’ಆರೇಂಜ್ ಕೌಂಟಿ,” ಯ ನಾವಿದ್ದ ಮನೆ !

’ಆರೇಂಜ್ ಕೌಂಟಿ,” ಯ ನಾವಿದ್ದ ಮನೆ !

ಬರಹ

ಅಮೆರಿಕದಲ್ಲಿನ ನಮ್ಮವಾಸ್ತವ್ಯದ ಬಹುಪಾಲು ಇಲ್ಲೇ ಕ್ಯಾಲಿಫೋರ್ನಿಯದ ಆರೇಂಜ್ ಕೌಂಟಿಯಲ್ಲಿ ಆಯಿತು. ಇನ್ನುಳಿದ ಭಾಗದಲ್ಲಿ ಹೆಚ್ಚಿನ ಭಾಗ ಕೊಲಂಬಿಯದಲ್ಲಿ, ನಂತರ, ಚಿಕಾಗೋ, ಹಾಗೂ ಬ್ಲೂಮಿಂಗ್ಟನ್ ನಗರಗಳಲ್ಲಿ ಆಯಿತೆಂದು ಒಟ್ಟಾರೆ ಹೇಳಬಹುದು. ಎಲ್ಲಿಂದ ಎಲ್ಲಿಗೆ ಹೋದರೂ ಅಮೆರಿಕದ ಜನಜೀವನ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಾವು ಕಾಣಲಿಲ್ಲ. ಅದೇ ಸುಮಾರು ದೂರ ಕಾರಿನಯಾನಗಳು, ಮಾಲ್ ಗಳಲ್ಲಿ ನೀರಿನಿಂದ ಉಪ್ಕೂಡೊಂಬತ್ತೂ ಕೊಂಡು ತರಬೇಕು. ಸುಸಜ್ಜಿನ ಹವಾನಿಯಂತ್ರಿತ ಮನೆಗಳು, ಸುಸಜ್ಜಿತ ಕಾರ್ ಪಾರ್ಕ್ ಗಳು, ಲಿಫ್ಟ್ ಗಳು, ಮನೆಯಲ್ಲಿ ಸಕಲ ಯಂತ್ರೋಪಕರಣಗಳು, ಬಿಸಿನೀರು ತಣ್ಣೀರಿನ ಸೊಗಸಾದ ನಿಯಂತ್ರಣವ್ಯವಸ್ಥೆಗಳು, ಅತ್ಯುತ್ತಮಮಟ್ಟದ ಸ್ನಾನ, ಶೌಚಾಲಯಗಳು, ಎಲ್ಲರಿಗೂ ಪ್ರತ್ಯೇಕ ವಾಸದ ಕೊಠಡಿಗಳು, ಸದಾ ಇರುವ ಅತಿವೇಗದ ಇಂಟರ್ ನೆಟ್ ವ್ಯವಸ್ಥೆ, ಸದಾಇರುವ ಕರೆಂಟ್ ವ್ಯವಸ್ಥೆಗಳು, ಪ್ರತಿಯೊಂದು ಕಾರ್ಯದ ವೈಖರಿಯನ್ನೂ ಅರಿಯಲು ಸದಾ ಸಿದ್ಧವಾಗಿರುವ ಆನ್ ಲೈನ್ ಸೇವೆಗಳು. ಟೀವಿ ಮನರಂಜನೆ, ಆಡಿಯೋ ವೀಡಿಯೋಗಳ ಸುವ್ಯವಸ್ಥೆಗಳು, ಇತ್ಯಾದಿ ಇತ್ಯಾದಿ. ಎಲ್ಲವೂ ಸಮರ್ಪಕ, ಹಾಗೂ ಸಕಾಲಿಕ, ಮತ್ತು ಕಾರ್ಯವನ್ನು ಮಾಡುವ ಸ್ತರದಲ್ಲಿರುತ್ತವೆ. ಫೋನ್ ಗಳು ಸರಿಯಾಗಿ ಕೆಲಸಮಾಡುತ್ತವೆ. ಏನಾದರೂ ದುರಸ್ತಿಮಾಡಬೇಕಾದರೆ ಮೊದಲೇ ಫೋನ್ ಮಾಡಿ ಅವರಿಗೆ ತಿಳಿಸಬೇಕು.

ಪ್ರತಿವಾರವೂ ಮನೆಯನ್ನು ಕ್ಲೀನ್ ಮಾಡಲು ಇಬ್ಬರು ಬರುತ್ತಿದ್ದರು. ಅವರಿಗೆ ಏನನ್ನೂಹೇಳುವ ಅಗತ್ಯವಿಲ್ಲ. ಅವರೇ ಎಲ್ಲ ಸರಿಯಾಗಿ ನೋಡಿ, ಕೊಳೆಯನ್ನು ತೆಗೆದು, ಕಾರ್ಪೆಟ್ ಶುದ್ಧಿಮಾಡಿ, ಹಳೆಯ ಬೆಡ್ ಶೀಟ್, ಟವೆಲ್ ಗಳನ್ನು ಬದಲಾಯಿಸಿ ಹೋಗುತ್ತಿದ್ದರು. ಕಳ್ಳತನ ಇತ್ಯಾದಿಗಳ ಭಯ ಲವಲೇಶವೂ ಇಲ್ಲ ! ಆ ಸಮಯದಲ್ಲಿ ನಾವು ಕೆಳಗಡೆ ಆಫೀಸ್ ರೂಂ ನ ಹತ್ತಿರದ ವರಾಂಡದಲ್ಲಿ ಕುಳಿತು ಕಾಲಹರಣಮಾಡಿ ಅವರು ಫೋನಾಯಿಸಿದ ಕೂಡಲೇ ಮೇಲಕ್ಕೆ ನಮ್ಮ ೩ ನೆಯ ಅಂತಸ್ತಿನ ಮನೆಗೆ ಎಲಿವೇಟರ್ ನಲ್ಲಿ ಬರುತ್ತಿದ್ದೆವು. ಡಾಲರ್ ಹಣವಿದ್ದಲ್ಲಿ ಎಲ್ಲವೂ ಠಾಕೋಠೀಕ್ !

ಅಮೆರಿಕದೇಶದ ಈ ಭಾಗದ ಹವಮಾತ್ರ ಅತ್ಯುತ್ತಮ. ಹೆಚ್ಚು ಗಾಳಿಯಿಲ್ಲ, ಸೆಖೆಯಿಲ್ಲ. ಹಿತಕರವಾದ ಉಲ್ಲಾಸಕರವಾದ, ಸೂರ್ಯರಷ್ಮಿಯಿಂದ ಕೂಡಿದ ಹವ ! ಒಂದುದಿನವೂ ನಾವು ಸ್ವೆಟರ್ ಉಪಯೋಗಿಸಲಿಲ್ಲ. ಮುಂದಿನ ತಿಂಗಳಿನಿಂದ ವಿಂಟರ್ ಪ್ರಾರಂಭವಾಗುತ್ತದೆ. ಅಮೆರಿಕದ ಪೂರ್ವದಿಕ್ಕಿನಲ್ಲಿರುವ ಭಾಗಗಳು ಹಿಮದಿಂದ ಆವೃತವಾಗಿ, ಹೊರಗೆ ಹೋಗುವುದೇ ಕಷ್ಟ. ಆದರೆ ಕ್ಯಾಲಿಫೋರ್ನಿಯ ಪರವಾಗಿಲ್ಲ.

ನಾವು ಹೊರಗಡೆ ಹವಾಸೇವನೆಗೆ ಹೋದಾಗ, ಅಲ್ಲಿನ ಮರ-ಗಿಡ-ಬಳ್ಳಿಗಳನ್ನು ಕಂಡು ಮೂಕವಿಸ್ಮಿತರಾಗುತ್ತಿದ್ದೆವು. ಸ್ವಲ್ಪವೂ ಮಾಲಿನ್ಯತೆ ಇಲ್ಲದೆ ಗಿಡ-ಮರಗಳ ಎಲೆ, ಹೂ ಕಾಂಡಗಳು ಶುದ್ಧವಾಗಿ ಸೋಪಿನ ನೀರಿನಿಂದ ತೊಳೆದಿರುವರೇನೋ ಎನ್ನಿಸುವಷ್ಟು ಶುದ್ಧವಾಗಿರುತ್ತವೆ. ನೀಲಗಿರಿ ಮತ್ತು ನೀಲಗಿರಿ ತರಹೆಯ ಮರಗಳು, ಚೂಪಾದ ಎಲೆಗಳ ಮರಗಳು, ಕೆಲವು ಕ್ರಿಸ್ಮಸ್ ಮರವನ್ನು ಹೋಲುತ್ತಿದ್ದವು. ಓಕ್ ಮರಗಳು ಮೇಪಲ್ ಮರಗಳು, ಅನೇಕವಿಧದ ಮರಗಳು. ಎಲ್ಲಿಲ್ಲಿ ನೋಡಿದರೂ ವಿಧ-ವಿಧವಾದ ಪಾಮ್ ಮರಗಳು. ನಾನು ಚಿತ್ರದಲ್ಲಿ ತೋರಿಸಿರುವ ಮರವನ್ನೇ ದಿಟ್ಟಿಸಿ ನೋಡಿ. ಕಾಂಡಗಳು ಎಷ್ಟು ಚೆನ್ನಾಗಿವೆ. ಸ್ವಲ್ಪವೂ ಮಲಿನತೆಯಿಲ್ಲ ! ಕಾರಣ- ಅಲ್ಲಿ ಬಳಸುವ ಪೆಟ್ರೋಲ್ (ಗ್ಯಾಸೊಲೀನ್) ಗುಣಮಟ್ಟ ಅತಿ ಹೆಚ್ಚಿನದು ! ಮರದ ಕೊಂಬೆ, ರೆಂಬೆಗಳು ಕೆಳಭಾಗದಿಂದಲೇ ಕವಲೊಡೆದು ಛತ್ರಿಯಂತೆ ಹರಡಿಕೊಳ್ಳುತ್ತವೆ. ನಾವಿದ್ದದ್ದು ೪ ಮಹಡಿಯ ಫ್ಲಾಟ್ ಮನೆ. ನಮ್ಮಮನೆಯ ಮುಂದಿನ ಮರವನ್ನೆ ನಾನು ಫೋಟೊನಲ್ಲಿ ತೋರಿಸಿರುವುದು. ಇಂತಹ ಅನೇಕ ನಮೂನೆಯ ಮರಗಳೆಷ್ಟೋ !

ಇನ್ನೊಂದು- ಚಿಕ್ಕ, ಚಿಕ್ಕ ಗಿಡಗಳಲ್ಲಿ ಬಣ್ಣಬಣ್ಣದ ಗೊಂಚಲು ಗೊಂಚಲು ಹೂಗಳು ಬಿಟ್ಟಿರುತ್ತವೆ. ಎಲೆಗಳಿಗಿಂತ ಹೂವೇ ಹೆಚ್ಚು. ಹೆಚ್ಚುಕಾಲ ಹಾಗೆಯೇ ತಮ್ಮ ಬಣ್ಣವನ್ನು ಕಾಯ್ದಿಟ್ಟುಕೊಳ್ಳುತ್ತವೆ. ಹಸುರು ವೆಲ್ವೆಟ್ ತರಹದ ಲಾನ್ ಗಳು, ನೀರಿನ ಕಾರಂಜಿಗಳು. ಹೇಳಿದರೆ ಹೊಗಳಿದಂತೆ ಕಾಣಿಸುವುದು ಸಹಜ. ಆದರೆ ಇರುವ ವಿಶಯವಂತೂ ದಿಟ !

ಮನೆಯ ಹೊರಗಡೆ ಕಾಲಿಡುತ್ತಿದ್ದಂತೆಯೇ ನಿಮ್ಮನ್ನು ಭೇಟಿಯಾದ ಜನ, ಗುಡ್ ಮಾರ್ನಿಂಗ್ ಅಥವಾ ಗುಡ್ ಈವಿನಿಂಗ್ ಎಂದು ಸಂಬೋಧಿಸಿ ನಡೆಯುತ್ತಾರೆ. ಏಲ್ಲರ ಮುಖದಲ್ಲೂ ತಿಳಿನಗೆಯ ಮಿಂಚು ! ಜನ ಸ್ನೇಹಪ್ರಿಯರು. ಏನಾದರೂ ವಿಚಾರಿಸಿದರೆ ತಮಗೆ ತಿಳಿದದ್ದನ್ನು ಹೇಳುತ್ತಾರೆ. ನಮ್ಮ ಮಾತುಗಳನ್ನು ಗಮನವಿಟ್ಟು ಆಲಿಸುತ್ತಾರೆ. ಗೊತ್ತಿಲ್ಲದಿದ್ದರೆ, ’ಗೊತ್ತಿಲ್ಲ ; ಸಾರಿ” ಯೆಂದು ನಗುಮುಖದಿಂದ ಉತ್ತರಿಸುವ ಅವರ ಚಲನ-ವಲನ ನಮಗೆ ಬಹಳ ಪ್ರಿಯವಾಯಿತು. ನಮ್ಮ ಖಾಸಗೀ ವಿಷಯಗಳಲ್ಲಿ ತಲೆಹಾಕುವುದಿಲ್ಲ. ಅವರ ವಿಷಯವನ್ನೂ ತಿಳಿಸುವುದಿಲ್ಲ.

* ವಿಶ್ವದ ಅತಿಹೆಚ್ಚು-ವಲಸೆಗಾರರ ರಾಷ್ಟ್ರವಾದ ಅಮೆರಿಕದಲ್ಲಿ, ನಾನು ಕಣ್ಣಲ್ಲಿ ನೋಡಿದ್ದು, ಕಿವಿಯಲ್ಲಿ ಕೇಳಿದ್ದನ್ನು ವರದಿಮಾಡಿದ್ದೇನೆ. ನಾನು ಕಳೆದ ಸಮಯ ಎರಡೂವರೆ ತಿಂಗಳು.

-ಚಿತ್ರ ನಾನೇ ತೆಗೆದದ್ದು.