ಶಾರದಾ ಪ್ರಸಾದ್: ಮೂರು ಭೇಟಿಗಳು ಮತ್ತು ಒಂದು ಪ್ರಶ್ನೆ!

ಶಾರದಾ ಪ್ರಸಾದ್: ಮೂರು ಭೇಟಿಗಳು ಮತ್ತು ಒಂದು ಪ್ರಶ್ನೆ!

ಬರಹ

ಶಾರದಾ ಪ್ರಸಾದ್: ಮೂರು ಭೇಟಿಗಳು ಮತ್ತು ಒಂದು ಪ್ರಶ್ನೆ!

ನಾನು ದೆಹಲಿಯಲ್ಲಿದ್ದ ಅವಧಿಯಲ್ಲಿ(1975ರಿಂದ 1981) ಶಾರದಾ ಪ್ರಸಾದರನ್ನು ಭೇಟಿಯಾದದ್ದು ಮೂರೇ ಮೂರು ಬಾರಿ. ನಾನು 1975ರಲ್ಲಿ ದೆಹಲಿಗೆ ಆಕಾಶವಾಣಿ ವಾರ್ತಾ ವಿಭಾಗದ ಕೆಲಸದ ಮೇಲೆ ಹೋದಾಗ, ಅವರು ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಪ್ರಧಾನ ಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿದ್ದು; ದೆಹಲಿಯಲ್ಲಿದ್ದ ಕನ್ನಡದ ಅಧಿಕಾರಿಗಳಲ್ಲಿ ಅಧಿಕಾರ ಕೇಂದ್ರಕ್ಕೆ ಬಹು ಹತ್ತಿರವಿದ್ದ ಅಧಿಕಾರಿ ಅವರೇ ಆಗಿದ್ದರು. ಹಾಗಾಗಿ ಅವರನ್ನು ಭೇಟಿ ಮಾಡುವುದು ಅಷ್ಟು ಸುಲಭದ ಅಥವಾ ಸುಗಮವಾದ ಕೆಲಸವಾಗಿರಲಿಲ್ಲ. ಆದರೆ ಅವರು ಆಗಾಗ್ಗೆ ದೆಹಲಿ ಕನ್ನಡ ಸಂಘದ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದುದೂ ಉಂಟು. ಅಂತಹ ಸಂದರ್ಭದಲ್ಲಿ ನಾನು ಮೊದಲ ಬಾರಿಗೆ ಅವರನ್ನು ಕಂಡದ್ದು.

1975ರಲ್ಲಿ, ತುರ್ತು ಪರಿಸ್ಥಿತಿ ಘೋಷಣೆಯಾಗುವ ಸ್ವಲ್ಪ ಮುನ್ನ ಆಕಾಶವಾಣಿಯ ನನ್ನ ಹಿರಿಯ ಸಹೋದ್ಯೋಗಿ ಎಚ್.ಕೆ.ರಾಮಕೃಷ್ಣ ಅವರು ನನ್ನನ್ನು ಅಂತಹ ಸಮಾರಂಭವೊಂದರಲ್ಲಿ 'ಕನ್ನಡ ಲೇಖಕ' ಎಂದು ಶಾರದಾ ಪ್ರಸಾದರಿಗೆ ಪರಿಚಯಿಸಿದರು. ತಕ್ಷಣ ಅವರು 'ಸಾಕ್ಷಿ'ಯಲ್ಲಿ ಸಿನೆಮಾ ಬಗ್ಗೆ ಬರೆದಿರುವವರು ನೀವೇ ಅಲ್ಲವೇ ಎಂದು ವಿಚಾರಿಸಿಕೊಂಡು, ನೀವು ದೆಹಲಿಗೆ ಬಂದಿರುವುದು ಸಂತೋಷ ಎಂದು ನನ್ನ ಕೈ ಕುಲಕಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡರು. ಆ ಹಿರಿಯ ಅಧಿಕಾರಿ ನನ್ನಂತಹ ಕಿರಿಯನನ್ನು ಅಷ್ಟೊಂದು ಆದರ ಮತ್ತು ಆತ್ಮೀಯತೆಯಿಂದ ಮಾತನಾಡಿಸಿದ್ದು ನನಗೆ ಸಂಭ್ರಮದ ಜೊತೆಗೆ ಸ್ವಲ್ಪ ಗಾಬರಿಯೂ ಉಂಟಾಗಿತ್ತು. ಏಕೆಂದರೆ, ಆಧಿಕಾರಿಗಳ ಸನಿಹ ಎಂದರೆ ನನಗೆ ಮೊದಲಿಂದಲೂ ಮುಜುಗರದ ವಿಷಯವೇ! ಆಗ ನಾನು ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದಲ್ಲಿ ಕೆ.ವಿ.ಸುಬ್ಬಣ್ಣ ಅವರು ಪ್ರಕಟಿಸುತ್ತಿದ್ದ 'ಸಾಕ್ಷಿ' ಪತ್ರಿಕೆಯಲ್ಲಿ ಅಂದು ನವ್ಯ ಸಾಹಿತ್ಯದ ಜೊತೆಗೇ ಬೆಳೆಯುತ್ತಿದ್ದ ಹೊಸ ಸಿನೆಮಾ ಚಳುವಳಿಯ ಬಗ್ಗೆ ಉತ್ಸಾಹದಿಂದ ಬರೆದಿದ್ದೆ. ಅದನ್ನು ಗಮನಿಸಿದ್ದ ಅವರು ನಿಮಗೆ ಸಿನೆಮಾಗಳಲ್ಲಿ ಅಷ್ಟೊಂದು ಆಸಕ್ತಿಯಿದ್ದರೆ, 'ದೆಹಲಿ ಫಿಲ್ಮ್ ಸೊಸೈಟಿ'ಗೆ ಸದಸ್ಯನಾಗುವಂತೆಯೂ, ಅದಕ್ಕೆ ತಾವು ಪರಿಚಯ ಪತ್ರ ನೀಡುವುದಾಗಿಯೂ ಹೇಳಿದರು. ಅಲ್ಲದೆ, ನನ್ನ ಸಾಹಿತ್ಯ ಓದಿನ ಬಗ್ಗೆ ಕೂತೂಹಲದಿಂದ ವಿಚಾರಿಸಿಕೊಂಡು, ರವೀಂದ್ರ ಭವನದಲ್ಲಿ ಒಳ್ಳೆಯ ಕನ್ನಡ ಪುಸ್ತಕಗಳ ಸಂಗ್ರಹ ಇರುವುದಾಗಿಯೂ, ಅಲ್ಲಿ ನನ್ನ ಓದನ್ನು ಮುಂದುವರಿಸಬೇಕೆಂದೂ ಸೂಚಿಸಿ ಮತ್ತೆ ಕೈಕುಲುಕಿ ಬೀಳ್ಕೊಟ್ಟರು.

ಆದರೆ ಒಂದೆರಡು ವರ್ಷಗಳ ನಂತರವಷ್ಟೇ ನಾನು ಅವರನ್ನು ಮತ್ತೆ ಕಾಣಲು ಸಾಧ್ಯವಾದದ್ದು. ಕನ್ನಡ ಸಂಘದ ಸಮಾರಂಭವೊಂದಕ್ಕೆ ತಡವಾಗಿ ಹೋದ ನಾನು ಆಸನಗಳ ಸಾಲುಗಳ ಮಧ್ಯೆ ಜಾಗ ಹುಡುಕುತ್ತಾ ಹೊರಟಿದ್ದಾಗ, ವೇದಿಕೆಯ ಮೇಲಿದ್ದ ಶಾರದಾ ಪ್ರಸಾದರು ಅಲ್ಲಿಂದಲೇ ಕೈ ಬೀಸಿ ಪರಿಚಯದ ನಗೆ ನಕ್ಕರು. ನಾನು ತಬ್ಬಿಬ್ಬಾಗಿ, ಬಹುಶಃ ಅವರು ನನ್ನ ಬೆನ್ನ ಹಿಂದಿನ ಸಾಲುಗಳಲ್ಲಿ ಕೂತಿರುವ ಮತ್ಯಾರೋ ಮುಖ್ಯ ವ್ಯಕ್ತಿ ಅಥವಾ ಪರಿಚಿತರನ್ನು ಗುರುತಿಸಿ ಕೈಬೀಸಿರಬೇಕೆಂದುಕೊಂಡು ಹಿಂದಕ್ಕೆ ನೋಡಲು ಯತ್ನಿಸುತ್ತಿದ್ದಂತೆಯೇ, ಅವರು ಮತ್ತೆ ನನ್ನತ್ತಲೇ ಕೈ ಆಡಿಸುತ್ತಾ, ನಕ್ಕರು. ಎರಡು ವರ್ಷಗಳ ಕಾಲ ಅವರನ್ನು ಭೇಟಿಯೇ ಆಗದ ನಾನು ಅವರಿಗೆ ಅಷ್ಟು ಮುಖ್ಯ ವ್ಯಕ್ತಿಯಾಗಿರಲು ಹೇಗೆ ಸಾಧ್ಯ ಹಾಗೂ ಏನು ಕಾರಣ ಎಂದು ಯೋಚಿಸುತ್ತಲೇ, ಅರ್ಧ ಸಂಭ್ರಮ - ಅರ್ಧ ಗೊಂದಲದಲ್ಲಿ ಸಮಾರಂಭದುದ್ದಕ್ಕೂ ಕೂತಿದ್ದೆ. ಸಮಾರಂಭದ ನಂತರ ದಡಬಡನೆ ಹೋಗಿ ಭೇಟಿಯಾದೆ. ಅವರು ಉಭಯ ಕುಶಲೋಪರಿಯ ನಂತರ ಅವರಿಂದ ಹೊರಟ ಉದ್ಗಾರ:, 'So you are turning political!'. ನನಗೆ ಅಂದಿನ ನನ್ನ ಅಂದಿನ ಚಟುವಟಿಕೆಗಳ ಹಿನ್ನೆಲೆಯಲ್ಲಿ ಗಾಬರಿಯಾಗಿ, 'ಯಾಕೆ ಸರ್?' ಎಂದೆ. ಅವರು 'ನಿಮ್ಮ ಸಖೋರೋವ್ ಲೇಖನ ಓದಿದೆ' ಎಂದು ಕಂಡೂ ಕಾಣದಂತೆ ನಕ್ಕರು. ನಾನು ಸಮಾಧಾನದ ನಿಟ್ಟುಸಿರಿಟ್ಟೆ! ಅದು ಆ ದಿನಗಳಲ್ಲಿ ಸುದ್ದಿಯಾಗಿದ್ದ ಸೋವಿಯತ್ ಒಕ್ಕೂಟದ ಭಿನ್ನಮತೀಯ ವಿಜ್ಞಾನಿ ಸಖರೋವ್ ಬಗ್ಗೆ ನಾನು ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ 'ಸಾಕ್ಷಿ'ಯಲ್ಲಿ ಬರೆದಿದ್ದ ಲೇಖನ. ನಂತರ ಆ ಲೇಖನದ ಬಗ್ಗೆ ಏನೂ ಮಾತಾಡದೆ ಇದ್ದಕ್ಕಿದ್ದಂತೆ, 'ದೆಹಲಿ ಫಿಲ್ಮ್ ಸೊಸೈಟಿಗೆ ಸದಸ್ಯರಾದಿರಾ?' ಎಂದು ಕೇಳಿದರು. ಅವರ ನೆನಪು ಹಾಗೂ ಈ ಆತ್ಮೀಯತೆ ನನ್ನನ್ನು ದಂಗು ಬಡಿಸಿತು. ಆ ಹೊತ್ತಿಗೆ ತುರ್ತು ಪರಿಸ್ಥಿತಿ ಘೋಷಣೆಯಾಗಿ ನಾನು ಹಲವು ಗೆಳೆಯರ ಸ್ಫೂರ್ತಿಯಲ್ಲಿ ಆಗ ನನ್ನೆಲ್ಲಾ ಆಸಕ್ತಿಯನ್ನು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದುದರಿಂದ, 'ಕ್ಷಮಿಸಿ ಸರ್, ಆಗಲಿಲ್ಲ' ಎಂದೆ. ಅವರು ಏಕೆ ಎಂದೇನೂ ಕೇಳಲಿಲ್ಲ. 'Bad boy!' ಎಂದಷ್ಟೇ ಹೇಳಿ ಇತರರೊಂದಿಗೆ ಮಾತಿಗೆ ಹೊರಳಿದರು.

ಮತ್ತೆ ಅವರನ್ನು ನಾನು ಭೇಟಿ ಮಾಡಿದ್ದು ಪ್ರಧಾನ ಮಂತ್ರಿಯ ಕಾರ್ಯಾಲಯದಲ್ಲಿ. 1978ರಲ್ಲೋ 79ರಲ್ಲೋ ಎಂದು ಕಾಣುತ್ತದೆ. ಆ ಹೊತ್ತಿಗೆ ಇಂದಿರಾ ಗಾಂಧಿ ಪದಚ್ಯುತರಾಗಿ ಮೊರಾರ್ಜಿ ದೇಸಾಯಿ ಪ್ರಧಾನ ಮಂತ್ರಿಯಾಗಿ, ಅವರು ಶಾರದಾ ಪ್ರಸಾದರನ್ನೇ ತಮ್ಮ ಮಾಧ್ಯಮ ಸಲಹಾಗಾರರನ್ನಾಗಿ ನೇಮಿಸಿಕೊಂಡಿದ್ದರು. ಬೆಂಗಳೂರಿನಿಂದ ಬಂದಿದ್ದ ನನ್ನ ಗಣಿತಶಾಸ್ತ್ರ ಪ್ರಾಧ್ಯಾಪಕ ಪ್ರೊ|| ರಮೇಶನ್ ಅವರು ತಮ್ಮ ಸಹಪಾಠಿ ಶಾರದಾ ಪ್ರಸಾದರನ್ನು ಭೇಟಿ ಮಾಡಬೇಕೆಂದಾಗ. ನಾನು ಫೋನ್ ಮಾಡಿ ಸಚಿವಾಲಯದಲ್ಲಿದ್ದ ಅವರ ಕಛೇರಿಗೆ ಹೋದೆವು. ಅವರು ತಮ್ಮ ಕಛೇರಿಯ ಬಾಗಿಲ ಬಳಿಯೇ ಬಂದು ನಮ್ಮನ್ನು ಬರಮಾಡಿಕೊಂಡರು. ನನ್ನ ಪ್ರಾಧ್ಯಾಪಕರು ನನ್ನ ಬಗ್ಗೆ 'ಇವರು ನಿಮಗೆ ಗೊತ್ತೇ?' ಎಂದು ಕೇಳಿದಾಗ, ಅವರು ಸಣ್ಣಗೆ ನಕ್ಕು, 'Oh Yes, he is the bad boy of Delhi Kannada World!' ಎಂದೆನ್ನುತ್ತಾ ನನ್ನಲ್ಲಿ ಕೊಂಚ ಗಾಬರಿಯನ್ನೇ ಉಂಟು ಮಾಡಿದರು. ಏಕೆಂದರೆ ಕೆಲವೇ ದಿನಗಳ ಹಿಂದೆ ನಾವು ಕೆಲವು ಸಮಾಜವಾದಿ ಗೆಳೆಯರು, ಜನತಾ ಸರ್ಕಾರ ಜೆಪಿಯವರ ಸೂಚನೆಗಳನ್ನು ನಿರ್ಲಕ್ಷಿಸುತ್ತಿರುವುದರ ವಿರುದ್ಧ ರಾಜಘಾಟ್ನಲ್ಲಿ ಹಿರಿಯ ಪತ್ರಕರ್ತ ಕುಲದೀಪ್ ನಯ್ಯಾರ್ರ ನೇತೃತ್ವದಲ್ಲಿ ಧರಣಿ ಕೂತಿದ್ದರ ಚಿತ್ರ 'ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆಯ ಮುಖಪುಟದಲ್ಲೇ ಪ್ರಕಟವಾಗಿ, ನನ್ನ ಸಹೋದ್ಯೋಗಿಗಳೂ ಸೇರಿದಂತೆ ನನ್ನ ಪರಿಚಿತರೆಲ್ಲರ ಗಮನ ಸೆಳೆದಿತ್ತು.

ಆದರೆ ಶಾರದಾ ಪ್ರಸಾದರು, 'ಅಲ್ಲಪ್ಪಾ, ನಿಮ್ಮನ್ನು ಸಾಹಿತ್ಯ ಗೊತ್ತಿರುವವರು ಎಂದು ಸಾಹಿತ್ಯ ಸಮ್ಮೇಳನದ ಸಮಿತಿಯೊಂದಕ್ಕೆ ಹಾಕಿದರೆ, ನೀವು ಆ ಕಡೆ ಸುಳಿಯಲೇ ಇಲ್ಲವಂತೆ!' ಎಂದು ಆಗ ದೆಹಲಿಯಲ್ಲಿ ನಡೆದಿದ್ದ ಅಖಿಲ ಭಾರತ ಸಮ್ಮೇಳನದ ಬಗ್ಗೆ ಪ್ರಸ್ತಾಪಿಸಿ ನನ್ನನ್ನ್ನು ಛೇಡಿಸಿದಾಗ, ನಾನು 'ಸದ್ಯ!' ಎಂದು ನಿಟ್ಟುಸಿರುಬಿಟ್ಟೆ. ಅಡಿಗರು ಸಾಹಿತ್ಯ ಪರಿಷತ್ತಿನ ಬಗ್ಗೆ ಬರೆದಿದ್ದುದನ್ನು ಓದಿದ್ದ ನಾನು ಆಗ ಆ ಕಡೆ ಸುಳಿಯುವುದೇ ಸಾಂಸ್ಕೃತಿಕ ಪಾಪವೆಂದೇ ಪರಿಗಣಿಸಿ ದೂರವಿದ್ದೆ. (ನಂತರ ಅಡಿಗರೇ ಉಲ್ಟಾ ಹೊಡೆದು, ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಒಪ್ಪಿ ನಮ್ಮನ್ನೆಲ್ಲ ಮುಜುಗರಕ್ಕೀಡು ಮಾಡಿದ್ದು ಬೇರೆ ವಿಷಯ!) ಅದನ್ನು ಅವರಿಗೆ ಹೇಳಿದಾಗ,'ಇರಬಹುದು. ಆದರೆ ನಿಮ್ಮಂತಹವರು ಅಲ್ಲಿ ಕೆಲಸ ಮಾಡಿ ಅದಕ್ಕೆ ಒಳ್ಳೆಯ ಹೆಸರು ತರಬಹುದಲ್ಲ!' ಎಂದು ಪ್ರತಿಕ್ರಿಯಿಸಿ, ನಂತರ ಅದೆಲ್ಲ ಮುಖ್ಯವಲ್ಲವೆಂಬಂತೆ ನನ್ನ ಪ್ರಾಧ್ಯಾಪಕ ಮತ್ತು ಅವರ ಗೆಳೆಯ ಪ್ರೊ|| ರಮೇಶನ್‌ರೊಂದಿಗೆ ತಮ್ಮ ಹಳೆಯ ನೆನುಪುಗಳ ಬುತ್ತಿಯನ್ನು ಬಿಚ್ಚಿಕೊಂಡು ಮಾತಿಗೆ ತೊಡಗಿದರು. ಮುಖ್ಯವಾಗಿ ಬ್ರಿಟಿಷ್ ಆಡಳಿತದ ಮತ್ತು ಸ್ವಾತಂತ್ರ್ಯ ಹೋರಾಟದ ಕಾಲದ ನೆನಪುಗಳು.

ನಾನು ಸುಮ್ಮನೆ ಇದನ್ನು ಕೂತು ಕೇಳುತ್ತಾ ಇದ್ದಂತೆ, ಸ್ವಾತಂತ್ರ್ಯ ಹೋರಾಟದಲ್ಲಿ ವಿದ್ಯಾರ್ಥಿ ನಾಯಕರಾಗಿ ಸ್ವತಃ ಭಾಗವಹಿಸಿದ್ದ ಶಾರದಾ ಪ್ರಸಾದರನ್ನು ನನ್ನನ್ನು ಬಹು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಯನ್ನು ಕೇಳುವ ತೀವ್ರ ತುಡಿತ ಉಂಟಾಯಿತು. ತಡೆಯಲಾರದೆ, ಅಲ್ಲಿಂದ ಹೊರಡುವ ಮುನ್ನ ಅವರ ಅನುಮತಿ ಬೇಡಿ ಕೇಳಿಯೇ ಬಿಟ್ಟೆ: 'ಸರ್ ನೀವೇಕೆ ತುರ್ತು ಪರಿಸ್ಥಿತಿ ಸಮಯದಲ್ಲಿ ನಿಮ್ಮ ಕೆಲಸಕ್ಕೆ ರಾಜೀನಾಮೆ ನೀಡಲಿಲ್ಲ ಅಥವಾ ಕೆಲಸ ಬದಲಾಯಿಸಿಕೊಳ್ಳಲಿಲ್ಲ?' ಅವರು ಕೊಂಚವೂ ಮುಜುಗರಕ್ಕೊಳಗಾಗದೆ ಅಥವಾ ಅಪ್ರತಿಭರಾಗದೆ, ಈ ಕಿರಿಯನ ತಲೆ ಪ್ರತಿಷ್ಠೆಯ ಪ್ರಶ್ನೆಗೆ ಥಣ್ಣಗೆ ಹೀಗೆ ಉತ್ತರಿಸಿದರು: 'ನೀವು ಏಕೆ ರಾಜೀನಾಮೆ ಕೊಡಲಾಗಲಿಲ್ಲವೋ ಅಥವಾ ಕೆಲಸ ಬದಲಾಯಿಸಿಕೊಳ್ಳಲಿಲ್ಲವೋ ಅದೇ ಕಾರಣಕ್ಕೆ!"

ಶಾರದಾ ಪ್ರಸಾದರು ಎಂದೂ ತಾವಿದ್ದ ಉನ್ನತ ಹುದ್ದೆಯನ್ನು ಅಧಿಕಾರ ಸ್ಥಾನವೆಂದು ಭಾವಿಸಿಕೊಳ್ಳಲಿಲ್ಲ್ಲ ಮತ್ತು ತಮ್ಮನ್ನು ಎಂದೂ ಇತರರಿಗಿಂತ ಸ್ಥಾನಮಾನಗಳಲ್ಲಿ ದೊಡ್ಡವನು ಎಂದು ಪರಿಗಣಿಸಿಕೊಂಡಿರಲಿಲ್ಲ. ಹಾಗಾಗಿಯೇ ಅವರು ನನ್ನಂತಹ ಕಿರಿಯನೊಂದಿಗೆ ಮತ್ತು ಸ್ಥಾನಮಾನಗಳಲ್ಲಿ ತಮಗಿಂತ ಬಹಳ ಕೆಳಗಿದ್ದವನೊಂದಿಗೆ ತಮ್ಮನ್ನು ಹೋಲಿಸಿಕೊಂಡು, ಆ ಉತ್ತರ ಕೊಡಲು ಸಾಧ್ಯವಾಗಿತ್ತು. ಅಷ್ಟೇ ಅಲ್ಲ, ಅನ್ಯರಿಂದ ಮಾತ್ರ ಆದರ್ಶ ನಿರೀಕ್ಷಿಸುವ ಅಂದಿನ ನನ್ನ ಅಪ್ರಬುದ್ಧತೆಯನ್ನೂ ಎತ್ತಿ ತೋರಿಸಿತ್ತು. ನನಗೆ ನಾಚಿಕೆಯಾದಂತಾಗಿ, ಆ ಹಿರಿಯ ಹಾಗೂ ಸ್ಥಿತಪ್ರಜ್ಞನಿಗೆ ನಮಿಸಿ ಅವರ ಕಾರ್ಯಾಲಯದಿಂದ ಹೊರಬಂದೆ.