Tech ಸಂಪದ

Tech ಸಂಪದ

ಬರಹ

(ಸವಿತೃ [:forum/11998|"Tech ಸಂಪದ - ಏನಿದು?" ಅಂತ ಕೇಳಿದ್ದರು]. ಸೋಮವಾರ ಈ ಬಗ್ಗೆ ಬರೆಯೋಣ ಎಂದು ಹೊರಟವ ಮತ್ತೇನೋ ಕೆಲಸದಲ್ಲಿ ಸಿಕ್ಕಿಹಾಕಿಕೊಂಡು ಬರಹವನ್ನು ಅರ್ಧಕ್ಕೇ ಬಿಟ್ಟುಬಿಟ್ಟಿದ್ದೆ. ಹೀಗಾಗಿ ಲಿಂಕ್ ಮಾಡಬೇಕು ಅಂದುಕೊಂಡ ಈ ಕುರಿತ ಸೈಟ್ ನೋಟಿಫಿಕೇಶನ್ ಲಿಂಕ್ ಇಲ್ಲದೇ ಉಳಿದುಕೊಂಡುಬಿಟ್ಟಿತು.)

ಪ್ರತಿ ವಾರ ಎಲ್ಲ ಕನ್ನಡ ಪೇಪರುಗಳಲ್ಲೂ ಬರುವ ವಿಜ್ಞಾನ ಹಾಗು ಟೆಕ್ನಾಲಜಿ ಕುರಿತ ನೀರಸ ಪುಟಗಳಲ್ಲಿ ಏನೂ ಹೊಸತಿಲ್ಲದ ವಿಷಯಗಳು ತಂತ್ರಜ್ಞಾನದ ಸುತ್ತಲೇ ಇರುವವರಿಗೆ ಅಚ್ಚರಿ ಮೂಡಿಸದೇ ಇರದು. ಜಾಗತಿಕ ಮಾರುಕಟ್ಟೆಯಲ್ಲಿ Innovation ಬಹುಮುಖ್ಯವಾದದ್ದು. ಒಂದು ರೀತಿಯಲ್ಲಿ ಉಳಿವಿನ ಹಾದಿ. ಅದಕ್ಕೆ ತಂತ್ರಜ್ಞಾನದ ಅರಿವು ಮುಖ್ಯ. ಹೊಸತೇನು ಬರುತ್ತಿದೆ ಎಂಬುದರ ಬಗ್ಗೆ ಸಾಮಾನ್ಯ ಅರಿವು ಬಹು ಮುಖ್ಯ.

ತಂತ್ರಜ್ಞಾನದ ಬಗ್ಗೆ ನಿತ್ಯ ಓದುತ್ತಿರುವವರಿಗೆ ಈ ವಿಷಯ ಚೆನ್ನಾಗಿ ಅರ್ಥವಾಗುವುದು. ಈಗಿನಂತೆ ತಂತ್ರಜ್ಞಾನದ ಕುರಿತು ಏನೇ ಹೊಸತಿರಲಿ ೯೯.೯% ಮಾಹಿತಿ ಸಿಗುವುದು ಇಂಗ್ಲೀಷಿನಲ್ಲೇ. ನಾವುಗಳು ಕನ್ನಡವನ್ನು ಕಥೆ, ಕವನ ಇತ್ಯಾದಿಗಳಿಗೆ ಮಾತ್ರ ಮೀಸಲಿಟ್ಟು ಇಂಗ್ಲೀಷಿನಲ್ಲಿ ತಂತ್ರಜ್ಞಾನವನ್ನು ಓದಿಕೊಳ್ಳುತ್ತ ಸದ್ಯಕ್ಕೆ ದಿನಗಳನ್ನು ದಬ್ಬುತ್ತಿದ್ದೇವೆ. ಆದರೆ ಹೊಸ ತಂತ್ರಜ್ಞಾನದ ಕುರಿತು ಮಾಹಿತಿ ಕನ್ನಡದಲ್ಲೇ ಲಭ್ಯವಾದರೆ ಹೇಗಿರುತ್ತದೆ? ತಂತ್ರಜ್ಞಾನ ಕುರಿತ ಸುದ್ದಿಯೊಂದು ಅಥವ ಮಾಹಿತಿಯೊಂದು ಇಂಗ್ಲಿಷ್ ನಲ್ಲಿ ಬಂದ ದಿನವೇ ಕನ್ನಡದಲ್ಲೂ ಬರುವ ಹಾಗಿದ್ದರೆ?

ಬಹಳ ಚೆನ್ನಾಗಿರುತ್ತದೆ ಅಲ್ವ?

ಸಂಪದ ಸಮುದಾಯದ ನಾವುಗಳು ಕೆಲವರು ಕಂಪ್ಯೂಟರಿನಾಚೆ ಭೇಟಿಯಾದಾಗಲೆಲ್ಲ ಈ ಕುರಿತು ಚರ್ಚೆ ಆಗಾಗ ನಡೆಯುತ್ತಲೇ ಇರುತ್ತಿತ್ತು. "ಸಂಪದದ ಸುತ್ತಾನೆ ತಂತ್ರಜ್ಞಾನ ಕುರಿತ ಹೀಗೊಂದು ಕನ್ನಡದ ಸಮುದಾಯ ಏಕೆ ಕಟ್ಟಬಾರದು?" ಎಂಬ ಪ್ರಶ್ನೆಯೊಂದಿಗೆ ಕೊನೆಗೊಳ್ಳುತ್ತಿತ್ತು. ಆದರೆ ಸಂಪದ ಸರ್ವರಿನಲ್ಲಿ ಮೂಲಭೂತ ಸೌಕರ್ಯಗಳು ಹೆಚ್ಚಿಲ್ಲದಿದ್ದರಿಂದ, ಅದಕ್ಕೆ ಬೇಕಿದ್ದ ಹಣಕಾಸಿನ ಮೂಲಗಳು ಹೆಚ್ಚಿಲ್ಲದ ಕಾರಣ ಅದನ್ನು ಅನುಷ್ಠಾನಕ್ಕೆ ತರಲಾಗಿರಲಿಲ್ಲ. ಆದರೆ ಇತ್ತೀಚೆಗೆ ಸಂಪದ ಸಮುದಾಯದ ಹಲವರು ಇದಕ್ಕೆ ತಮ್ಮ ಸ್ವಂತ ಕೆಲಸಗಳ ನಡುವೆ ಸಮಯ ಮಾಡಿಕೊಂಡು ಬಹಳ ಆಸಕ್ತಿಯಿಂದ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಇದೇ Tech ಸಂಪದ ಆಗಲಿದೆ. ಎಲ್ಲ ಸರಿಯಾಗಿ ಕೈಗೂಡಿದರೆ ಇನ್ನು ಶೀಘ್ರವೇ ನಿಮ್ಮೆಲ್ಲರ ಮುಂದೆ ಬರಲಿದೆ.

ಸಂಪದ ಪ್ರಾರಂಭವಾದಾಗ ಇಂಟರ್ನೆಟ್ಟಿನಲ್ಲಿ ಅಷ್ಟಾಗಿ ಕನ್ನಡದ ಕಂಟೆಂಟ್ ಇರಲಿಲ್ಲ, ಅದೂ ಯೂನಿಕೋಡ್ ಬಳಸಿ ಬರೆದ ಕನ್ನಡ ಬಹಳ ಕಡಿಮೆ ಇದ್ದದ್ದು. ಬ್ಲಾಗುಗಳು ಒಂದೂ ಇರಲಿಲ್ಲ. ಆಗ ಸಂಪದದ ಇರುವಿಕೆ ಸುಲಭವಾಗಿ ಅರ್ಥವಾಗುವಂತಿತ್ತು.
ಈಗ ನೂರಾರು ಬ್ಲಾಗುಗಳಾಗಿವೆ, ಕೆಲವು ಕಥೆ ಕವನಗಳಿಗೇ ಮೀಸಲಾದ ಆನ್ಲೈನ್ ಬ್ಲಾಗುಗಳು/ಪತ್ರಿಕೆ ರೀತಿಯ ಕಮರ್ಶಿಯಲ್ ವೆಬ್ಸೈಟುಗಳೂ ಬಂದುಬಿಟ್ಟಿವೆ. ಹೀಗಾಗಿ ಕನ್ನಡವನ್ನು ಅಂತರ್ಜಾಲದಲ್ಲಿ ಹೆಚ್ಚು ಹೆಚ್ಚಾಗಿ ಪ್ರಚುರಪಡಿಸಬೇಕೆಂದು ಉದ್ದೇಶ ಇಟ್ಟುಕೊಂಡು ನಡೆದುಬಂದಿರುವ ಸಂಪದ ತಂತ್ರಜ್ಞಾನ ಕುರಿತು ಕನ್ನಡದಲ್ಲಿ ಮಾಹಿತಿ ಒದಗಿಸುವ ಇಂತಹ ಯೋಜನೆ ಕೈಗೆತ್ತಿಕೊಳ್ಳಲೇಬೇಕಾದ ಸಮಯ ಇದು. ನಮ್ಮೆಲ್ಲರಿಗೂ ತಲುಪಲಾದಷ್ಟು ತಂತ್ರಜ್ಞಾನ ಕುರಿತ ಮಾಹಿತಿ ಎಲ್ಲ ಕನ್ನಡಿಗರಿಗೂ ಸುಲಭವಾಗಿ ದೊರಕುವಂತಿರಬೇಕು ಎಂಬುದು ಉದ್ದೇಶ. ಸಂಪದದಂತೆಯೇ ಇದೂ ಮುಕ್ತವಾದ ಸಮುದಾಯದ ಹಿನ್ನೆಲೆಯಲ್ಲಿ ಮೂಡಿಬರಲಿದೆ. ಎಲ್ಲರೂ ಭಾಗವಹಿಸಬಹುದು. ಮುಖ್ಯವಾಗಿ ಪ್ರತಿಯೊಬ್ಬರಿಗೂ ಪ್ರಾಶಸ್ತ್ಯ ಉಂಟು.

Tech ಸಂಪದಕ್ಕಾಗಿ ಆಸಕ್ತಿವಹಿಸಿ ಕೆಲಸ ಮಾಡುತ್ತಿರುವ ಸಮುದಾಯದ ಸದಸ್ಯರು ಇದಕ್ಕಾಗಲೇ ಕನ್ನಡದಲ್ಲಿ ಓದಿ ಮುಂದೆ ಬಂದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಭಾರತದ ಪ್ರಮುಖ ವಿಜ್ಞಾನಿಗಳಿಬ್ಬರ ಸಂದರ್ಶನಗಳನ್ನು ರೆಕಾರ್ಡ್ ಮಾಡಿದ್ದಾರೆ. ಕೆಲವರು ಅಂಕಣಗಳನ್ನು ಬರೆದಿಟ್ಟಿದ್ದಾರೆ.

ಏನೂ ಉದ್ದೇಶಿಸದೆಯೇ ಸಂಪದ ಹೇಗೆ ಸಮುದಾಯವೊಂದಾಗಿ ರೂಪುಗೊಂಡಿತು ಎಂಬುದರ ಬಗ್ಗೆ ಹತ್ತಿರದ ಸ್ನೇಹಿತರಿಗೆ ಆಗಾಗ ಒಂದು ವಿಚಾರ ಹೇಳುತ್ತಿರುತ್ತೇನೆ. ಸಂಪದ.ನೆಟ್ ಎಂಬ ಡೊಮೈನು ಕೊಂಡದ್ದೇ ತಂತ್ರಜ್ಞಾನದಲ್ಲಿ ಕನ್ನಡ ಕುರಿತ ಕೆಲಸಗಳನ್ನು ಮಾಡಬೇಕು, ಅದರಲ್ಲಿ ಹೆಚ್ಚು ಹೆಚ್ಚಾಗಿ ಅದೇ ಆಸಕ್ತಿ ಉಳ್ಳವರು ಪಾಲ್ಗೊಳ್ಳುವಂತೆ ಮಾಡಬೇಕು ಎಂಬ ಅಲೋಚನೆಯಿಂದ. ಈಗ ಅದು Tech ಸಂಪದ ಮೂಲಕ ಸಾಧ್ಯವಾಗಬಹುದು ಎಂದು ಆಶಿಸುತ್ತೇನೆ.

ಈ ಪೋರ್ಟಲ್ ಪ್ರಾರಂಭವಾದ ತರುವಾಯ ಎಲ್ಲರೂ (ಸಂಪದದಲ್ಲಿರುವಂತೆ) ನೇರ ಪೋರ್ಟಲ್ಲಿಗೇ ಬರೆದು ಹಾಕಬಹುದಾದರೂ ಪ್ರಾರಂಭ ಹಂತದ ಕಂಟೆಂಟ್ ಜೋಡಣೆ ಕೆಲಸ ನಡೆಯುತ್ತಿರುವ ಈ ಸಮಯದಲ್ಲಿ ತಂತ್ರಜ್ಞಾನ ಕುರಿತು (VLSI ಆಗಿರಬಹುದು, Design ಆಗಿರಬಹುದು, ವೆಬ್ ಕುರಿತಾದದ್ದಾಗಿರಬಹುದು, ಗ್ನು/ಲಿನಕ್ಸ್ ಕುರಿತದ್ದಾಗಿರಬಹುದು - ಅಥವ ತಂತ್ರಜ್ಞಾನ ಕುರಿತ ಇತ್ತೀಚಿನ ಯಾವುದಾದರೂ ಬೆಳವಣಿಗೆಯ ಕುರಿತು ಆಗಿರಬಹುದು) ಈಗಾಗಲೇ ಬರೆದ ಲೇಖನಗಳಿದ್ದಲ್ಲಿ tech-volunteers AT sampada.net ಗೆ ಇ-ಮೇಯ್ಲ್ ಮೂಲಕ ಪ್ರಕಟಣೆಗೆ ಕಳುಹಿಸಬಹುದು. ಜೊತೆಗೆ ಸಂಪದದ ನಿಮ್ಮ ಐಡಿ ಕಳುಹಿಸುವುದು ಮರೆಯಬೇಡಿ.