ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ ಗಳಲ್ಲಿನ ತಲೆನೋವು

ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ ಗಳಲ್ಲಿನ ತಲೆನೋವು

ಬರಹ

ಬೆಂಗಳೂರು ನಗರದ ಟ್ರಾಫಿಕ್ ಸಿಗ್ನಲುಗಳಲ್ಲಿ ಇತ್ತೀಚೆಗೆ ಒಂದು ತಲೆನೋವು ನಮ್ಮೆಲ್ಲರನ್ನೂ ಕಾಡುತ್ತಿದೆ. ವಾಹನ ದಟ್ಟಣೆಯ ನಡುವೆ ಸಾವಕಾಶವಾಗಿ ಜಾಗರೂಕತೆಯಿಂದ ನಮ್ಮ ವಾಹನವನ್ನು ನಡೆಸಿ ತಂದು ಈ ಸಿಗ್ನಲುಗಳಲ್ಲಿ ನಿಲ್ಲಿಸಿ, ಆ ಕೆಂಪು ದೀಪ ಹಸಿರಾಗುವ ನಿರೀಕ್ಷೆಯಲ್ಲಿರುವಾಗ, ನಮ್ಮ ಮೊಬೈಲ್ ಗಳಲ್ಲಿ ರೆಕಾರ್ಡ್ ಆಗಿರುವ ಮಿಸ್ಸ್ ಕಾಲ್ ಮತ್ತು ಎಸ್ಸೆಮ್ಮೆಸ್ ಗಳತ್ತ ಕಣ್ಣು ಹಾಯಿಸುವುದು ನಮ್ಮೆಲ್ಲರ ಸ್ವಾಭಾವಿಕ ಅಭ್ಯಾಸ. ನಾವು ಹೀಗೆ ಬ್ಯುಸಿ ಆಗಿರುವಾಗ ನಮ್ಮ ಅಂಗಿ ಅಥವಾ ಪ್ಯಾಂಟನ್ನು ಯಾರೋ ಜಗ್ಗಿ ಕೆರದಂತಾಗುತ್ತದೆ. ತಿರುಗಿ ಆ ಕಡೆ ಗಮನ ಹರಿಸಿದಾಗ ಮಾಸ್ಟರ್ ಕಿಶನ್ ನಿರ್ದೇಶನದ "ಕೇರ್ ಆಫ್ ಫುಟ್ಪಾತ್ "ಚಲನ ಚಿತ್ರದ ನೆನಪು ತರಿಸುವ ದೃಶ್ಯ ಕಂಡು ಬರುತ್ತದೆ. ಮಾಸಲು ಸೀರೆ ಉಟ್ಟಿಕೊಂಡು, ಬಾಯಿ ತುಂಬಾ ತಂಬಾಕು ಪುಡಿ ತುಂಬಿಕೊಂಡು, ಕೈಯಲ್ಲಿ ಮಲಗಿ ನಿದ್ರಿಸುವ ಮಗುವನ್ನು ಎತ್ತಿಕೊಂಡು,ಮೂವತ್ತರಿಂದ ನಲುವತ್ತು ವರುಷ ಪ್ರಾಯದ ನಡುವಿನ ಒಬ್ಬಾಕೆ ಪಕ್ಕದಲ್ಲೇ ನಿಂತು ಕೈ ಮುಂದೆ ಮಾಡಿ ಭಿಕ್ಷೆ ಕೊಡು ಅಂತ ತನ್ನ ಕಣ್ಣುಗಳಿಂದಲೇ ಬೇಡುತ್ತಿರುತ್ತಾಳೆ. ಈ ದೃಶ್ಯ ಬೆಂಗಳೂರಿನ ಹೆಚ್ಚಿನೆಲ್ಲಾ ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ಇತ್ತೆಚೆಗೆ ಸಾಮಾನ್ಯವಾಗಿ ಬಿಟ್ಟಿದೆ. ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಲೇ ಇಲ್ಲ. ಟ್ರಾಫಿಕ್ ಪೋಲೀಸರು ಇದು ತಮಗೆ ಸಂಬಂಧ ಪಟ್ಟ ವಿಷಯವೇ ಅಲ್ಲ ಎಂದಂದುಕೊಂಡು ನಿಂತಿರುತ್ತಾರೆ. ಆದರೆ, ನನ್ನ ಅಭಿಪ್ರಾಯದಂತೆ ಈ ಭಿಕ್ಷುಕರನ್ನು ರಸ್ತೆಯಿಂದ ಓಡಿಸಿ, ಭಿಕ್ಷೆ ಬೇಡದಂತೆ ತಡೆಯುವ ಜವಾಬ್ದಾರಿ ಟ್ರಾಫಿಕ್ ಪೋಲೀಸರ ಮೇಲೆಯೇ ಇದೆ. ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಜವಾಬ್ದಾರಿ ಹೊತ್ತಿರುವ ಟ್ರಾಫಿಕ್ ಪೋಲೀಸರು ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವೇ?