ಹುಡುಗರಿಗೆ ಮಣ್ಣೆತ್ತಿನ ಅಮವಾಸಿ ಆದ್ರ ಹುಡಿಗ್ಯಾರಿಗೆ ಗುಳ್ಳವ್ವ ಹಬ್ಬ

ಹುಡುಗರಿಗೆ ಮಣ್ಣೆತ್ತಿನ ಅಮವಾಸಿ ಆದ್ರ ಹುಡಿಗ್ಯಾರಿಗೆ ಗುಳ್ಳವ್ವ ಹಬ್ಬ

ನನ್ನ ಬ್ಲಾಗಿನ ಮದಲನೇ ಬರಹದೊಳಗ ನಾ ಎರಡು ಮಣ್ಣು ಅಥವಾ ಭೂತಾಯಿಗೆ ಇರು ಹಬ್ಬದ ಬಗ್ಗೆ ಹೇಳಿದ್ದೆ. ಅವುಗಳ ಬಗ್ಗೆ ಇಲ್ಲಿ ವಿಸ್ತಾರವಾಗಿ ಬರ್ದೀನಿ.

 ಮಣ್ಮೆತ್ತಿನ ಅಮವಾಸಿ :
 ಮಣ್ಮೆತ್ತಿನ ಅಮವಾಸಿ ಏನದ ಜೇಷ್ಠ ಮಾಸದ ಅಮವಾಸ್ಯದ ದಿನ ಮಾಡತಾರ. ಇದು ಗಣಪತಿ ಹಬ್ಬದಶ್ಚೇ ಜೋರಾಗಿ ನಡಿತದ. ಗಣಪತಿನ ಹೆಂಗ ಎಲ್ಲಾ ಓಣಿವಳಗ ಕೂಡಸ್ತಾರ ಹಂಗೇ ಮಣ್ಣೆತ್ತನ್ನೂ ಕೂಡಸ್ತೀವಿ. ಇದು ಬರುಕಿಂತ ಸ್ವಲ್ಪ ದಿನದ ಮೊದಲಿಂದೇ ಪಟ್ಟಿ ಕೇಳುದು ಚಾಲು ಆಗತದ. ಆ ಅಮವಾಸಿ ದಿನ ಮುಂಜಾನೆ ಕುಂಬಾರ ಮಂದಿ ಮಣ್ಣೆತ್ತು ಮಾಡಕೊಡಂಡು ಮಾರಲಿಕ್ಕೆ ಬರ್ತಾರ. ಎತ್ತು ಯಾವಾಗ್ಲೂ ಜೋಡಿ ಆಗೇ ಮಾಡತಾರ. ಇದು ಬಹುಶ ಯಾಕ ಹಿಂಗಂದ್ರ ಹೊಲದಾಗ ಎತ್ತಿನ ಗಾಡಿ, ನೇಗಲಿ, ಕುಂಟಿ ವಟ್ಟ ಎಲ್ಲಾದಕ್ಕೂ ಜಾಸ್ತಿ ಜೋಡಿ ಎತ್ತೇ ಉಪಯೋಗಸ್ತೀವಿ. ಅದಕ್ಕೇ ಇಲ್ಲೂ ಜೋಡಿ ಎತ್ತಿನ ಮೂರ್ತಿ ಮಾರತಾರ. ಅದರ ಜೂಡಿ ಒಂದಿಷ್ಟು ಹಶಿ ಮಣ್ಣೂ ಕೊಡತಾರ. ಅ ಮಣ್ಣಿಂದ ನಾವು ನಮ್ಮ ಕಲೆ ತೋರಸ್ಬೇಕು. ಎತ್ತಿಗೇ ದನದ ಮನಿ ಮಾಡುದು, ಅದು ಹುಲ್ಲು ತಿನ್ನು ಗ್ವಾದ್ಲಿ ಮಾಡುದು ಮತ್ತ ಸ್ವಲ್ಪ ಮನಿ, ಮನಷಾರು, ಅದು ಇದು ಮಾಡಿ ಹಳ್ಳಿಗತೇ ಮಾಡತೀವಿ. ಕೆಲವೊಮ್ಮೆ ಎತ್ತಿಗೆ ಬಣ್ಣಾ ಸುದೇಕ್ ಹಚ್ಚತೀವಿ. ಇಷ್ಟೆಲ್ಲಾ ಮಾಡಿದ್ಮ್ಯಾಲೇ ಇದನ್ನೆಲ್ಲಾ ತೊಗೊಂಡು ದೇವರ ಕಟ್ಟಿ ಮ್ಯಾಲೇ ಪೂಜಾಕ್ಕಿಡುದು. ಇದರ ಜೂಡಿನೇ ಸಸಿ ಆಡುದು ಅಂತ ಮಾಡತೀವಿ. ಎರಡು ಸಣ್ಣ ವಾಟಗಾದಾಗ (ಗ್ಲಾಸ್ನಲ್ಲಿ)  ಮಣ್ಮು ತುಂಬಸಿ ಗೋದಿ ಹಾಕತೀವಿ. ಒಂದು ದಿನದಾಗ ಸಸಿ ಬರ್ತಾವ. ಮರುದಿನ ಆ ಸಸಿ ತೋಗೊಂಡು ಒಂದು ಗುಡ್ಡ ಅಥವಾ ಯಾವುದರೇ ತೋಟಕ್ಕ ಊಟ ತೋಗೊಂಡು ಹೋಗ್ತೀವಿ. ಅಲ್ಲಿ ಊಟಾ ಮಾಡಿ ಆ ಸಸಿ ಅಲ್ಲೇ ಛಲ್ಲಿ ಬರ್ತೀವಿ. ಕೆಲವೊಬ್ಬರು ಮಣ್ಣೆತ್ತೂ ಛಲ್ಲತಾರ. ಅ ಮಣ್ಣು ಹೊಲದಾಗ ಕಾಕೀದ್ರ ಹೊಲ ಫಲವತ್ತಾಗತದ ಅಂತ ನದಬಿಕೆ ಅದ.

ಗುಳ್ಳವ್ವನ ಹಬ್ಬ :
ಇದು ಹುಡಿಗ್ಯಾರು ಆಶಾಡ ಮಾಸದ ಎಲ್ಲಾ ಮಂಗಳವಾರ ಮಾಡತಾರ. ಗೌರಿ ಕೂಡ್ಸೂದು ಹೆಂಗ ಮಾಡತಾರಲಾ ಹಂಗೇ ಸಣ್ಣ ಹುಡಿಗ್ಯಾರಿಗೆ ಇದು ಅದ. ಇದು ಇದ್ದ ದಿನ, ಅಂದ್ರ ಆಶಾಡದ ಪ್ರತಿ ಮಂಗಳವಾರ, ಕುಂಬಾರರು ಗುಳ್ಳವ್ವನ ಮಾರ್ಲಿಕ್ಕೆ ಬರ್ತಾರ. ಗುಳ್ಳವ್ವ ಗುಂಡ ಪಿರ್ಯಾಮಿಡ್ (circular pyramid or cone) ಆಕಾರದಾಗ ಇರ್ತದ. ಇದರ ಚಿತ್ರ ತಗಿಲಿಕ್ಕ ಪ್ರಯತ್ನಿಸಿ ಏನೋ ಮಾಡಿ ಈ ಬರಹದ ಜೂಡಿ ಕೂಡ್ಸಿನಿ ನೋಡ್ರಿ. ಇದರ ಜೂಡಿ ಸುದೇಕ್ ಒಂದಿಶ್ಟು ಮಣ್ಣು ಕೊಡತಾರ. ಅದರಿಂದ ಗುಳ್ಳವ್ವನ ಮನಿ, ಮತ್ತ ಹಂಗೇ ಏನರೆ ಅಲಂಕಾರ ಮಾಡತಾರ. ಸುರಮಂಜು, ಸಾಸವಿ ಕಾಳು, ಹಿಂಗೇ ಎನೇನೋ ಉಪಯೋಗ್ಸಿ ಗುಳ್ಳವ್ವನ್ನ ಶೃಂಗಾರ ಮಾಡತಾರ. ಅವತ್ತ ಇಡು ಮುಂಜಾನೆ ಇದರೊಳಗೇ ಹೋಗತದ. ಇದಾದಮ್ಯಾಲೇ ಗುಳ್ಳವ್ವನ ಪೂಜಾ. ಮತ್ತ ಸಂಜಿನ್ಯಾಗ ಆಟ ಚಾಲು. ಒಬ್ಬೊಬ್ಬರಾಗಿ ಎಲ್ಲಾರ ಮನಿಗೆ ಆರತಿಗೆ ಹೋಗತಾರ. ಯಾರದೋ ಒಬ್ಬರ ಮನಿಯಿಂದ ಚಾಲು ಮಾಡತಾರ. ಅವರು ಎರಡನದವರ ಮನಿಗೆ ಹೋಗತಾರ. ಅಮ್ಯಾಲೇ ಅವರಿಬ್ಬರು ಕಬಡಿ ಮೂರನೇಯವರ ಮನಿಗೆ, ಆಮ್ಯಾಲೇ ಮೂರು ಮಂದಿ ನಾಕನೇದವರ ಮನಿ,ಹಿಂಗೇ ಗಾಡಿ ಉದ್ದಕ ಬೆಳಕೋತ ಹೋಗ್ತದ. ಕಡೀಕ ಮತ್ತ ಮದಲ್ನೇದವರ ಮನಿಗೇ ಬರ್ತಾರ. ಪ್ರತಿಯೊಬ್ಬರ ಮನಿಯೊಳಗೆ ಎಲ್ಲಾರ ಗುಳ್ಳವಗ ಆರ್ತಿ ಇರ್ತದ, ಹುಡಿಗ್ಯಾರಿಗೆ ತಿನ್ಲಿಕ್ಕೆ ಏನರೇ ಕೊಡತಾರ. ಎಲ್ಲಾರು ತಮ್ಮ ತಮ್ಮ ಗುಳ್ಳವ್ವನ್ನ ಹೆಂಗ ಶೃಂಗಾರ ಮಾಡ್ಯಾರಂತ ತೋರಸ್ತಾರ. ಇದು ಆಶಾಡದ ಎಲ್ಲಾ ಮಂಗಳವಾರ ಮಾಡತಾರ. ಆಮ್ಯಾಲೆ ಯಾವುದರೇ ಒಂದು ಬುಧವಾರ ಇವರೂ ಒಂದು ತೋಟಕ್ಕ ಹೋಗಿ, ಅಲ್ಲಿ ಗುಳ್ಳವ್ವನ ಹಾಡ ಹಾಡಿ, ಊಟಾ ಮಾಡಿ ಮನಿಗೆ ಬರ್ತಾರ. ಆ ಗುಳ್ಳವ್ವನ ಹಾಡ ಭಾರಿ ಇರ್ತಾವ. ಇದೆಲ್ಲಾ ನಮ್ಮಮ್ಮ ಹೇಳಿದ್ದು ನನಗ. ಅಕಿ ಹಂಗ ಹಿಂಗ ಮಾಡಿ ಒಂದು ಹಾಡು ನೆನಪ ಮಾಡಕೊಂಡ್ಲು. ಹಿಂಗದ ಅದು -
                                  ಒಂದು ಅಡಕಿ ಕಪ್ಪಾ
                                  ನಾ ಮಾಡಿದ್ದು ತಪ್ಪಾ
                                  ಭೀಮಾ ನದಿ ಹೊಳಿಯಾಗ
                                  ನೀ ಸುರಿ ಸುರಿ ಗುಳ್ಳವ್ವ
ಈ ಗುಳ್ಳವ್ವನ್ನ ಕೂಡ್ಸುದು ಮಳಿ ಬರ್ಲಿ ಅಂತ. ಆ ಹಾಡದಾಗೂ ಅದೇ ಅದ. "ಭೀಮಾ ನದಿಯೊಳಗ ನೀ ಸುರಿಯವ ಗುಳ್ಳವ್ವ" ಅಂತ ಕೇಳ್ಕೋತಾರ. ಹಿಂತಾವು ಭಾಳ ಹಾಡವ ಅಂತ. ನಮ್ಮಮ್ಮಾಗ ನೆನಪಿಲ್ಲ. ನಿಮಗ್ಯಾರಿಗರೇ ಗೊತ್ತಿದ್ರ ತಿಳಸ್ರಿ. ಎಲ್ಲಾ ಒಂದೇ ಕಡೆ ಕೂಡಿಸಿಡುಣು.

ಇದು ಮಣ್ಮೆತ್ತು ಮತ್ತ ಗುಳ್ಳವ್ವ ರ ಕಥಿ. ಮತ್ತ ಹಿಂಗೇ ಇನ್ನೊಂದು ಪದ್ದತಿ ಬಗ್ಗೆ ಮತ್ತ ಬರಿತೀನಿ. ಅಲ್ಲಿ ತನಕ -

ಜೈ ಶ್ರೀ ಯಲಗೂರೇಶ ಪ್ರಸನ್ನ.
ಹರಿ ಓಂ.

Rating
No votes yet