ಬಸ್ ಕಂಡಕ್ಟರ್
ಹಳೆಯ ಕಡತಗಳಿಂದ -- ಚೆನ್ನೈನಲ್ಲಿದ್ದಾಗಿನ ನನ್ನ ಒಂದು ಅನುಭವ
Adyar? ಪ್ರಶ್ನೆಯಲ್ಲಿ ಕರ್ತೃವಿಲ್ಲ-ಕ್ರಿಯಾಪದವಿಲ್ಲ
ಆದರೆ ಪ್ರಶ್ನೆಯನ್ನು ಸರಿಪಡಿಸಲು
ಆತನೇನೂ ವ್ಯಾಕರಣ ಪಂಡಿತನಲ್ಲ
ಅವನ ಹಾವ-ಭಾವ, ಮುಖಚಹರೆ ಅರಿತು
ಬಸ್ಸನ್ನೇರಿದರೆ ಶುರುವಾಗುತ್ತದೆ
ನಮ್ಮ-ಅವನ ಸಂವಾದ, ಸಂಕೇತ ಭಾಷೆಯಲ್ಲಿ
ನಮ್ಮೂರಿವನಂತೆ ಅಲ್ಲ ಈತ,
ಅವನಿಗೇ ಒಂದು ಮೀಸಲಾಗಿರಿಸಿದ ಸೀಟು
ಬಿಟ್ಟರೆ ಎಲ್ಲಿ ಯಾರು ಕದ್ದೊಯ್ವರೊ ಎಂದು
ಮೇಲೇಳುವುದೇ ಇಲ್ಲ ಆಸಾಮಿ
ಟಿಕೇಟು ಪಡೆದು, ಸೀಟಿದ್ದರೆ ಕುಳಿತು
ಇಲ್ಲದಿದ್ದರೆ ಪೋಲಿಸರ ಮುಂದೆ ನಿಂತ
ಅಪರಾಧಿಗಳಂತೆ ಕೈಮೇಲೆತ್ತಿ ನಿಲ್ಲಬೇಕು
ಸುತ್ತಲಿನ ಅರ್ಥವಾಗದ ಸಂಭಾಷಣೆಗೆ ಕಿವಿಗೊಡುತ್ತ
ಈತನಿಗೂ ನಮ್ಮೂರಿನಾತನಿಗೂ ಅಷ್ಟೇನೂ
ವ್ಯತ್ಯಾಸವಿಲ್ಲ - ಅದೇ ಖಟಿಪಿಟಿ, ತರಲೆ ತಗಾದೆ
ಚಿಲ್ಲರೆಯಿಲ್ಲೆಂಬ ಗೊಣಗೊಣ, ಯಾರ್ರೀ ಟಿಕೆಟ್ ಎಂಬ ಕೂಗು
ಒಂದೇ ವ್ಯತ್ಯಾಸವೆಂದರೆ ಅರ್ಥವಾಗದ ಭಾಷೆ
ಒಮ್ಮೊಮ್ಮೆ ಈತನನ್ನು ನೋಡಿದಾಗಲೆಲ್ಲ
ತಲೆಯೊಳಗೆ ನುಸುಳುತ್ತದೆ ತತ್ವ-ವೇದಾಂತ
"ಯಮನದೂ-ಇವನ ಕೆಲಸವೂ ಹೆಚ್ಚು-ಕಮ್ಮಿ ಒಂದೇ ರೀತಿ
ಅವರವರ ಸ್ಥಳ-ನಿಲ್ದಾಣ ಬರುತ್ತಿದ್ದಂತೆ ಬಸ್
ನಿಲ್ಲಿಸಿ ಇಳಿಸೇಬಿಡುತ್ತಾನೆ ಭೂಪ"
~ ಮಾಪ್ರಶಾಂತ