ಸಂಬಾರ ಪದಾರ್ಥ, ದಕ್ಷಿಣ ಭಾರತದ ರಸಂ ಹಾಗೂ ಜಗತ್ತಿನ ಅತ್ಯುತ್ತಮ ನೈಜ ಟಾನಿಕ್!

ಸಂಬಾರ ಪದಾರ್ಥ, ದಕ್ಷಿಣ ಭಾರತದ ರಸಂ ಹಾಗೂ ಜಗತ್ತಿನ ಅತ್ಯುತ್ತಮ ನೈಜ ಟಾನಿಕ್!

ನಮ್ಮ ದಿನ ನಿತ್ಯದ ಆಹಾರದಲ್ಲಿ ಸಂಬಾರ ಪದಾರ್ಥಗಳ ಪಾತ್ರದ ಬಗ್ಗೆ ಮುಖ್ಯವಾದ ಕೆಲವು ಮಾಹಿತಿಗಳನ್ನು ಗಮನಿಸೋಣ.

ಸಂಬಾರ ಪದಾರ್ಥಗಳಿಲ್ಲದ ಭಾರತೀಯ ಅಡುಗೆ ಮನೆಯೇ ಇಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು. ನಾವು ಬಳಸುವ ಸಂಬಾರ ಪದಾರ್ಥಗಳಲ್ಲಿ ಜೀರಿಗೆ, ಮೆಣಸು, ಚಕ್ಕೆ, ಲವಂಗ, ಶುಂಠಿ, ಅರಸಿನ, ಪುದಿನ, ಆಲ್‍ಸ್ಪೈಸ್, ಸೋಂಪು, ಸಾಸಿವೆ, ಗಸಗಸೆ, ಮೆಂತ್ಯ, ಹಿಂಗು, ಓಮ, ಈರುಳ್ಳಿ, ಬೆಳ್ಳುಳ್ಳಿ, ಹುಣಸೆ, ಕರಿಬೇವಿನ ಸೊಪ್ಪು, ಏಲಕ್ಕಿ, ಕಲ್ಲು ಹೂವು ಇತ್ಯಾದಿಗಳು ಮುಖ್ಯವಾದವು.

ಸಂಬಾರ ಪದಾರ್ಥಗಳನ್ನು ಅನಾದಿ ಕಾಲದಿಂದಲೂ ನಾವು ಬಳಸುತ್ತಾ ಬಂದಿದ್ದೇವೆ. ಇವೆಲ್ಲ ಮೂಲತಃ ಸಸ್ಯೋತ್ಪನ್ನಗಳು. ಸಾಮಾನ್ಯವಾಗಿ ಎಲ್ಲಾ ಸಂಬಾರ ಪದಾರ್ಥಗಳ ಮೂಲ ಲಕ್ಷಣ ಅವುಗಳಲ್ಲಿರುವ ಎಣ್ಣೆಯ ಅಂಶ, ಖಾರದ ಗುಣ ಹಾಗೂ ನಾಲಗೆಯನ್ನು ಚುರುಗುಟ್ಟಿಸಿ ಬಾಯಲ್ಲಿ ನೀರೂರಿಸುವ ಶಕ್ತಿ.

ಸಸ್ಯಗಳು ಈ ಪದಾರ್ಥಗಳನ್ನು ಏಕೆ ಸೃಜಿಸುತ್ತವೆ ಎಂಬುದಕ್ಕೆ ಕಾರಣವಿದೆ. ಸಸ್ಯಗಳಿಗೆ ನಾನಾ ರೋಗಗಳು ಬರುತ್ತವೆ. ಅವು ಬ್ಯಾಕ್ಟೀರಿಯ, ವೈರಸ್, ಶಿಲೀಂಧ್ರ ಅಥವ ಸಸ್ಯಗಳನ್ನು ತಿನ್ನುವ ಇತರ ಜೀವಿಗಳಿಂದ ಬರುತ್ತಿರಬಹುದು. ಸಂಬಾರ ಪದಾರ್ಥಗಳ ಮೇಲ್ಕಂಡ ಗುಣಗಳು ರೋಗಕಾರಕಗಳನ್ನು ದೂರವಿಡುತ್ತವೆ. ರಕ್ಷಣೆಯನ್ನು ಒದಗಿಸುತ್ತವೆ. ಜೀವವನ್ನು ಉಳಿಸುತ್ತವೆ. (ಬ್ಯಾಕ್ಟೀರಿಯಗಳನ್ನು ಕೊಲ್ಲುವ ಪ್ರತಿಜೈವಿಕವನ್ನು ಪೆನಿಸಿಲ್ಲಿಯಮ್ ನೊಟಾಟಂ ಎಂಬ ಶಿಲೀಂಧ್ರ ಉತ್ಪದಿಸುವುದನ್ನು ಇಲ್ಲಿ ಪ್ರಾಸಂಗಿಕವಾಗಿ ನೆನಪಿಸಿಕೊಳ್ಳಬಹುದು)

ಸಸ್ಯಗಳ ರಕ್ಷಣಾ ತಂತ್ರವನ್ನು ಅರಿತಿರುವ ಮನುಷ್ಯ, ಆ ಲಾಭವನ್ನು ತಾನೂ ಪಡೆಯಲು ನಿರ್ಧರಿಸಿದನು. ಶತ್ರುವಿನ ಶತ್ರು, ನಮ್ಮ ಮಿತ್ರನಲ್ಲವೆ! ಸಸ್ಯಗಳು ತಮ್ಮ ಸಂಬಾರ ಪದಾರ್ಥಗಳಿಂದ ರೋಗಕಾರಕಗಳನ್ನು ದೂರವಿಡುವುದಾದರೆ, ಅವನ್ನು ನಿತ್ಯ ಬಳಸಿ ತಾವೂ ಏಕೆ ರೋಗಕಾರಕಗಳನ್ನು ದೂರವಿಡಬಾರದು? ಸಂಬಾರ ಪದಾರ್ಥಗಳು ಧಾನ್ಯ, ಬೇಳೇಕಾಳುಗಳಂತೆ ಅಧಿಕ ಪ್ರಮಾಣದಲ್ಲಿ ಬೇಕಾಗುವುದಿಲ್ಲ. ಹಾಗೆಯೇ ವಿಟಮಿನ್ನುಗಳಷ್ಟು ಸೂಕ್ಷ್ಮ ಪ್ರಮಾಣದಲ್ಲಿ ಸಾಕಾಗುವುದಿಲ್ಲ. ಹಿತ-ಮಿತ ಪ್ರಮಾಣದಲ್ಲಿ ಬಳಸಬೇಕಾಗುತ್ತದೆ. ಹಾಗಾಗಿ ಇವನ್ನು ಚಮಚೆಗಳ ಪ್ರಮಾಣದಲ್ಲಿ ಬಳಸುತ್ತಿದ್ದೇವೆ.

ಸಂಬಾರ ಪದಾರ್ಥಗಳು ಅಡುಗೆಗೆ ರುಚಿಯನ್ನು ಕೊಡುತ್ತವೆ. ಸುವಾಸನೆಯನ್ನು ನೀಡುತ್ತವೆ. ಒಳ್ಳೆಯ ಬಣ್ಣವನ್ನು ತರುತ್ತವೆ. ಹಸಿವೆಯನ್ನು ಹೆಚ್ಚಿಸುತ್ತವೆ. ಭೋಜನ ತೃಪ್ತಿಯನ್ನು ನೀಡುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ರೋಗಕಾರಕಗಳನ್ನು ದೂರವಿಡುವ, ನಮ್ಮ ಆರೋಗ್ಯವನ್ನು ವರ್ಧಿಸುವ ಅಸಂಖ್ಯ, ಅದ್ಬುತ ರಾಸಾಯನಿಕಗಳನ್ನು ಒಳಗೊಂಡಿವೆ (ಉದಾ: ಅರಸಿನಕ್ಕೆ ಕ್ಯಾನ್ಸರ್ ನಿಗ್ರಹ ಶಕ್ತಿಯಿದೆ).

ನನ್ನ ದೃಷ್ಟಿಯಲ್ಲಿ, ಸಂಬಾರ ಪದಾರ್ಥಗಳನ್ನು ಹದವಾಗಿ ಬೆರೆಸಿ ತಯಾರಿಸುವ ದಕ್ಷಿಣ ಭಾರತದ ‘ರಸಮ್‘, ಈ ಜಗತ್ತಿನಲ್ಲಿ ಸಿಗುವ ಅತ್ಯುತ್ತಮ ನೈಜ ಟಾನಿಕ್! ನಮ್ಮ ರೋಗನಿರೋಧಕ ಶಕ್ತಿಯನ್ನು (ಇಮ್ಯೂನಿಟಿ) ಹೆಚ್ಚಿಸುತ್ತದೆ. ರಸಮ್ಮನ್ನು ನಿತ್ಯ ಅಡುಗೆಯಲ್ಲಿ ಬಳಸುವವರು ಸೋಂಕು ರೋಗ ಪೀಡಿತರಾಗುವುದು ಕಡಿಮೆ!

Rating
No votes yet

Comments