ವಿಜ್ಞಾನ ಲೋಕದಲ್ಲೊಂದು ಉತ್ಕೃಷ್ಟ ತಾರೆ

ವಿಜ್ಞಾನ ಲೋಕದಲ್ಲೊಂದು ಉತ್ಕೃಷ್ಟ ತಾರೆ

ಬರಹ

ವಿಜ್ಞಾನ ಲೋಕದಲ್ಲೊಂದು ಉತ್ಕೃಷ್ಟ ತಾರೆ
ನರನವೊಲೆ ತರುಗಳಂ ಸುಖದುಃಖಗಳನರಿವ
ಪರಿಯ ತೋರುವ ಯಂತ್ರಚಯವ ರಚಿಸಿ
ಅಣುರೇಣತೃಣಗಳೋಳಮಲ ಚೈತನ್ಯಮಿಹ
ಮರ್ಮವಂ ಲೋಚನಕೆ ಮಿಷಯಮೆನಿಸಿ||
ಭೌತತಾತ್ವಿಕಶಾಸ್ತ್ರ ಸಾಮ್ರಾಜ್ಯ ರಾಜನೆನಿಸಿ
ವಿಶ್ವಸೃಷ್ಟಿಯ ಚತುರತೆಯ ವಿಶದಗೊಳಿಸಿ
ಕಣ್ಗೆ ಕಾಣದ ತತ್ವಮಂ ಶ್ರಮಿಸುತರಸಿ
ಮೆರೆವನೀ ಜಗದೀಶನಾರ್ಯಕುಲತೋಷಂ||

ಹೀಗೆ ಕನ್ನಡ ಸಾರಸ್ವತ ಲೋಕದ ಮೇರುಗಳಲಿ ಒಬ್ಬರಾದ ಹಿರಿಯ ಸಾಹಿತಿ ಡಿ.ವಿ.ಜಿ.ಯವರು ಅದೇ ಸಾರಸ್ವತ ಲೋಕದ ಮೇರು ಎನಿಸಿಕೊಳ್ಳುವ ಮಹಾನ್ ವಿಜ್ಞಾನಿಯೋರ್ವರ ಬಗ್ಗೆ ಬರೆದ ಕವನವಿದು. “ಕಪಿಲ ಕಣಾದಾದಿ ಸದಸದ್ವಿಚಾರಕರ ಕುಲದ ಕೀರ್ತಿಗೆ ರನ್ನಗಲಶ” ಎಂದು ಮಹಾನ್ ಸಾಹಿತಿ ಡಿ.ವಿ.ಜಿ.ಯವರ ಮೆಚ್ಚುಗೆಗೆ ಪಾತ್ರರಾದ ಮೇರು ವಿಜ್ಞಾನಿ ಯಾರು ಗೊತ್ತೆ? ಸಸ್ಯಗಳಿಗೂ ಜೀವವಿದೆ, ಅವು ನಮ್ಮ ಹಾಗೆ ಉಸಿರಾಡುತ್ತವೆ ಎಂದು ಈ ಲೋಕಕ್ಕೆ ತೋರಿಸಿಕೊಟ್ಟ ಮಹಾನ್ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರು.

ಜಗದೀಶ್ ಚಂದ್ರ ಬೋಸರು 1858ರ ನವೆಂಬರ್ 30ರಂದು ಢಾಕಾ ಜಿಲ್ಲೆಯ ಫರೀದ್ಪುರದಲ್ಲಿ(ಈಗ ಅದು ಬಾಂಗ್ಲಾದೇಶದಲ್ಲಿದೆ) ಜನಿಸಿದರು 2008ಕ್ಕೆ ಅವರ 150ನೇ ಜನ್ಮದಿನ ಆಚರಿಸುವಂತಹಾ ಈ ಸಂದರ್ಭದಲ್ಲಿ ಅವರನ್ನು ಸ್ಮರಿಸಿಕೊಳ್ಳಬೇಕೆಂಬ ಜಿಜ್ಞಾಸೆ ನನ್ನಲ್ಲಿ ಮೂಡಿದ ಕಾರಣ ಈ ಲೇಖನ ಜನ್ಮತಾಳಿತು.
ಜಗದೀಶ್ ಚಂದ್ರ ಬೋಸರ ತಂದೆ ಭಗಬಾನ್ ಚಂದ್ರ ಬೋಸ್. ಇವರು ಡೆಪ್ಯುಟಿ ಮ್ಯಾಜಿಸ್ಟ್ರೇಟರಾಗಿದ್ದರು.ಸಮಾಜದ ಬಗ್ಗೆ ಬಹಳ ಕಳಕಳಿ ಹೊಂದಿದ್ದ ವ್ಯಕ್ತಿ. ಬಡತನದಲ್ಲಿರುವವರಿಗೆ, ಕಷ್ಟದಲ್ಲಿರುವವರಿಗೆ ಸದಾ ಸಹಾಯ ಮಾಡುತ್ತಿದ್ದರು. ಒಮ್ಮೆ ಮಲೇರಿಯಾ ಊರಲ್ಲೆಲ್ಲಾ ಹರಡಿ ತಂದೆ ತಾಯಿ ಬಂಧುಗಳನ್ನೆಲ್ಲಾ ಕಳೆದುಕೊಂಡು ಅನಾಥರಾದವರಿಗೆಲ್ಲಾ ಪುನರ್ವಸತಿ ಕಲ್ಪಿಸುವುದಕ್ಕಾಗಿ ಸ್ವಂತ ಹಣವನ್ನು ಖರ್ಚು ಮಾಡಿ ಕಾರ್ಖಾನೆಯೊಂದನ್ನು ಸ್ಥಾಪಿಸಿ ಎಲ್ಲರಿಗೂ ಕೆಲಸ ನೀಡಿದರು.ಅವರು ಎಂದೂ ಸಮಾಜಕ್ಕಾಗಿ ಮಾಡಿದ ಖರ್ಚನ್ನು ಲೆಕ್ಕವೂ ಇಡುತ್ತಿರಲಿಲ್ಲ ಹಾಗೂ ಆ ಖರ್ಚಿಗಾಗಿ ಕೊರಗುತ್ತಲೂ ಇರಲಿಲ್ಲ. ತಂದೆಯ ಈ ಎಲ್ಲಾ ಗುಣಗಳೂ ಜಗದೀಶ್ ಚಂದ್ರ ಬೋಸರ ಮೇಲೆ ಪರಿಣಾಮ ಬೀರಿದವು.
ಇವರ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ಅವರ ಹಳ್ಳೀಯಲ್ಲೇ ಬೆಂಗಾಲಿ ಮಾಧ್ಯಮದಲ್ಲೇ ಆಯಿತು. ಇಂಗ್ಲಿಷ್ ಭಾಷೆಯ ಬೋಧನೆ ಆಗ ಇರಲಿಲ್ಲ. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ 1869ರಲ್ಲಿ ಕೇವಲ 11 ವರ್ಷದ ಬಾಲಕ ಇಂಗ್ಲಿಷ್ ಮಾಧ್ಯಮದಲಿ ಕಲಿಯಲು ಕಲ್ಕತ್ತಾದ St.Xavier Schoolಗೆ ಸೇರಬೇಕಾಯಿತು. ಇಂಗ್ಲಿಷ್ ಬಿಟ್ಟು ಬೇರೆ ಭಾಷೆ ಅರಿಯದ ಅವರ ಸಹಪಾಠಿಗಳು ಅವರನ್ನು ರೇಗಿಸುತ್ತಿದ್ದರು. ಮುಷ್ಟಿಯುದ್ಧ ಮಾಡಿ ಒಬ್ಬ ಸಹಪಾಠಿಯನ್ನು ಅವರು ತರಾಟೆಗೆ ತೆಗೆದುಕೊಂಡಮೇಲೆ ಅವರಿಗೆ ಈ ಕಾಟ ತಪ್ಪಿತು. 1879ರಲ್ಲಿ B.A. ಪದವಿ ಗಳಿಸಿದರು. ಹಿಂದೆ ವಿಜ್ಞಾನದ ವಿದ್ಯಾರ್ಥಿಗಳಿಗೂ B.A. ಪದವಿಯನ್ನೇ ನೀಡುತ್ತಿದ್ದರು. 1880ರಲ್ಲಿ Englandಗೆ ಹೋಗಿ ವೈದ್ಯವಿಜ್ಞಾನ ಓದಲು ಪ್ರಾರಂಭಿಸಿದರು. ಆದರೆ ಸ್ವತಹ ಆರೋಗ್ಯ ಕಳೆದುಕೊಂಡ ಅವರು ಅದನ್ನು ಒಂದು ವರ್ಷದಲ್ಲೇ ಅಲ್ಲಿಗೇ ಬಿಟ್ಟು ಕೇಂಬ್ರಿಡ್ಜ್ ಕ್ರೈಸ್ಟ್ ಕಾಲೇಜಿಗೆ ಸೇರಿ ಪ್ರಕೃತಿ ವಿಜ್ಞಾನವನ್ನು ಸ್ಕಾಲರ್ಶಿಪ್ ಪಡೆದು ಅಭ್ಯಸಿಸಿದರು. B.Sc ಪದವಿ ಪಡೆದು ಭಾರತಕ್ಕೆ 1885ರಲ್ಲಿ ಮರಳಿ ಬಂದರು. ಅವರಿಗೆ ಕಲ್ಕತ್ತಾದ ಪ್ರಸಿಡೆನ್ಸಿ ಕಾಲೇಜಿನಲ್ಲಿ ಉಪನ್ಯಾಸಕರ ಕೆಲಸ ದೊರೆಯಿತು. ಆದರೆ ಭಾರತೀಯ ಅಧ್ಯಾಪಕರಿಗೆ ಬ್ರಿಟಿಷ್ ಅಧ್ಯಾಪಕರ ಸಂಬಳದ ಮೂರನೆಯ ಒಂದು ಭಾಗದಷ್ಟು ಸಂಬಳ ನೀಡಲಾಗುತ್ತಿತ್ತು. ಜಗದೀಶ್ ಚಂದ್ರರು ಈ ತಾರತಮ್ಯವನ್ನು ವಿರೋಧಿಸಿದರು. ಸಮಾನ ಸಂಬಳ ನೀಡುವವರೆಗೂ ಸಂಬಳ ಪಡೆಯದೇ ಪ್ರತಿಭಟಿಸಿದರು. ಸತತ ಮೂರು ವರ್ಷಗಳ ವರೆಗೆ ಸಂಬಳ ಪಡೆಯದೇ ಕೆಲಸ ಮಾಡಿದರೂ ಅವರ ವೃತ್ತಿ ಕ್ಷಮತೆಯಲ್ಲೇನೂ ಏರುಪೇರಾಗಲಿಲ್ಲ. ಅವರು ಶ್ರದ್ಧೆಯಿಂದಲೇ ಪಾಠ ಮಾಡುತ್ತಿದ್ದರು. ಅವರ ಶಿಕ್ಷಣ ಕ್ರಮ ಅವರ ವಿದ್ಯಾರ್ಥಿಗಳ ಮೇಲೆ ಅಪಾರವಾದ ಪ್ರಭಾವ ಬೀರುತ್ತಿತ್ತು. ಪ್ರತಿಯೊಂದು ವಿಚಾರವನ್ನೂ ಪ್ರಯೋಗಗಳ ಮೂಲಕವೇ ತಿಳಿಸುತ್ತಿದ್ದರು. ಇವರ ಶಿಷ್ಯವರ್ಗದಲ್ಲಿ ಅನೇಕ ಪ್ರತಿಷ್ಟಿತ ವಿಜ್ಞಾನಿಗಳೂ ಇದ್ದರು. ಅವರಲ್ಲಿ ಪ್ರಮುಖರಾದವರು ಸತ್ಯೇಂದ್ರನಾಥ್ ಬೋಸ್ ಹಾಗೂ ಮೇಘನಾದ್ ಸಹಾ. ಕೊನೆಗೂ ಜಗದೀಶರ ಪ್ರತಿಭಟನೆಗೆ ಕಾಲೇಜಿನ ಆಡಳಿತ ಮಂಡಳಿ ತಲೆಬಾಗಲೇ ಬೇಕಾಯಿತು. ಅವರ ಬೇಡಿಕೆಗಳನ್ನು ಪೂರೈಸಿ ಅವರು ಸೇರಿದ ದಿನದಿಂದ ಅವರಿಗೆ ಅವರಿಚ್ಚೆಯಂತೆ ಆಂಗ್ಲ ಅಧ್ಯಾಪಕರಿಗೆ ಸಮನಾದ ಸಂಬಳ ನೀಡಿದರು.
1894ರಲ್ಲಿ ಜಗದೀಶರು ಸಂಪೂರ್ಣ ಸಂಶೋದನೆಗಳ ಕಡೆ ಗಮನ ಹರಿಸುವ ನಿರ್ಧಾರ ತೆಗೆದುಕೊಂಡರು. ಅದಕ್ಕಾಗಿ ತನ್ನದೇ ಆದ ಪ್ರಯೋಗಶಾಲೆಯನ್ನು ನಿರ್ಮಿಸಿಕೊಂಡರು. ಅಲ್ಲಿ ವಕ್ರೀಭವನ (Refraction), ವಕ್ರ ವಿಯೋಜನ (diffraction) ಹಾಗೂ ಬೆಳಕಿನ ಅಥವಾ ಇತರ ವಿಕಿರಣಗಳ ತರಂಗ ಕಂಪನಗಳು ಒಂದು ನಿರ್ಧಿಷ್ಟ ರೂಪ ಪಡೆಯುವಂತೆ ಮಾಡುವ ಕಾರ್ಯ (polarization) ಇವುಗಳ ಬಗ್ಗೆ ಸಂಶೋದನೆಗಳನ್ನು ಪ್ರಾರಂಭಿಸಿದರು. 1896ರಲ್ಲಿ ವಿದ್ಯುತ್ ಅಲೆಗಳನ್ನು ಕುರಿತ ಪ್ರೌಢ ಪ್ರಬಂಧವೊಂದನ್ನು ಬರೆದರು. ರಾಯಲ್ ಸೊಸೈಟಿಯವರು ಇದನ್ನು ಮೆಚ್ಚಿ ಜಗದೀಶ ಚಂದ್ರರಿಗೆ ‘ಡಾಕ್ಟರ್ ಆಫ್ ಸಯಿನ್ಸ್’ ಪ್ರಶಸ್ತಿ ಕೊಟ್ಟು ಗೌರವಿಸಿತು. ಜಗದೀಶರು ‘ತಂತಿರಹಿತ ಸಂದೇಶ ಪ್ರಸಾರ’ದ (wireless telegraphy) ಅನ್ವೇಷಕರು ಎಂದರೆ ಖಂಡಿತ ತಪ್ಪಲ್ಲ ಏಕೆಂದರೆ ಮಾರ್ಕೋನಿ ಅದನ್ನು ತನ್ನ ಅನ್ವೇಷಣೆ ಎಂದು ಪೇಟೆಂಟ್ ಮಾಡಿಕೊಳ್ಳುವ ಒಂದು ವರ್ಷದ ಮೊದಲೇ ಅಂದರೆ 1895ರಲ್ಲಿ ಅದರ ಕಾರ್ಯ ನಿರ್ವಹಣೆಯ ಬಗ್ಗೆ ಪ್ರಯೋಗಗಳ ಮೂಲಕ ತೋರಿಸಿಕೊಟ್ಟರು. ವಿದ್ಯುತ್ ಕಾಂತೀಯ ಅಲೆಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕಳುಹಿಸಬೇಕಾದರೆ , ಅಂತಹಾ ಅಲೆ ಹೊರಡುವ ಮತ್ತು ತಲುಪಬೇಕಾದ ಸ್ಥಳಗಳಲ್ಲಿ ಯಾವ ಯಾವ ಉಪಕರಣಗಳಿರಬೇಕು, ಎಷ್ಟು ದೂರವಿರಬೇಕು ಎಂಬ ವಿಚಾರಗಳ ಬಗ್ಗೆ ತಮ್ಮ ಸಂಶೋಧನೆಗಳಿಂದ ನಿಖರವಾದ ನಿರ್ಧಾರ ಹೊಂದಿದ್ದರು. ಅದಕ್ಕೆ ಬೇಕಾದ ಸಾಧನ ಸಲಕರಣೆಗಳನ್ನು ತಾವೇ ಒದಗಿಸಿಕೊಂಡು ರಾಯಲ್ ಸೊಸೈಟಿಯಲ್ಲಿ ಪ್ರಯೋಗಗಳನ್ನು ನಡೆಸಿದ್ದರು. ಆದರೂ ಭಾರತ ಬ್ರಿಟಿಷರ ಕೈಕೆಳಗೆ ಇದ್ದುದರಿಂದ ಭಾರತದ ವಿಜ್ಞಾನಿಗಳಿಗೆ ಮಾನ್ಯತೆ ದೊರಕದೇ ಇದರ ಪೇಟೆಂಟ್ ಮಾರ್ಕೋನಿಯ ಪಾಲಾಯಿತು ಜೊತೆಗೆ ಜಗದೀಶಚಂದ್ರರು ಎಂದೂ ಪೇಟೆಂಟ್ ಬಯಸಿದವರಲ್ಲ.
ನಂತರ ಜಗದೀಶರು ತಮ್ಮ ಅಧ್ಯಯನವನ್ನು ಲೋಹಗಳ ಕಡೆ ಕೇಂದ್ರೀಕರಿಸಿದರು. ಅತಿ ಸೂಕ್ಷ್ಮವಾದ ‘ಮರ್ಕ್ಯುರಿ ಕೊಹೆರರ್’ನ್ನು ತಯಾರಿಸಿದರು. ಅದು ರೇಡಿಯೋ ತರಂಗಗಳನ್ನು ಪತ್ತೆ ಹಚ್ಚುವ ಒಂದು ಉಪಕರಣ. ಆ ಉಪಕರಣವನ್ನು ಹೆಚ್ಚು ಹೊತ್ತು ಬಳಸಿದಾಗ ಅದರ sensitivity ಕಡಿಮೆಯಾಗುತ್ತಿತ್ತು . ಸ್ವಲ್ಪ ಸಮಯ ಅದಕ್ಕೆ ರೆಸ್ಟ್ ಕೊಟ್ಟಾಗ ಅದು ಮತ್ತೆ ತನ್ನ sensitivityಯನ್ನು ಪಡೆದುಕೊಂಡು ಅಷ್ಟೇ ಕ್ಷಮತೆಯಿಂದ ಕೆಲಸ ನಿರ್ವಹಿಸುತ್ತಿತ್ತು. ಇದರಿಂದ ಅವರು ಲೋಹಗಳಿಗೆ ಸಂವೇದನೆ ಹಾಗೂ ಸ್ಮರಣ ಶಕ್ತಿ ಇದೆ ಎಂದು ನಿರ್ಧರಿಸಿದರು. ಈ ಕೊಹೆರರನ್ನು 1901ರಲ್ಲಿ ತನ್ನ ರೇಡಿಯೋ ತಯಾರಿಕೆಯಲ್ಲಿ ಮಾರ್ಕೋನಿ ಉಪಯೋಗಪಡಿಸಿಕೊಂಡಾಗ ಜಗದೀಶ್ ಚಂದ್ರ ಬೋಸರಿಗೆ ಕನಿಷ್ಠಪಕ್ಷ ಒಂದು ಕೃತಜ್ಞತೆಯನ್ನೂ ಸಲ್ಲಿಸಲಿಲ್ಲ. ಅಲ್ಲದೇ `ಕೊಹರರ್ ಗ್ರಾಹಕ’ ದ ಪೇಟೆಂಟಿಗೂ ಅರ್ಜಿ ಹಾಕಿದ.
ನಾವು ಇಂದು ಬಳಸುವ ದೂರನಿಯಂತ್ರಕ ಸಾಧನದ (remote control) ಪ್ರಯೋಗ ನಡೆಸಿ ಅದರ ತತ್ವಗಳನ್ನು ಅನುಸರಿಸಿ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದವರಲ್ಲಿ ಜಗದೀಶ ಚಂದ್ರರೇ ಮೊದಲಿಗರು. ಹೀಗೆ ಇವರು ಭೌತ ಶಾಸ್ತ್ರದ ವಿಷಯಗಳ ಬಗ್ಗೆ ಸಂಶೋದನೆ ನಡೆಸಿದರೂ ಮೂಲತಹ ಅವರ ಆಸಕ್ತಿ ಜೀವ ವಿಜ್ಞಾನದ ಕಡೆಗೇ ಇತ್ತು. ಅದರಲ್ಲು ಸಸ್ಯ ವಿಜ್ಞಾನದ ಕ್ಷೇತ್ರದಲ್ಲಿ ಇವರ ಕೊಡುಗೆ ಅಪಾರ. ಸಸ್ಯಗಳು ಯಾವ ಉಷ್ಣಾಂಶವನ್ನು ತಡೆಯಲಾರದೇ ಸಾಯುತ್ತವೆ ಎಂದು ತಿಳಿಯಲು ‘ಡೆತ್ ರೆಕಾರ್ಡರ್’ ಎಂಬ ಸಾಧನವನ್ನು ಕಂಡು ಹಿಡಿದರು. ಉದ್ರೇಕಕ್ಕೊಳಗಾದ ಸಸ್ಯಗಳ ತಲ್ಲಣ ಒಂದು ತುದಿಯಿಂದ ಮತ್ತೊಂದು ತುದಿಗೆ ಪ್ರವಹಿಸುವುದನ್ನು ಕಂಡುಹಿಡಿಯಲು ‘ಬ್ಯಾಲೆನ್ಸಿಂಗ್ ಆಪರೇಟಸ್’ ಕಂಡುಹಿಡಿದರು. ‘ಕ್ರಿಸ್ಟೊಗ್ರಾಫ್’ ಎಂಬ ಇವರ ಸಾಧನ ಸಸ್ಯಗಳ ಬೆಳವಣಿಗೆಯ ಪ್ರಮಾಣವನ್ನು ತಿಳಿಯಲು ಸಹಕಾರಿಯಾಯಿತು. ದ್ಯುತಿಸಂಶ್ಲೇಷಣೆ ಕ್ರಿಯೆಯ ಗತಿಯನ್ನು ಕಂಡುಹಿಡಿಯಲು ‘ಫೋಟೋಸಿಂಥಟಿಕ್ ಬಬ್ಲರ್’ ಎಂಬ ಉಪಕರಣ ಹೀಗೆ ಹಲವಾರು ಉಪಕರಣಗಳು ಇಂದು ಸಸ್ಯ ಶಾಸ್ತ್ರವನ್ನು ಶ್ರೀಮಂತಗಿಳಿಸಿವೆ.
ಇವರ ಮುಖ್ಯ ಸಂಶೋಧನೆಗಳಲ್ಲಿ ಒಂದು ಎಂದರೆ ಸಸ್ಯಗಳು ಉಸಿರಾಡುತ್ತವೆ, ಅವುಗಳಿಗೂ ಜೀವವಿದೆ ಅವೂ ಸಾಯುತ್ತವೆ ಎಂಬುದು. ಅದನ್ನು ಒಮ್ಮೆ ಪ್ರಯೋಗದ ಮೂಲಕ ಇಂಗ್ಲಾಂಡಿನ ರಾಯಲ್ ಸೊಸೈಟಿಯಲ್ಲಿ ತೋರಿಸಬೇಕಾಯಿತು. ಆಗ ಒಂದು ಸಸ್ಯವನ್ನು ಬೇರಿನ ಸಮೇತ ಕಿತ್ತು ತಂದು ವಿಷಕಾರಿಯಾದ ಬ್ರೋಮೈಡ್ ದ್ರಾವಣದಲ್ಲಿ ಅದ್ದಿ ತೋರಿಸಬೇಕಾಗಿತ್ತು. ಆಗ ಅವರು ಕಣ್ಣೀರಿನೊಂದಿಗೆ “ಈಗ ತಾನೇ ಚಿಗುರುತ್ತಿರುವ ನಿನ್ನನ್ನು ನನ್ನ ಪ್ರಯೋಗದ ಸಲುವಾಗಿ ಕೊಲ್ಲುತ್ತಿದ್ದೇನೆ. ನನಗೆ ಕ್ಷಮೆ ಇಲ್ಲ ಎಂಬುದು ನನಗೂ ಗೊತ್ತು. ಆದರೂ ನಾನು ನಿನ್ನಲ್ಲಿ ಕ್ಷಮೆ ಬೇಡುತ್ತಿದ್ದೇನೆ” ಎಂದು ಆ ಸಸ್ಯವನ್ನು ನೋಡಿ ಗದ್ಗದಿತರಾಗಿ ನುಡಿದರಂತೆ. ನಂತರ ಬ್ರೋಮೈಡ್ ದ್ರಾವಣದಲ್ಲಿ ಮುಳುಗಿದ್ದ ಸಸ್ಯದೊಂದಿಗೆ ತನ್ನ ಒಂದು ಉಪಕರಣವನ್ನು ಜೋಡಿಸಿದರು. ಲೋಲಕದಂತಹ ಬೆಳಕಿನ ಬಿಂದು ಒಂದರ ಚಲನೆ ಮೊದಲು ಸಮನಾಗಿದ್ದು ಬರಬರುತ್ತಾ ತೀವ್ರವಾಗಿ ಕೊನೆಗೆ ಮಾಯವಾಯಿತು. ಸಸ್ಯವು ವಿಲವಿಲನೆ ಒದ್ದಾಡಿ ಸತ್ತಿತು.
ಸಸ್ಯಗಳ ಅಧ್ಯಯನ ನಡೆಸಲೆಂದೇ ಕಲ್ಕತ್ತಾದಲ್ಲಿ ‘Bose Institute'ನ್ನು ಸ್ಥಾಪಿಸಿದರು. ಇಂದಿಗೂ ಅಲ್ಲಿ ವಿಜ್ಞಾನದ ಅನೇಕ ಕ್ಷೇತ್ರಗಳಲ್ಲಿ ಪ್ರಯೋಗಗಳು ನಡೆಯುತ್ತಿವೆ.
ಇಷ್ಟೆಲ್ಲಾ ಅನ್ವೇಷಣೆಗಳು ಜಗದೀಶರು ಮಾಡಿದ್ದರೂ ಒಂದಕ್ಕೂ ಅವರು ಪೇಟೆಂಟ್ ಬಯಸಲಿಲ್ಲ ಹಾಗೂ ಪಡೆಯಲೂ ಇಲ್ಲ. ಅವರ ಒಂದು ಹೇಳಿಕೆ ಚಿನ್ನದ ಅಕ್ಷರಗಳಲ್ಲಿ ಬರೆದಿಡಬೇಕಾದುದು. ಅವರ ಅರ್ಧದಷ್ಟೂ ಸಹಾ ಬುದ್ಧಿವಂತಿಕೆ ಇಲ್ಲದ ಎಷ್ಟೋ ಜನ ತಮ್ಮ ಬಗ್ಗೆ ಆತ್ಮ ಪ್ರಶಂಸೆ ಮಾಡಿಕೊಳ್ಳುತ್ತಾರೆ. ಈ ಜನರ ನಡುವೆ ಇಂತಹಾ ಒಂದು ಮಹಾನ್ ವ್ಯಕ್ತಿ ಜನಿಸಿ ವಿಜ್ಞಾನ ಪ್ರಪಂಚವನ್ನು ಶ್ರೀಮಂತಗೊಳಿಸಿದ್ದಾರೆ ಎಂದರೆ ಅದು ನಮ್ಮ ಭಾಗ್ಯವೇ ಸರಿ. ಅವರ ನುಡಿಗಳನ್ನು ಇಲ್ಲಿ ಸ್ಮರಿಸಿ ಆ ಮಹಾನ್ ವ್ಯಕ್ತಿಗೆ ನನ್ನ ಹೃತ್ಪೂರ್ವಕ ನಮನ ಸಲ್ಲಿಸುತ್ತೇನೆ.
“ಹೊಸತಾಗಿ ನಾನೇನೂ ಕಂಡುಹಿಡಿದಿಲ್ಲ. ಈ ಜಗದಲ್ಲೇ ಅಂತರ್ಗತವಾಗಿದ್ದ ವಸ್ತು ವಿಶೇಷಗಳು ನನ್ನ ಮೂಲಕ ಜಗತ್ತಿಗೆ ಕಾಣಿಸಿಕೊಂಡಿವೆ. ಹಾಗಾಗಿ ಜ್ಞಾನ ಯಾರ ಸ್ವತ್ತೂ ಅಲ್ಲ. ಅದನ್ನು ಎಲ್ಲರೂ ನಿಃಶುಲ್ಕವಾಗಿ ಹಂಚಿಕೊಳ್ಳಬೇಕು. ಎಲ್ಲರಿಗೂ ಹಂಚಬೇಕು.”
ಒಂದು ಸೂಚನೆ:- ಜಗದೀಶರ ಈ ನುಡಿ, ಡಿ.ವಿ.ಜಿ.ಯವರ ಕವನ , ಜಗದೀಶ ಚಂದ್ರರ ತಂದೆಯ ವಿಚಾರ ಮತ್ತು ಜಗದೀಶರು ಕಂಡುಹಿಡಿದ ಕೆಲವು ಉಪಕರಣಗಳ ಹೆಸರು ಜೂನ್ ತಿಂಗಳ ಉತ್ಥಾನ ಪತ್ರಿಕೆಯಲ್ಲಿ ವಿಘ್ನೇಶ್ ಅವರು ಬರೆದ ಲೇಖನದಿಂದ ದೊರಕಿದವು. ಇದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.ಮಿಕ್ಕ ವಿಚಾರಗಳು ಇಂಟರ್ನೆಟ್ನಲ್ಲಿ ಹಾಗೂ ವಿಶ್ವಕೋಶದಲ್ಲಿ ಕಂಡುಬಂದವು.