ಸಾವಿರ ರಾಮರು: ರಾಮಾನುಜನ್ ಸಂಗ್ರಹಿಸಿದ ಕಥೆ

ಸಾವಿರ ರಾಮರು: ರಾಮಾನುಜನ್ ಸಂಗ್ರಹಿಸಿದ ಕಥೆ

ಇದು ಏ.ಕೆ. ರಾಮಾನುಜನ್ ಅವರು ಸಂಗ್ರಹಿಸಿದ್ದ ಒಂದು ಜಾನಪದ ಕಥೆ. ರಾಮ ವನವಾಸವನ್ನು ಮುಗಿಸಿಕೊಂಡು ಬಂದ. ಒಂದು ದಿನ ಆಸ್ಥಾನದಲ್ಲಿ ಕುಳಿತಿದ್ದ. ಸಭೆ ನಡೆದಿತ್ತು. ರಾಮನ ಕೈಯಲ್ಲಿದ್ದ ಮುದ್ರೆಯುಂಗರ ಜಾರಿ ನೆಲಕ್ಕೆ ಬಿದ್ದಿತು. ಉಂಗುರ ಬಿದ್ದಲ್ಲಿ ರಂಧ್ರವಾಗಿ, ಉಂಗುರ ಅದರಲ್ಲಿ ಜಾರಿ ಭೂಮಿಯೊಳಕ್ಕೆ ಹೋಗಿ ಬಿಟ್ಟಿತು.

ರಾಮ ಆ ಉಂಗುರವನ್ನು ಹುಡುಕಿಕೊಂಡು ಬರಲು ಹನುಮಂತನಿಗೆ ಹೇಳಿದ. ಹನುಮಂತ ಸೂಕ್ಷ್ಮ ರೂಪವನ್ನು ತಳೆದು ಭೂಮಿಯೊಳಕ್ಕೆ ಇಳಿದ. ಉಂಗುರ ಹುಡುಕುತ್ತಾ ಪಾತಾಳ
ಲೋಕಕ್ಕೆ ತಲುಪಿದ. ಅಲ್ಲಿನ ಜನ ಅವನ ಮೇಲೆ ಬಿದ್ದು ಕಾದಾಡಲು ತೊಡಗಿದರು.ಇತ್ತ ರಾಮನ ಸಭೆಗೆ ವಸಿಷ್ಠ, ಇಂದ್ರ ಮೊದಲಾದವರೆಲ್ಲ ಬಂದರು. 'ರಾಮ, ನಿನ್ನ ಅವತಾರದ ಅವಧಿ ಮುಗಿದಿದೆ, ಇನ್ನು ದೇವಲೋಕಕ್ಕೆ ವಾಪಸ್ಸು ಬಾ' ಎಂದು ಕರೆದರು. ರಾಮ ಹೊರಟುಬಿಟ್ಟ. ಇತ್ತ ಹನುಮಂತನನ್ನು ಪಾತಾಳದ ಅರಸನಲ್ಲಿಗೆ ಒಯ್ದರು. 'ಯಾರು ನೀನು?' ಅರಸ ಕೇಳಿದ. 'ನಾನು ಹನುಮಂತ, ರಾಮನ ಬಂಟ, ಅವನ ಉಂಗುರ ಬಿದ್ದು ಹೋಯಿತು, ಹುಡುಕಿ ಬಂದಿದ್ದೇನೆ' ಎಂದ ಹನುಮಂತ. ಪಾತಾಳದ ಅರಸ ಅಲ್ಲಿದ್ದ ಒಂದು ತಟ್ಟೆಯನ್ನು ತೋರಿಸಿ 'ಅಗೋ, ಅಲ್ಲಿರುವ ತಟ್ಟೆಯಲ್ಲಿ ಹಲವು ಉಂಗುರಗಳಿವೆ, ನಿನ್ನ ರಾಮನ ಉಂಗುರ ತೆಗೆದುಕೋ' ಎಂದ.
ಹನುಮಂತ ಹೋಗಿ ನೋಡಿದರೆ ಅಲ್ಲಿ ಸಾವಿರಾರು ರಾಮಮುದ್ರಿಕೆಗಳಿದ್ದವು. ತಬ್ಬಿಬ್ಬಾಯಿತು.

ಆಗ ಪಾತಾಳದ ಅರಸ ಹೇಳಿದ: 'ಲೋಕದಲ್ಲಿ ಒಬ್ಬ ರಾಮ ಅಲ್ಲ, ಸಾವಿರಾರು ರಾಮರು ಆಗಿಹೋಗಿದ್ದಾರೆ. ಅವರ ಅವತಾರ ಮುಗಿದ ಮೇಲೆ ಅವರ ಮುದ್ರೆಯುಂಗುರಗಳು ಕೈಯಿಂದ ಜಾರಿ ಬಿದ್ದು ಇಲ್ಲಿ ಬಂದು ಶೇಖರವಾಗುತ್ತವೆ. ನಿನ್ನ ರಾಮನ ಉಂಗುರ ಹುಡುಕಿ ತೆಗೆದುಕೊಂಡು ಹೋದರೂ ನೀನು ಅಲ್ಲಿಗೆ ಹೋಗುವ ಹೊತ್ತಿಗೆ ರಾಮ ಇರುವುದಿಲ್ಲ.' ಹನುಮಂತ ಉಂಗುರವನ್ನು ಕಷ್ಟಪಟ್ಟು ಹುಡುಕಿ ತೆಗೆದುಕೊಂಡು ಬಂದ. ಆದರೆ ರಾಮ ಇರಲಿಲ್ಲ.

ಭಾರತದ ಜನ ರಾಮನನ್ನು ಹೇಗೆ ಕಲ್ಪಿಸಿಕೊಂಡಿದ್ದಾರೆ ಅನ್ನುವುದನ್ನು ಹೇಳುವ ಅದ್ಭುತವಾದ ಕಥೆಯಲ್ಲವೇ ಇದು!

Rating
No votes yet

Comments