ಪರೀಕ್ಷೆಗೆ ತಯಾರಿ:ಅಂತರ್ಜಾಲ ತಾಣಕ್ಕೆ ಲಗ್ಗೆ!

ಪರೀಕ್ಷೆಗೆ ತಯಾರಿ:ಅಂತರ್ಜಾಲ ತಾಣಕ್ಕೆ ಲಗ್ಗೆ!

ಬರಹ


    ಕಂಪ್ಯೂಟರ್ ಜಾಲವನ್ನು ಬೇಧಿಸುವುದು ಕೆಲವರ ಹವ್ಯಾಸ. ಜನಪ್ರಿಯ ತಾಣಗಳನ್ನು ಹಾಳುಗೆಡವಿ ಸುದ್ದಿ ಮಾಡುವವರು ಕೆಲವರಾದರೆ, ಬ್ಯಾಂಕು ಕ್ರೆಡಿಟ್ ಕಾರ್ಡ್,ಪಾಸ್‌ವರ್ಡ್ ಕದ್ದು ಸುಲಭದಲ್ಲಿ ಶ್ರೀಮಂತರಾಗಲು ಹವಣಿಸುವವರು ಇನ್ನು ಕೆಲವರು.ಪರೀಕ್ಷೆಗಳನ್ನು ಹೆಚ್ಚು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಸಿಡಿಯಲ್ಲಿ ಪ್ರಶ್ನೆಪತ್ರಿಕೆ ರವಾನಿಸಿ,ಪರೀಕ್ಷೆಗೆ ಸ್ವಲ್ಪವೇ ಮುನ್ನ ಅದನ್ನು ಮುದ್ರಿಸಿ ವಿತರಿಸುವ ಕ್ರಮವನ್ನು ವಿಶ್ವವಿದ್ಯಾಲಯಗಳು ಅನುಸರಿಸಿದ್ದಿವೆ. ಆನ್‌ಲೈನ್ ಪರೀಕ್ಷೆಗಳನ್ನು ನಡೆಸುವ ಪ್ರಯೋಗವನ್ನು ಹೈದರಾಬಾದಿನ ಜವಾಹರ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯವು ಅನುಸರಿಸಿದೆ. ಇಲ್ಲಿನ ತಂತ್ರಜ್ಞಾನ ಪ್ರವೀಣ ವಿದ್ಯಾರ್ಥಿಗಳು ತಮ್ಮ ಪ್ರಾವೀಣ್ಯವನ್ನು ವಿಶ್ವವಿದ್ಯಾಲಯದ ಪರೀಕ್ಷಾ ಪೋರ್ಟಲನ್ನು ಮುರಿಯಲು ಬಳಸಿ ಸುದ್ದಿ ಮಾಡಿದ್ದಾರೆ. ಅವರು ಪರೀಕ್ಷೆಯ ತಯಾರಿಗೆ ಸಿದ್ಧಪಡಿಸಿದ ಪ್ರಶ್ನಾಬ್ಯಾಂಕಿನ ಪ್ರಶ್ನೆಗಳಿಗೆ ಉತ್ತರವನ್ನು ಸಿದ್ಧ ಪಡಿಸಿಕೊಡುವ ತಂತ್ರಾಂಶವನ್ನು ಸಿದ್ಧ ಪಡಿಸಿದ್ದಾರಂತೆ.ಈ ತಂತ್ರಾಂಶವನ್ನು ಪೆನ್‌ಡ್ರೈವ್‌ಗಳಲ್ಲಿ ಪರೀಕ್ಷೆ ಹಾಲ್‌ಗೆ ಕೊಂಡೊಯ್ದು,ತಂತ್ರಾಂಶದಿಂದಲೇ ಉತ್ತರಿಸುವ ಮಟ್ಟಕ್ಕೂ ಇಲ್ಲಿನ ತಾಂತ್ರಿಕ ವಿದ್ಯಾರ್ಥಿಗಳು ಬಂದಿದ್ದಾರಂತೆ!ಪರೀಕ್ಷಾ ಪೋರ್ಟಲನ್ನು ಇನ್ನೂ ಬಲಪಡಿಸಲಿದ್ದೇವೆ ಎಂಬ ಸಮಜಾಯಿಷಿಯನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ನೀಡಿದ್ದಾರೆ.   
ಬಿಗ್ ಬ್ಯಾಂಗ್ ಪರೀಕ್ಷೆಗೆ ಭಂಗbig bang
ಇಪ್ಪತ್ತೇಳು ಕಿಲೋಮೀಟರ್ ಉದ್ದದ ಸುರಂಗದಲ್ಲಿ ಪ್ರೊಟಾನುಗಳ ಪ್ರವಾಹವನ್ನು ಹತ್ತಿರ ಹತ್ತಿರ ಬೆಳಕಿನ ವೇಗದಲ್ಲಿ ಸಾಗುವಂತೆ ಏರ್ಪಡಿಸಿ,ಅವುಗಳ ನಡುವಣ ಡಿಕ್ಕಿಯನ್ನು ಅಭ್ಯಸಿಸಿ,ಬಿಗ್‌ಬ್ಯಾಂಗ್ ಸಿದ್ಧಾಂತ ಸರಿಯೇ ಎನ್ನುವುದನ್ನು ಖಚಿತ ಪಡಿಸುವ ಪ್ರಯೋಗಕ್ಕೆ ಈಗ ಭಂಗ ಬಂದಿದೆ.ವಿದ್ಯುತ್ ಸಂಪರ್ಕದಲ್ಲಿನ ಸಮಸ್ಯೆಯಿಂದ ವಿದ್ಯುದಯಸ್ಕಾಂತಗಳು ಕಾರ್ಯನಿರ್ವಹಿಸದೆ,ಕೊಳವೆಯೊಳಗೆ ಹೀಲಿಯಂ ಅನಿಲ ನುಸುಳಿ ಪ್ರಯೋಗವನ್ನು ಸದ್ಯಕ್ಕೆ ನಿಲ್ಲಿಸಬೇಕಾಗಿ ಬಂದಿದೆ. ಸಮಸ್ಯೆಯನ್ನು  ನೇರ್ಪುಗೊಳಿಸಿ,ಮತ್ತೆ ಪ್ರಯೋಗವನ್ನು ಮುಂದುವರಿಸಲು ಕನಿಷ್ಠ ಎರಡು ತಿಂಗಳು ಹಿಡಿಯಬಹುದೆಂದು ಈಗಿನ ಲೆಕ್ಕಾಚಾರ.ಸ್ವಿಸರ್‌ಲ್ಯಾಂಡ್ ಮತ್ತು ಪ್ರಾನ್ಸ್‌ನ ಗಡಿಯಲ್ಲಿರುವ ಸರ್ನ್‌ನ  ಭೂಗರ್ಭ ಪ್ರಯೋಗ ಶಾಲೆಯಲ್ಲಿ ನಡೆಯುತ್ತಿರುವ ಈ ಪ್ರಯೋಗ ಕಳೆದ ಸೆಪ್ಟೆಂಬರ್ ಹತ್ತರಂದು ಆರಂಭವಾಯಿತು.
ಮೊಬೈಲ್ ಫೋನ್‌ಗೆ ಎಂಟು ಜಿಬಿ
ಮೊಬೈಲ್ ಫೋನನ್ನು ಮಾತನಾಡಲು ಕಿರು ಸಂದೇಶ ಕಳುಹಿಸಲು ಮಾತ್ರಾ ಬಳಸುವ ಕಾಲ ಇದಲ್ಲ.ಹಾಡುಗಳನ್ನು ಸಂಗ್ರಹಿಸಲು,ಕೆಲವು ಚಲನಚಿತ್ರಗಳನ್ನು ವೀಕ್ಷಿಸಲು ಮೊಬೈಲ್ ಪೋನಿನಲ್ಲಿ ಇಟ್ಟುಕೊಳ್ಳುವ ಜತೆಗೆ ಚಿತ್ರಗಳನ್ನು ಸಂಗ್ರಹಿಸುವ ಚಾಳಿ ಸಾಮಾನ್ಯ. ಇಂತಹ ಬಹುಮಾಧ್ಯಮ ವಿಷಯಗಳನ್ನು ಸಂಗ್ರಹಿಸಲು ಮೊಬೈಲ್‍ನೊಳಗಿರುವ ಸ್ಮರಣ ಸಾಮರ್ಥ್ಯ ಸಾಕಾಗದೇ ಹೋಗಬಹುದು.
    ಈಗ ಸ್ಯಾನ್‌ಡಿಸ್ಕ್ ತಂದಿರುವ ಮೆಮರಿ ಕಾರ್ಡ್ ಬಳಸಿಕೊಂಡು ಎಂಟು ಗಿಗಾಬೈಟು ಸಾಮರ್ಥ್ಯವನ್ನು ಮೊಬೈಲಿಗೆ ಸೇರಿಸಬಹುದು. ಈ ಸಾಮರ್ಥ್ಯವನ್ನು ಬಳಸಿಕೊಂಡು,ಒಂದು ಸಾವಿರ ಹಾಡು, ಸಾವಿರಕ್ಕೂ ಹೆಚ್ಚು ಚಿತ್ರಗಳು,ಇಪ್ಪತ್ತು ಗಂಟೆಯ ವಿಡಿಯೋ ಕಾರ್ಯಕ್ರಮವನ್ನು ಹಿಡಿದಿಡುವುದು ಸಾಧ್ಯ.ಬೆಲೆ ರೂಪಾಯಿ ಐದು ಸಾವಿರದಷ್ಟು.ಫ್ಲಾಶ್ ಮೆಮರಿ ಕಾರ್ಡ್‌ಗಳನ್ನೂ ಕಂಪೆನಿಯು ಬಿಡುಗಡೆ ಮಾಡಿದೆ.ಇವುಗಳು ನಾಲ್ಕು ಜಿಬಿ ಮತ್ತು ಎರಡು ಜಿಬಿ ಸಾಮರ್ಥ್ಯದಲ್ಲಿ ಬರುತ್ತವೆ.
ಇಂಟೆಲ್‌ನಿಂದ ಆರು ಕೋರ್ ಉಳ್ಳ ಸಂಸ್ಕಾರಕ!intelindia
    ಒಂದು ಚಿಪ್‍ನಲ್ಲಿ ಆರು ಸಂಸ್ಕಾರಕಗಳನ್ನು ಹೊತ್ತ "ಷಣ್ಮುಖಿ" ಕ್ಸಿಯಾನ್ 7400 ಪ್ರಾಸೆಸರ್ ಇಂಟೆಲ್ ಹೊಸ ಕೊಡುಗೆ. ಇದು ಸಾಮಾನ್ಯ ಕಂಪ್ಯೂಟರ್ ಅಥವ ಲ್ಯಾಪ‌ಟಾಪ್‌ನಲ್ಲಿ ಬಳಕೆಗೆ ಇರುವಂತದಲ್ಲ. ಸರ್ವರ್‌ಗಳಲ್ಲಿ ಬಳಕೆಗೆ ಇಂತಹ ದೈತ್ಯ ಬೇಕು.ಒಂದೇ ಪೆಟ್ಟಿಗೆ ಆರು ಕೆಲಸಗಳನ್ನು ಕೈಗೆತ್ತಿಕೊಳ್ಳಬಲ್ಲ ಸಾಮರ್ಥ್ಯ ಇದಕ್ಕಿದೆ. ಈ ಚಿಪ್‌ನ ವಿನ್ಯಾಸ ಸಂಪೂರ್ಣವಾಗಿ ಭಾರತದಲ್ಲಾಯಿತು.ಇಂಟೆಲ್‌ನ ಭಾರತದ ಕೇಂದ್ರ ಬೆಂಗಳೂರಿನಲ್ಲಿ ಚಿಪ್‌ನ ಬಿಡುಗಡೆ ಸಮಾರಂಭವೂ ನಡೆಯಿತು. ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕದ ಯಕ್ಷಗಾನದ ವೇಷಗಳನ್ನೂ ಬಳಸಿಕೊಳ್ಳಲಾಯಿತು.ಹತ್ತಿರ ಹತ್ತಿರ ಎರಡು ಬಿಲಿಯನ್ ಟ್ರಾನ್ಸಿಸ್ಟ್ರರುಗಳನ್ನು ಚಿಪ್ ಹೊಂದಿದೆ. ನಾಲ್ಕು ಕೋರ್ ಪ್ರಾಸೆಸರ್‌ಗೆ ಹೋಲಿಸಿದರೆ,ಇದು ಒಂದೂವರೆ ಪಟ್ತು ಹೆಚ್ಚು ದಕ್ಷತೆಯಿಂದ ಕೆಲಸ ಮಾಡುತ್ತದೆ.ಇದನ್ನು ಅಭಿವೃದ್ಧಿ ಪಡಿಸುವ ಸಮಯದಲ್ಲಿ ಇದಕ್ಕಿಟ್ತ ಹೆಸರು "ಡನಿಂಗ್ಟನ್" ಎಂದು,ಇದನ್ನು ಡನಿನ್-ಇಂಡಿಯಾ ಎಂದು ಹೇಳಿಕೊಳ್ಳುತ್ತಿದ್ದದ್ದೂ ಉಂಟಂತೆ!
ಗೂಗಲ್‌ನ ಡ್ರೀಮ್:ಐಫೋನ್‌ಗೆ ನೀಡಲಿದೆ ಸ್ಪರ್ಧೆ!
    ಕೊನೆಗೂ ಗೂಗಲ್ ಮೊಬೈಲ್ ಸಾಧನ ಕ್ಷೇತ್ರಕ್ಕೆ ಕಾಲಿಡಲಿದೆ. ಐಫೋನ್ ಗೊತ್ತಲ್ಲ? ಆಪಲ್ ಕಂಪೆನಿಯ ಐಫೋನ್ ಮೊಬೈಲ್ ಸಾಧನವಾಗುವುದರ ಜತೆಗೇ ಸಂಗೀತ ಆಲಿಸಲೂ ನೆರವಾಗುತ್ತದೆ. ಇದರಲ್ಲಿ ಸ್ಪರ್ಶ ಸಂವೇದಿ ತೆರೆಯಿರುವುದರಿಂದ,ಕೀಲಿ ಮಣೆ ಬಳಸದೆ ಸಂದೇಶ ಬರೆಯಬಹುದು,ನಿಯಂತ್ರಣಕ್ಕೂ ಕೀಲಿ ಬಳಸದೆ ತೆರೆಯನ್ನು ಸ್ಪರ್ಶಿಸಿ ನಿಯಂತ್ರಿಸಬಹುದು.ಕ್ಯಾಮರಾ ಕೂಡಾ ಇದರಲ್ಲಿದೆ.ಗೂಗಲ್ ತರಲಿರುವ ಡ್ರೀಮ್ ಕೂಡಾ ಇವೆಲ್ಲವನ್ನೂ ಹೊಂದಲಿದೆ. ಗೂಗಲ್ ಟಿಮೊಬೈಲ್ ಮತ್ತು ಚಿಪ್ ಕಂಪೆನಿ ಎಚ್ ಇ ಸಿ  ಜತೆ ಒಪ್ಪಂದ ಮಾಡಿಕೊಂಡು,ಈ ಮೊಬೈಲನ್ನು ಹೊರತರಲಿದೆ. ಇದರ ತಂತ್ರಾಂಶವನ್ನು ಗೂಗಲಿನ ಆಂಡ್ರಾಯಿಡ್ ತಂತ್ರದಿಂದ ಅಭಿವೃದ್ಧಿ ಪಡಿಸಲಾಗಿದೆ.ಬೆಲೆ ನೂರೈವತ್ತರಿಂದ ಇನ್ನೂರು ಡಾಲರುಗಳಾಗಬಹುದು.
ಟಿವಿ ಅನುಭವ ನೀಡಲಿರುವ ಕಂಪ್ಯೂಟರ್
    ಟಿವಿಯಲ್ಲಿ ವೀಕ್ಷಣೆ ಕಂಪ್ಯೂಟರಿಗಿಂತ  ಹೆಚ್ಚಿನ ರಸಾನುಭವವನ್ನು ನೀಡುತ್ತದೆ. ಟಿವಿಯು ರಿಮೋಟ್ ಸಾಧನವನ್ನು ಹೊಂದಿರುವುದರಿಂದ ಟಿವಿಯ ಮುಂದಿನ ಸುಖಾಸೀನದಲ್ಲಿ ಬಿದ್ದುಕೊಂಡು ಚಾನೆಲ್ ಬದಲಾಯಿಸಿಕೊಂಡು ಮನತಣಿಯೆ ನೋಡಲು ಅವಕಾಶವಿದೆ. ಕಂಪ್ಯೂಟರ್‌ನ ತೆರೆ ಸಣ್ಣದು,ಯಾವಾಗಲೂ ನಿಯಂತ್ರಣಕ್ಕೆ ಮೌಸ್,ಕೀಲಿ ಮಣೆ ಜತೆಗೇ ಬೇಕು ಎನ್ನುವ ತಾಪತ್ರಯ. ಈಗ ಹ್ಯೂಲೆಟ್ ಪ್ಯಕರ್ಡ್ ಕಂಪೆನಿಯ ಹೊಸ ಕಂಪ್ಯೂಟರಿನ ತೆರೆಯನ್ನು ಗೋಡೆಗೆ ತೂಗು ಹಾಕಬಹುದು. ಇಪ್ಪತ್ತೈದು ಇಂಚಿನ ಕರ್ಣದ ಅಳತೆ ಹೊಂದಿರುವುದರಿಂದ ಇದನ್ನು ದೂರದಿಂದ ವೀಕ್ಷಿಸಿದರೂ ಸ್ಪಷ್ಟವಾಗಿ ಕಾಣಬಹುದು. ರಿಮೋಟ್ ಬಳಕೆಯ ಆಯ್ಕೆಯಿದೆ. ಬ್ಲೂಟೂತ್ ಮೂಲಕ ಸಂಪರ್ಕವಿರುವ ಕೀಲಿ ಮಣೆಯನ್ನೂ ಹೊಂದಿರುವುದರಿಂದ ನಿಸ್ತಂತು ಸಂಪರ್ಕ ಸಾಧ್ಯ.ಬ್ಲೂರೇಡಿವಿಡಿಯನ್ನೂ ಇದರಲ್ಲಿ ಹಾಕಿ ನೋಡಬಹುದು.ಟಿವಿ ಟ್ಯೂನರ್ ಕಾರ್ಡ್ ಹಾಕಿಕೊಂಡರೆ,ಟಿವಿ ಚಾನೆಲ್ ವೀಕ್ಷಣೆ ಸಾಧ್ಯ.ಬೆಲೆಯೂ ಒಂದು ಸಾವಿರದ ಎಂಟುನೂರು ಡಾಲರು.ವಿಂಡೋಸ್ ವಿಸ್ತ ಕಾರ್ಯನಿರ್ವಹಣಾ ತಂತ್ರಾಂಶ ಇದರಲ್ಲಿ ಬಳಕೆಯಾಗಿದೆ.
*ಅಶೋಕ್‌ಕುಮಾರ್ ಎ

ashokworld

udayavani

ಇ-ಲೋಕ-93 22/9/2008