ಆಧುನಿಕ ಅಮೆರಿಕನ್ನಡದ ಗಾದೆಗಳು !

ಆಧುನಿಕ ಅಮೆರಿಕನ್ನಡದ ಗಾದೆಗಳು !

ಬರಹ

ಗುರುವಾರ, 25 ಸೆಪ್ಟೆಂಬರ್ 2008, 12:38 Hrs (IST)
"ಸುದ್ದಿಸಾರಂಗಿ’, thatsKannada, ಇ-ಪತ್ರಿಕೆ.

ಗಾದೆಗಳೆಂದರೆ ಕಾಲದೇಶದ ಸ್ಥಿತಿಗತಿ ಮನೋಸ್ಥಿತಿಗಳನ್ನು ಅರಗಿಸಿಕೊಂಡು ತಂತಾನೆ ಅರಳುವ ವೇದವಾಕ್ಯಗಳು. ರಿಸೈಕಲ್ ಆಗಿರುವ ಮನುಷ್ಯ ಸ್ವಭಾವಗಳನ್ನು ನಾಲ್ಕಾರು ಶಬ್ದಗಳಲ್ಲಿ ಎರಕ ಹೊಯ್ದ ಅಣಿಮುತ್ತುಗಳು. ಅಂಥ ಮೂವತ್ತು ಹೊಸಗಾದೆಗಳು ಇಲ್ಲಿವೆ. ಅವನ್ನು ಮುನ್ನೂರು ಅಂಕಿಗೆ ಕೊಂಡೊಯ್ಯುವ ಅಭಿರುಚಿ, ಆಸಕ್ತಿ ನಿಮ್ಮದು.

ಡಾ.ಮೈ.ಶ್ರೀ.ನಟರಾಜ, ಮೇರೀಲ್ಯಾಂಡ್

ಅಮೆರಿಕನ್ನಡ ಗಾದೆಗಳನ್ನು ನಾನು ಮೊದಲು ಪ್ರಕಟಿಸಿದ್ದು ನ್ಯೂಯಾರ್ಕ್ ಕನ್ನಡ ಕೂಟದ ಕೈಬರಹದ ಪತ್ರಿಕೆ "ಸುದ್ದಿ ಸಾರಂಗಿ"ಯಲ್ಲಿ (1974-75). ಆ ಸಂದರ್ಭದಲ್ಲಿ ಅಮೇರಿಕಾ ಭೇಟಿಯಲ್ಲಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಅವುಗಳನ್ನು ಓದಿ ಮೆಚ್ಚಿ, ತಮ್ಮ ಪ್ರವಾಸ ಸಾಹಿತ್ಯದಲ್ಲಿ ("ಅಮೇರಿಕದಲ್ಲಿ ಗೊರೂರು") ಅವುಗಳಲ್ಲಿ ಕೆಲವನ್ನು ಉದಾಹರಣೆಯಾಗಿ ಕೊಟ್ಟು ಹಲವು ಪ್ರಶಂಸೆಯ ಮಾತುಗಳನ್ನು ಬರೆದಿದ್ದರು. ಅದಾದಮೇಲೆ, ಹಲವಾರು ಜನ ಹೊಸ ಹೊಸ ಅಮೆರಿಕನ್ನಡ ಗಾದೆಗಳನ್ನು ಬರೆದು ಪ್ರಕಟಿಸಿದ್ದಾರೆ. ನನ್ನ ಕಡತಗಳಲ್ಲಿದ್ದ ಹಲವು (ಪ್ರಕಟವಾಗದ) ಗಾದೆಗಳ ಜೊತೆಗೆ ಇತ್ತೀಚಿನ ಹಲವನ್ನೂ ಸೇರಿಸಿ ಹಂಚಿಕೊಳ್ಳುತ್ತಿರುವೆ. ಇದೋ ಓದಿ.

(1) ಹತ್ತು ವರ್ಷಕ್ಕೆ ನನ್ನ ಮಗ "ಮುತ್ತು" ಅಂದ

(2) ಹೋಗಾಕ್ ಹಿಲರಿ, ಬರಾಕ್ ಒಬಾಮ

(3) ಬಿಳೀ ಮನೇಲ್ ಕರೀ ಮನ್ಷಾ (ಒಬಾಮ ಅಧ್ಯಕ್ಷನಾದರೆ)

(4) ಬಾಯಿದ್ದವನು ಡಿಬೇಟ್ ಗೆದ್ದ, ದುಡ್ಡಿದ್ದವನು ಎಲೆಕ್ಷನ್ ಗೆದ್ದ

(5) ಮಕ್ಳನ್ ಕಟ್ಕೊಂಡು ಮಾಲ್‌ಗೆ ಹೋಗ್ಬೇಡ, ಗಂಡನ್‌ಕಟ್ಕೊಂಡ್ ಇಂಡ್ಯಾಗ್‌ಹೋಗ್ಬೇಡ

(6) ಒಂದೊಂದ್ ವರ್ಷಕ್ ಕೆಲ್ಸಾ ಬದ್ಲಾಯ್ಸು
ಮೂರ್ಮೂರ್ ವರ್ಷಕ್ ಕಾರ್ ಬದ್ಲಾಯ್ಸು
ಐದೈದ್ ವರ್ಷಕ್ ಮನೆ ಬದ್ಲಾಯ್ಸು
ಏಳೇಳ್ ವರ್ಷಕ್ ಗಂಡನ್ ಬದ್ಲಾಯ್ಸು

(7) ಬಾಸಿನ್ ಮುಂದೆ ಬಾಯ್ಮುಚ್ಕೊಂಡಿರು

(8) ಡೇಟಿಂಗ್ ಮಾಡ್‌ದೇ ಮದ್ವೇ ಇಲ್ಲ, ಮದ್ವೆ ಆದ್ರೆ ಡೇಟಿಂಗ್ ಇಲ್ಲ

(9) ಫೆಡರಲ್ ಟ್ಯಾಕ್ಸನ್ನೇ ಕೊಡದವ್ನು ಸ್ಟೇಟ್ ಟ್ಯಾಕ್ಸ್ ಕೊಡ್ತಾನಾ

(10) ಕತ್ತರಿಸಿದಷ್ಟೂ ಹುಲ್ಲು, ಕಟ್‌ದಷ್ಟೂ ಬಿಲ್ಲು

(11) ಒಂದೊಂದೇ ಬೀರ್ ಕುಡಿಯೋನ್ ಯೋಗಿ, ಅವನ್ ತಂಟೇಗ್ ಹೋಗ್‌ಲೇಬೇಡಿ
ಎರಡೆರಡ್ ಕುಡಿಯೋನ್ ಭೋಗಿ, ಅವನ್ ಕಡೆ ಕೊಂಚ ನಿಗಾ ಇಡಿ
ಮೂರ್‍ಮೂರ್ ಕುಡಿಯೋನ್ ರೋಗಿ, ಅವನ್ನ ಡ್ರೈವಿಂಗ್ ಮಾಡಕ್ ಬಿಡ್‌ಬೇಡಿ!
ನಾಕ್‌ನಾಕ್ ಕುಡಿಯೋನ್ನ ಆಚೆ ಕರ್‍ಕೊಂಡ್‌ಹೋಗಿ, ಮನೇಲ್‌ಕೂಡ್‌ಹಾಕ್‌ಬಿಡಿ!

(12) ಕೆಲ್ಸಾ ಮಾಡಿ--ಬಿಡಿ, ಟೈಮಿಗ್ ಸರಿಯಾಗ್ ಹಾಜರ್ ಆಗ್‌ಬಿಡಿ

(13) ಪಾರ್ಟಿಗಳಿಗ್ ಹೋಗ್ವಾಗ ಪಾಯಸವನುಂಡಂತೆ
ಪಾರ್ಟಿಗರು ಬಂದು ಹಿಂತಿರುಗಿ ಕರೆಯೆಂದಾಗ
ಪಕ್ಕೆಲುಬು ಮುರಿದು ಬಿದ್ದಂತೆ ಸ್ವಲ್ಪಜ್ಞ

(14) ಯೌವನ ಇದ್ದಾಗ್ ಪುರುಸೊತ್ತಿಲ್ಲ, ಪುರುಸೊತ್ತಿದ್ದಾಗ್ ಯೌವನ ಇಲ್ಲ
ಸಮಯ ಇದ್ದಾಗ ದುಡ್ಡಿಲ್ಲ, ದುಡ್ಡಿದ್ದಾಗ ಸಮಯ ಇಲ್ಲ

(15) ಗಂಡ ಇಂಡಿಯಾ ಅಂದ್ರೆ, ಹೆಂಡ್ತಿ ಅಮೆರಿಕಾ
ಹೆಂಡ್ತಿ ಇಂಡಿಯಾ ಅಂದ್ರೆ, ಗಂಡ ಅಮೆರಿಕಾ

(16) ಮುವ್ವತ್ತಾದ್ರೂ ಮದ್ವೆ ಇಲ್ಲ, ಅರವತ್ತಾದ್ರೂ ಪೆಂಷನ್ ಇಲ್ಲ

(17) ಹೋದ್ಯಾ ಒಸಾಮಾ ಅಂದ್ರೆ ಬಂದೇ ಒಬಾಮ ಅಂದನಂತೆ

(18) ಹೋದ್ಯಾ ಹಿಲರಿ ಅಂದ್ರೆ ಬಂದೆ ಬರಾಕ್ ಅಂದಹಾಗೆ

(19) ಅಂತೂ ಇಂತೂ ಡೆಮೋಕ್ರ್ಯಾಟಿಕ್ ಪಾರ್ಟಿಗೆ ರಾಜ್ಯವಿಲ್ಲ

(20) ಇದ್ರೆ ಹಿಲರಿ, ಬಿದ್ರೆ ಬಿಲರಿ

(21) ಪಾಕೀಸ್ತಾನದಲ್ಲಿದ್ರೆ ಮುಷರ್ರಾಫ್, ಅಮೇರಿಕಾಕ್ ಬಂದ್ರೆ ಬುಷರ್ರಾಫ್

(22) ಬೆಂಗ್ಳೂರಲ್ಲಿ ಇಂಗ್ಲೀಷು, ಅಮೇರಿಕದಲ್ಲಿ ಕನ್ನಡ

(23) ಬೆಂಗ್ಳೂರಿಗ್‌ಹೋದ್ರೂ ಪೀಟ್ಜಾ ತಪ್ಲಿಲ್ಲ

(24) ಕಾರಿದ್ರೆ ಫ್ಲೈಓವರ್ರು, ಕಾಲಿದ್ರೆ ಕ್ರಾಸ್‌ಓವರ್ರು!

(25) ಮನೇ ಮಾರೋ ಕಾಲಕ್ಕೆ ಬೆಲೆ ಇಳೀತು
ರಿಟೈರಾಗೋ ಕಾಲಕ್ಕೆ ಡಾಲರ್ ಇಳೀತು

(26) ಹಂದಿಯ ತುಟಿಗೆ ಬಣ್ಣದ ಲಿಪ್‌ಸ್ಟಿಕ್
ಸುಂದರಿಯೊಬ್ಬಳು ಪ್ರತ್ಯಕ್ಷ
ಮಂದಮತಿಗಳೋ ಡೆಮೋಕ್ರ್ಯಾಟರು
ಬಂದನು ರಿಪಬ್ಲಿಕನ್ ಅಧ್ಯಕ್ಷ!

(27) ಶಾಮಲವರ್ಣದ ಬರಾಕನ ಜೊತೆಗೆ
ಸಾಮಾನ್ಯರ ಮಗ ಬೈಡಣ್ಣ
ರೋಮವು ನೆರೆತಿಹ ಮೆಕೇನನೊಂದಿಗೆ
ಕೋಮಲೆಯೊಬ್ಬಳು ನೋಡಣ್ಣ!

(28) ಅಲಾಸ್ಕಾದಿಂದ ಪೇಲಿನ್ನು, ಅರಿಜೋನಾದಿಂದ ಮೆಕ್ಕೇನು

(29) ಇರಾಕ್‌ನಲ್ಲಿ ಬಾಂಬ್ ಇರ್ತೈತಾ ಅಂದ್ರೆ, ಇರಾಕಿಲ್ಲಾ ಅಂದನಂತೆ
ಇರಾನ್‌ನಲ್ಲಿ ಬಾಂಬ್ ಇರ್ತೈತಾ ಅಂದ್ರೆ, ಇರಾಣಿಲ್ಲ ಅಂದನಂತೆ

(30) ಒಸಾಮನ್ನ ಹಿಡ್ಯೋಕೆ ಒಬಾಮ ಬಂದ
ಒಬಾಮನ್ನ ಹಿಡಿಯೋಕೆ ಮೆಕ್ಕೇನ್ ಬಂದ

ನೀವು ನಿಮಗೆ ತೋಚಿದ ಅಮೆರಿಕನ್ನಡ ಗಾದೆಗಳನ್ನು ಬರೆಯಿರಿ. ಈಗಾಗಲೇ ಬರೆದಿದ್ದರೆ ಸಂಗ್ರಹಿಸಿಡಿ. ಎಲ್ಲ ಗಾದೆಗಳನ್ನೂ ಒಟ್ಟಿಗೆ ಸೇರಿಸಿ ಒಂದು ಸಣ್ಣ ಪುಸ್ತಕ ಪ್ರಕಟಿಸೋಣ.

ಕೃಪೆ : ಮೈ.ಶ್ರೀ.ನಟರಾಜ, ಮೇರೀಲ್ಯಾಂಡ್, ಆಧುನಿಕ ಗಾದೆ, ಜಾಲತರಂಗ.

-ಶ್ರೀ ನಟರಾಜರ ಅಪ್ಪಣೆ ಕೋರಿ, ಹೇಗಿದೆಯೋಹಾಗೆ ಪ್ರಕಟಿತ.