ನಾಳೆ ನಮ್ಮೂರಲ್ಲಿ ನಿಜಕ್ಕೂ ನೀವೇ ದೇವರು!

ನಾಳೆ ನಮ್ಮೂರಲ್ಲಿ ನಿಜಕ್ಕೂ ನೀವೇ ದೇವರು!

ಬರಹ

ನಮ್ಮ ಕಷ್ಟ ಹೇಳಿಕೊಳ್ಳುವುದಕೆ ಯಾವ ದೇವರಾದರೇನು?
ನಮ್ಮ ಹೊಟ್ಟೆ ತುಂಬಿಸುವಾತ ಯಾವ ಮತದವನಾದರೇನು?

ಅಂಗಡಿಗೆ ಬರುವ ಗಿರಾಕಿಗಳ ಜಾತಿ ಕೇಳುವವರುಂಟೇನು?
ನಮ್ಮ ಸಂಪಾದನೆಯ ಹಣಕ್ಕೆ ಯಾವುದೇ ಜಾತಿ ಉಂಟೇನು?

ಇಲ್ಲಿ ಹುಟ್ಟಿ ದೇವರು ಎನಿಸಿಕೊಂಡವರ, ಪೂಜಿಸುವವರೇ ಎಲ್ಲ,
ಆದರೆ ಅವರಾಡಿ ಹೋದ ಮಾತನಿಂದು ನೆನೆಸುವವರೇ ಇಲ್ಲ;

ರಾಮ-ರಹೀಮ-ಕೃಷ್ಣ-ಯೇಸು, ಎಲ್ಲರದೂ ಒಂದೇ ಉಕ್ತಿ,
ಪ್ರೀತಿಯಿಂದ ಬಾಳಿದರೆ, ಅದೇ ದೇವರ ಮೇಲಿನ ಭಕ್ತಿ;

ಯಾವ ದೇವರ ಪೂಜಿಸಿದರೂ ಬಡತನಕೆ ಅದು ಉತ್ತರವೇ?
ಮತ ಬೇಧ ಇಲ್ಲದೆಯೇ ಬಡವರ ಉದ್ಧಾರ ಅಸಾಧ್ಯವೇ?

ಇವರ ಹೊಟ್ಟೆ ತುಂಬುವುದಕೆ ಎರಡು ಹೊತ್ತಿನ ಊಟ,
ವಿದ್ಯಾವಂತರನ್ನಾಗಿಸಲು ಮಕ್ಕಳಿಗೆ ಪುಕ್ಕಟೆ ಪಾಠ,
ನೀಡಿ, ನೋಡಿ, ನಿಮ್ಮನ್ನೇ ಪೂಜಿಸುವರು ಇವರು,
ನಾಳೆ ನಮ್ಮೂರಲ್ಲಿ ನಿಜಕ್ಕೂ ನೀವೇ ದೇವರು!
*************************