ಹಿಂದೂಧರ್ಮದ ನೀತಿತತ್ವಗಳು ಸತ್ತು ಕೆಟ್ಟಿದ್ದಾವೆಯೇ??

ಹಿಂದೂಧರ್ಮದ ನೀತಿತತ್ವಗಳು ಸತ್ತು ಕೆಟ್ಟಿದ್ದಾವೆಯೇ??

ಬರಹ

ಜಗತ್ತಿನ ಅತಿಪುರಾತನ ಹಾಗೂ ಎಲ್ಲ ಧರ್ಮಗಳ ತಾಯಿಯಂತಿರುವ ಹಿಂದೂಧರ್ಮದ ಕೆಲಜನರನ್ನು ಮತಾಂತರಗೊಳಿಸುವ ಪ್ರಯತ್ನಗಳು ಕಳೆದ ವಾರ, ತಿಂಗಳು, ವರುಷಗಳಿಂದ ಅಲ್ಲ ಶತ ಶತಮಾನಗಳಿಂದ ನಡೆಯುತ್ತಲೇ ಬಂದಿವೆ. ಅದರ ಜೊತೆಗೇನೆ ಹಿಂದೂ ಮತಬಾಂಧವರಾದ ನಾವು ಇದೆಲ್ಲವನ್ನೂ ಬಲು ಸಹಿಷ್ಣುತ ಮನೋಭಾವದಿಂದ ಸಹಿಸಿಕೊಂಡು ಬಂದಿದ್ದೀವಿ.

ಜಗದ ಒಂದೊಂದು ಧರ್ಮವೂ ಒಬ್ಬೊಬ್ಬ “ದಿವ್ಯಾತ್ಮಜ”ನಿಂದ ಇಲ್ಲವೇ ಕೆಲ “ಸತ್ಕುಲಪ್ರಸೂತರು”ಗಳಿಂದ ಕಟ್ಟಲ್ಪಟ್ಟಿರಬಹುದು. ಆದರೆ ಹಿಂದೂಧರ್ಮ ಹಾಗಲ್ಲ. “ಋಷಿಮುನಿಗಳು, ಯೋಗಿವರ್ಯರು, ಆಚಾರ್ಯರು, ದೈವಾಂಶ ಸಂಭೂತರು, ಸತ್ಕುಲಪ್ರಸೂತರು, ಸಹಸ್ರಾರು ಸಮಾಜ ಸುಧಾರಕರು ತಮ್ಮ ಅನುಭವಗಳ ಧಾರೆಗಳನ್ನು ಎರೆದು ಕಾಲಕ್ಕೆ ಅನುಗುಣವಾಗಿ ಮಾರ್ಪಾಟು ಮಾಡುತ್ತಾ ಅಹಿಂಸೆ, ಸತ್ಯ, ಪ್ರೀತಿ, ಸಹಬಾಳ್ವೆ, ಶೀಲ, ನ್ಯಾಯ, ಹಾಗೂ ತ್ಯಾಗಗಳೆಂಬ ಇಟ್ಟಿಗೆಗಳಿಂದ ಸನಾತನ ಕಾಲದಿಂದಲೂ ಕಟ್ಟಿಬೆಳಸುತ್ತಿರುವ ಧರ್ಮವೇ "ಹಿಂದೂಧರ್ಮ" ”. ಇಂತಹ ಒಂದು ಧರ್ಮದಲ್ಲೇ ಶಾಂತಿ, ನೆಮ್ಮದಿ, ಸಹಬಾಳ್ವೆ ಸಿಕ್ಕೊಲ್ಲ ಅಂದರೆ ಯಾವ ನ್ಯಾಯಕ್ಕೆ ಸಾಕಾದೀತು ನೀವೇ ಹೇಳಿ?

“ಹಿಂದೂಧರ್ಮದ ಆಚಾರ-ವಿಚಾರಗಳ ಮುಂದೆ ಇಡೀ ಬ್ರಹ್ಮಾಂಡವೇ ಒಂದು ಸೂಜಿಮೊನೆಯಷ್ಟು ಗಾತ್ರಕ್ಕೆ ಸಮವೆಂಬುದು ಯಾರಿಗೆ ತಾನೆ ತಿಳಿದಿಲ್ಲ ಹೇಳಿ?” ಒಳಪಂಗಡಗಳು ನೂರಾರು ಇದ್ದರೂ ಸಾವಿರ ಸಾವಿರಾರು ವರುಷಗಳಿಂದ ಏಕತೆಮಂತ್ರವ ಚಾಚೂತಪ್ಪದೇ ಪಾಲಿಸಿಕೊಂಡು ಬರುತ್ತಿರುವುದು ಈ ಧರ್ಮದಲ್ಲಿ ಬಿಟ್ಟರೆ ಇನ್ಯಾವುದಾದರೂ ಧರ್ಮದಲ್ಲಿ ಉಂಟೆ? ಸಜೀವವೋ ಇಲ್ಲ ನಿರ್ಜೀವವೋ ಎಲ್ಲದರ ಕಣಕಣದಲ್ಲೂ ದೈವೀಕತೆಯ ಕಾಣಿರೆಂದು ಈ ಧರ್ಮವನ್ನು ಬಿಟ್ಟು ಬೇರ್ಯಾವ ಧರ್ಮ ಹೇಳಿದೆ ಹೇಳಿ?

ಆದರೂ ಇಂತಹವೊಂದು ಹಿಂದೂಧರ್ಮದವರನ್ನು ಮತಾಂತರಿಸುವ ಕೆಲಸಗಳು, ಪ್ರಯತ್ನಗಳು ಗಣನೀಯವಾಗಿ ಹೆಚ್ಚುತ್ತಲೇ ಬಂದಿವೆ ಏಕೆ? ಹಿಂದೂಧರ್ಮದಲ್ಲಿ ನೀತಿತತ್ವಗಳು ಸತ್ತುಕೆಟ್ಟಿದ್ದಾವೆಯೇ? ಇಲ್ಲ ಹಿಂದೂಗಳಲ್ಲಿ ಬಹುಪಾಲು ಮಂದಿ ಬಡವರು, ಆದ್ದರಿಂದ ಅವರನ್ನು ಮತಾಂತರಗೊಳಿಸಿ ಉದ್ಧಾರ ಮಾಡುವ ಉದಾರ ಮನೋಭಾವವೇ?

"ಹಸಿವಿನ ಬಡತನ" ಕೆಲ ಸಹಸ್ರ ಹಿಂದೂ ಜನರಲ್ಲಿ ಇರುವುದೇನೋ ನಿಜ. ಅದಕ್ಕೆ ಕಾರಣ ದಶಕಗಳಿಂದ ಮಿತಿಮೀರಿ ನಾವುಗಳು ಬೆಳಸಿಕೊಳ್ಳುತ್ತಿರುವ ನಮ್ಮ ನಮ್ಮ ವಂಶವೃಕ್ಷಗಳಿಂದಲೇ ಹೊರತು, ಭವ್ಯಪರಂಪರೆಯನ್ನು ಹೊಂದಿರುವ ನಮ್ಮ ಧರ್ಮದಿಂದಲ್ಲ. ನೀವು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಂಡ ತಕ್ಷಣ ಹಲವಾರು ವರುಷಗಳಿಂದ ನಿಮ್ಮಲ್ಲಿರುವ ಬಡತನದ ಬೇಗೆಯೂ ತಾತ್ಕಾಲಿಕವಾಗಿ ಉಪಶಮನವಾಗುವುದೇ ಹೊರತು ಶಾಶ್ವತವಾಗಿ ಅಲ್ಲ. ಅದನ್ನು ಮೊದಲು ತಿಳಿಯಿರಿ. ಬಡತನಕ್ಕೂ, ಧರ್ಮಕ್ಕೂ ಯಾವ ಸಂಬಂಧವೂ ಇಲ್ಲ. ನಾವುಗಳು ಮಾಡಿಕೊಂಡಿರುವ ತಪ್ಪುಗಳಿಗೆ ಧರ್ಮವನ್ನು ದೂಷಿಸುವ ಅಗತ್ಯವೂ ಇಲ್ಲ.

ಹಾಗಾದರೆ ಮತ್ತ್ಯಾವ ಅಜ್ಞಾನ ಹುಳುಕು ತುಂಬಿಕೊಂಡಿರುವುದು ಹಿಂದೂಧರ್ಮದಲ್ಲಿ?

ಹಿಂದೂಧರ್ಮದ ಬಗ್ಗೆ ಪೂರ್ಣ ಪ್ರಮಾಣದ ಜ್ಞಾನ ನಮ್ಮ ಜನಸಮುದಾಯದಲ್ಲಿ ಇಲ್ಲದಿರುವುದು ಕಾರಣವೇ?
ಹಿಂದೂಧರ್ಮದ ನೀತಿಗಳು, ತತ್ವಗಳು ಹಾಗೂ ಭೋದನೆಗಳು ಬಹಳ ಹಳೆಯದಾಗಿ ಇವೆಯೇ?

ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿ ನೆಲಸಿರುವ ಜಾತೀಯತೆ ಏನಾದರೂ ತೊಡಕಾಗಿರುವುದೇ?

ಮೂರು ಕೊಟ್ಟರೆ ಸೂಸೆ ಕಡೆ, ಆರು ಕೊಟ್ಟರೆ ಅತ್ತೆ ಕಡೆ ಅನ್ನುವ ನಮ್ಮ ಸರಕಾರಗಳು ಕಾರಣವೇ?

ಮತ್ತೆ ಇನ್ಯಾವ ನ್ಯೂನತೆ ಇದೆ ನಮ್ಮ ಸಮಾಜದಲ್ಲಿ ಅಥವಾ ನಮ್ಮ ಹಿಂದೂಧರ್ಮದಲ್ಲಿ?? ಹೇಳಿ ಹಿಂದೂಗಳೇ.. ನೀವು ಹೇಳಿ?
-ನಿಮ್ಮ ಸುನಿಲ್ ಮಲ್ಲೇನಹಳ್ಳಿ