ವಸಿಷ್ಠರು ಮತ್ತು ವಾಲ್ಮೀಕಿಯರು

ವಸಿಷ್ಠರು ಮತ್ತು ವಾಲ್ಮೀಕಿಯರು

ಬರಹ

ವಸಿಷ್ಠರು ಮತ್ತು ವಾಲ್ಮೀಕಿಯರು

ದೆಹಲಿಯಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಆದರೆ ಈ ಉಗ್ರರು, ನಾವು ಸಾಮಾನ್ಯವಾಗಿ ಊಹಿಸಿವಂತೆ ಮುಸ್ಲಿಂ ಮೂಲಭೂತವಾದಿ ಉಗ್ರರೋ ಅಥವಾ ಹಿಂದೂ ಕೋಮುವಾದಿ ಉಗ್ರರೋ ಎಂಬುದನ್ನಿನ್ನೂ ಖಚಿತಪಡಿಸಿಕೊಳ್ಳಬೇಕಿದೆ. ಏಕೆಂದರೆ, ಈಚೆಗೆ ಹಿಂದೂ ಕೋಮುವಾದಿ ಸಂಸ್ಥೆಗಳ ಉಗ್ರಗಾಮಿ ಕಾರ್ಯಾಚರಣೆಗಳೂ ಆರಂಭವಾಗಿರುವ ಖಚಿತ ಸೂಚನೆಗಳು ಸರ್ಕಾರಕ್ಕೆ ದೊರೆತಿವೆ. ಈ ಗೊಂದಲದಲ್ಲಿ ಸಿಕ್ಕಿ, ಜನತೆ ತಲ್ಲಣಗೊಂಡಿದೆ. ಭಾರತ ಕಂಡ ಅತ್ಯಂತ ದುರ್ಬಲ ಗೃಹ ಮಂತ್ರಿ ಎನಿಸಿಕೊಂಡಿರುವ ಶಿವರಾಜ ಪಾಟೀಲ್ ಎಂದಿನಂತೆ ಉಗ್ರರನ್ನು ಮಟ್ಟ ಹಾಕುವುದಾಗಿ ಗುಡುಗಿದ್ದಾರೆ. ಆದರೆ ಇವರನ್ನು ನಂಬಲು ಯಾರೂ ತಯಾರಿಲ್ಲ. ಏಕೆಂದರೆ, ಅದೇ ಉಸಿರಿನಲ್ಲಿ ಅವರು ದೆಹಲಿಯಂತಹ ಜನ ನಿಬಿಡ ಊರುಗಳಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ತಡೆಯಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ. ಅದು ನಿಜವೂ ಹೌದು. 24 ತಾಸೂ ದೇಶದ ಮೂಲೆ ಮೂಲೆಯನ್ನೂ ಕಾಯುವುದು ದುಸ್ಸಾಧ್ಯವೇ. ಹಾಗಾಗಿ ಭಯೋತ್ಪಾದನೆಯನ್ನು ಕೇವಲ ಕಾನೂನು ಮತ್ತು ಶಿಸ್ತಿನ ಉಪಕರಣಗಳ ಮೂಲಕ ತಡೆಯಲು ಅಸಾಧ್ಯವೆನ್ನಿಸುವ ಮಟ್ಟಿಗೆ ಅದು ಅವನ್ನು ಮೀರಿ ಬೆಳೆದಿದೆ. ಎರಡೂ ಕಡೆ ಮನಸ್ಸು ಕೆಟ್ಟಿದೆ. ಅದನ್ನು ಸರಿ ಮಾಡುವ ಕಡೆ ಗಮನ ಕೊಡದ ಹೊರತು ಈ ಬರ್ಬರ ಹಿಂಸಾಚಾರ ನಿಲ್ಲುವ ಸಾಧ್ಯತೆ ಕಡಿಮೆ.

ಭಯೋತ್ಪಾದನೆಯನ್ನು ತಡೆಯಲು ವಿಫಲಗೊಂಡಿರುವುದೆಂದು ಸದ್ಯದ ಸಂಯುಕ್ತ ಸರ್ಕಾರವನ್ನು ಖಂಡಿಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರದ ಕಾಲದಲ್ಲೂ ಉಗ್ರರ ದುಷ್ಕೃತ್ಯಗಳೇನೂ ಕಡಿಮೆಯಾಗಿರಲಿಲ್ಲ. ಹಾಗೆ ನೋಡಿದರೆ, ಅವರ ಕಾಲದಲ್ಲೇ ಹೆಚ್ಚು ಉಗ್ರಗಾಮಿ ಚಟುವಟಿಕೆಗಳು ಮತ್ತು ಮುಗ್ಧರ ಸಾವುಗಳು ದಾಖಲಾಗಿರುವುದು. ಇವರ ವಿದೇಶಾಂಗ ಮಂತ್ರಿಯೇ ಅಲ್ಲವೇ, ಭಯೋತ್ಪಾದಕರ ಬೇಡಿಕೆಗಳಿಗೆ ಮಣಿದು ಸೆರೆಯಲ್ಲಿದ್ದ ಉಗ್ರಗಾಮಿಗಳನ್ನು ಬಿಡುಗಡೆಗೊಳಿಸಿ, ಸ್ವತಃ ತಾವೇ ಅವರನ್ನು ವಿಮಾನದಲ್ಲಿ ಒಯ್ದು ಕಾಬೂಲ್‌ಗೆ ಬಿಟ್ಟು ಬಂದದ್ದು? ಇವರ ಕಾಲದಲ್ಲೇ ಅಲ್ಲವೇ, ಉಗ್ರರು ನಮ್ಮ ಸಂಸತ್ ಭವನದ ಭದ್ರತಾ ಕೋಟೆಯನ್ನು ಭೇದಿಸಿ ಬಂದು, ಅದರ ಮೇಲೆ ದಾಳಿ ನಡೆಸಲು ಸಾಧ್ಯವಾದದ್ದು? ಇವರ 'ಆದರ್ಶ' ರಾಜಕಾರಣಿ ನರೇಂದ್ರ ಮೋದಿ ಮುಖ್ಯಮಂತ್ರಿ ಆಗಿರುವ ರಾಜ್ಯದಲ್ಲಿ ಇತ್ತೀಚೆಗಷ್ಟೇ ಸಂಭವಿಸಿದ ಬಾಂಬ್ ಸ್ಫೋಟದ ಸರಣಿಯ ಮುಂದಿನ ಭಾಗವಾಗಿಯೇ ಅಲ್ಲವೇ, ಈಗ ಬಾಂಬುಗಳು ಸ್ಫೋಟಿಸಿರುವುದು? ಆದರೂ ಇವರ ವೀರಾವೇಶದ ಮಾತುಗಳ ಬಡಾಯಿಗೆ ಕೊನೆಯಿಲ್ಲದಾಗಿದೆ!

ಹಾಗಾಗಿ, ಇದು ಯಾವುದೇ ನಿರ್ದಿಷ್ಟ ಸರ್ಕಾರದ ವೈಫಲ್ಯ ಪ್ರಶ್ನೆಯ ನೆಲೆಯಲ್ಲಿ ಪರಿಹಾರ ಕಂಡುಹಿಡಿಯಲಾಗದಂತಹ ಸಮಸ್ಯೆಯಾಗಿದೆ ಎಂಬುದನ್ನು ಮನಗಾಣದ ಹೊರತು, ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಾಗದು ಎಂಬುದು ನಮಗೆ ಮೊದಲು ಅರಿವಾಗಬೇಕಿದೆ. ಹಾಗೆ ಪಕ್ಷ ರಾಜಕಾರಣದ ಮೇಲಾಟದ ಪ್ರಶ್ನೆಯಾಗಿ ನೋಡಿಯೇ ನಾವು ಇದನ್ನು ಪರಿಹರಿಸಲಾಗದೆ, ತಬ್ಬಿಬ್ಬಾಗಿ ಕೂತಿದ್ದೇವೆ. ಈ ಬಗ್ಗೆ ಇತ್ತಿಚೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಅಪರೂಪಕ್ಕೆಂಬಂತೆ ಆಳವಾದ ಒಳನೋಟವುಳ್ಳ ಮಾತೊಂದನ್ನು ಆಡಿದ್ದಾರೆ: 'ಈ ಬಾಂಬ್ ಸ್ಫೋಟಗಳಿಗೆ ಬಿಜೆಪಿಯ ಅಧಿಕಾರ ದಾಹವೇ ಕಾರಣವಾಗಿದೆ.' ಇದನ್ನು ತಮ್ಮ ಇತ್ತೀಚಿನ ಬಿಜೆಪಿ ವಿರೋಧಿ ರಾಜಕಾರಣದ ಭಾಗವಾಗಿಯೇ ಆಡಿರುವರಾದರೂ, ಅದರಲ್ಲಿ ಇಂದಿನ ಹಿಂಸಾಮಯ ವಾತಾವರಣವನ್ನು ವಿವರಿಸುವ ಅರ್ಧ ಸತ್ಯವಾದರೂ ಅಡಗಿದೆ. ಬಿಜೆಪಿ, ಮುಸ್ಲಿಂ ಮತಾಂಧತೆಯನ್ನು ಮಟ್ಟ ಹಾಕಲು ಆರಿಸಿಕೊಂಡಿರುವ ಹಿಂದೂ ಮತಾಂಧತೆಯ ಮಾರ್ಗವೇ, ಈಚಿನ ವರ್ಷಗಳ ಇಂತಹ ಬರ್ಬರ ಹಿಂಸಾಚಾರದ ರಾಜಕಾರಣಕ್ಕೆ ಕಾರಣವಾಗಿದೆ.

ಆದರೆ, ಕರ್ನಾಟಕದ ಮಟ್ಟಿಗಾದರೂ ಬಿಜೆಪಿಯ ಇಂತಹ ರಾಜಕಾರಣ ಬೆಳೆಯಲು ಸ್ವತಃ ತಾವೇ ಕಾರಣರೆಂದು ಕುಮಾರಸ್ವಾಮಿಯವರು ಆದಷ್ಟು ಬೇಗ ಅರಿಯಬೇಕಿದೆ. ಅದಕ್ಕಿಂತ ಮುಖ್ಯವಾಗಿ ಇದಕ್ಕೆ ತಮ್ಮನ್ನು ಪ್ರೇರೇಪಿಸಿದ ಅಂಶವಾದರೂ ಯಾವುದು ಎಂಬುದರ ಬಗ್ಗೆ ಅವರು ಯೋಚಿಸಬೇಕಿದೆ. ಯಾವುದೇ ತತ್ವದ ಗೋಜಲೂ ಬೇಕಿಲ್ಲವೆಂಬ ತಮ್ಮ ಹುಂಬ 'ಅಧಿಕಾರ ರಾಜಕಾರಣ'ವೇ ಇದಕ್ಕೆ ಕಾರಣವೆಂದು ಅವರು ಮನಗಾಣಬೇಕಿದೆ. ಅವರ ಶಾಸಕರು ಮತ್ತು ಇತರ ಅನೇಕ ನಾಯಕರು ಯಾವುದೇ ಎಗ್ಗಿಲ್ಲದೆ ತಮ್ಮ ಪಕ್ಷವನ್ನು ತೊರೆದು ಹೋಗುತ್ತಿರುವುದಕ್ಕೂ ಬುಡ ಭದ್ರವಿಲ್ಲದ ಇಂತಹ ದಿನವಹಿ ರಾಜಕಾರಣವೇ ಕಾರಣವೆಂದು ಅವರಿಗೆ ಗೊತ್ತಾಗಬೇಕಿದೆ. ಹಾಗಾಗಿ, ಕುಮಾರಸ್ವಾಮಿಯವರು ಬಿಜೆಪಿಯೊಂದಿಗೆ ತಾವು ಮಾಡಿಕೊಂಡ ಸಮಯಸಾಧಕ ಅಪವಿತ್ರ ಮೈತ್ರಿಗಾಗಿ ಬಹಿರಂಗವಾಗಿ ಜನತೆಯ ಕ್ಷಮೆ ಕೋರದ ಹೊರತು, ಅವರ ಇಂತಹ ಯಾವುದೇ ಮಾತುಗಳಿಗೆ ಬೆಲೆ ಇರಲಾರದು. ಅಷ್ಟೇ ಅಲ್ಲ, ಅವರು ಈಗಲಾದರೂ ಕೌಟುಂಬಿಕ ರಾಜಕಾರಣದ ಕಟ್ಟನ್ನು
ಹರಿದೊಗೆದು ಕರ್ನಾಟಕಕ್ಕೇ ವಿಶಿಷ್ಟವಾದ ತತ್ವ ರಾಜಕಾರಣ ಮಾಡ ಹೊರಡದ ಹೊರತು, ಅವರ ಪಕ್ಷಕ್ಕೆ ಯಾವುದೇ ಭವಿಷ್ಯವಿರಲಾರದು.

ಇದಕ್ಕೆ ಸಂಬಂಧಿಸಿದಂತೆಯೇ, 'ವಿಕ್ರಾಂತ ಕರ್ನಾಟಕ'ದ ಕಳೆದ ಸಂಚಿಕೆಯಲ್ಲಿ ಪ್ರಕಟವಾಗಿರುವ ಎರಡು ಲೇಖನಗಳು ನನ್ನ ಗಮನ ಸೆಳೆದವು. ಅವೆಂದರೆ, ಸರ್ ಎಂ.ವಿಶ್ವೇಶ್ವರಯ್ಯನವರ ಪುಸ್ತಕವೊಂದಕ್ಕೆ ಡಾ|| ರಾಮಮನೋಹರ ಲೋಹಿಯಾ ಅವರು ಬರೆದಿದ್ದ ವಿಮರ್ಶೆಯನ್ನೊಳಗೊಂಡ ಕೆ.ಸತ್ಯನಾರಾಯಣ ಅವರ ಲೇಖನ ಮತ್ತು ದಿ|| ಎಚ್.ವೈ.ಶಾರದಾ ಪ್ರಸಾದರ ಬಗ್ಗೆ ಸುಗತಾ ಬರೆದಿರುವ ಲೇಖನ. ಲೋಹಿಯಾ ತಮ್ಮ 'ವಸಿಷ್ಠರು ಮತ್ತು ವಾಲ್ಮೀಕಿಯರು' ಎಂಬ ಲೇಖನದಲ್ಲಿ (ಅದು ವಾಸ್ತವಾಗಿ, ಸ್ವತಂತ್ರ ಭಾರತದಲ್ಲಿ ರೈತರ ನೀರಿನ ಸುಂಕ ಏರಿಸಿದ್ದರ ವಿರುದ್ಧ ಅವರು ನಡೆಸಿದ ನಾಗರಿಕ ಸತ್ಯಾಗ್ರಹದ ಕಾರಣವಾಗಿ ಬಂಧನದಲ್ಲಿದ್ದ ಲಕ್ನೋ ಸೆರೆಮನೆಯಲ್ಲಿ ತಾವು ಓದಿದ ಶಂಭೂಕ ವಧೆಯ ಬಗ್ಗೆ ಸೀತೆ ಮತ್ತು ವಸಿಷ್ಠರ ನಡುವೆ ನಡೆಯುವ ಸಂವಾದವನ್ನೊಳಗೊಂಡ ಮರಾಠಿ ನಾಟಕವೊಂದನ್ನು ನೆಪ ಮಾಡಿಕೊಂಡು, ಅಲ್ಲಿನ ಅನಾಗರಿಕ ವಾತಾವರಣದ ಬಗ್ಗೆ ಉತ್ತರ ಪ್ರದೇಶದ ಸೆರೆಮನೆ ಮಂತ್ರಿಗೆ ಬರೆದಿದ್ದ ಪತ್ರ.) ಭಾರತದ ಸಾಮಾಜಿಕ ನ್ಯಾಯ ಪರಂಪರೆಯ
ವಿಶ್ಲೇಷಣೆ ಮಾಡುತ್ತಾ. ವಿಶ್ವೇಶರಯ್ಯನವರನ್ನು ವಾಲ್ಮೀಕಿ ಪರಂಪರೆಗೆ ಸೇರಿದವರು ಎಂದು ಗುರುತಿಸಿದ್ದರು. 'ಮಾತೃಹಂತಕ ಪರುಶರಾಮನಿಂದ ಹಿಡಿದು ರಾಷ್ಟ್ರ ಹಂತಕ ನೆಹರೂ ತನಕ ಅಂಧ ನ್ಯಾಯದ ವಸಿಷ್ಠ ಪರಂಪರೆ ಹಬ್ಬಿಕೊಂಡಿದ್ದರೆ, ವಿಶ್ವಾಮಿತ್ರನಿಂದ ಹಿಡಿದು ವಿಶ್ವೇಶ್ವರಯ್ಯನವರ ತನಕ ಉದಾರವಾದಿಯಾದ ವಾಲ್ಮೀಕಿ ಪರಂಪರೆ ಹಬ್ಬಿಕೊಂಡಿದೆ' ಎಂಬುದು ಅವರ ಪ್ರಸಿದ್ಧವಾದ ಮಾತು.

ಲೋಹಿಯಾ ಈಗಿದ್ದಿದ್ದರೆ, ಬಹುಶಃ ಶಾರದಾ ಪ್ರಸಾದರನ್ನೂ ಈ ಉದಾರವಾದಿ ವಾಲ್ಮೀಕಿ ಪರಂಪರೆಗೆ ಸೇರಿಸುತ್ತಿದ್ದರು. ಏಕೆಂದರೆ, ಅವರು ಭಾರತದಲ್ಲಿ ಕಾಲದ ಅಗತ್ಯಗಳಿಗೆ ತಕ್ಕಂತೆ ಸಂಪ್ರದಾಯಗಳನ್ನು ಸುಧಾರಿಸುತ್ತಾ, ತಮ್ಮ ಪ್ರಯೋಗಶೀಲತೆಯ ಮೂಲಕ 'ರಾಜ್ಯಭಾರ'ದ ಕ್ರಮಗಳನ್ನು ಉದಾರಗೊಳಿಸುತ್ತ್ತಾ ಸದಾ ಚಲನಶೀಲವಾಗಿರುವ ಲೋಕಹಿತಕಾರಿಯಾಗಿರುವ ಮಾರ್ದವತೆಯನ್ನು ವಾಲ್ಮೀಕಿ ಪರಂಪರೆ ಎಂದು ಗುರುತಿಸಿದ್ದರು. ಮತ್ತು ಇದಕ್ಕೆ ವಿರುದ್ಧವಾಗಿ, ಕುಲ ಶ್ರೇಷ್ಠತೆ, ಕುಲ ಶುದ್ಧತೆ ಮತ್ತು ಕುಲ ಪ್ರತ್ಯೇಕತೆಯ ನೀತಿ ಸಂಹಿತೆಯನ್ನಾಧರಿಸಿದ 'ರಾಜ್ಯಭಾರ'ವನ್ನು ದೇಶ ಭ್ರಷ್ಠತೆ, ಶಿರಚ್ಛೇದ ಮುಂತಾದ ನಿರ್ಮಮ ದಂಡನೆಗಳ ಮೂಲಕ ಎತ್ತಿ ಹಿಡಿಯುವ ಕುಲಸ್ವಾರ್ಥಿ ಪುರೋಹಿತಶಾಹಿಯನ್ನು ವಸಿಷ್ಠ ಪರಂಪರೆ ಎಂದು ಗುರುತಿಸಿದ್ದರು. ಅವರು ನೆಹರೂರನ್ನು ವಸಿಷ್ಠ ಪರಂಪರೆಗೆ ಸೇರಿಸಲು ಮುಖ್ಯ ಕಾರಣ, ವಾಲ್ಮೀಕಿ ಪರಂಪರೆಗೆ ಸೇರಿದ್ದ ಗಾಂಧೀಜಿಯನ್ನು ಜಾಣ ಸಮನ್ವಯದ ಮಾತುಗಳ ಮೂಲಕ ಅವರು ಕ್ರಮೇಣ ಕೈಬಿಡುತ್ತಾ ಹೋದದ್ದು. ಅದೇನೇ ಇರಲಿ, ಇಂದು ಈ ವಸಿಷ್ಠ ಪರಂಪರೆ ಕಾಶ್ಮೀರದಿಂದ ಹಿಡಿದು ಒರಿಸ್ಸಾದ ಕಂಧಮಹಲ್‌ವರೆಗೆ ತನ್ನ ಅಂಕೆಗೆ ಸಿಗದಿದ್ದವರನ್ನೆಲ್ಲ ದೇಶಭ್ರಷ್ಟತೆ, ಶಿರಚ್ಚೇಧಗಳ ಈ ಅಂಧನ್ಯಾಯ ಪರಂಪರೆಯ
ಪ್ರಯೋಗಗಳಿಗೆ ಬಲಿ ಕೊಡುತ್ತಾ, ತನ್ನ ಈ ಪ್ರಯೋಗ - ಪ್ರಾತ್ಯಕ್ಷಿಕೆಗಳನ್ನು ಇಂದು ನಮ್ಮದೇ ದಾವಣಗೆರೆ, ಮಂಗಳೂರು ಮತ್ತು ಚಿಕ್ಕಮಗಳೂರುಗಳವರೆಗೆ ತಂದು ಮುಟ್ಟಿಸಿದೆ. ಆದರೆ, ಇದೀಗ ತಾನೇ ತಮ್ಮ 100 ದಿನಗಳ ರಾಜ್ಯಭಾರವನ್ನು ಸಂಭ್ರಮದಿಂದ ಆಚರಿಸಿಕೊಳ್ಳುವ ಮೂಲಕ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಸಾಕಷ್ಟು ಹಾಸ್ಯಾಸ್ಪದರಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಈ ಪ್ರಾತ್ಯಕ್ಷಿಕೆಗಳಿಗೂ ತಮ್ಮ ಪಕ್ಷ - ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲವೆಂದು ಘೋಷಿಸಿ, ಇನ್ನಷ್ಟು ಹಾಸ್ಯಾಸ್ಪದರಾಗಿದ್ದಾರೆ.

ಕಾಶ್ಮೀರ ಕಣಿವೆಯನ್ನು ಪ್ರಚೋದಿಸಿ ತೃಪ್ತಿಯಾಗದೆ, ಕಂಧಮಹಲ್‌ನಲ್ಲಿ ನಡೆಸಿದ ಬರ್ಬರ 'ಧರ್ಮಯುದ್ಧ' ಹುಟ್ಟಿಸಿರುವ ರಾಷ್ಟ್ರೀಯ ಅಸಹ್ಯ ಮತ್ತು ಜಿಗುಪ್ಸೆಗಳನ್ನ್ಸು ತೊಡೆದುಕೊಳ್ಳಲು, ಇವರು ಕಂಡಕಂಡ ಕಡೆಯಲ್ಲೆಲ್ಲಾ ದಿಢೀರನೆ 'ಮತಾಂತರ'ಗಳ ಹುಯಿಲೆಬ್ಬಿಸಿ ಜನರ ಸಹಾನುಭೂತಿ ಗಳಿಸಲೆತ್ನಿಸುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ನಡೆಸಲಾಗುತ್ತಿರುವ ವಸಿಷ್ಠ ಶಿಷ್ಯರ ಈ ಕಾರ್ಯಾಚರಣೆ ಎಷ್ಟು ನಾಚಿಕೆಗೆಟ್ಟು ಹೋಗಿದೆ ಎಂದರೆ, ಪ್ರಜಾಪ್ರಭುತ್ವದ ಮೂಲಾಧಾರಗಳಲ್ಲಿ ಒಂದಾದ ಪತ್ರಿಕೋದ್ಯಮದ ಮೂಲ ತತ್ವಗಳಿಗೆ ತಿಲಾಂಜಲಿ ನೀಡಲೂ ಇವರು ಹಿಂಜರಿಯರು. ಎಲ್ಲ ಮಾಧ್ಯಮಗಳಲ್ಲೂ ಈ ಶಿಷ್ಯೋತ್ತಮರು ತುಂಬಿ ಹೋಗಿದ್ದು, ಅವುಗಳ ವಿಶ್ವಾಸಾರ್ಹತೆಯನ್ನು ಹಾಳು ಮಾಡುವುದನ್ನೇ ತಮ್ಮ ಕಾಯಕ ಮಾಡಿಕೊಂಡಿದ್ದು, ಶ್ರೀರಾಮನ ಹೆಸರಿನಲ್ಲಿ ತಾವು ಸ್ಥಾಪಿಸಲುದ್ದೇಶಿರುವ ವಸಿಷ್ಠ ಪ್ರಭುತ್ವದಲ್ಲಿ ಮಾಧ್ಯಮಗಳು ಹೇಗಿರುವುವು ಎಂಬುದರ ಸೂಚನೆಗಳನ್ನು ನೀಡತೊಡಗಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ನನ್ನದೇ ಅನುಭವ ಹೇಳಿದರೆ, ಈ ವಸಿಷ್ಠತನವೆಂದರೇನೆಂದು ಅರ್ಥವಾದೀತು.

ಸುಗತಾ ಹೋದ ವಾರ ಶಾರದಾ ಪ್ರಸಾದರ ಬಗ್ಗೆ ಬರೆಯುತ್ತಾ, ಪ್ರಸಾದರು ಇಂಗ್ಲಿಷ್ ಪತ್ರಿಕೆಯೊಂದಕ್ಕಾಗಿ ಬರೆಯುತ್ತಿದ್ದ ಅಂಕಣಗಳನ್ನು ತನ್ನ ಪತ್ರಿಕೆಗಾಗಿ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿಕೊಂಡು, ಅವನ್ನು ಅವರು ತನ್ನ ಮೇಲಿನ ವಿಶ್ವಾಸಕ್ಕಾಗಿಯೇ ಬರೆಯುತ್ತಿದ್ದಾರೆಂದು ಪ್ರಚಾರ ಮಾಡಿಕೊಂಡಿದ್ದಲ್ಲದೆ; ಅವರಿಗೆ ಕೊಡಬೇಕಾದ ಸಂಭಾವನೆಗೆ ಸತಾಯಿಸಿ, ಕೊನೆಗೆ ಅವರ ಸ್ನೇಹಿತರ ಆಗ್ರಹದ ಮೇರೆಗೆ ಸಂಭಾವನೆ ಕೊಡಬೇಕಾಗಿ ಬಂದರೂ, ಅದನ್ನು ಅವರು ಬೇಡ ಬೇಡವೆಂದರೂ ತಾನು ಒತ್ತಾಯಪೂರ್ವಕವಾಗಿ ಕಳಿಸಿದ್ದಾಗಿ ಅವರ ಸಾವಿನ ನಂತರ ಯಾವ ನಮ್ಮ ಸಂಪಾದಕ ಮಹಾಶಯರು ಬರೆದುಕೊಂಡು ಪತ್ರಿಕೋದ್ಯಮವನ್ನು 'ಬುರುಡೆ' ಮಟ್ಟಕ್ಕೆ ಇಳಿಸಿದ್ದಾರೋ; ಅವರ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ಬರೀ ಸುಳ್ಳು ಮತ್ತು ಅಪ್ರಬುದ್ಧ ಪ್ರಲಾಪಗಳಿಂದಲೇ ತುಂಬಿಹೋಗಿದ್ದ ಅಂಕಣವೊಂದರ ಬಗ್ಗೆ ಇಂದಿನ ಸೂಕ್ಷ್ಮ ಕೋಮು ಪರಿಸ್ಥಿತಿಯಲ್ಲಿ ಅದು ಉಂಟುಮಾಡಬಹುದಾದ ಅಪಾಯವನ್ನು ಗಮನದಲ್ಲಿಟ್ಟುಕೊಂಡು ನಾನು ಪ್ರತಿಕ್ರಿಯೆಯೊಂದನ್ನು ಬರೆದು ಆ ಸಂಪಾದಕ ಮಹಾಶಯರ
ವಿಳಾಸಕ್ಕೇ ಈ ಮೇಲ್ ಮಾಡಿದೆ. ಅದನ್ನು ಪತ್ರಿಕೋದ್ಯಮದ ಮೂಲ ತತ್ವಗಳ ಬಗ್ಗೆ ಪ್ರತಿವಾರ ತನ್ನ ಅಂಕಣವೊಂದರಲ್ಲಿ ಬುರುಡೆ ಹೊಡೆಯುವ ಈ ಸಂಪಾದಕ ಮಹಾಶಯ ಪ್ರಕಟಿಸಲಿಲ್ಲ. ಕಾರಣ, ಅದನ್ನು ನೀವೇ ಓದಿದರೆ ಅರ್ಥವಾದೀತು:

' ಮಾನ್ಯರೇ,
ತಮ್ಮ ಪತ್ರಿಕೆಯ 6.9.2008ರ ಸಂಚಿಕೆಯಲ್ಲಿ ಪ್ರತಾಪಸಿಂಹ ಎಂಬುವವರು 'ಬೆತ್ತಲೆ ಜಗತ್ತು' ಅಂಕಣದಲ್ಲಿ ಬರೆದಿರುವ 'ನಮಗೆ ಬೇಕಿರುವುದು ಪಿಳ್ಳಂಗೋವಿ ಕೃಷ್ಣನಲ್ಲ' ಎಂಬ ಬರಹ ಓದಿದೆ. ಅಂಕಣಕಾರ ತನ್ನ ಬರಹದಲ್ಲಿ ಯಾವುದೇ ವಿಷಯದ ಬಗ್ಗೆ ತನ್ನ ಅಭಿಪ್ರಾಯ - ಆಲೋಚನೆಗಳನ್ನು ಮಂಡಿಸಬಹುದೇ ಹೊರತು, ಸುಳ್ಳುಗಳನ್ನು ಹರಡಲು ಅಂಕಣವನ್ನು ಬಳಸಬಾರದು ಎಂಬುದನ್ನು ನೀವೂ ಒಪ್ಪುತ್ತೀರೆಂದು ಭಾವಿಸಿ ಈ ಪತ್ರ ಬರೆಯುತ್ತಿದ್ದೇನೆ. ಪ್ರಸ್ತಾಪಿತ ಬರಹದಲ್ಲಿ ಲೇಖಕರು ಎರಡು ಪ್ರಚೋದನಕಾರಿ ಸುಳ್ಳುಗಳನ್ನು ಹೇಳಿದ್ದಾರೆ. ಒಂದು: ಒರಿಸ್ಸಾದಲ್ಲಿ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರನ್ನು ಮತಾಂಧ ಕ್ರೈಸ್ತರು ಕೊಂದಿದ್ದಾರೆ ಎಂದು. ಎರಡು: ನಮ್ಮ ದೇಶದ ಅಧಃಪತನ ಪ್ರಾರಂಭವಾಗಿದ್ದೇ ಬೌದ್ಧ ಧರ್ಮದ ಪ್ರಗತಿಯೊಂದಿಗೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆಂದು.

ಪ್ರತಾಪಸಿಂಹರಂತೆಯೇ ಕಟ್ಟಾ ಹಿಂದೂವಾದಿಯಾದ ಬಿಜೆಪಿ ಭಾಗಿಯಾಗಿರುವ ಒರಿಸ್ಸಾ ಸರ್ಕಾರವೇ ತನ್ನಲ್ಲಿರುವ ಮಾಹಿತಿಯನ್ನಾಧರಿಸಿ ಲಕ್ಷ್ಮಣಾನಂದ ಸರಸ್ವತಿಯವರನ್ನು ಕೊಂದಿರುವುದು ನಕ್ಸಲೈಟರು ಎಂದು ಹೇಳಿದೆ ಮತ್ತು ಅದನ್ನು ಖಚಿತ ಪಡಿಸಿಕೊಳ್ಳಲು ಮುಂದಿನ ತನಿಖೆಗೆ ಆಜ್ಞಾಪಿಸಿದೆ. ಹೀಗಿರುವಾಗ ಇವರು ಕರ್ನಾಟಕದಲ್ಲಿ ಕೂತು ಒರಿಸ್ಸಾದ ಆ ಘಟನೆ ಬಗ್ಗೆ ತಮ್ಮದೇ ಊಹೆಯ ಮೇಲೆ ತೀರ್ಪು ನೀಡಿದ್ದಾರೆ. ಒರಿಸ್ಸಾದಲ್ಲಿ ಈ ಕೊಲೆಯನ್ನು ನೆಪವಾಗಿಸಿಕೊಂಡು ಹಿಂದೂವಾದಿ ಎಂದು ಹೇಳಿಕೊಳ್ಳುವ ಕೆಲವು ಸಂಘಟನೆಗಳು ಕ್ರಿಶ್ಚಿಯನ್ನರ ಮೇಲೆ ನಡೆಸಿದ ಅಮಾನವೀಯ ಹಿಂಸಾಚಾರವನ್ನು ಸಮರ್ಥಿಸಿಕೊಳ್ಳಲು ಪ್ರತಾಪಸಿಂಹರು ಈ 'ತೀರ್ಪು' ನೀಡುವುದು ಅಗತ್ಯವಾಗಿತ್ತೆಂದೇ ತೋರುತ್ತದೆ. ಅದರ ಆಧಾರದ ಮೇಲೇ ಅವರು ತಮ್ಮ ಬರಹದಲ್ಲಿ ಮುಂದೆ 'ಗಂಡು ಹಿಂದೂ ಧರ್ಮ'ವೆಂಬುದೊಂದನ್ನು ನಿರೂಪಿಸಿಕೊಂಡು, 'ರಜೋ' ಗುಣದ ಮಾತುಗಳನ್ನಾಡುತ್ತಾ, ಜನರಲ್ಲಿ 'ತಮೋ' ಗುಣಗಳನ್ನು ಪ್ರಚೋದಿಸುವ ಅತಿ ಜಾಣ ಪ್ರಯತ್ನ ಮಾಡಿದ್ದಾರೆ. ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಕೂಗು ಹಾಕುತ್ತಿರುವ ಇವರಿಗೆ, ಹಿಂದೂ ಧರ್ಮದ ಧಾರ್ಮಿಕ ಪರಿಭಾಷೆಯ ಪ್ರಾಥಮಿಕ ಪರಿಚಯವೂ ಇದ್ದಂತಿಲ್ಲ. ಹಾಗಾಗಿಯೇ ಇವರು ಆತ್ಮವೆಂದರೇನು ಎಂದು ತಿಳಿಯದೆಯೇ (ಇಂದಿನ ತುರ್ತಿನಲ್ಲಿ ಇದನ್ನೆಲ್ಲ ತಿಳಿಯುವ ಅಗತ್ಯವಿಲ್ಲ ಎಂದು ಇವರು ಹೇಳಿದರೂ ಹೇಳಿಯಾರು!) ಇವರು, 'ದೈವ ಸಾಕ್ಷಾತ್ಕಾರ'ಕ್ಕೆ ಮುನ್ನ 'ಆತ್ಮಸಾಕ್ಷಾತ್ಕಾರ'ವಾಗಬೇಕೆಂದು ಉಪದೇಶ ಮಾಡಹೊರಟಿದ್ದಾರೆ! ಏನನ್ನೂ ಸರಿಯಾಗಿ ಓದದ, ಯೋಚಿಸಲಾಗದ ಮೂರ್ಖರನ್ನು ಅಥವಾ ಕಿಡಿಗೇಡಿಗಳನ್ನಷ್ಟೇ ಇಂತಹ ಪ್ರಯತ್ನಗಳು ಪ್ರಚೋದಿಸಬಲ್ಲವು. ಅಂತಹವರು ಹಿಂದೂ ಧರ್ಮದಲ್ಲೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆಂದು ಎಂಬುದು ಪ್ರತಾಪ ಸಿಂಹರಂತಹವರಿಗೆ ಗೊತ್ತಿರುವಂತಿದೆ ಮತ್ತು ಅಂತಹವರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಇವರು ಹಿಂದೂ ಧರ್ಮವನ್ನು ಉದ್ಧಾರ ಮಾಡಲು ಹೊರಟಿದ್ದಾರೆ.

ಹಾಗಾಗಿಯೇ ಅವರು, ತಮ್ಮ ಸೇನೆಗಳಲ್ಲಿ ಅನ್ಯಮತೀಯರನ್ನು ಮುಖ್ಯ ಸ್ಥಾನಗಳಲ್ಲಿ ಮತ್ತು ಗಣನೀಯ ಸಂಖ್ಯೆಯಲ್ಲಿ ಹೊಂದಿದ್ದ ಶಿವಾಜಿ ಮತ್ತು ರಾಣಾ ಪ್ರತಾಪರಂತಹವರು ತಮ್ಮ ರಾಜ್ಯ ಸಂರಕ್ಷಣೆಗಾಗಿ ನಡೆಸಿದ ವೀರ ಹೋರಾಟಗಳನ್ನು, ಯಾವುದೋ ಒಂದು ಧರ್ಮದ ಸಂರಕ್ಷಣೆಗಾಗಿ ನಡೆಸಿದ ಹೋರಾಟಗಳಂತೆ ಪ್ರಸ್ತುತ ಪಡಿಸಿದ್ದಾರೆ. ಇವರು ಹೇಳುವ ಹಾಗೆ 'ಧರ್ಮೋ ರಕ್ಷತಿ ರಕ್ಷತಃ' ಎನ್ನುವುದರಲ್ಲಿ ಧರ್ಮ ಎಂದರೆ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಮುಂತಾದ ಮತ ರೂಪಿ ಧರ್ಮಗಳಲ್ಲ; ಬದಲಿಗೆ, ಸೃಷ್ಟಿಯ ಧಾರಕ ಶಕ್ತಿಯ ಬಗ್ಗೆ ಹೇಳುವ - ಎಲ್ಲ ಮತಗಳ ಮನುಷ್ಯರಿಗೂ ಅನ್ವಯಿಸುವ - ಆದಿ ಧರ್ಮ. ಹಾಗೇ ಇವರು, ಸೋಮನಾಥ ದೇವಸ್ಥಾನದ ಸುತ್ತ ಅಷ್ಟಬಂಧ ಹಾಕಿ ಅದನ್ನು ಯಾರೂ ಅತಿಕ್ರಮಿಸಲಾರರು ಎಂದು ತಮ್ಮ ರಾಜರನ್ನು ನಂಬಿಸಿದ್ದ ಮಧ್ಯಯುಗದ ಮೂಢ ಪುರೋಹಿತರನ್ನು 'ದೇವಾಲಯಕ್ಕೆ ನುಗ್ಗುವ ಮುನ್ನ ನಮ್ಮನ್ನು ಕೊಲ್ಲಿ' ಎಂದು ದೇವಾಲಯದ ಸುತ್ತ ನಿಂತಿದ್ದರೆಂದ್ದು ಹೇಳುತ್ತಾ, ಅವರನ್ನು ಗಾಂಧಿ ಯುಗದ ವೀರ ಸತ್ಯಾಗ್ರಹಿಗಳಂತೆ ಬಿಂಬಿಸಿದ್ದಾರೆ! ಇದಕ್ಕೆ ತಕ್ಕ ಹಾಗೇ, ಅಹಿಂಸೆಯ ಸ್ವರೂಪವನ್ನು ಮತ್ತು ಶಕ್ತಿಯನ್ನು ನಿರೂಪಿಸಲು ಗಾಂಧಿ ಹೇಳಿದ ಮಾತನ್ನು ಹಿಂಸೆಯನ್ನು ಸಮರ್ಥಿಸಲು ಬಳಸಿಕೊಂಡಿದ್ದಾರೆ. ಇದೆಲ್ಲವೂ ಇತಿಹಾಸಕ್ಕೆ, ನಮ್ಮ ಧರ್ಮ ಮೀಮಾಂಸೆಗೆ, ಗಾಂಧೀಜಿಗೆ ಮಾಡಿದ ಅಪಚಾರವೇ ಆಗಿದೆ.

ಇನ್ನು ಭಾರತದ ಅಧಃಪತನ ಬೌದ್ಧಧರ್ಮದಿಂದ ಆರಂಭವಾಯಿತೆಂದು ವಿವೇಕಾನಂದರು ಎಲ್ಲಿ ಹೇಳಿದ್ದಾರೆಂದು ಪ್ರತಾಪ ಸಿಂಹರೇ ಹೇಳಬೇಕು. ಬುದ್ಧನ ಮುನ್ನ ಭಾರತ ಯಾವ ಸ್ಥಿತಿಯಲ್ಲಿತ್ತು ಮತ್ತು ಅವನ ಕಾಲದಲ್ಲಿ ಮತ್ತು ಆನಂತರ ಯಾವ ಸ್ಥಿತಿ ತಲುಪಿತು ಎಂಬುದನ್ನು ಇತಿಹಾಸವೇ ಸ್ಪಷ್ಟಪಡಿಸುತ್ತದೆ. ಭಾರತದ ಧರ್ಮ, ಸಂಸ್ಕೃತಿ, ಕಲೆ, ತತ್ವಶಾಸ್ತ್ರ, ರಾಜಕಾರಣ ಇತ್ಯಾದಿಗಳೆಲ್ಲವೂ ಪ್ರವರ್ಧಮಾನಕ್ಕೆ ಬಂದು ಹೊರ ದೇಶಗಳಿಗೆ ಹರಡಲಾರಂಭಿಸಿದ್ದು ಯಾವಾಗ ಎಂಬುದನ್ನೂ ಇದು ತಿಳಿಸುತ್ತದೆ. ಅಷ್ಟೇ ಅಲ್ಲ, ಭಾರತದ ಇತಿಹಾಸದಲ್ಲಿನ ಇಬ್ಬರು ಅತಿ ದೊಡ್ಡ ಮತ್ತು ಘನ ಸಾಮ್ರಾಟರು ಅಶೋಕ ಮತ್ತು ಅಕ್ಬರ್, 'ಹಿಂದೂ'ಯೇತರರೇ ಆಗಿದ್ದರು ಎಂಬುದನ್ನು ಕೂಡಾ. ಪ್ರತಾಪ ಸಿಂಹರು ಹೇಳುವ ಹಿಂದೂ ಧರ್ಮ ಬುದ್ಧನ ಪೂರ್ವದಲ್ಲಿ ಇರಲಿಲ್ಲ. ಆಗ ಧರ್ಮವೆಂಬುದೇನಾದರೂ ಇದ್ದಿದ್ದರೆ, ಅದು ವೈದಿಕ ಧರ್ಮ. ಅದನ್ನು ಹಲವು ನೆಲೆಗಳಲ್ಲಿ ಪ್ರಶ್ನಿಸಲಾರಂಭಿಸಿದ್ದ ಶ್ರಮಣ ಪರಂಪರೆಯಲ್ಲಿ ಬಂದ ಬುದ್ಧ, ವೈದಿಕ ಧರ್ಮದ ಮೌಢ್ಯಗಳನ್ನೂ, ಕ್ರೂರ ಆಚರಣೆಗಳನ್ನೂ, ಸಾಮಾಜಿಕ ಅಸಮಾನತೆಗಳನ್ನೂ, ತನ್ನ ಜ್ಞಾನ - ಕರುಣೆಗಳ ಮೂಲಕ ಶುಚಿಗೊಳಿಸದನಷ್ಟೆ. ಬುದ್ಧನ ನಂತರದ ಎಷ್ಟೋ ವರ್ಷಗಳಲ್ಲಿ ವೈದಿಕ, ಬೌದ್ಧವೂ ಸೇರಿದಂತೆ ಇಲ್ಲಿನ ಜನಜೀವನದಲ್ಲಿ ಹುಟ್ಟಿಕೊಂಡ ಅನೇಕ ಸಂಪ್ರದಾಯಗಳು ಪರಸ್ಪರ ಹಾಸುಹೊಕ್ಕಾಗಿ ಮೂಡಿದ್ದ 'ಸಮ್ಮಿಶ್ರ ಧರ್ಮ'ವನ್ನಾಚರಿಸುವವರನ್ನು ಹೊರಗಿನವರು 'ಹಿಂದೂ'ಗಳೆಂದು (ಸಿಂಧೂ ನದಿಯ ಆ ಕಡೆಯವರು ಎಂಬರ್ಥದಲ್ಲಿ) ಕರೆದರಷ್ಟೆ.

ಹಾಗೆ ನೋಡಿದರೆ, ಇಂದಿನ ಹಿಂದೂ ಧರ್ಮವೆಂಬ ಅಖಂಡ ಕಲ್ಪನೆಯೇ; ಕ್ರಿಶ್ಚಿಯನ್, ಇಸ್ಲಾಂ ಮುಂತಾದ ಏಕ - ದೈವ, ಏಕ - ಪ್ರವಾದಿ ಮತ್ತು ಏಕ - ಧರ್ಮಗ್ರಂಥಾಧಾರಿತವಾದ ಮರುಭೂಮಿ ಧರ್ಮಗಳ ಎರಕದಲ್ಲಿ ಹುಟ್ಟಿದ ಆಧುನಿಕ ಕಲ್ಪನೆ ಎಂದೂ ಕೆಲವರು ವಾದಿಸುತ್ತಿದ್ದಾರೆ. ಅದೇನೇ ಇರಲಿ, ಬುದ್ಧನ ಧಾರ್ಮಿಕ ಶುಚೀಕರಣವನ್ನು ಸಹಿಸದ ಪಟ್ಟಭದ್ರರು ಬುದ್ಧನ ಕಾಲದಿಂದ ಈ ಕಾಲದವರೆಗೂ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಬುದ್ಧನ ವಿರುದ್ಧ ಅಪಪ್ರಚಾರವನ್ನು ನಡೆಸುತ್ತಲೇ ಬಂದಿದ್ದಾರೆ ಮತ್ತು ಬುದ್ಧನಿಲ್ಲದ ಹಿಂದೂ ಧರ್ಮವನ್ನು ಕಟ್ಟಲು ತಮ್ಮ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. ಅಂತಹವರಲ್ಲಿ ಪ್ರತಾಪಸಿಂಹರೂ ಒಬ್ಬರಷ್ಟೆ. ವಿವೇಕಾನಂದರು ತಮ್ಮೆಲ್ಲ ಭಾಷಣಗಳಲ್ಲಿ ಬುದ್ಧನನ್ನು 'ಭಗವಾನ್ ಬುದ್ಧದೇವ'ನೆಂದೇ ಸಂಬೋಧಿಸುತ್ತಿದ್ದರು ಮತ್ತು ತಮ್ಮ ಆರಾಧ್ಯ ದೈವವೆಂದು ನಂಬಿದ್ದರು. ಅಲ್ಲದೆ, ಆತನನ್ನು, ಹಿಂದೂ ಧರ್ಮ ಯಾವುದನ್ನು ಸನಾತನ ಧರ್ಮವೆಂದು ಕರೆಯುವುದೋ ಅದರ ಉದ್ಧಾರಕ ಮತ್ತು ಭಾರತದ ಬೆಳಕು ಎಂದೇ ಹೇಳುತ್ತಾ ಬಂದಿದ್ದರು. ಅಂತಹ ವಿವೇಕಾನಂದರನ್ನು ಪ್ರತಾಪ ಸಿಂಹರಂತಹವರು ಬೌದ್ಧ ಧರ್ಮದ ನಿಂದಕರೆಂದು ಚಿತ್ರಿಸ ಹೊರಟಿರುವುದು, ಅನ್ಯಮತಗಳ ಹಾವಳಿಯನ್ನು ಎದುರಿಸುವ ನೆಪದಲ್ಲಿ ಇವರು
ನಡೆಸುತ್ತಿರುವ ಧಾರ್ಮಿಕ ರಾಜಕಾರಣ ಎಷ್ಟು ಘಾತುಕತನದಿಂದ ಕೂಡಿದೆ ಎಂಬುದನ್ನಷ್ಟೇ ತೋರಿಸುತ್ತದೆ. ಇಂತಹವರಿಗೆ ಮತ್ತೇನೂ ಹೇಳಿಯೂ ಉಪಯೋಗವಿಲ್ಲವಾದ್ದರಿಂದ, ಅವರಿಗೆ ವಿವೇಕಾನಂದರ ಢಾಕ್ಕಾ ಭಾಷಣದ ಈ ಮಾತುಗಳನ್ನೇ ನೆನಪಿಸುವುದು ಉಚಿತವೆಂದು ಇಲ್ಲಿ ಉದ್ಧರಿಸುತ್ತಿದ್ದೇನೆ:

"....ನಿಮ್ಮ ಪೂರ್ವೀಕರ ಮಾತಿನಲ್ಲಿ ನಿಮಗೆ ನಂಬಿಕೆ ಇನ್ನೂ ಇದ್ದರೆ, ಈ ಕ್ಷಣವೇ ಹಿಂದೆ ಕುಮಾರಿಲ ಭಟ್ಟ ತನ್ನ ಬಗ್ಗೆ ಸುಳ್ಳು ಹೇಳಿಕೊಂಡು ಒಬ್ಬ ಬೌದ್ಧ ಗುರುವಿನಲ್ಲಿ ಕಲಿತದ್ದರ ಆಧಾರದ ಮೇಲೆ, ಆ ಗುರುವನ್ನೇ ವಾದದಲ್ಲಿ ಸೋಲಿಸಿ; ಆನಂತರ ಸುಳ್ಳು ಹೇಳಿ ಗೈದ ಗುರು ದ್ರೋಹದ ಪ್ರಾಯಶ್ಚಿತ್ತಕ್ಕಾಗಿ ತುಷಾನಲದಲ್ಲಿ ಬಿದ್ದಂತೆ ನೀವೂ ಬಿದ್ದು ಪ್ರಾಯಶ್ಚಿತ್ತ ಮಾಡಿಕೊಳ್ಳಿ. ಇದನ್ನು ಮಾಡುವುದಕ್ಕೆ ನಿಮಗೆ ಧೈರ್ಯವಿಲ್ಲದೇ ಇದ್ದಲ್ಲಿ, ನಿಮ್ಮ ತಪ್ಪನ್ನು ಒಪ್ಪಿಕೊಂಡು ಎಲ್ಲರಿಗೂ ಸಹಾಯ ಮಾಡಿ. ಜ್ಞಾನಾಗಾರದ ಬಾಗಿಲನ್ನು ಎಲ್ಲರಿಗೂ ತೆರೆದು ಸಹಾಯ ಮಾಡಿ. ದುರ್ಬಲ ಜನ ಸಾಮಾನ್ಯರಿಗೆ ಮತ್ತೊಮ್ಮೆ ಅವರಿಗೆ ನ್ಯಾಯವಾಗಿ ಸಲ್ಲುವ ಹಕ್ಕು ಬಾಧ್ಯತೆಗಳನ್ನು ಕೊಡಿ.''

ವಿವೇಕಾನಂದರ ಈ ಎಚ್ಚರಿಕೆಯ ಮಾತುಗಳಿಗೆ ಕಿವಿಗೊಡದೆ ತಮ್ಮ ಭೋಜನ - ಬೈಠಕ್ಕುಗಳಲ್ಲೇ ಕಾಲ ಕಳೆದ ಬುದ್ಧ ನಿಂದಕರು, ತಾವು ಮಾಡದ ಕೆಲಸವನ್ನು ಕ್ರಿಶ್ಚಿಯನ್ ಮಿಷನರಿಗಳು ಮಾಡತೊಡಗಿದಾಗ, ತಮ್ಮ ಸಾಮ್ರಾಜ್ಯ ಕುಸಿಯುತ್ತಿರುವ ಆತಂಕದಲ್ಲಿ ಈಗ ದೇಶ ಪ್ರೇಮ ಹಾಗೂ ಧರ್ಮ ಪ್ರೇಮದ ಬೊಬ್ಬೆ ಹೊಡೆಯತೊಡಗಿದ್ದಾರೆ. ಪ್ರತಾಪಸಿಂಹರದೂ ಅಂತಹ ಒಂದು ಬೊಬ್ಬೆಯೇ ಆಗಿದೆ. ಇಂತಹ ಬೊಬ್ಬೆಯಿಂದ ಮತಾಂತರವೂ ನಿಲ್ಲದು, ಹಿಂದೂ ಧರ್ಮವೂ ಉದ್ಧಾರವಾಗದು.'

* * *

ಈ ನನ್ನ ಪತ್ರದ ನಂತರವೂ ಈ ಪತ್ರಿಕೆ, ನಾನು ಈ ಪತ್ರದಲ್ಲಿ ಉಲ್ಲೇಖಿಸಿರುವ ಸುಳ್ಳುಗಳನ್ನು ಒಳಗೊಂಡ ಮತ್ತು ಈ ಹಿಂದೂ ದೇಶದಲ್ಲಿ ಹಿಂದೂಗಳಿಗೇ ರಕ್ಷಣೆಯಿಲ್ಲ ಎಂದು ಬೊಬ್ಬೆ ಹಾಕುವ ಓದುಗರ ಪತ್ರಗಳನ್ನು ಮತ್ತೆ ಮತ್ತೆ ಪ್ರಕಟಿಸುತ್ತಲೇ ಇದೆ ಎಂದರೆ, ಇದರ ಉದ್ದೇಶ ಏನೆಂಬುದು ಸ್ಪಷ್ಟವಾದೀತು. ಇದೇ ಪತ್ರಿಕೆ ಗೋಕರ್ಣ ದೇವಸ್ಥಾನದ ಹಸ್ತಾಂತರದ ವಿರುದ್ಧ ಗೋಕರ್ಣದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದ್ದರೂ, ಅದರ ಬಗ್ಗೆ ಒಂದು ಸಾಲೂ ಪ್ರಕಟಿಸಿದೆ, ನಾಲ್ಕು ದಿನ ನಿರಂತರವಾಗಿ ಹಸ್ತಾಂತರ ಸುಗಮ, ಎಲ್ಲರಿಗೂ ಸಂತೋಷ ತಂದಿದೆ ಎಂದು ಏಕೆ ಪ್ರಕಟಿಸುತ್ತಿದೆ ಎಂದು ವಿಚಾರಿಸಿದಾಗ ಗೊತ್ತಾದದ್ದು ಇದರ ಸಂಪಾದಕ ಮಹಾಶಯನೂ ರಾಮಚಂದ್ರಾಪುರ ಮಠದ ಬಾಧ್ಯಸ್ಥನೇ ಎಂದು! ಇದು ನಮ್ಮ ವಸಿಷ್ಠ ಪರಂಪರೆಯ ಒಂದು ಮಾದರಿ. ಮೊನ್ನೆ ನನ್ನ ಸ್ನೇಹಿತರೊಬ್ಬರು ಈ ಪತ್ರಿಕೆಯ ವ್ಯಾಪಕ ಪ್ರಸಾರದ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಾ, ತಮ್ಮ ತಂದೆಗೆ ಈ ಪತ್ರಿಕೆಯಲ್ಲಿ ಬರುವುದೆಲ್ಲವೂ ವೇದವಾಕ್ಯವಾಗಿದೆ ಎಂದು ಅಲವತ್ತುಕೊಂಡಾಗ, ನನಗೆ
'ವೇದವಾಕ್ಯ'ವೆಂಬದರ ನಿಜವಾದ ಅರ್ಥ ಗೊತ್ತಾದಂತಾಗಿ ಗಾಬರಿಯಾದೆ!