಂದೆಯೇ ತಿಳಿಸಿದ್ದರು. ಬೆಳಗಿನ ಜಾವ ೬ ಘಂಟೆಗೇ ಎದ್ದು ಸ್ನಾನ ಮಾಡದೆಯೇ ಔಷಧಿಗಾಗಿ ಹೊರಟೆವು. ಎಲ್ಲಿಗೆ ಹೋಗಬೇಕೆಂದು ನನ್ನ ತಂದೆಗೆ ತಿಳಿದಿತ್ತು. ಒಂದು ಆಟೋ ಚಾಲಕನಿಗೆ ಪೊಕ್ಕ ಮಾನು ಗೌಡನ ಮನೆಗೆ ಹೋಗಲು ತಿಳಿಸಿದರು. ಆಟೋ ಚಾಲಕನು ಅವರ್ಯಾರೋ ಗೊತ್ತಿಲ್ಲ ಎನ್ನಲು, ಸಮುದ್ರದ ಹತ್ತಿರಕ್ಕೆ ಹೋಗಲು ತಿಳಿಸಿ, ಅಲ್ಲಿ ಎಲ್ಲಿ ಹೋಗಬೇಕೆಂದು ಹೇಳುವೆನೆಂದರು. ಆಟೋದವನಿಗೆ, ಇವರಿಗೆ ಈ ಔಷಧದ ಬಗ್ಗೆ ತಿಳಿದಿದೆ ಎಂದು ಖಾತ್ರಿಯಾಗಿ, ರಸ್ತೆ ಸರಿಯಿಲ್ಲ, ವಾಪಸ್ಸು ಬರಲು ಜನ ಸಿಗುವುದು ಕಷ್ಟ, ಹತ್ತು ರೂಪಾಯಿ ಜಾಸ್ತಿ ಕೊಡುವಿರೆಂದರೆ ಬರುವೆನೆಂದನು. ಅದಕ್ಕೇ ನಾನು ಒಪ್ಪಿದ್ದೆ. ದಾರಿಯಲ್ಲಿ ಹೋಗುವಾಗ ಆಟೋದವನು, ಈಗ ಪೊಕ್ಕ ಮಾನು ಗೌಡ ಇಲ್ಲ, ಆತ ಸತ್ತು ಹೋಗಿ ೧೦-೧೨ ವರ್ಷಗಳೇ ಆದುವು, ಆತನ ಮಗ ಈ ವೈದ್ಯ ವೃತ್ತಿಯನ್ನು ನಡೆಸುತ್ತಿದ್ದಾನೆ ಎಂದು ತಿಳಿಸಿದ್ದನು.

ಈ ನಾಟಿ ವೈದ್ಯ ಪೊಕ್ಕ ಮಾನು ಗೌಡ ಅಥವಾ ಈಗಿನ ಆತನ ಮಗ ಬೆಳಗಿನ ಜಾವ ೩ ಘಂಟೆಗೇ ಎದ್ದು ಕಾಡಿಗೆ ಹೋಗಿ ಮೂಲಿಕೆಗಳನ್ನೂ ಯಾವುದೋ ಗಿಡದ ಸೊಪ್ಪನ್ನೂ ತರುವನಂತೆ. ಅದರೊಂದಿಗೆ ತಾನೇ ತಯಾರಿಸಿದ ಎಣ್ಣೆಯನ್ನು ಬಹಳ ಕಡಿಮೆ ಹಣಕ್ಕೆ ಕೊಡುತ್ತಿದ್ದನು. ಅಲ್ಲೆಗೆ ಬರುವ ಬಹುತೇಕ ರೋಗಿಗಳು ನಿತ್ರಾಣರಾಗಿದ್ದು, ಮಾಲೀಷು ಮಾಡಿಸಿಕೊಳ್ಳಲು ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಿದ್ದಾನೆ. ಅದಕ್ಕೂ ಬಹಳ ಕಡಿಮೆ ದರವನ್ನು ತೆಗೆದುಕೊಳ್ಳುವನು. ರೋಗಿಗಳು ತಾವೇ ಮಾಲೀಷು ಮಾಡಿಕೊಳ್ಳಬೇಕಂತೆ. ಕೈಲಾಗದವರಿಗೆ ಮಾಲೀಷು ಮಾಡಲು ಪೈಲ್ವಾನರನ್ನೂ ನೇಮಿಸಿಕೊಡುವನು.

ನನ್ನ ತಂದೆ ಆ ಗೌಡನ ಬಳಿಗೆ ಹೋಗಿ, ಇಪ್ಪತ್ತು ವರುಷಗಳ ಹಿಂದೆ ಪೊಕ್ಕ ಗೌಡನಿಂದ ಔಷಧವನ್ನು ತೆಗೆದುಕೊಂಡಿದ್ದರೆಂದೂ ಈಗ ಮತ್ತೆ ಪಾರ್ಶ್ವವಾಯು ಆಗಿದೆಯೆಂದೂ ತಿಳಿಸಿದ್ದರು. ಅದಕ್ಕೆ ಆತ ಇಲ್ಲಿಯೇ ಉಳಿದುಕೊಂಡು ಔಷಧೋಪಚಾರ ಮಾಡಿಕೊಳ್ಳುವಿರೋ ಅಥವಾ ಔಷಧವನ್ನು ತೆಗೆದುಕೊಂಡು ಊರಿಗೆ ಹೋಗುವಿರೋ ಎಂದು ಕೇಳಿದ್ದನು. ಊರಿಗೆ ಹೋಗುವೆವೆಂದು ಹೇಳಿದ್ದಕ್ಕೆ, ೨ ಬಾಟಲಿನಲ್ಲಿ ಎಣ್ಣೆಯನ್ನೂ, ಒಂದು ದೊಡ್ಡ ಹೊರೆ ಹಸಿರು ಬಣ್ಣದ ಸೊಪ್ಪನ್ನು ಕೊಟ್ಟು, ಅದನ್ನು ಹೇಗೆ ಹಚ್ಚಿಕೊಂಡು ಮಾಲಿಷು ಮಾಡಿಕೊಳ್ಳಬೇಕೆಂದು ತಿಳಿಸಿದ್ದನು. ಮುಖ್ಯವಾಗಿ ಆ ಔಷಧವನ್ನು ರೋಗಿಯಲ್ಲದ ಇನ್ಯಾರೂ ಮುಟ್ಟಬಾರದೆಂದೂ ತಿಳಿಸಿದ್ದನು. ಅಂದೇ ಸಂಜೆಗೆ ಹುಬ್ಬಳ್ಳಿಗೆ ಬಂದು ಅಲ್ಲಿ ರಾತ್ರಿಯೂಟ ಮಾಡಿ, ರಾತ್ರಿಯ ಬಸ್ಸಿನಲ್ಲಿ ಊರಿಗೆ ಹೊರಟು ಬಂದಿದ್ದೆವು.

ಔಷಧಿಯನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ಒಂದೆರಡು ಮಾತುಗಳಲ್ಲಿ ಹೇಳುವೆ. ಬೆಳಗ್ಗೆ ಸ್ನಾನ ಮಾಡಿ ಮೈಯಿಗೆ ಎಣ್ಣೆಯನ್ನು ಹಚ್ಚಿಕೊಂಡು, ಚೆನ್ನಾಗಿ ಮಾಲೀಷು ಮಾಡಿಕೊಳ್ಳಬೇಕು. ಬಿಸಿಲಿಗೆ ಮೈಯನ್ನು ಒಡ್ಡಿ ಒಣಗಿಸಿಕೊಳ್ಳಬೇಕು. ೧ ಘಂಟೆಗಳ ತರುವಾಯ ಮೈ ಒಣಗಿದ ನಂತರ ಸೊಪ್ಪನ್ನು ಅರಿಶಿನದೊಂದಿಗೆ ಬೆರೆಸಿ ಚೆನ್ನಾಗಿ ಅರೆದು ಅದರ ರಸವನ್ನು ಮೈಯ್ಯಿಗೆ ಹಚ್ಚಿಕೊಳ್ಳಬೇಕು. ಅರೆಯುವುದು ಮತ್ತು ಹಚ್ಚಿಕೊಳ್ಳುವುದನ್ನು ರೋಗಿಗಳೇ ಮಾಡಿಕೊಳ್ಳಬೇಕು. ಇತರರು ಇದನ್ನು ಮುಟ್ಟಲೂಬಾರದು. ಮತ್ತೆ ಬಿಸಿಲಿಗೆ ಮೈಯೊಡ್ಡಿ ಒಣಗಿಸಿಕೊಳ್ಳಬೇಕು. ಮೈ ಚೆನ್ನಾಗಿ ಒಣಗಿದ ನಂತರ ಹೆಪ್ಪಳಿಕೆಗಳು ಕೆಳಗೆ ಬೀಳುವುದು. ನಂತರ ಸ್ನಾನ ಮಾಡಬಾರದು. ಮರುದಿನ ಮತ್ತೆ ಹೀಗೆಯೇ ಉಪಚಾರವನ್ನು ಮಾಡಿಕೊಳ್ಳಬೇಕು. ಹೀಗೆ ಹದಿನೈದು ದಿನಗಳ ಕಾಲ ಮಾಡಿಕೊಳ್ಳಬೇಕು. ಆಗ ಪೂರ್ಣವಾಗಿ ಗುಣವಾಗುವರು. ಇದಕ್ಕೆ ನನ್ನ ತಂದೆ ಗುಣ ಹೊಂದಿದ್ದೇ ನಿದರ್ಶನ.

Rating
No votes yet