ಝೆನ್ ೨: ಶೌನ್ ಮತ್ತು ಅವನ ತಾಯಿ
ಬರಹ
ಶೌನ್ ಸೊತೊ ಝೆನ್ ಪಂಥದ ಒಬ್ಬ ಗುರು. ಅವನಿನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಅವನ ತಂದೆ ತೀರಿಹೋದ. ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಶೌನ್‌ನ ಪಾಲಿಗೆ ಬಂತು.
ಶೌನ್ ಧ್ಯಾನಕ್ಕೆ ಹೋದಾಗಲೆಲ್ಲ ತಾಯಿಯನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದ. ಅವನ ಅಲೆದಾಟದಲ್ಲಿ ಯಾವ ಮಠದಲ್ಲೂ ತಂಗಲು ಆಗುತ್ತಿರಲಿಲ್ಲ. ಹೆಂಗಸರನ್ನು ಮಠದೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅದಕ್ಕೇ ಒಂದು ಪುಟ್ಟ ಮನೆಯನ್ನು ಕಟ್ಟಿ ತಾಯಿಯೊಡನೆ ಇರತೊಡಗಿದ ಶೌನ್. ಬುದ್ಧನ ಸೂತ್ರಗಳನ್ನು ಬರೆದು, ಭಕ್ತರಿಗೆ ಕೊಟ್ಟು, ಅವರಿಂದ ಪಡೆದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದ.
ಸಂನ್ಯಾಸಿ ಮೀನು ತಿನ್ನುವಂತಿರಲಿಲ್ಲ. ಆದರೆ ಅಮ್ಮನಿಗೆ ಮೀನು ಎಂದರೆ ಆಸೆ. ಶೌನ್ ತಾಯಿಗೆಂದು ಮೀನು ತರುತ್ತಿದ್ದ. ಅದನ್ನು ಕಂಡು ಜನ ಹಾಸ್ಯಮಾಡುತ್ತಿದ್ದರು. ಶೌನ್ ಅದನ್ನು ಲೆಕ್ಕಕ್ಕೇ ಇಡುತ್ತಿರಲಿಲ್ಲ.
ತನ್ನ ಮಗನನ್ನು ಜನ ಲೇವಡಿ ಮಾಡುವುದು ಕಂಡು ತಾಯಿಗೆ ಬೇಸರವಾಯಿತು. “ನಾನೂ ಸಂನ್ಯಾಸಿನಿ ಆಗುತ್ತೇನೆ. ಸಸ್ಯಾಹಾರವನ್ನೇ ತೆಗೆದುಕೊಳ್ಳುತ್ತೇನೆ” ಎಂದಳು. ಸರಿ. ತಾಯಿ ಮಗ ಇಬ್ಬರೂ ಒಟ್ಟಿಗೇ ಅಧ್ಯಯನ ಮಾಡತೊಡಗಿದರು.
ಶೌನ್‌ಗೆ ಸಂಗೀತವೆಂದರೆ ಪ್ರಾಣ. ಬಹಳ ಚೆನ್ನಾಗಿ ವಾದ್ಯಗಳನ್ನು ನುಡಿಸುತ್ತಿದ್ದ. ಕೆಲವೊಮ್ಮೆ ಅವನ ತಾಯಿ ಕೂಡ ದನಿಗೂಡಿಸುತ್ತಿದ್ದಳು. ಹುಣ್ಣಿಮೆಯ ರಾತ್ರಿಗಳಂದು ಇಬ್ಬರೂ ಹಾಡುತ್ತಾ, ವಾದ್ಯ ನುಡಿಸುತ್ತಾ ಇದ್ದರು.
ಅಂಥ ಒಂದು ರಾತ್ರಿ ಅವರ ಮನೆಯ ಮುಂದೆ ಹೋಗುತ್ತಿದ್ದ ಹೆಂಗಸೊಬ್ಬಳು ಇವರ ಸಂಗೀತ ಕೇಳಿ ಮರುಳಾದಳು. ತನ್ನ ಮನೆಗೆ ಬಂದು ಹಾಡುವಂತೆ ಶೌನ್‌ನನ್ನು ಬೇಡಿಕೊಂಡಳು. ಅವನೂ ಒಪ್ಪಿದ.
ಕೆಲವು ದಿನಗಳಾದಮೇಲೆ ಆ ಹೆಂಗಸು ರಸ್ತೆಯಲ್ಲಿ ಎದುರಾದಳು. ಅವಳು ತೋರಿಸಿದ ಪ್ರೀತಿ, ವಿಶ್ವಾಸ, ಆತಿಥ್ಯಗಳಿಗೆ ಹೃದಯತುಂಬಿ ಕೃತಜ್ಞತೆ ಹೇಳಿದ ಶೌನ್. ಅದನ್ನ ಕಂಡು ಬೀದಿಯಲ್ಲಿ ಓಡಾಡುವ ಜನ ನಕ್ಕರು. ಆ ಹೆಂಗಸೊಬ್ಬ ವೇಶ್ಯೆ. ಅವಳಿಗೆ ಕೃತಜ್ಞತೆ ಹೇಳುವುದೇ ಎಂದು ಆಡಿಕೊಂಡರು.
ಒಮ್ಮೆ ಶೌನ್ ದೂರದ ಊರಿಗೆ ಉಪನ್ಯಾಸ ನೀಡಲು ಹೋಗಿದ್ದ. ಹಿಂದಿರುಗುವುದಕ್ಕೆ ಕೆಲವು ತಿಂಗಳೇ ಬೇಕಾದವು. ಅವನು ವಾಪಸ್ಸು ಬರುವ ಹೊತ್ತಿಗೆ ತಾಯಿ ತೀರಿಕೊಂಡಿದ್ದಳು. ಸುದ್ದಿ ತಿಳಿಸುವ ಬಗೆ ತಿಳಿಯದೆ ಅವನ ಗೆಳೆಯರು ಅಂತ್ಯಸಂಸ್ಕಾರಕ್ಕೆ ಸಿದ್ಧಮಾಡಿದ್ದರು. ಶವವನ್ನು ಆಗಲೇ ಪೆಟ್ಟಿಗೆಯಲ್ಲಿ ಇಟ್ಟಿದ್ದರು.
ಶೌನ್ ಸೀದಾ ಶವಪೆಟ್ಟಿಗೆಯ ಹತ್ತಿರಕ್ಕೆ ಹೋಗಿ, ಕೈಯಲ್ಲಿದ್ದ ದಂಡದಿಂದ ಒಮ್ಮೆ ಅದನ್ನು ತಟ್ಟಿ, “ಅಮ್ಮಾ ನಾನು ಬಂದಿದ್ದೇನೆ” ಎಂದ.
“ತುಂಬಾ ಸಂತೋಷವಪ್ಪಾ” ಎಂದಳು ತಾಯಿ.
“ನನಗೂ ಅಷ್ಟೇ ಅಮ್ಮಾ” ಎಂದ ಮಗ. ಸೇರಿದ್ದ ಜನರತ್ತ ತಿರುಗಿ “ಅಂತ್ಯಕ್ರಿಯೆಗಳು ಮುಗಿದವು, ನೀವಿನ್ನು ಮಣ್ಣುಮಾಡಬಹುದು” ಅಂದ.
ಶೌನ್‌ಗೆ ವಯಸ್ಸಾಯಿತು. ಕೊನೆಗಾಲ ಸಮೀಪಿಸಿತು ಎಂದವನಿಗೆ ತಿಳಿಯಿತು. ಅಂದು ಬೆಳಗ್ಗೆ ತನ್ನ ಶಿಷ್ಯರನ್ನೆಲ್ಲ ಕರೆದ. “ಇವತ್ತು ಮಧ್ಯಾಹ್ನ ನಾನು ಹೋಗುತ್ತೇನೆ” ಎಂದ. ಒಂದು ಪದ್ಯ ಬರೆದ.
ವರ್ಷ ಐವತ್ತಾರು ಹೋದವು
ಲೋಕದಲ್ಲಿ ನನ್ನ ದಾರಿ ನಾನೇ ಮಾಡಿಕೊಂಡು ಬದುಕಿದೆ
ಮಳೆ ನಿಂತಿದೆ ಮೋಡ ಕರಗಿದೆ
ನೀಲಿಯಾಕಾಶದಲ್ಲಿ ಹೊಳೆದಿದ್ದಾನೆ ಚಂದ್ರ.
ಶಿಷ್ಯರು ಅವನ ಸುತ್ತ ಸೇರಿ ಸೂತ್ರಗಳನ್ನು ಪಠಿಸತೊಡಗಿದರು. ಅವರು ಹಾಗೆ ಸೂತ್ರಗಳನ್ನು ಹೇಳುತ್ತಲಿದ್ದಾಗಲೇ ಶೌನ್ ಸತ್ತುಹೋದ.