ವಿಘ್ನಸಂತೋಷಿಗಳ ಉಪಟಳ; ಪ್ರಜ್ವಲಿಸದ ದೀಪಗಳು!

ವಿಘ್ನಸಂತೋಷಿಗಳ ಉಪಟಳ; ಪ್ರಜ್ವಲಿಸದ ದೀಪಗಳು!

ಬರಹ

ಭಾರತೀಯರು ಜಗತ್ತಿನ ಅತ್ಯುತ್ತಮ ಯೋಜಕರು; ಆದರೆ, ಅತೀ ಕಳಪೆ ಅನುಷ್ಠಾನಕ್ಕೆ ಹೆಸರಾದವರು. ಹಾಗೆಯೇ ಇತ್ತ ಪರಿಸರ ಸ್ನೇಹಿ ಅಭಿವೃದ್ದಿಯತ್ತ ಕೆಲವರು ಹೆಚ್ಚು ಗಮನವಹಿಸಿ ದುಡಿಯುತ್ತಿದರೆ, ಅತ್ತ ಅದನ್ನು ಹಾಳುಗೆಡವಲು ವ್ಯವಸ್ಥಿತವಾಗಿ ಪ್ರಯತ್ನ ಜಾರಿಯಲ್ಲಿ ಇಟ್ಟವರು ಕೆಲವರು! ಹಾಗೆಯೇ ನವೀಕರಿಸಬಹುದಾದ ಇಂಧನ ಮೂಲಗಳ ವಿವಿಧ ರೀತಿಯ ಬಳಕೆಯ ಕುರಿತು ನಿರಂತರ ಅನ್ವೇಷಣೆಯಲ್ಲಿ ತೊಡಗಿಕೊಂಡವರು ಮತ್ತಷ್ಟು ಜನ.

ಈ ಎಲ್ಲ ಸಾಧಕರ ಸಂಶೋಧನೆ, ಅನ್ವೇಷಣೆಗಳ ಫಲವಾಗಿ ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬಂದಿವೆ. ಆ ಅನ್ವೇಷಣೆಗಳನ್ನು ಆರ್ಥಿಕವಾಗಿ ಹೊರೆಯಾಗದಂತೆ ಮೇಲ್ ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗ ಹಾಗು ಕೆಳವರ್ಗದ ಫಲಾನುಭವಿಗಳಿಗೆ ತಲುಪಿಸಲು ಸರಕಾರ, ಸ್ಥಳೀಯ ಸರಕಾರಗಳು ಹಾಗು ಕೆಲ ಸ್ವಯಂ ಸೇವಾ ಸಂಸ್ಥೆಗಳು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುತ್ತಿವೆ. ‘ಕಾರ್ಪೋರೇಟ್ ಸೋಸಿಯಲ್ ರೆಸ್ಪಾನ್ಸಿಬಿಲಿಟಿ’ ಹೆಸರಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಮ್ಮ ಅವಳಿ ನಗರದಲ್ಲಿ ನಡೆಯುತ್ತಿವೆ.

ಡಚ್ ಕೃಷಿ ಸಚಿವ ಜೆರ್ಡಾ ವೆರ್ ಬರ್ಗ್ ಅವರು ಕೋಳಿ ಹಾಕುವ ಹಿಕ್ಕೆಯನ್ನು ಸಂಗ್ರಹಿಸಿ ೯೦ ಸಾವಿರ ಮನೆಗಳಿಗೆ ಬೇಕಾಗುವ ವಿದ್ಯುತ್ ಉತ್ಪಾದಿಸಿದ್ದಾರಂತೆ ಅವರು. ನಾವು ಇಲ್ಲಿ ದನದ ಸಗಣಿ ಬಳಸಿ ಮಾಡುತ್ತಿರುವ ಪ್ರಯತ್ನವನ್ನು ಡಚ್ ಮಂದಿ ಕೋಳಿ ಹಿಕ್ಕೆ ಬಳಸಿ ಮಾಡುತ್ತಿದ್ದಾರೆ. ತಕ್ಕ ಮಟ್ಟಿಗೆ ಅವರು ಯಶಸ್ವಿಯೂ ಆಗಿದ್ದಾರೆ. ಜನ ಬೆಂಬಲವಿದೆ. ಆ ಪ್ರಯತ್ನದ ಬಗ್ಗೆ ಜನರಲ್ಲಿ ಸಾತ್ವಿಕ ಅರಿವಿದೆ. ಕಳಕಳಿಯೂ ವ್ಯಕ್ತವಾಗಿದೆ ಎಂಬುದು ಇಲ್ಲಿ ಸಾಬೀತಾಗುತ್ತದೆ.

ಹೀಗೆ ಯೋಜನೆಗಳು ಜನಪರವಾಗಿರಬೇಕು. ಜೊತೆಗೆ ಸಮುದಾಯದ ಸಹಭಾಗಿತ್ವ ಪಡೆದುಕೊಂಡಲ್ಲಿ ಅಥವಾ ಅನುಷ್ಠಾನಗೊಂಡ ಯೋಜನೆಗಳಿಗೆ ಸ್ಥಳೀಯರ ಬಾಧ್ಯತೆ ಗೊತ್ತು ಪಡಿಸುವ, ಜವಾಬ್ದಾರರನ್ನಾಗಿಸುವ ಹಾಗು ಶ್ರೇಯಸಹ ಅವುಗಳನ್ನು ಕಾಪಾಡಿಕೊಂಡವರಿಗೆ ಸಲ್ಲುವ ಪ್ರಜಾಪ್ರಭುತ್ವ ಮಾದರಿ ವ್ಯವಸ್ಥೆ ರೂಪುಗೊಂಡಲ್ಲಿ ಅವು ಸಾರ್ವಜನಿಕರ ಆಸ್ತಿಯಾಗಿ ಪರಿಣಮಿಸುತ್ತವೆ. ಇಲ್ಲವಾದಲ್ಲಿ ಅದು ಸರಕಾರದ ಆಸ್ತಿ ಎಂದು ಪರಿಗಣಿತವಾಗಿ ವಿಘ್ನಸಂತೋಷಿಗಳ ಆಕ್ರೋಷಕ್ಕೆ ಕಾಲಕಾಲಕ್ಕೆ ತುತ್ತಾಗುತ್ತ ಸಾಗುತ್ತದೆ. ಮಕ್ಕಳ ಉದ್ಯಾನವನದ ‘ಸೀ -ಸಾ’, ‘ಜಾರುಬಂಡೆ’, ‘ಮ್ಯಾಜಿಕ್ ಮಹಲ್’, ‘ಜೋಕಾಲಿ’ ಇತ್ಯಾದಿ ಯಾವ ಸ್ಥಿತಿಗೆ ತಲುಪಿವೆ ಎಂಬುದನ್ನು ಊಹಿಸುವುದು ಕೂಡ ಕಷ್ಟ.

ಅರ್ಥಶಾಸ್ತ್ರಜ್ನರು ಅಭಿಪ್ರಾಯ ಪಡುವಂತೆ ಅಭಿವೃದ್ಧಿ ಎನ್ನುವುದು ಅಂಕಗಣಿತದ ಪ್ರಗತಿಯಲ್ಲಿ ಸಾಗಿದರೆ (೧,೨,೩,೪, ಹೀಗೆ), ಜನಸಂಖ್ಯೆ ರೇಖಾಗಣಿತ ರೀತ್ಯಾ ‘ಪ್ರಗತಿ’ ಸಾಧಿಸುತ್ತ ಸಾಗುತ್ತದೆ (೨,೪,೮,೧೬,೩೨..ಹೀಗೆ). ಹಾಗಾಗಿ ಸರಕಾರ, ಮಹಾನಗರ ಪಾಲಿಕೆಗಳು ಕೈಗೊಳ್ಳುವ ಯಾವುದೇ ಜನಪರ ಅಭಿವೃದ್ಧಿ ಕೆಲಸಗಳನ್ನು ಜನಸಂಖ್ಯೆ ಎನ್ನುವ ಬಕಾಸುರ ಇಡಿಯಾಗಿ ನುಂಗುತ್ತ ಸಾಗಿ, ಯಾವ ಕುರುಹುಗಳು ಸಹ ಕಾಣಸಿಗದ ನಿರ್ವಾತ ವಾತಾವರಣ ಸೃಷ್ಠಿಯಾಗುತ್ತದೆ. ಹಾಗೆಯೇ ಮಾಧ್ಯಮ ಕೂಡ ‘ಉಳ್ಳವರ ವಾಣಿಜ್ಯಾಲಯ’ ಆಗುತ್ತದೆ.

ಮಾಧ್ಯಮಗಳಲ್ಲಿ ಸಹ ‘ಸಾರ್ಸ್’ ರೋಗಕ್ಕೆ ಸಿಕ್ಕ ಪ್ರಚಾರದಷ್ಟು ಚಿಕೂನ್ ಗುನ್ಯಾ ಅಥವಾ ನ್ಯುಮೋನಿಯಾ ರೋಗಕ್ಕೆ ಪ್ರಾಧಾನ್ಯತೆ ದೊರಕುವುದಿಲ್ಲ. ಕಾರಣ ‘ಸಾರ್ಸ್’ ರೋಗ ವಿಮಾನದಲ್ಲಿ ನಿತ್ಯ ಹಾರಾಡುವವರಿಗೆ ಬರುವ ‘ಶ್ರೀಮಂತ’ರ ರೋಗ. ಚಿಕೂನ್ ಗುನ್ಯಾ ಅಥವಾ ನ್ಯುಮೋನಿಯಾ ರೋಗ ಮಧ್ಯಮ, ಕೆಳ ಮಧ್ಯಮ ಹಾಗು ಕೆಳವರ್ಗದ ಜನ ಶುಚಿತ್ವದಿಂದ, ಆರೋಗ್ಯಪೂರ್ಣ ವಾತಾವರಣದಿಂದ ವಂಚಿತರಾದ ಕಾರಣ ‘ಬಡವರಿಗೆ’ ಅಮರುವ ರೋಗ!

ನಮ್ಮ ಹುಬ್ಬಳ್ಳಿಯ ಪ್ರತಿಷ್ಠಿತ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ‘ಕಿಮ್ಸ್’ ಆವರಣದಲ್ಲಿ ನವಿಕರಿಸಬಹುದಾದ ಇಂಧನ ಮೂಲ -ಸೌರ ಶಕ್ತಿಯನ್ನು ಬಳಸಿಕೊಂಡು, ಬ್ಯಾಟರಿ ಶಕ್ತಿ ವರ್ಧಿಸಿಕೊಂಡು ಬೆಳಗಬಲ್ಲ ಸೌರ ವಿದ್ಯುತ್ ದೀಪಗಳನ್ನು ರಸ್ತೆ ಬದಿಗೆ ಹಾಕಲಾಗಿತ್ತು. ರಾತ್ರಿಯ ವೇಳೆ ಚಿಕಿತ್ಸೆಗೆಂದು ತುರ್ತಾಗಿ ಬರುವ ರೋಗಿಗಳಿಗೆ, ಅವಸರದಲ್ಲಿ ಚಿಕಿತ್ಸೆ ನೀಡಲು ಬರುವ ಹಿರಿಯ ವೈದ್ಯರುಗಳಿಗೆ, ರೋಗಿಗಳ ಸಂಬಂಧಿಕರಿಗೆ, ಗಸ್ತಿನಲ್ಲಿರುವ ಪೊಲೀಸರಿಗೆ, ಗುರ್ಖಾಗಳಿಗೆ ಅವು ಜೀವದಾಯಿಯಾಗಿದ್ದವು.

ಅನುಷ್ಠಾನಗೊಳಿಸಿದ ನಾಲ್ಕಾರು ತಿಂಗಳು ಯಾವುದೇ ಸಮಸ್ಯೆ ಇರಲಿಲ್ಲ. ಈಗ ವಿಚಿತ್ರ ಸಮಸ್ಯೆ. ಯಾರೋ ಕಿಡಿಗೇಡಿಗಳು ಸೌರ ಫಲಕಗಳನ್ನು ಮುರಿದಿದ್ದಾರೆ. ಸೂರ್ಯನ ಕಡೆಗೆ ಮುಖ ಮಾಡಿ ನಿಂತಿರುತ್ತಿದ್ದ ಫಲಕಗಳು ಈಗ ನೆಲ ನೋಡುತ್ತಿವೆ. ಅಷ್ಟೆ ಅಲ್ಲ. ಕೆಲ ಸೌರ ವಿದ್ಯುತ್ ದೀಪದ ಖಂಬಗಳ ದೀಪಗಳು ಮಾಯವಾಗಿವೆ! ಕೆಲವು ಮುರಿದು ಜೋತಾಡುತ್ತಿವೆ. ಖಂಬಕ್ಕೆ ಅಳವಡಿಸಲಾಗಿದ್ದ ‘ಫ್ಯೂಜ್’, ‘ವಾಯರ್’ ಹಾಗು ಕಬ್ಬಿಣದ ಪೆಟ್ಟಿಗೆಯನ್ನು ಸಹ ಕಿತ್ತೊಯ್ದಿದ್ದಾರೆ. ಇನ್ನು ಕೆಲವು ರಿಪೇರಿಯಾಗುವ ಹಂತ ದಾಟಿದ್ದು, ಮತ್ತೆ ‘ಓಂ ಪ್ರಥಮ’ದಿಂದ ಪುನರ್ ಪ್ರತಿಷ್ಠಾಪಿಸುವ ಅನಿವಾರ್ಯ ಸ್ಥಿತಿ ತಲೆದೋರಿದೆ. ಆವರಣದಲ್ಲಿರುವ ಒಟ್ಟು ಸುಮಾರು ೪೦ ಸೌರ ವಿದ್ಯುತ್ ದೀಪ ಖಂಬಗಳಲ್ಲಿ ೩೫ ಕ್ಕೂ ಮಿಕ್ಕಿ ಹೃದಯಾಘಾತ ಅನುಭವಿಸಿವೆ. ಇನ್ನುಳಿದ ೫ ಖಂಬಗಳು ಖೆಮ್ಮುತ್ತ, ಸೀನುತ್ತ ಆಗಾಗ ಜ್ವರಪೀಡಿತವಾಗಿ ಅನಾರೋಗ್ಯದಿಂದ ಬಳಲುತ್ತ ದೀಪ ಬೆಳಗಿಸುತ್ತಿವೆ!

ಕೆಲ ಸಾರ್ವಜನಿಕ ಜನಪರ ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದು ‘ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ’ಯ ಅನುಕರಣೀಯ ಉದಾಹರಣೆಯಾಗಿ ಸ್ವಂತದ ಲಕ್ಷಾಂತರ ರುಪಾಯಿ ಹಣ ಖರ್ಚಿಸಿ, ಹಾಕಿಸಿಕೊಟ್ಟ ಈ ದೀಪಗಳಿಗೆ ಈ ದುರ್ಗತಿ ತಂದ ವಿಘ್ನ ಸಂತೋಷಿಗಳಿಗೆ ಯಾರು ಪಾಠ ಕಲಿಸುವವರು. ನಿರ್ವಹಣೆಯ ಜವಾಬ್ದಾರಿ ಯಾರದು? ಸುರಕ್ಷತೆಯ ಕರ್ತವ್ಯ ಯಾರದು? ನಾಗರಿಕ ಪ್ರಜ್ನೆ ಇರುವವರು ಈ ರೀತಿಯ ಉಪಟಳಕ್ಕೆ ಮೂಗುದಾರ ಹಾಕಲು ಪ್ರಯತ್ನಿಸುವರೆ?

ಇದು ಹೂಬಳ್ಳಿಯ ಹುಬ್ಬಳ್ಳಿ ನಗರವೊಂದರ ಸಮಸ್ಯೆಯಲ್ಲ. ಪ್ರತಿಭಟನೆ, ಬಂದ್, ಆಕ್ರೋಷ, ಇತ್ಯಾದಿ ಪ್ರಕರಣಗಳಲ್ಲಿ ಸಹಜವಾಗಿ ಪ್ರತಿಭಟನಾಕಾರರ ಆಕ್ರೋಷಕ್ಕೆ ತುತ್ತಾಗುವುದು ಈ ದೀಪಗಳು, ಖಂಬ ಹಾಗು ಬಸ್! ಬಹುತೇಕ ಎಲ್ಲ ನಗರಗಳ ಉದ್ಯಾನ, ಬಯಲು ಮಂದಿರ, ಸಮುದಾಯ ಭವನ, ಸರಕಾರಿ ಕಚೇರಿ, ಟೌನ್ ಹಾಲ್ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾದ ದೀಪಗಳ ಸ್ಥಿತಿಯ ಪ್ರಾತಿನಿಧಿಕ ಲೇಖನವಿದು.