ಇಂಟರ್ನೆಟ್ ತಂತ್ರಜ್ಞಾನ....

ಇಂಟರ್ನೆಟ್ ತಂತ್ರಜ್ಞಾನ....

 

ನಾನು ೮ನೇ ತರಗತಿಯಲ್ಲಿದ್ದಾಗ ತಂದೆಯವರೊಡನೆ ಆಗಾಗ್ಗೆ ಅವರ ಬ್ಯಾಂಕಿಗೆ ಹೋಗುತ್ತಿದ್ದೆ. ದೈತ್ಯಾಕಾರದ ಲೆಕ್ಕಪುಸ್ತಕಗಳನ್ನು ಬ್ಯಾಂಕಿನ ಖಜಾನೆಗಳಿಂದ ಹೊತ್ತು ತಂದು ಅವುಗಳಲ್ಲಿ ಬರೆದಿಟ್ಟ ಪ್ರತಿದಿನದ ಆಯ-ವ್ಯಯಗಳನ್ನು ಬಾಯಿ-ಕೈಗಳ ಸಹಾಯದಿಂದ ಕೂಡುವ-ಕಳೆಯುವ ಕೆಲಸ ನಡೆಯುತ್ತಿತ್ತು. ಆದರೆ ಈಗ ಬಹುತೇಕ ಹಾಗಿಲ್ಲ. ಮಾಹಿತಿ ತಂತ್ರಜ್ನಾನವು ಬ್ಯಾಂಕಿಗೆ ಕಾಲಿಟ್ಟೊಡನೆ ಮಾಹಿತಿಯು ಕಂಪ್ಯೂಟರ್ ಗಳಲ್ಲಿ ವಾಸಿಸಲಾರಂಭಿಸಿದೆ. ನಮ್ಮ ತಂದೆಯವರು ಮಾಡುತ್ತಿದ್ದ ಲೆಕ್ಕಗಳನ್ನು ಈಗ ಕಂಪ್ಯೂಟರ್ ಮಾಡಲಾರಂಭಿಸಿದೆ. ಹೀಗೆ ಮಾಹಿತಿ ತಂತ್ರಜ್ನಾನವು ಸಾರಿಗೆ ಸಂಸ್ಥೆ, ನೀರು/ವಿದ್ಯುತ್ ಸರಬರಾಜು ಸಂಸ್ಥೆ, ಹಣಕಾಸು ಸಂಸ್ಥೆ, ವಿದ್ಯಾನಿಲಯ ಮುಂತಾದ ದೈನಂದಿನ ವ್ಯವಹಾರಿಕ ಕ್ಷೇತ್ರಗಳನ್ನು ಆವರಿಸಿದೆ. ಈ ಮಾಹಿತಿ ತಂತ್ರಜ್ನಾನವು ಒಂದು ತಂತ್ರಜ್ನಾನವೂ ಹೌದು, ಒಂದು ಕ್ರಾಂತಿಯೂ ಹೌದು....

ನಮಗೆ ಬೇಕಾದ ಮಾಹಿತಿ ಎಲ್ಲಿರುತ್ತದೆ? (Storage Devices)

ಮಾಹಿತಿ ತಂತ್ರಜ್ನಾನದ ಬೆಳವಣಿಗೆಯಿಂದ ನಾವು ಮಾಹಿತಿಯನ್ನು ದಾಖಲಿಡುವ ಹಾಗು ದಾಖಲಿಸುವ ರೀತಿ, ಸಂಗ್ರಹಿಸುವ ರೀತಿ, ಮತ್ತೊಬ್ಬರಿಗೆ ಕಳುಹಿಸುವ ರೀತಿ, ಮತ್ತೊಬ್ಬರಿಂದ ಪಡೆಯುವ ರೀತಿ - ಇವುಗಳಲ್ಲಿ ಅಚ್ಚರಿ ಮೂಡಿಸುವಷ್ಟು ಬದಲಾವಣೆಯಾಗಿದೆ. ಈಗ ಪುಸ್ತಕಗಳ ಬಳಕೆ ಕಡಿಮೆಯಾಗಿದೆ. ಬ್ಯಾಂಕಿನಲ್ಲಿರುವ ನಮ್ಮ ಹಣದ ಮಾಹಿತಿಯಾಗಿರಬಹುದು, ರೈಲಿನ ಟಿಕೆಟ್ ಬಗ್ಗೆ ಮಾಹಿತಿಯಾಗಿರಬಹುದು, ಕಾಲೇಜಿನ ವಿದ್ಯಾರ್ಥಿಗಳಿಗೆ ಪಠ್ಯದ ಮಾಹಿತಿಯಾಗಿರಬಹುದು, ನಮ್ಮ ನೀರು ವಿದ್ಯುತ್ ಬಳಕೆಯ ಮಾಹಿತಿಯಾಗಿರಬಹುದು, ನಮ್ಮ ಸಾಲದ ಮರುಪಾವತಿಯ ಮಾಹಿತಿಯಾಗಿರಬಹುದು. ಕೋಟ್ಯಾಂತರ ಜನರ ಇಂಥಹ ನಾನಾ ಬಗೆಯ ಮಾಹಿತಿಗಳನ್ನು ಸಂಗ್ರಹಿಸಿ ಇಡಲು ಉಪಯೋಗಿಸುವ ಕಂಪ್ಯೂಟರ್ ಗಳನ್ನು ಶೇಖರಣ ಉಪಕರಣಗಳು (Storage devices) ಎಂದು ಕರೆಯುತ್ತಾರೆ.

ಪ್ರತಿಯೊಂದು ಸಂಸ್ಥೆ - ಬ್ಯಾಂಕ್, ವಿದ್ಯುತ್/ನೀರು ಸರಬರಾಜು ಸಂಸ್ಥೆ, ಸಾರಿಗೆ  ಸಂಸ್ಥೆ, ಹಣಕಾಸು ಸಂಸ್ಥೆ, ವಿದ್ಯಾನಿಲಯ - ತನ್ನದೇ ಆದ ಶೇಖರಣ ಉಪಕರಣಗಳನ್ನು ಹೊಂದಿರುತ್ತದೆ ಹಾಗು ತಮ್ಮ ಗ್ರಾಹಕರಿಗೆ ಬೇಕಾದ ಮಾಹಿತಿಯನ್ನು ಇವುಗಳಲ್ಲಿ ಶೇಖರಿಸಿಡಲಾಗುತ್ತದೆ. ಇಎಂಸಿ2 (EMC2), ಸಿಸ್ಕೋ (Cisco), ಟೋಶಿಬಾ (Toshiba) ಮುಂತಾದ ಕಂಪೆನಿಗಳು ಈ ನಿಟ್ಟಿನಲ್ಲಿ ಜಗತ್ತಿನಲ್ಲೇ ಹೆಸರುವಾಸಿ.

 

ಸರ್ವರ್ ಎಂದರೇನು?  (Server)

ಶೇಖರಿಸಲ್ಪಟ್ಟಿರುವ ಅಗಾಧ ಪ್ರಮಾಣದ ಮಾಹಿತಿಯನ್ನು ಕ್ಷ್ಣಣದಲ್ಲಿ ಹುಡುಕಿ ಸಂಸ್ಥೆಯ ವ್ಯವಹಾರಕ್ಕೆ ಸೂಕ್ತವಾದ ರೀತಿಯಲ್ಲಿ ಪರಿಶ್ಕರಿಸಲು ಸರ್ವರ್ ಎಂಬ ಬಲಶಾಲಿಯಾದ ಕಂಪ್ಯೂಟರ್ ಗಳನ್ನು ಬಳಸಲಾಗುತ್ತದೆ.  ಪ್ರತಿಯೊಂದು ಸಂಸ್ಥೆಯು ತನ್ನದೇ ಆದ ಸರ್ವರ್ ಗಳನ್ನು ಹೊಂದಿರುತ್ತದೆ. ಈ ಸರ್ವರ್ ಗಳೇ ಶಾನಭಾಗರು, ಶೇಖರಣ ಉಪಕರಣಗಳೇ ಪುಸ್ತಕಗಳು !  ಎಚ್-ಪಿ (HP), ಐಬಿಎಂ (IBM), ಮುಂತಾದ ಕಂಪೆನಿಗಳು ಈ ನಿಟ್ಟಿನಲ್ಲಿ ಜಗತ್ತಿನಲ್ಲೇ ಹೆಸರುವಾಸಿ.

 

ಮಾಹಿತಿಕೇಂದ್ರ ಎಂದರೇನು? (DataCenter)

ಶೇಖರಣ ಉಪಕರಣ ಹಾಗು ಸರ್ವರ್ ಗಳನ್ನು ಒಂದು ಕೋಣೆಯಲ್ಲಿ ಕೂಡಿಸಿಟ್ಟು ಅದಕ್ಕೆ ಮಾಹಿತಿಕೇಂದ್ರ (Datacenter) ಎಂದು ಕರೆಯುತ್ತಾರೆ. ಈ ನೂರಾರು ಶೇಖರಣ ಉಪಕರಣ ಹಾಗು ಸರ್ವರ್ ಗಳ ನಡುವೆ ಸಂಪರ್ಕ ಮಾರ್ಗ ನಿರ್ಮಿಸಲು ಅದೇ ಕೋಣೆಯಲ್ಲಿ ಮಾರ್ಗಸೂಚಕ (router)ಗಳನ್ನೂ ಅಳವಡಿಸಲಾಗುತ್ತದೆ. ಶೇಖರಣ ಉಪಕರಣ ಹಾಗು ಸರ್ವರ್ ಗಳನ್ನು ಈ ಮಾರ್ಗಸೂಚಕಗಳಿಗೆ ಜೋಡಿಸಲಾಗುತ್ತದೆ. ಪ್ರತಿಯೊಂದು ಸಂಸ್ಥೆಯು ತನ್ನದೇ ಆದ ಮಾಹಿತಿಕೇಂದ್ರವನ್ನು ಹೊಂದಿರುತ್ತದೆ. ಇಲ್ಲಿ ಸಂಸ್ಥೆಯ ವ್ಯವಹಾರಕ್ಕೆ ಬೇಕಾದ ಮಾಹಿತಿಯ ಶೇಖರಣೆ ಮತ್ತು ಪರಿಶ್ಕರಣೆ ಕಂಪ್ಯೂಟರ್ ಗಳಲ್ಲಿ ದಿನದ ೨೪ ಗಂಟೆ ನಡೆಯುತ್ತಲೇಯಿರುತ್ತದೆ !

ಇಎಂಸಿ2 (EMC2), ಸಿಸ್ಕೋ (Cisco), ಟೋಶಿಬಾ (Toshiba), ಎಚ್-ಪಿ (HP), ಐಬಿಎಂ (IBM) ಮುಂತಾದ ಕಂಪೆನಿಗಳು ಈ ನಿಟ್ಟಿನಲ್ಲಿ ಜಗತ್ತಿನಲ್ಲೇ ಹೆಸರುವಾಸಿ.

ಬ್ಯಾಂಕುಗಳಲ್ಲಿದ್ದ ಭೂತಾಕಾರದ ಲೆಕ್ಕ ಪುಸ್ತಕಗಳು ಇನ್ನಿಲ್ಲ. ನಮ್ಮ  ಉಳಿತಾಯ ಖಾತೆಯ ವಿವರಗಳನ್ನು ಬ್ಯಾಂಕಿನ ಮಾಹಿತಿಕೇಂದ್ರಗಳಲ್ಲಿಡಲಾಗುತ್ತದೆ. ರೈಲು-ಬಸ್ಸುಗಳ  ಟಿಕೆಟ್ ಗಳನ್ನು ಪಡೆಯಲು ಅಥವಾ ಕಾಯ್ದಿರಿಸಲು ಮಳಿಗೆಗಳಿಗೆ ಹೋಗಬೇಕಿಲ್ಲ. ಟಿಕೆಟ್ ವಿವರಗಳನ್ನು ಸಾರಿಗೆ ಸಂಸ್ಥೆಯ ಮಾಹಿತಿಕೇಂದ್ರಗಳಡಲಾಗುತ್ತದೆ. ಯಾವ ಸಮಯದಲ್ಲಾದರೂ ಪ್ರಪಂಚದ ಯಾವ ಊರಿನಿಂದಲೂ ನಾವು ಕುಳಿತಲ್ಲೇ ನಮ್ಮ ಮನೆಯ ಕಂಪ್ಯೂಟರ್ ಮೂಲಕ ಸಂಸ್ಥೆಯ ಮಾಹಿತಿಕೇಂದ್ರಗಳಲ್ಲಿರುವ ಸರ್ವರ್ ಗಳನ್ನು ಸಂಪರ್ಕಿಸಿ ನಮ್ಮ ಖಾತೆಯಲ್ಲಿರುವ ಹಣದ ಮಾಹಿತಿಯನ್ನು ಪಡೆಯಬಹುದು, ನಮ್ಮ ಟಿಕೆಟ್ ಗಳನ್ನು ಕಾಯ್ದಿರಿಸಬಹುದು.

 

ಇಂಟರ್ನೆಟ್ ಎಂದರೇನು? (Internet)

ನಾವು ಕುಳಿತಲ್ಲೇ ಸಂಸ್ಥೆಯ ಸೌಲಭ್ಯವನ್ನು ಪಡೆಯುವುದಕ್ಕೆ ನಮ್ಮ ಕಂಪ್ಯೂಟರ್ ಗಳನ್ನೂ, ಸಂಸ್ಥೆಯು ತನ್ನ ಮಾಹಿತಿಕೇಂದ್ರದಲ್ಲಿರುವ ಸರ್ವರ್ ಗಳನ್ನೂ ಇಂಟರ್ನೆಟ್ ಎಂಬ ಸಂಪರ್ಕ್ ಜಾಲಕ್ಕೆ ಜೋಡಿಸಬೇಕಾಗುತ್ತದೆ. ನಾವು ಸಂಸ್ಥೆಗೆ ಹೋಗಿ ಮಾತನಾಡುವ ಅವಶ್ಯಕತೆಯಿಲ್ಲ!

ಉದಾಹರಣೆಗೆ: ಅಮೇರಿಕಾದಿಂದ ಮಗನು ಅಮ್ಮನಿಗೆ ಹಣವನ್ನು ಕಳುಹಿಸಲು ಭಾರತದಲ್ಲಿನ ಬ್ಯಾಂಕ್ ನ ಮತ್ತು ಅಮೇರಿಕಾದ ಬ್ಯಾಂಕ್ ನ ಮಾಹಿತಿಕೇಂದ್ರಗಳ ನಡುವೆ ಸಂಪರ್ಕ ಮಾರ್ಗ ನಿರ್ಮಿಸಬೇಕಾಗುತ್ತದೆ. ಚೀನಾದಲ್ಲಿರುವ ನಮ್ಮ ಮಿತ್ರನೊಡನೆ ಕಂಪ್ಯೂಟರ್ ಮೂಲಕ ಮಾತಾಡಲು ನಮ್ಮ ಕಂಪ್ಯೂಟರ್ ಮತ್ತು ನಮ್ಮ ಮಿತ್ರನ ಕಂಪ್ಯೂಟರ್ ಗಳ ನಡುವೆ ಸಂಪರ್ಕ ಮಾರ್ಗ ನಿರ್ಮಿಸಬೇಕಾಗುತ್ತದೆ.

ಹೀಗೆ ದೂರದ ಕಂಪ್ಯೂಟರ್, ಮಾಹಿತಿಕೇಂದ್ರಗಳ ನಡುವಿನ ಸಂಪರ್ಕ ಮಾರ್ಗವನ್ನು ಇಂಟರ್ನೆಟ್ ಎಂಬ ಸಂಪರ್ಕ ಜಾಲ ನಿರ್ಮಿಸಿಕೊಡುತ್ತದೆ.

 

ಇಂಟರ್ನೆಟ್ ನಲ್ಲಿ ಏಂಥಹ ಉಪಕರಣಗಳಿರುತ್ತವೆ? (Networking devices & Cisco)

ಇಂಟರ್ನೆಟ್ ನಲ್ಲಿ  ಸಂಪರ್ಕ ಕಲ್ಪಿಸಿಕೊಡುವ ಉಪಕರಣಗಳು (networking devices) ಇರುತ್ತವೆ. ಇದಕ್ಕೆ ಮಾರ್ಗಸೂಚಕ (router) ಎಂದು ಹೆಸರು. ಪ್ರಪಂಚದೆಲ್ಲೆಡೆ ಲಕ್ಷಾಂತರ ಮಾರ್ಗಸೂಚಕಗಳನ್ನು ಅಳವಡಿಸಲಾಗುತ್ತದೆ. ಒಂದು ಮಾರ್ಗಸೂಚಕದಿಂದ ಹತ್ತಿರದ ಮತ್ತೊಂದು ಮಾರ್ಗಸೂಚಕಕ್ಕೆ ತಂತಿ (link)ಗಳ ಮೂಲಕ ಮಾಹಿತಿ ರವಾನೆಯಾಗುತ್ತದೆ. ಹೀಗೆ ಪ್ರಪಂಚದ ಮಾರ್ಗಸೂಚಕಗಳು ಮತ್ತು ಅವುಗಳ ನಡುವಿನ ತಂತಿಗಳು ಒಟ್ಟಾರೆ ಸೇರಿ ಇಂಟರ್ನೆಟ್ ಆಗುತ್ತದೆ.

ಈ ಮಾರ್ಗಸೂಚಕಗಳೂ ಒಂದು ರೀತಿ ಕಂಪ್ಯೂಟರ್ ಗಳೇ. ಇವು ತಮ್ಮದೇ ಆದ ’ಸಂಪರ್ಕ ಕಲ್ಪಿಸಿಕೊಡುವ’ ಸಾಫ್ಟವೇರ್ ಮತ್ತು ಹಾರ್ಡ್ವೇರ್ (networking software & hardware) ಗಳನ್ನು ಹೊಂದಿರುತ್ತವೆ.

ಸಿಸ್ಕೋ (cisco) ಎಂಬ ಸಂಸ್ಥೆ ಇಂಟರ್ನೆಟ್ ತಂತ್ರಜ್ನಾನದ ನಿಟ್ಟಿನ್ನಲ್ಲಿ ಮಹತ್ತರ ಸಾಧನೆಯನ್ನು ಮಾಡಿದೆ. ಇಂದು ಪ್ರಪಂಚದ ಇಂಟರ್ನೆಟ್ ನಲ್ಲಿ ಶೇಖಡ ೯೦ ರಷ್ಟು ಉಪಕರಣಗಳು ಸಿಸ್ಕೋ ಸಂಸ್ಥೆಯದ್ದು ! ಸಿಸ್ಕೋ ಸಂಸ್ಥೆಯ ಮುಖ್ಯಶಾಖೆ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿದೆ. ಎರಡನೆಯ ಮುಖ್ಯಶಾಖೆ ಬೆಂಗಳೂರಿನಲ್ಲಿದೆ.

ಆನ್-ಲೈನ್ ಆಗುವುದು ಎಂದರೇನು? (Going Online)

ಒಂದು ಸಂಸ್ಥೆ ಅಥವಾ ಒಬ್ಬ ವ್ಯಕ್ತಿ ಆನ್-ಲೈನ್ ಆಗಿದ್ದಾರೆ ಎಂದರೆ  ಆ ಸಂಸ್ಥೆಯ ಸರ್ವರ್ ಗಳು ಅಥವಾ ವ್ಯಕ್ತಿಯ ಕಂಪ್ಯೂಟರ್ ಗಳೆಲ್ಲಾ  ಇಂಟರ್ನೆಟ್ ಗೆ ಜೋಡಿಸಲ್ಪಟ್ಟಿದೆ ಎಂದರ್ಥ. ಒಂದು ಸಂಸ್ಥೆ ಆನ್-ಲೈನ್ ಆದರೆ ಪ್ರಪಂಚದ ಯಾವುದೇ ಮೂಲೆಯಿಂದಲೂ ಅದರ ಸರ್ವರ್ ಗಳಲ್ಲಿರುವ ಮಾಹಿತಿಯನ್ನು ಪಡೆಯಬಹುದು. ಕಂಪ್ಯೂಟರ್ ಅಥವಾ ಸರ್ವರ್ ಗಳನ್ನು ಇಂಟರ್ನೆಟ್ ಗೆ ಜೋಡಿಸಲು ಸಂಪರ್ಕ ಸೇವೆಯನ್ನು ಒದಗಿಸುವ ಸಂಸ್ಥೆಗಳಾದ ಏರ್ಟೆಲ್, ಬಿ ಎಸ್ ಎನ್ ಎಲ್, ಟಾಟಾ, ರೆಲಾಯನ್ಸ್ ಇತ್ಯಾದಿ ಸಂಸ್ಥೆಗಳಿಂದ ಇಂಟರ್ನೆಟ್ ಸೇವೆಯನ್ನು ಪಡೆಯಬೇಕು.

 

ಆನ್-ಲೈನ್ ಟಿಕೆಟ್ ಖರೀದಿಸಲು ಸಾರಿಗೆ ಸಂಸ್ಥೆಯ ಸರ್ವರ್ ಒಂದನ್ನು ಸಂಪರ್ಕಿಸುವುದು ಹೇಗೆ?

ಇಂಟರ್ನೆಟ್ ಗೆ ಜೋಡಿಸಿದ ಪ್ರತಿಯೊಂದು ಕಂಪ್ಯೂಟರ್ / ಸರ್ವರ್ ಗೂ ತನ್ನದೇ ಆದ ಒಂದು ಸಂಖ್ಯೆ ಇರುತ್ತದೆ (ದೂರವಾಣಿ ಸಂಖ್ಯೆಯ ಹಾಗೆ). 

ಉದಾಹರಣೆಗೆ: ನಮ್ಮ ಪ್ರವಾಸಕ್ಕಾಗಿ ಟಿಕೆಟನ್ನು ಕಾದಿರಿಸಲು ಸಾರಿಗೆ ಸಂಸ್ಥೆಯ ಸರ್ವರ್ ನ ಸಂಖ್ಯೆಯನ್ನು ನಮ್ಮ ಕಂಪ್ಯೂಟರ್ ಗೆ  ಕೊಟ್ಟರೆ ಇಂಟರ್ನೆಟ್ ನ ಮೂಲಕ ಈ ಕಂಪ್ಯೂಟರ್ ಆ ಸರ್ವರ್ ಅನ್ನು ಸಂಪರ್ಕಿಸುತ್ತದೆ. ಲಭ್ಯವಿರುವ ಟಿಕೆಟ್ ಗಳ ವಿವರಗಳನ್ನು ಸರ್ವರ್ ಇಂಟರ್ನೆಟ್ ನ ಮೂಲಕ ನಮ್ಮ ಕಂಪ್ಯೂಟರ್ ಗೆ ನೀಡುತ್ತದೆ. ನಮಗೆ ಬೇಕಾದ ಟಿಕೆಟ್ ಅನ್ನು ಖರೀದಿಸಲು ನಮ್ಮ ಬ್ಯಾಂಕ್ ನ ಖಾತೆಯ ವಿವರಗಳನ್ನು ಸಾರಿಗೆ ಸಂಸ್ಥೆಯ ಸರ್ವರ್ ಗೆ ಇಂಟರ್ನೆಟ್ ನ ಮೂಲಕ ನೀಡಬೇಕು. ಸಾರಿಗೆ ಸಂಸ್ಥೆಯ ಸರ್ವರ್ ಇಂಟರ್ನೆಟ್ ನ ಮೂಲಕ ನಮ್ಮ ಬ್ಯಾಂಕ್ ನ ಸರ್ವರ್ ಅನ್ನು ಸಂಪರ್ಕಿಸಿ ನಮ್ಮ ಖಾತೆಯಿಂದ ಟಿಕೆಟ್ ದರವನ್ನು ವಜಾ ಮಾಡುವಂತೆ ಹೇಳುತ್ತದೆ. ದಿನದ ಅಂತ್ಯದಲ್ಲಿ ನಮ್ಮ ಬ್ಯಾಂಕ್ ಸಾರಿಗೆ ಸಂಸ್ಥೆಗೆ ಹಣವನ್ನು ಕಳುಹಿಸುತ್ತದೆ. ಇದೇ ರೀತಿಯಲ್ಲೇ ಅನೇಕ ಹಣಕಾಸು ವ್ಯವಹಾರಗಳಾದ - ನೀರಿನ ಬಿಲ್ ಪಾವತಿ, ಒಂದು ಬ್ಯಾಂಕ್ ಇಂದ ಮತ್ತೊಂದು ಬ್ಯಾಂಕ್ ಗೆ ಹಣ ಪಾವತಿ, ಷೇರು ಖರೀದಿ ಮತ್ತು ಮಾರಾಟ, ಸಾಲ ಮರುಪಾವತಿ - ಮುಂತಾದವುಗಳು ಕುಳಿತಲ್ಲಿಂದಲೇ ನಡೆಯುತ್ತವೆ !

 

ನೀವು ಈ ಸಾಲನ್ನು ಓದುತ್ತಿರುವಿರಿ ಎಂದರೆ ನಿಮ್ಮ ತಾಳ್ಮೆ ಮೆಚ್ಚುವಂಥದ್ದು :-)

ಧನ್ಯವಾದಗಳು. 

Rating
No votes yet