ಅಮೆರಿಕದಲ್ಲಿದ್ದ ಸಮಯದಲ್ಲಿ ’ ಮಯೂರ ಪತ್ರಿಕೆ,’ ಯನ್ನು ಅದೆಷ್ಟು ಬಾರಿ ಓದಿದೆವೋ ಆದೇವರೇ ಬಲ್ಲ !

ಅಮೆರಿಕದಲ್ಲಿದ್ದ ಸಮಯದಲ್ಲಿ ’ ಮಯೂರ ಪತ್ರಿಕೆ,’ ಯನ್ನು ಅದೆಷ್ಟು ಬಾರಿ ಓದಿದೆವೋ ಆದೇವರೇ ಬಲ್ಲ !

ಬರಹ

ನಾವು ( ನಾನು ಮತ್ತು ನನ್ನ ಶ್ರೀಮತಿ) ಕನ್ನಡ ಪತ್ರಿಕೆಗಳಾದ ಸುಧಾ, ತರಂಗ, ಮಯೂರ, ತುಷಾರ, ಓದುವ ಹವ್ಯಾಸವಿದ್ದವರು. ಬೆಂಗಳೂರಿನಲ್ಲಿದ್ದಾಗ, ಪ್ರಜಾವಾಣಿ, ಕನ್ನಡ ಪ್ರಭ, ವಿಜಯಕರ್ನಾಟಕ, ಡೆಕ್ಕನ್ ಹೆರಾಳ್ಡ್, ಹಿಂದು, ಪತ್ರಿಕೆಗಳು ನಮ್ಮ ಮುಂದೆ ಸುಳಿಯುತ್ತಿದ್ದವು. ಆದರೆ, ಮುಂಬೈನಲ್ಲಿದ್ದಾಗಲಂತೂ ಉದಯವಾಣಿ, ಕರ್ನಾಟಕ ಮಲ್ಲ, ಟೈಮ್ಸ್ ಆಫ್ ಇಂಡಿಯ ಓದುವುದು ರೂಢಿಯಾಗಿತ್ತು. ಆದರೆ ಅಮೆರಿಕೆಯಲ್ಲಿ ಕನ್ನಡ ಪತ್ರಿಕೆಗಳು ಲಭ್ಯವಾಗದಿದ್ದಾಗ, ಎಂತಮಾಡುವುದು ? ಹಳೆಯ ಪತ್ರಿಕೆಗಳನ್ನೇ ಎಲ್ಲಿಹೋದರಲ್ಲಿ ತೆಗೆದುಕೊಂಡು ಹೋಗಿ ಅತಿಆಸಕ್ತಿಯಿಂದ ಮತ್ತೆ ಮತ್ತೆ, ಓದುವ ಅಭ್ಯಾಸವನ್ನು ಶುರುಮಾಡಬೇಕಾಯಿತು. ಸಿಯಾಟಲ್ ಟೈಮ್ಸ್, ಆರೇಂಜ್ ಕೌಂಟಿ ಟೈಮ್ಸ್, ಇಂಡಿಯ ಅಬ್ರಾಡ್, ಮತ್ತೆ ಕೊಲಂಬಿಯ ಟ್ರಿಬ್ಯೂನ್ ಗಳನ್ನು ಓದಿದಾಗ ನನಗೆ ಮುಂಬೈ ಎಡಿಶನ್ ನ ಟೈಮ್ಸ್ ಆಫ್ ಇಂಡಿಯ ಓದಿದ ಸವಿದೊರೆಯಲಿಲ್ಲ. ಅದರಲ್ಲೂ ಟೈಮ್ಸ್ ಜೊತೆ ಸಪ್ಲಿಮೆಂಟ್ ಇದೆಯಲ್ಲ, " ಮುಂಬೈ ಮಿರರ್ " ನಷ್ಟು ವೈವಿಧ್ಯಮಯ ಮಸಾಲೆದಾರ್, ಚಕ್ಮಕಿ ಪತ್ರಿಕೆ ನನಗೆ ಎಷ್ಟು ಹುಡುಕಿದರೂ ಸಿಗಲೇ ಇಲ್ಲ. ಅದರ ಇನ್ವೆಸ್ಟಿಗೇಟೀವ್ ಲೇಖನಗಳು ಎಷ್ಟು ಖಾತ್ರಿಯಾದ ಸುದ್ದಿಗಳನ್ನು ವರದಿಮಾಡುತ್ತವೆ ! ನನಗೆ ಲಕ್ಷ್ಮಣ್ ರವರ ವ್ಯಂಗ್ಯಚಿತ್ರ, ’ಯು ಸೆಡ್ ಇಟ್,” ಮತ್ತು ಮುಂಬೈ ಮಿರರ್ ನ ಕಾಲಂಗಳು ಅತಿಪ್ರಿಯ ಅಂದರೆ ಅತಿಪ್ರಿಯ !

ನಾನು ಕ್ಯಾಲಿಫೋರ್ನಿಯದ ಕಾಸ್ಟಮೆಸ ಕ್ಲಬ್ ನಲ್ಲಿ ಕುಳಿತಿದ್ದಾಗಲೂ ಅದೇ ಕೆಲಸಮಾಡಿದೆ. ನನ್ನ ಕಾರ್ಯವಿಧಿಯನ್ನು ಗಮನಿಸಿ :

ನಿಧಾನವಾಗಿ ಮಯೂರ ಪತ್ರಿಕೆಯನ್ನು ಚೀಲದಿಂದ ಹೊರಗೆ ತೆಗೆಯುವುದು. ಮನಸ್ಸಿನಲ್ಲಿ ಅದು ಈಗತಾನೆ ಬಂದಿದೆ ಎನ್ನುವ ಕಳಕಳಿಯ ವಿಚಾರವನ್ನು ಹುಟ್ಟಿಹಾಕಿಕೊಂಡು ನಗುಮುಖದಿಂದ ಓದಿದ ಲೇಖನಗಳನ್ನೇ ಅತಿ ನಿಧಾನವಾಗಿ ಓದಿ, ಸ್ವಲ್ಪ ಮತ್ತೆ ಕುಳಿತು ಯೋಚಿಸಿ, ಕಾಫಿ/ಚಹ ಸೇವಿಸಿ ಪತ್ರಿಕೆಯನ್ನು ಸರಿಯಾಗಿ/ಜೋಪಾನವಾಗಿ ನನ್ನಜೋಳಿಗೆ ಬ್ಯಾಗ್ ನಲ್ಲಿ ಸೇರಿಸಿ, ಮನೆಯಕಡೆ ಕಾಲುಹಾಕುವುದು.

ಮತ್ತೆ ಸಾಯಂಕಾಲದ ವರೆಗೆ, ನನ್ನ ಮಗ ಬರುವವರೆಗೆ, ನಾವಿಬ್ಬರೂ ಒಂದು ರೌಂಡ್ ಗಾಳಿಸೇವನೆಮಾಡಿ ಅಲ್ಲಿ ಇಲ್ಲಿನ ಚಿತ್ರಗಳನ್ನು ನಮ್ಮನಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದುಕೊಂಡು, ಕ್ಲಬ್ ನ ಚೇರ್ ನಮೇಲೆ ಮೈ ಚೆಲ್ಲಿ ಕೂಡ್ರುವುದು, ಮತ್ತೆ ನಿಧಾನವಾಗಿ ಅದೇ ಮಯೂರ ಪತ್ರಿಕೆಯನ್ನು ನಾನು ಮೊದಲೇ ವಿವರಿಸಿದ ರೀತಿಯಲ್ಲಿ ಓದುವುದು. ಇಲ್ಲಿ ನಮ್ಮ ಮುಖಮುದ್ರೆ ಅತಿ ಪ್ರಧಾನ್ಯ. ಎಂದೂ ಆ ಪತ್ರಿಕೆಯನ್ನು ನೋಡಿಲ್ಲವೇನೋ ಎನ್ನುವಂತೆ ನಟಿಸಿ ನಮ್ಮಮನಸ್ಸನ್ನೊಪ್ಪಿಸಿದಮೇಲೆ ನಮಗೆ ಅದು ಮತ್ತೆ ರುಚಿಸುವುದು ! ಈ ಕಾರ್ಯವನ್ನು ಸತತವಾಗಿ ಎರಡೂವರೆ ತಿಂಗಳು ಮಾಡಿ, ಮಾಡಿ ಮನಸ್ಸು ರೋಸಿಹೋಗಿತ್ತು.

’ಅಕ್ಕ ಕಾನ್ಫರೆನ್ಸ” ನ ’ಮಂಥನ” ಸೊವನಿಯರ್ ಸಿಕ್ಕಮೇಲಂತೂ ಮಯೂರಪತ್ರಿಕೆಗೆ ಸ್ವಲ್ಪ ವಿರಾಮದೊರೆಯಿತು ಅಂತ ಅನ್ನಿಸಿತು. ಆದರೆ ನನ್ನ ಪತ್ನಿ ಮಾತ್ರ ಮಯೂರಪತ್ರಿಕೆಯನ್ನು ಅದೇ ಮನೋಭಾವದಿಂದ ಪದೇ ಪದೇ ಹೊರತೆಗೆದು ಓದುತ್ತಿದ್ದಳು. ಪರದೇಶದಲ್ಲಿ ಕನ್ನಡದ ಒಲವು ಹೆಚ್ಚಾಗುವ ಸಂಭವಗಳು ಹೆಚ್ಚೇನೊ. ನೀವೇನಂತೀರಿ ?

" ದೀಪವು ನಿನ್ನದೆ ಗಾಳಿಯುನಿನ್ನದೆ, ಆರದಿರಲಿ ಬದುಕು " ಈ ಸುಂದರ ಹಾಡು, ಹೇಗೋ ತಲೆಯಾಚೆಯಿಂದ ನುಸುಳಿ ಬಾಯಿನಿಂದ ಧಿಮಿಕ್ಕನೆ ಹೊರಗೆ ಚಿಮ್ಮಿ ಗಾಳಿಯಜೊತೆಯಲ್ಲಿ ಮಾಯವಾಗುತ್ತಿತ್ತು !

-ಚಿತ್ರನನ್ನದು.