ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು

ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು

(ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಕೇಳಿ, ಒಂದು ಸಾವಿರ ವರ್ಷಗಳ ಹಿಂದೆ, ಈ ಪದ್ಯವನ್ನು ಕಲ್ಲಿನಲಿ ಕೆತ್ತಿಸಿದ ನಮ್ಮೂರ ಅರಸರನ್ನು ನೆನೆಯದೇ ಇರಲಾಗಲಿಲ್ಲ - ಹಂಸಾನಂದಿ)

ಆವನನು ಶೈವರು ಶಿವನೆಂದು ಹೊಗಳುವರೊ,
ವೇದಾಂತಿಗಳಿಗಾವನು ಪರಬೊಮ್ಮರೂಪಿಯೋ,
ಬೌದ್ಧರು ಬುದ್ಧನಿವನೆಂದಾಣೆ ಇಡುವರೋ,
ನೈಯಾಯಿಕರು ಆವನಿಗೆ ಕರ್ತನಿವನೆಂಬರೋ,
ಜಿನನ ಹಾದಿಯ ಹಿಡಿದವರಿಗಾರು ಅರಿಹಂತನೋ,
ಕಾರಣವ ಹುಡುಕುವರಿಗಿದು ಮಾಡಿದಾ ಕೆಲಸವೋ
ಅವನೆ ಕಾಯಲೆಮ್ಮೆಲ್ಲರನುದಿನವು ಕೇಳಿದುದ ಕೊಟ್ಟು
ಮೂರು ಲೋಕದ ಅರಸು ಬೇಲೂರ ಚೆನ್ನಿಗನು**

ಸಂಸ್ಕೃತ ಮೂಲ:  ಬೇಲೂರು ಚೆನ್ನಕೇಶವ ದೇವಾಲಯದ ಗೋಡೆಯಲ್ಲಿರುವ ಶಾಸನ

ಯಂ ಶೈವಾಸ್ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನಃ
ಬೌದ್ಧಾಃ ಬುದ್ಧ ಇತಿ ಪ್ರಮಾಣಪಟವಃ ಕರ್ತೇತಿ ನೈಯಾಯಿಕಾ:
ಅರ್ಹನ್ನಿತ್ಯಥ ಜೈನಶಾಸನರತಾ: ಕರ್ಮೇತಿ ಮೀಮಾಂಸಕಾ:
ಸೋಯಂ ವೋ ವಿದಧಾತು ವಾಂಛಿತಫಲಂ ತ್ರೈಲೋಕ್ಯನಾಥೋ ವಿಭು: **

(*: ಕಡೆಯ ಸಾಲಿಗೆ, "ಸೋಯಂ ವೋ ವಿದಧಾತು ವಾಂಛಿತಫಲಂ ಶ್ರೀಕೇಶವೇಶಸ್ಸದಾ" ಅನ್ನುವ ಪಾಠವನ್ನೂ ಓದಿದ್ದೇನೆ; ಅದಕ್ಕೇ ಅನುವಾದದಲ್ಲಿ ಎರಡೂ ಅರ್ಥಗಳು ಬರುವಂತೆ ಸೇರಿಸಿರುವೆ)

ಕೊಸರು: ಬೇಲೂರಿನ ಶಾಸನದಲ್ಲಿರುವ ಈ ಪದ್ಯದಲ್ಲಿ "ಶ್ರೀಕೇಶವೇಶಸ್ಸದಾ" ಎಂದೇ ಇದೆ. ಈ ಶಾಸನವು ಕ್ರಿ.ಶ.೧೩೯೭ರದ್ದು ಎಂದು ತಿಳಿದುಬಂದಿದೆ ( ಆಧಾರ: ಡಿವಿಜಿ ಆವರ ಅಂತಃಪುರಗೀತೆಗಳು ಪುಸ್ತಕ)

ಕೊನೆಯ ಕೊಸರು: ಈ ಮೇಲಿನ ಸಾಲನ್ನು ಅಕ್ಟೋಬರ್ ೨೧, ೨೦೦೮ ರಂದು ಸೇರಿಸಿದ್ದೇನೆ

-ಹಂಸಾನಂದಿ

 

Rating
No votes yet

Comments