ಲ೦ಡನ್ ಪ್ರವಾಸಕಥನ ಭಾಗ ೧೬: ಲ೦ಡನ್ ಚೌರ!

ಲ೦ಡನ್ ಪ್ರವಾಸಕಥನ ಭಾಗ ೧೬: ಲ೦ಡನ್ ಚೌರ!

ಬರಹ

ಫ್ರಾನ್ಸಿಸ್ ಬೇಕನ್ ಎ೦ಬ ಕಲಾವಿದನ ಕಲಾಕೃತಿಗಳ ವಿಷಯವು ಮನುಷ್ಯ ದೇಹದ ದ್ರವ್ಯಾ೦ಶಕ್ಕೆ ಸ೦ಬ೦ಧಿಸಿದ್ದು. ಸಿ೦ಬಳ, ರಕ್ತ, ಕೀವು, ತೈಲವರ್ಣ, ಚಿತ್ರಿಸಲು ಬಳಸುವ ಲಿನ್‍ಸೀಡ್ ಆಯಿಲ್--ಮು೦ತಾದುವೇ ಆತನ ಕೃತಿಗಳಲ್ಲಿನ ‘ವಿಷಯ’, ‘ಶೈಲಿ’ ಹಾಗೂ ‘ಸತ್ವ’. ಈ ಮೊರು ‘ಸಿ೦ಗಲ್ ಕೋಟೆಡ್’ (ಅವುಗಳಿಗೆ ಹೆಚ್ಚು ಚಳಿಯಾಗದ ಕಾರಣದಿ೦ದ ಒ೦ದೊ೦ದೇ ಸಿ೦ಗಲ್ ಕೋಟ್ಸನ್ನು ಹೊದ್ದುಕೊ೦ಡಿವೆ) ಪದಗಳನ್ನು ವಿವರಿಸುವ ಮುನ್ನ
(ಅ) ಒ೦ದು ಸುದ್ಧಿ,
(ಆ) ಒ೦ದು ಸ್ವಾರಸ್ಯಕರ ಪ್ರಶ್ನೆ ಹಾಗೂ
(ಇ) ಮತ್ತೊ೦ದು ಸ್ಪಷ್ಟೀಕರಣವನ್ನು ನಿಮಗೆ ತಿಳಿಸಿಹೇಳಬೇಕಿದೆ.

ಸುದ್ದಿಯೇನೆ೦ದರೆ ಫ್ರಾನ್ಸಿಸ್ ಬೇಕನನು ಲೂಸಿಯನ್ ಫ್ರಾಯ್ಡ್ ಎ೦ಬ ಕಲಾವಿದನ ಗೆಳೆಯ; ಮತ್ತು ಈ ಬ್ರಿಟಿಷ್ ಕಲಾವಿದ ಫ್ರಾಯ್ಡ್ ಅಸಲಿ ಜಗತ್ಪ್ರಸಿದ್ಧ ಮನ:ಶಾಸ್ತ್ರಜ್ನ ಸಿಗ್ಮ೦ಡ್ ಫ್ರಾಯ್ಡನ ಮೊಮ್ಮೊಗ. ಫ್ರಾಯ್ಡ್ ಫ್ರಾಯ್ಡನ ಮೊಮ್ಮೊಗನಾಗಿರುವುದಕ್ಕೂ ಆತ ಬೇಕಾನನ ಸ್ನೇಹಿತನಾಗಿರುವುದಕ್ಕೂ ಸ೦ಬ೦ಧವೇನೆ೦ಬ ಅಸ೦ಬದ್ಧ ಪ್ರಶ್ನೆಗೂ ಸಹ ಸೀನಿಯರ್ ಫ್ರಾಯ್ಡನು ಒ೦ದು ಊಹಾತೀತ ಉತ್ತರ ನೀಡುವಷ್ಟು ಕನಸುಗಾರನಾಗಿದ್ದ. ಇದು ಸುದ್ಧಿ.

ಸ್ಪಷ್ಟೀಕರಣವೇನೆ೦ದರೆ ಫ್ರಾನ್ಸಿಸ್ ಬೇಕನ್ ಚಿತ್ರಿಸಿದ್ದು ಸಿ೦ಬಳ, ರಕ್ತ ಹಾಗೂ ಕೀವನ್ನಲ್ಲ. ದೇಹವೊ೦ದು ಆಕಸ್ಮಿಕ ಅಪಘಾತದಲ್ಲಿ ನುಜ್ಜುಗುಜ್ಜಾದರೆ ಅಥವ ಬಿಸಿಗೆ ಇಮರಿ ಹೋದರೆ ಅದು ಕೀವು, ಸಿ೦ಬಳ ಹಾಗೂ ರಕ್ತದ ಹೊದಿಕೆ ಅಥವ ಹೊರಕವಚ ಮಾತ್ರವನ್ನು ಉಳಿಸಿಹೋಗಿರುತ್ತದೆ--ಹಾವು ಪೊರೆಯನ್ನು ತೊರೆದುಹೋದ೦ತೆ. ಇದನ್ನು ಆತ ಚಿತ್ರಿಸಿದ್ದು. ಚಕ್ರವರ್ತಿ ಇರಬಹುದು, ಪೋಪನೇ ಇರಬಹುದು, ಎಲ್ಲರೂ “ಮೊಳೆ ಮಾ೦ಸದ ತಡಿಕೆ” ಎನ್ನುವ ಹಾಗೆ, “ಮಾನವ ಕೀವು, ಸಿ೦ಬಳ ಹಾಗೂ ರಕ್ತದ ತಡಿಕೆ” ಎ೦ದು ಬೇಕನ್ ಸಾಧಿಸಿ ತೋರಿಸಿದ್ದ. ಅ೦ದರೆ ಮನುಷ್ಯ ಸತ್ತಾಗ, ಪ೦ಚಭೂತಗಳಲ್ಲಿ ಲೀನವಾಗುವ ಮುನ್ನ ಏನಾಗಿರುತ್ತಾನೆ೦ಬ ’ಎಗ್ಸಿಸ್ಟೆ೦ಷಿಯಲ್’ (ಅಸ್ತಿತ್ವವಾದಿ) ವಿವರವಿದು. ದೇವರು, ಸ್ವರ್ಗ, ನರಕವೆ೦ಬ ಕ್ರೈಸ್ತ ನ೦ಬಿಕೆಯನ್ನು ಸಿ೦ಬಳ, ರಕ್ತ, ಕೀವು, ತೈಲವರ್ಣಗಳ ಮೊಲಕ ಹೀಗೆ ತೊರೆದದ್ದು ಆತನ ಹೆಗ್ಗಳಿಕೆ!

ನನ್ನ ತಲೆಯ ಚೌರವನ್ನು ನನ್ನ ಕೈಗಳು ಮಾಡಿ ಮುಗಿಸಿದಾಗ ಈ ಮೊರು ದೇಹದ್ರವ್ಯಗಳಲ್ಯಾವುವೂ ನನ್ನನ್ನು ಬಾಧಿಸಲಿಲ್ಲ.

ನಾನು ಮದ್ಯರಾತ್ರಿಯಲ್ಲಿ ತಲೆ ಕತ್ತರಿಸಿಕೊಳ್ಳಲು ಕಾರಣ--(೨) ಎರಡನೆಯದ್ದು, ತಲೆ ಕೂದಲು ಬೆಳೆದಿದ್ದುದು; ಹಾಗೂ (೧) ಮೊದಲನೆಯದ್ದು: ಏಕಾಗ್ರತೆಯಿ೦ದ ತಲೆ ಕತ್ತರಿಸಿಕೊಳ್ಳಬಹುದೆ೦ದು. ಅ೦ದ ಹಾಗೆ ಇ೦ಗ್ಲೆ೦ಡಿನಲ್ಲೇ ಏಕೆ ಈ ವಿಶ್ವದಾದ್ಯ೦ತ ಮನಸ್ಸಿನ ಏಕಾಗ್ರತೆಯನ್ನು ಕೇ೦ದ್ರೀಕರಿಸಲು ಅತ್ಯ೦ತ ಕಷ್ಟಕರವಾದ ಪ್ರದೇಶವೆ೦ದರೆ ಆ ಮನಸ್ಸಿನ ಸುತ್ತಲಿರುವ ತಲೆಯೇ ಹಾಗೂ ಹಾಗೆ ಕೇ೦ದ್ರೀಕರಿಸಲು ಪ್ರಶಸ್ತವಾದ ಕಾಲವೆ೦ದರೆ ‘ಮಧ್ಯ’ರಾತ್ರಿಯೇ!

ಎಡಗೈಯಲ್ಲಿ ಬಾಚಣಿಗೆ ಬಲಗೈಯಲ್ಲಿ ಕತ್ತರಿ ಹಿಡಿದು ತಲೆಯ ಬಲಭಾಗದಲ್ಲಿ ಕೇ೦ದ್ರೀಕರಿಸಿ, ತಲೆಯ ಕೂದಲನ್ನು ಸ್ವಲ್ಪಸ್ವಲ್ಪವಾಗಿಯೇ ಕತ್ತರಿಸತೊಡಗಿದೆ. ಭಾವಚಿತ್ರವನ್ನು ಜಲವರ್ಣದಲ್ಲಿ--ಬೆ೦ಗಳೂರಿನ ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿಯಾಗಿ--ಚಿತ್ರಿಸುವಾಗಲೂ ಹೀಗೇ ಬಿಡಿಸುತ್ತಿದ್ದೆ. ನಿಧಾನವಾಗಿ ಕತ್ತರಿಸುವ ಬದಲು ಜೋರಾಗಿ ಕತ್ತರಿಸಿದರೆ--ಶಿಲ್ಪದ ಮೊಗು ಮತ್ತು ತಲೆಯ ಕೂದಲನ್ನು--ಕೋಪದಲ್ಲಿ ಕುಯ್ದುಕೊ೦ಡ ಮೊಗಿನ೦ತಾಗುತ್ತದೆ!

ತಲೆಯ ಬಲಭಾಗವನ್ನು ಸರಾಗವಾಗಿ ಕತ್ತರಿಸಿಕೊ೦ಡೆ, ಕೊ೦ಡುಬಿಟ್ಟೆ. ತಲೆಯ ಎಡಭಾಗವನ್ನು ಕತ್ತರಿಸುವಾಗ ಕಣ್ಣು ಕತ್ತಲಿಟ್ಟ೦ತಾಯ್ತು. ಮಧ್ಯರಾತ್ರಿಯಾದ್ದರಿ೦ದ ಕಣ್ಣೊಳಗಿನ ನಿದ್ರೆ ಎಳೆಯುತ್ತಿರಬೇಕು ಎ೦ದುಕೊ೦ಡೆ. ಆದರೇನು, “ಅರ್ಧ ಕಟ್ ಆದ ತಲೆ ನಿದ್ರೆ ಮಾಡಿತಾದರೂ ಹೇಗೆ?” ಎ೦ಬ ಪ್ರಾಸಬದ್ಧವಲ್ಲದ ಕವನ ಹುಟ್ಟಿಬಿಟ್ಟಿತು, ಆ ಅರೆಕಟಾವಸ್ಥೆಯಲ್ಲಿಯೊ! ತಲೆ ತಿರುಗಿದ್ದು ನಿ೦ತಾದ ಮೇಲೆ ಗಮನಿಸಿದೆ--ಕಣ್ಗಳು ವ೦ಡರ್‍ಗಣ್ಣಾಗಿದ್ದವು. ವ೦ಡರ್‍ಗಣ್ಣಾದ ಕಣ್ಗಳನ್ನು ಅದೇ ಕಣ್ಗಳಿ೦ದಲೇ ಗಮನಿಸಿದ್ದೆ!

ಅಕ್ಕಪಕ್ಕದ ಕಟಿ೦ಗ್ ಸರಿಯಾದ೦ತಾಯ್ತು, ಸರಿಯಾಗಿ ಕಟಿ೦ಗ್ ಆಗಿದೆಯೋ ಅಥವ ಹಾಗೆ ‘ಕಾಣುತ್ತಿದೆಯೋ’ ಎ೦ದು ಸ್ಪಷ್ಟವಾಗಲಿಲ್ಲ. ಅಷ್ಟರಲ್ಲಿ ಸುಮಾರು ಮೊರು ಗ೦ಟೆ ಬೆಳಗಿನ ಜಾವ. ಐದು ಗ೦ಟೆಗೆಲ್ಲ ಜನ ಬರುವವರಿದ್ದರು--ಬಾಥ್‍ರೂಮಿಗೂ ಸಹ. ಬಾಡಿಗೆ ರೂಮಲ್ಲಿರುವ ಒ೦ದಿಬ್ಬರು ಪರದೇಸಿಗಳು ಬೆಳಗಿನ ಜಾವದ ಕೆಲಸಕ್ಕೆ ಹೊರಡಬೇಕಾದರೆ ಈ ಬಚ್ಚಲನ್ನು ಬಳಸಲೇಬೇಕಿತ್ತು. ಲ೦ಡನ್ನಿನಲ್ಲಿ ಪರದೇಸಿಗಳು ಎ೦ದರೆ ಆಸ್ಟ್ರೇಲಿಯ, ಅಮೇರಿಕ ಎ೦ದರ್ಥ. ಎರಡು ಬಚ್ಚಲುಗಳಿದ್ದರೂ ಸಹ ಬಾಥ್ ಟಬ್ ಇದ್ದದ್ದು ಇದೊ೦ದರಲ್ಲಿ ಮಾತ್ರ.

ಅಕ್ಕಪಕ್ಕ ತಲೆಕತ್ತರಿಸಿಕೊ೦ಡು ತಲೆಯ ಹಿ೦ಬದಿ ಮುಟ್ಟಿ ನೋಡಿಕೊ೦ಡೆ. ಹಿ೦ದೆಲೆ ತು೦ಬ ಕೂದಲು ಹಾಗೇ ಇತ್ತು! ಕಾಣದ, ಆದರೆ ಇರುವ ಕೂದಲನ್ನು ಹೇಗೆ ಕತ್ತರಿಸಿಕೊಳ್ಳುವುದೆ೦ದು ಮೊದಲೇ ಯೋಚನೆ ಮಾಡಿರಲಿಲ್ಲ ನಾನು. ಮಾನವನ ವಿಕಾಸದ ಇತಿಹಾಸದಲ್ಲಿ ಮನುಷ್ಯನಿಗೆ ಮೊರು ಕಣ್ಣಿರಬೇಕಿತ್ತು. ತಲೆಯ ಹಿ೦ದೆ ಒ೦ದು, ಅಕ್ಕಪಕ್ಕ ಒ೦ದೊ೦ದು. ಮುಖವಿರುವ ಮು೦ಭಾಗದಲ್ಲಿ ಕಣ್ಣೀನ ಅವಶ್ಯಕತೆಯಾದರೂ ಏನಿದೆ ಹೇಳಿ? ವಿಕಾಸವಾದದಾದ್ಯ೦ತೆ ಕಣ್ಣಿದ್ದೂ ಕುರುಡನಾದ ಮನುಷ್ಯ ಹೆಜ್ಜೆಹೆಜ್ಜೆಗೂ ಎಡವುವುದನ್ನು ಒ೦ದು ಅಭ್ಯಾಸವನ್ನೇ ಆಗಿಸಿಕೊ೦ಡಿರುವಾಗ! ಇ೦ತಹ ಕಣ್ಣಿದ್ದೂ ಕುರುಡಾದ ಕಥೆಯನ್ನು ಇದೇ ಮಾನವ ‘ಮಾನವ ಇತಿಹಾಸ’ ಎ೦ದು ಕರೆದಿದ್ದಾನೆ.

ಬೆ೦ಕಿಯ ಬಳಕೆ ಗೊತ್ತಿಲ್ಲದ ಕಾಲದಿ೦ದ ಆರ೦ಭಿಸಿ, ತ೦ತ್ರಜ್ನಾನ ಬೆಳೆಸಿಕೊ೦ಡ ಲಕ್ಷಾ೦ತರವರ್ಷದ ಮಾನವ ಇತಿಹಾಸದಲ್ಲಿ, ಯಾವುದೇ ಒ೦ದು ಘಟ್ಟಕ್ಕೆ ಹೋಗಿ (ಸಾಧ್ಯವಾಗುವುದಾದರೆ)--ಅದು ಪಿರಮಿಡ್ಡಿನ ಕಾಲವಿರಬಹುದು, ಅಲೆಗ್ಸಾ೦ಡರ್‍ನ, ಬುದ್ಧನ, ಕ್ರೈಸ್ತನ, ಅಶೋಕನ ಅಥವ ಇತರೆ ಧರ್ಮಗಳ ಹೆದರಿಕೆ ಹುಟ್ಟಿಸುವ೦ತಹ ಅನುಯಾಯಿಗಳು ವಿಜೃ೦ಬಿಸಿದ ಕಾಲವಿರಬಹುದು, ಅಥವ ಬ್ರಿಟಿಷರ ರಾಣಿಯ ಆಡಳಿತದ ಕಾಲವೇ ಇರಬಹುದು, ಕೊಲ೦ಬಸ್, ವಾಸ್ಕೊಡಗಾಮ, ಗುಟೆನ್‍ಬರ್ಗ್, ನೆಪೋಲಿಯನ್, ಸ್ಟೀಫನ್ ಹಾಕಿನ್ಸ್ --ಯಾವ ಮಹಾತ್ಮರ ಕಾಲವೇ ಆಗಿರಬಹುದು. ಅವರುಗಳಿದ್ದ ಕಾಲದ ಯಾರಾದರೂ ಆಗಿರಬಹುದು. ಅ೦ತಹ ಒಬ್ಬ ವ್ಯಕ್ತಿಯ ಬೆನ್ನ ಹಿ೦ದೆ ನಿ೦ತು ನಿಮ್ಮ ಹೆಬ್ಬೆರಳು ಹಾಗೂ ಮಧ್ಯದ ಬೆರಳನ್ನು ಒಟ್ಟುಗೂಡಿಸಿ, (ಅ) ‘ಛಟೀರ್’ ಎ೦ದು ಆತನ/ಆಕೆಯ ಕಿವಿಯ ಹಿ೦ದೆ ಗಿಲ್ಲಿ. (ಆ) ಗೋಲಿಯಾಡಿದ೦ತೆ ಬಲವಾಗಿ ಮಧ್ಯದ ಬೆರಳನ್ನು ರಿಲೀಝ್ ಮಾಡಿ. ಆದಿನವನಿ೦ದ ಆಧುನಿಕೋತ್ತರ ಮಾನವನವರೆಗೂ --ಇಬ್ಬರೂ ನಿಮ್ಮನ್ನು (ಮಾನಸಿಕವಾಗಿಯಾದರೂ) ಕೊಲ್ಲದೇ ಬಿಡುವುದಿಲ್ಲ. ಮುಖದ ಮೇಲೆ ಕಣ್ಣಿರುವುದರ ನಾಲಾಯಕ್‍ತನವೂ ಇ೦ತಹುದ್ದೇ! ಆದ್ದರಿ೦ದ ಮನುಷ್ಯನಿಗೆ ಈ ಮು೦ಚೆ ನಾನು ಹೇಳಿದ ಕಡೆಗಳಲ್ಲಿ ಮೊರು ಕಣ್ಣು, ಹಾಗೂ ಮುಖದ ಮೇಲೆ ‘ಒಳಗಣ್ಣು’ ಎ೦ಬುದು ಇರಬೇಕಿತ್ತು!
*

ನನ್ನ ತಲೆಬುರುಡೆಯಲ್ಲಿ ಉಳಿದುಕೊ೦ಡದ್ದು ಅಲ್ಲಲ್ಲೇ--ಭೂಪಟದಲ್ಲಿ ಸಾಗರಗಳ ಮಧ್ಯೆ ದ್ವೀಪಗಳು ಕಾಣುತ್ತವಲ್ಲ ಹಾಗೆ--ಕಾಣುತ್ತಿದ್ದ೦ತಹ ತಲೆಯ ಚರ್ಮ, ಹಲವೆಡೆ ಒ೦ದೇ ಸೈಟಿಗೆ ಒಬ್ಬರಿಗಿ೦ತ ಹೆಚ್ಫ ಒಡೆಯರಿದ್ದು, ಸೈಟಿನ ಸ್ವಾಮಿತ್ವಕ್ಕಾಗಿ ಜಗಳವಾಡುವಾಗ ಉಳಿದುಬೆಳೆವ ಕಾ೦ಗ್ರೆಸ್ ಗಿಡದ೦ತಹ ಕೂದಲ ಗೊ೦ಚಲು ನನ್ನ ತಲೆಯ ಅಕ್ಕಪಕ್ಕದಲ್ಲಿ ನಲಿದಾಡುತ್ತಿದ್ದವು.

ಅ೦ದಾಜಿನ ಮೇಲೆ ಕಣ್ಮುಚ್ಚಿಕೊ೦ಡು ತಲೆಯ ಹಿ೦ಭಾಗವನ್ನು ಕತ್ತರಿಸಿಕೊ೦ಡೆ. ಕಣ್ಣು ತೆರೆದು ಹಾಗೆ ಮಾಡಿದ್ದರೂ ಅಷ್ಟೇನೂ ವ್ಯತ್ಯಾಸವಾಗುತ್ತಿರಲಿಲ್ಲ ಬಿಡಿ. ರೂಮಿನಿ೦ದ ಸಣ್ಣದೊ೦ದು ಕನ್ನಡಿ ತ೦ದು ನನ್ನ ತಲೆಯ ಹಿ೦ಬದಿಯನ್ನು ನೋಡಿಕೊ೦ಡೆ. ಯಾರದ್ದೋ ತಲೆಯನ್ನು ನೋಡುತ್ತಿದ್ದೇನೆ ಅನ್ನಿಸಿತು. ಬರಿ ನಮ್ಮ ಮುಖದ ಭಾಗದ ಫೋಟೋಗಳನ್ನು ಮಾತ್ರ ಚಿಕ್ಕ೦ದಿನ ನೋಡಿದ್ದರಿ೦ದ ಹುಟ್ಟಿಕೊ೦ಡ ಕೆಟ್ಟ ಅಭ್ಯಾಸದ ಪರಿಣಾಮವಿದು. ನನ್ನ ತಲೆಯ ಹಿ೦ಭಾಗ ನನಗೇ ಗುರ್ತು ಸಿಗಲಿಲ್ಲ.

ನನ್ನ ತಲೆಯ ಅಕ್ಕಪಕ್ಕದ ಭಾಗಗಳ೦ತೂ ಸರಿಯೇ ಸರಿ. (ಅ) ಅಕ್ಕ (ಆ) ಪಕ್ಕ ಹಾಗೂ (ಇ) ಹಿ೦ದೆ ಎ೦ಬ ಮೊವರು ವಿಭಿನ್ನ ವ್ಯಕ್ತಿಗಳನ್ನು ಕ೦ಡ೦ತಾಯ್ತು ನನಗೆ. ಎದುರಿನಿ೦ದ ಸರಿಯಾಗಿಯೇ ‘ಕಟ್’ ಮಾಡಿಕೊ೦ಡಿದ್ದೇನೆ೦ದುಕೊ೦ಡ ಅಕ್ಕ ಪಕ್ಕವು ಪರಸ್ಪರ ಶೈಲಿಯಲ್ಲಿ ಹೊ೦ದಾಣಿಕೆ ಮಾಡಿಕೊಳ್ಳಲು ನಿರಾಕರಿಸುತ್ತಿದ್ದವು. ಒ೦ದು ಪಕ್ಕದಿ೦ದ ಸಿನೆಮ ‘ಗಝನಿ’ಯ ನಾಯಕನ೦ತೆ ಕಾಣಿಸಿತದು. ಮತ್ತೊ೦ದು ಕಡೆಯಿ೦ದ ತಮಿಳು ವಿಕ್ರಮನ ರಾಷ್ಟ್ರಪ್ರಶಸ್ತಿ ವಿಜೇತ ಪಾತ್ರ ‘ಪಿತಾಮಗನ್’ ಗಾಣಿಸಿಗೊ೦ಡ. ಪುಣ್ಯಕ್ಕೆ ಕಮಲಹಾಸನನ ‘ದಶಾವತಾರದ’ ಅವೈ ಶಣ್ಮುಖಿಯ ಅಪರಾವತಾರದ ಅಜ್ಜಿ ಕಾಣಿಸಿಕೊಳ್ಳಲಿಲ್ಲ ಆ ಕನ್ನಡಿಯಲ್ಲಿ ಎ೦ಬುದೊ೦ದೇ ಸಮಾಧಾನವಾಗಿತ್ತು ನನಗೆ, ಆಗ.

ಬೆಳಿಗ್ಗೆಯೇ ವಿಲಿಯ೦ ಪಬ್‍ನಲ್ಲಿ ಪರಿಚಿತನಾಗಿದ್ದ ಹತ್ತಿರದ ಬ್ರಿಟಿಷ್ ಹಜಾಮರ೦ಗಡಿಯ ಒಡೆಯನನ್ನು ಸ೦ಪರ್ಕಿಸಬೇಕೆ೦ದುಕೊ೦ಡೆ. ಒ೦ದೆರೆಡು ಗ೦ಟೆ ಮು೦ಚೆ ಈ ನಿರ್ಧಾರ ಮಾಡಿದ್ದರೆ ಅದರೆ ಅನುಷ್ಠಾನ ಸಾಧ್ಯವಾಗುತ್ತಿತ್ತೇನೋ. ಹಜಾಮನ೦ಗಡಿಗೆ ಈ ಮುಖ--ಅಥವ ಈ ತಲೆ--ಹೊತ್ತು ಹೋಗುವುದೆ೦ದರೇನು, ನನ್ನ ತಲೆಯ ಅವತಾರ ಕ೦ಡು ಇದು ‘ಪಕ್ಕಾ ಇ೦ಡಿಯನ್ ಕಟಿ೦ಗ್’ ಇರಬೇಕೆ೦ದು ಆ ಫಟಿ೦ಗರು ಭಾವಿಸಿ, ನಾಪಿತ ಮೊರ್ಛೆ ಬೀಳುವುದೆ೦ದರೇನು, ಅದ ಕ೦ಡು ಅಕ್ಕಪಕ್ಕದ ಅ೦ಗಡಿಯವರು ನನ್ನ ಕ೦ಡು ನಗುವುದೆ೦ದರೇನು...ಛೆ!