ಹರ ಕೊಲ್ಲಲ್ ಪರ ಕಾಯ್ವನೆ?

ಹರ ಕೊಲ್ಲಲ್ ಪರ ಕಾಯ್ವನೆ?

ಬರಹ

ಹರ ಕೊಲ್ಲಲ್ ಪರ ಕಾಯ್ವನೆ?

"ಗೆದ್ದವನು ಸೋತ, ಸೋತವನು ಸತ್ತ!" ಇದು ನಮ್ಮ ನ್ಯಾಯದಾನ ಪದ್ಧತಿ ಕುರಿತಂತೆ ಪ್ರಚಲಿತವಿರುವ ಜನಪ್ರಿಯ ಗಾದೆ. ಇದನ್ನು ಇತ್ತೀಚೆಗೆ ನ್ಯಾಯಾಲಯದ ಮೆಟ್ಟಿಲನ್ನು ಅನಿವಾರ್ಯವಾಗಿ ಏರಬೇಕಾಗಿ ಬಂದು, ಹಲವು ವರ್ಷಗಳ ಕಾಲ ಕಟಕಟೆಯಲ್ಲಿ ನಿಂತೂ ನಿಂತೂ ಸುಸ್ತಾಗಿ ಹೋಗಿರುವ ನನ್ನ ಸ್ನೇಹಿತರೊಬ್ಬರು ಇನ್ನಷ್ಟು ಸುಧಾರಿಸಿ ಹೇಳಿದ್ದು ಹೀಗೆ: "ಕೋರ್ಟ್ಗೆ ಹೋದ ಯಾರಿಗಾದರೂ ದೇವರಲ್ಲಿ ನಂಬಿಕೆ ಬಂದುಬಿಡುತ್ತದೆ!" ಏಕೆಂದರೆ, ಅಲ್ಲಿನ ವಿಧಿ ವಿಧಾನಗಳ ಮಧ್ಯೆ ಸಿಕ್ಕಿಹಾಕಿಕೊಂಡವರನ್ನು ದೇವರು ಮಾತ್ರ ರಕ್ಷಿಸಬಲ್ಲ! ಏಕೆಂದರೆ, ಪ್ರಕರಣಗಳ ದಾಖಲು, ಸ್ವೀಕೃತಿ, ಮುಂದೂಡಿಕೆ, ಮುಂದೂಡಿಕೆಗೆ ಕೊಡುವ ಕಾರಣಗಳು, ಅವನ್ನು ಒಪ್ಪಲು ಇರುವ ಅವಕಾಶಗಳು, ಕೊನೆಯಿಲ್ಲದಂತೆ ಎಳೆದುಕೊಂಡು ಹೋಗುವ ವಿಚಾರಣೆ, ಇದೆಲ್ಲ ಆದ ಮೇಲೆ ನೀಡಲಾಗುವ ನ್ಯಾಯ, ಅದಕ್ಕೆ ಮೇಲಿನ ನ್ಯಾಯಾಲಯಗಳಿಂದ ಸಿಗುವ ತಡೆಯಾಜ್ಞೆ, ಅದರ ತೆರವು, ಮತ್ತೆ ವಿಚಾರಣೆಗಳು, ಮುಂದೂಡಿಕೆಗಳು - ಈ ವಿಷವ್ಯೂಹದ ನಡೆ ನುಡಿಗಳ ತರ್ಕದ ಗೋಜಲಿನ ಹಿಂದಿನ 'ನ್ಯಾಯ ಪ್ರಜ್ಞೆ'ಯನ್ನು ಸರ್ವಜ್ಞನಾದ ಆ ದೇವರು ಮಾತ್ರ ವಿವರಿಸಬಲ್ಲ! ನಾನೊಮ್ಮೆ ನನ್ನ ಸೇವಾ ವಿಷಯದಲ್ಲಿ ನ್ಯಾಯಾಲಯಕ್ಕೆ ಹೋಗಬೇಕಾಗುವುದೇನೋ ಎಂದು, ಹಾಗೆ ನ್ಯಾಯಾಧಿಕಾರವೊಂದರ ಮೊರೆ ಹೊಕ್ಕಿದ್ದ ನನ್ನ ಹಿರಿಯ ಸ್ನೇಹಿತರೊಬ್ಬರ ಬಳಿ ನನ್ನ ಆತಂಕ ವ್ಯಕ್ತಪಡಿಸಿದಾಗ, ಅವರು ತಮ್ಮ ಬೋಳು ಮಂಡೆಯನ್ನು ಸವರಿಕೊಳ್ಳುತ್ತಾ ನೀಡಿದ ಉಪದೇಶ: 'ಯಾವ ಕಾರಣಕ್ಕೂ ಪೋಲೀಸ್ ಠಾಣೆ ಅಥವಾ ನ್ಯಾಯಾಲಯದ ಮೆಟ್ಟಿಲೇರುವ ದುಸ್ಸಾಹಸ ಮಾಡಬೇಡ. ಅಲ್ಲಿಂದ ನೀನು ಗೆದ್ದೋ, ಸೋತೋ ಹೊರಬರುವ ವೇಳೆಗೆ ನುಣ್ಣಗಾಗಿ ಹೋಗಿರುತ್ತೀಯಾ!' ಇದು ನಮ್ಮ ಕಾನೂನು ಮತ್ತು ಶಿಸ್ತಿನ 'ವ್ಯವಸ್ಥೆ' ಬಗೆಗೆ ಜನಸಾಮಾನ್ಯರಲ್ಲಿ ಇರುವ ಭಯಮಿಶ್ರಿತ ಗೌರವಕ್ಕೊಂದು ಉದಾಹರಣೆ!

ಆದರೂ ಜನ ಪೋಲಿಸ್ ಠಾಣೆಗಳಲ್ಲಿ ದೂರುಗಳನ್ನು ದಾಖಲಿಸಿ, ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಿ; ವರ್ಷಗಟ್ಟಲೆ ಅಲ್ಲಿಂದಿಲ್ಲಿಗೆ ಅಲೆದಾಡುತ್ತಾ, ಅವುಗಳಲ್ಲಿ ಸೋತೋ ಗೆದ್ದೋ ಬಸವಳಿಯುತ್ತಿದ್ದಾರೆ. ಇದಕ್ಕೆ ಕಾರಣ, ಜನ ನಿರಂತರವಾಗಿ ಅನ್ಯಾಯಕ್ಕೊಳಗಾಗುತ್ತಿದ್ದಾರೆ ಅಥವಾ ಹಾಗೆ ಭಾವಿಸುವ ವಾತಾವರಣವಿದೆ ಎಂಬುದೇ ಆಗಿದೆ. ಈ ಅನ್ಯಾಯಗಳಿಗೆ ಪೋಲೀಸು, ನ್ಯಾಯಾಲಯಗಳ ಮೂಲಕ ಪರಿಹಾರ ಸುಲಭ ಮತ್ತು ಸುಗಮವಲ್ಲ ಎಂಬುದು ಅನುಭವದಿಂದ ಗೊತ್ತಿದ್ದರೂ ಅವಕ್ಕೆ ಮುಗಿಬೀಳುವುದನ್ನು ಮುಂದುವರೆಸಿದ್ದರೆ, ಅದಕ್ಕೆ ಮುಖ್ಯ ಕಾರಣಗಳು ಎರಡು: ಒಂದು, ಸಮಾಜದಲ್ಲಿ ಅನ್ಯಾಯಗಳು ನಡೆಯದಂತೆ ಅಥವಾ ಆ ಭಾವನೆ ಉಂಟಾಗದಂತೆ ನೋಡಿಕೊಳ್ಳುವುದರಲ್ಲಿ ನಮ್ಮ ಕಾನೂನು ಮತ್ತು ಶಿಸ್ತಿನ ವ್ಯವಸ್ಥೆ ವಿಫಲಗೊಂಡಿರುವುದು. ಎರಡು, ಅನ್ಯಾಯಗಳನ್ನು ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳುವ ವಿವೇಕವನ್ನು ನಮ್ಮ ಆಧುನಿಕ ಸಾಮಾಜಿಕ ರಚನೆ ಕಳೆದುಕೊಂಡಿರುವುದು. ಹೀಗಾಗಿ ವರ್ಷ ವರ್ಷ ಪೋಲೀಸು ಠಾಣೆಗಳಲ್ಲಿ ಮತ್ತು ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗೇ ಬಾಕಿ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚುತ್ತಾ, ನ್ಯಾಯಕ್ಕಾಗಿ ಜನ ಕಾದೂ ಕಾದೂ ಕಂಗಾಲಾಗಿ ಹೋಗಿದ್ದಾರೆ. ಇನ್ನು ಪೋಲೀಸು ಪ್ರಕರಣಗಳಲ್ಲಿ ಅಂತಿಮವಾಗಿ ಶಿಕ್ಷೆಗೆ ಒಳಗಾಗುವ ಪ್ರಕರಣಗಳು ಶೇ.10ಕ್ಕೂ ಕಡಿಮೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿ ಅಪರಾಧಗಳಿಗೆ ಕುಮ್ಮಕ್ಕು ಸಿಕ್ಕಂತಾಗಿದೆ. ಹಾಗೇ, ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಪೋಲೀಸ್ ಇಲಾಖೆ ನಮ್ಮ ರಾಜ್ಯದ ಅತ್ಯಂತ ಭ್ರಷ್ಠ ಇಲಾಖೆ - ಅಂದರೆ ಅಷ್ಟು ಲಂಚ ತಿಂದಿದೆ - ಎಂಬ ಕುಖ್ಯಾತಿಗೂ ಒಳಗಾಗಿದೆ. ಆದರೆ ಇದಕ್ಕೆ ಪೋಲೀಸರು ಮಾತ್ರ ಕಾರಣರಲ್ಲ ಎಂಬುದು ಸ್ಪಷ್ಟ. ಏಕೆಂದರೆ, ಅವರು ಪ್ರಚಲಿತ ಭ್ರಷ್ಟ ವ್ಯವಸ್ಥೆಯ ಒಂದು ಭಾಗವೇ ಆಗಿದ್ದು, ಈ ಭ್ರಷ್ಟತೆಯಿಂದ ಹೊರಬರಲು ಅವರು ಪ್ರಯತ್ನ ಪಟ್ಟರೂ ಅದು ಅಸಾಧ್ಯವೆನ್ನುವಂತಾಗಿರುವ ಪರಿಸ್ಥಿತಿ ಇಂದು ಉಂಟಾಗಿದೆ.

ಆದರೆ ಇದೇ ಮಾತನ್ನು ನ್ಯಾಯಾಲಯಗಳ ಬಗ್ಗೆ ಹೇಳಬಹುದೆ? ನಮ್ಮ ಸಂವಿಧಾನದ ಕಟ್ಟುನಿಟ್ಟುಗಳ ಚೌಕಟ್ಟಿನಲ್ಲಿ ಇದನ್ನು ಹೇಳಲಾಗದು. ಏಕೆಂದರೆ ನಮ್ಮ ಸಂವಿಧಾನ, ನ್ಯಾಯಾಂಗವನ್ನು ನಮ್ಮ 'ವ್ಯವಸ್ಥೆ'ಯ ಮೇಲೆ ನಿಗಾ ಇಡಲೆಂದೇ, ಅದರ ಭ್ರಷ್ಟತೆಯ ಸಾಧ್ಯತೆಗಳ ವಿರುದ್ಧ ರಕ್ಷಣೆ ನೀಡಲೆಂದೇ, ಅದರಿಂದ ಒಂದು 'ದೂರ' ಕಾಪಾಡಿಕೊಂಡಿರುವ ಹಾಗೆ ಅದನ್ನು ರೂಪಿಸಿದೆ. ಆದರೂ ಈ ದೂರ ದಿನೇ ದಿನೇ ಕಡಿಮೆಯಾಗುತ್ತಿರುವ; ಅದೂ 'ವ್ಯವಸ್ಥೆ'ಯಿಂದ ಪ್ರಭಾವಿತವಾಗುತ್ತಿರುವ ಸೂಚನೆಗಳು ಕಾಣತೊಡಗಿವೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯೇ ಆಗಿದೆ. ಹೀಗಾಗಿಯೇ ಈಚೆಗೆ ನಮ್ಮ ಪ್ರಧಾನ ಮಂತ್ರಿಯವರು ನ್ಯಾಯಾಂಗ ನಿರ್ವಹಣೆಯಲ್ಲಿ ಪಾರದರ್ಶಕತೆಯ ಅಗತ್ಯದ ಬಗ್ಗೆ ಮಾತನಾಡುತ್ತಾ, ನ್ಯಾಯಾಂಗ ನೇಮಕಾತಿಗಳಲ್ಲಿ ಕಾರ್ಯಾಂಗದ ಪಾತ್ರವೂ ಅನಿವಾರ್ಯವಾಗುವ ಸ್ಥಿತಿ ಉಂಟಾಗುತ್ತಿರುವುದರ ಪರೋಕ್ಷ ಸೂಚನೆ ನೀಡಿ, ತಮ್ಮ ಕಳವಳ ವ್ಯಕ್ತಪಡಿಸಿರುವುದು. ಪ್ರಧಾನಮಂತ್ರಿಯವರ ಈ ಕಳವಳಕ್ಕೆ ಕಾರಣವಾಗಿರುವುದು, ನ್ಯಾಯಾಂಗ ಕ್ಷೇತ್ರದಲ್ಲಿ ಇತ್ತೀಚೆಗೆ ಒಂದಾದರಮೇಲೊಂದರಂತೆ ಬಹಿರಂಗವಾಗುತ್ತಿರುವ ಭ್ರಷ್ಟಾಚಾರದ ಪ್ರಕರಣಗಳು!

ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಮಾತು ನಮ್ಮ ಸಮಾಜಕ್ಕೇನೂ ಹೊಸದಲ್ಲ. ಕೆಳಹಂತದ ಕೋರ್ಟುಗಳಲ್ಲಿ ಬೆಂಚ್ ಕ್ಲರ್ಕ್ ನಿಂದ ಆರಂಭವಾಗುವ ಲಂಚಾವತಾರ ಎಲ್ಲಿಯವರೆಗೆ ಮುಟ್ಟಬಹುದೆಂಬುದು ಈ ಕೋರ್ಟುಗಳಲ್ಲಿ ವ್ಯವಹಾರ ಮಾಡಿರುವ ಎಲ್ಲರಿಗೂ ಗೊತ್ತೇ ಇದೆ. ಸ್ವತಃ ಸರ್ವೋನ್ನತ ನ್ಯಾಯಾಯಲಯದ ಹಿಂದಿನ ನ್ಯಾಯಾಧೀಶರೊಬ್ಬರು ಕೆಳ ಹಂತದ ನ್ಯಾಯಾಲಯಗಳಲ್ಲಿನ ಭ್ರಷ್ಟತೆಯ ಶೇಕಡಾವಾರನ್ನೂ ಅಂದಾಜು ಮಾಡಿ ಆತಂಕ ವ್ಯಕ್ತಪಡಿಸಿರಲಿಲ್ಲವೆ? ಆದರೆ ನ್ಯಾಯಾಂಗದ ಎಲ್ಲ ಸಿಬ್ಬಂದಿಯ ಮಟ್ಟದಲ್ಲಲ್ಲದಿದ್ದರೂ, ಎಲ್ಲ ಹಂತಗಳಲ್ಲಂತೂ ವಿವಿಧ ರೂಪಗಳ ಭ್ರಷ್ಟಾಚಾರವಿದೆ ಎಂಬುದು ಫಿರ್ಯಾದಿದಾರರನೇಕರ ಅನುಮಾನವಾಗಿತ್ತು. ಆದರೆ ಅದನ್ನು ಬಹಿರಂಗವಾಗಿ ಹೇಳಲಾಗದಿದ್ದ ಸಂಕಟವೀಗ, ಉನ್ನತ ಹಂತಗಳ ನ್ಯಾಯಾಧೀಶರ ವಿರುದ್ಧ ನಡೆಯಲಾರಂಭಿಸಿರುವ ಭ್ರಷ್ಟಾಚಾರದ ವಿಚಾರಣೆಗಳಿಂದ ತಾತ್ಕಾಲಿಕವಾಗಿಯಾದರೂ ಶಮನಗೊಳ್ಳುವಂತಾಗಿದೆ.

ನ್ಯಾಯಾಂಗದ ಉನ್ನತ ಮಟ್ಟಗಳಲ್ಲಿ ಸ್ಫೋಟಿಸಿ ಇಂದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿರುವ ಪ್ರಕರಣಗಳನ್ನೇ ನೋಡಿ. ಹಾದಿ ತಪ್ಪಿದ ನ್ಯಾಯಾಧೀಶರ ಪ್ರಕರಣಗಳಿಗೆ ಕುಪ್ರಸಿದ್ಧವಾಗಿರುವ ಪಂಜಾಬ್ ಮತ್ತು ಹರ್ಯಾಣ ಶ್ರೇಷ್ಠ ನ್ಯಾಯಾಲಯದ ಓರ್ವ (ಮಹಿಳಾ) ನ್ಯಾಯಾಧೀಶರೊಬ್ಬರ ಮನೆಗೆ ಸಂಜೀವ್ ಬನ್ಸಾಲ್ ಎಂಬ ಹೆಚ್ಚುವರಿ ಅಡ್ವೊಕೇಟ್ ಜನರಲ್ನ ಸಹಾಯಕನೊಬ್ಬನ ಮೂಲಕವೇ 15 ಲಕ್ಷ ರುಪಾಯಿಗಳ ನಗದಿದ್ದ ಪೊಟ್ಟಣವೊಂದು ಬಂದು ಬೀಳುತ್ತದೆ. ಹೆಸರಿನ ಗೊಂದಲದಿಂದಾಗಿ ಅದು ತಪ್ಪಾದ ನ್ಯಾಯಾಧೀಶರ ಮನೆ ಬಾಗಿಲು ತಲುಪಿ, ಅಲ್ಲಿನ ಭದ್ರತಾ ಸಿಬ್ಬಂದಿಯ ತಪಾಸಣೆಗೊಳಗಾದ್ದರಿಂದ ಮಾತ್ರ ಈ ಪ್ರಕರಣ ಹೊರಬಿದ್ದುದು ಮತ್ತು ಇದು ದೆಹಲಿಯ ಹೋಟೆಲ್ ಉದ್ಯಮಿಯೊಬ್ಬ ಕಳಿಸಿದ್ದೆಂದು ಗೊತ್ತಾದುದು. ರವೀಂದ್ರ ಖನ್ನ ಎಂಬ ಈ ಹೋಟೆಲ್ ಉದ್ಯಮಿ ಹಲವು ವಣಿಜರ ಪರವಾಗಿ ಸಂಜೀವ್ ಬನ್ಸಾಲನನ್ನು ಬಳಸಿಕೊಂಡು ನ್ಯಾಯಾಧೀಶರು, ವಕೀಲರು ಮತ್ತು ವಾಣಿಜ್ಯೋದ್ಯಮಿಗಳ ನಡುವೆ ಈ ಹಿಂದಿನಿಂದಲೂ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಎಂಬುದು ಈಗ ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ. ಆಪಾದಿತ ನ್ಯಾಯಾಧೀಶೆ ನಿರ್ಮಲ್ ಯಾದವ್ ರಜೆ ಮೇಲೆ ಹೋಗಿದ್ದಾರೆ. ಪ್ರಕರಣವನ್ನು ಸಿ.ಬಿ.ಐ. ತನಿಖೆಗೆ ವಹಿಸಲಾಗಿದೆ.

ಇನ್ನು ಸರ್ವೋನ್ನತ ನ್ಯಾಯಾಯಲಯದ ಮುಖ್ಯ ನ್ಯಾಯಾಧೀಶರೇ ಸಂಸತ್ತಿನ 'ಛೀಮಾರಿ'ಗೆ ಶಿಫಾರಸ್ ಮಾಡಿರುವ ಪಶ್ಚಿಮ ಬಂಗಾಳದ ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶ ಸೌಮಿತ್ರ ಸೇನ್ ಪ್ರಕರಣವಂತೂ ನ್ಯಾಯಾಂಗದಲ್ಲೂ ಎಷ್ಟು ನಾಚಿಕೆಗೆಟ್ಟವರೂ ಸೇರಿಬಿಟ್ಟಿದ್ದಾರೆ ಎಂಬುದನ್ನು ಶ್ರುತಪಡಿಸುತ್ತದೆ. ಈ ಹಿಂದೆ ಇದೇ ನ್ಯಾಯಾಯಲಯದಲ್ಲಿ ವಕೀಲರಾಗಿದ್ದಾಗ ಮೊಕದ್ದಮೆಯೊಂದರಲ್ಲಿ ಆಸ್ತಿ ನಿರ್ವಾಹಕರಾಗಿ (ರಿಸೀವರ್) ನೇಮಕವಾಗಿದ್ದ ಆಗಿದ್ದ ಸೇನ್, ಆ ಸಂಬಂಧ ಲಕ್ಷಾಂತರ ರೂಪಾಯಿಗಳನ್ನು ತನ್ನ ವೈಯುಕ್ತಿಕ ಖಾತೆಗೆ ಜಮಾ ಮಾಡಿಕೊಂಡು ದುರುಪಯೋಗಪಡಿಸಿಕೊಂಡ ಪ್ರಕರಣ ತನಿಖೆಗೊಳಗಾಗಿ ಅವರು ಅಪರಾಧಿಯೆಂದು ಸಾಬೀತಾಗಿದೆ. ಆದರೆ ಈ ನ್ಯಾಯಾಧೀಶ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಸ್ವಯಂ ನಿವೃತ್ತಿ ಪಡೆಯಬೇಕೇಂಬ ಸರ್ವೋನ್ನತ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಸೂಚನೆಗೆ ಸೆಡ್ಡು ಹೊಡೆದು ನಿಲ್ಲುವ ಭಂಡತನ ಪ್ರದರ್ಶಿಸಿದ್ದಾರೆ! ಬಹುಶಃ 90ರ ದಶಕದ ನ್ಯಾಯಮೂರ್ತಿ ರಾಮಸ್ವಾಮಿ ಅವರ 'ಛೀಮಾರಿ' ಪ್ರಕರಣ ಅವರಿಗೆ ಸ್ಫೂರ್ತಿ ನೀಡಿರಬಹುದು! ಹೀಗೇ ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ಸರ್ವೋನ್ನತ ನ್ಯಾಯಾಲಯದ ಸೂಚನೆಗೆ ಸೆಡ್ಡು ಹೊಡೆದು ನಿಂತಿದ್ದ ನ್ಯಾ||ರಾಮಸ್ವಾಮಿ, ಸಂಸತ್ ಸದಸ್ಯರ ಪ್ರಾಂತೀಯ ಭಾವನೆಗಳ ಮತ್ತು ಈಗಿನ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ ಆಗ ತಮ್ಮ ಪರ ವಕೀಲರಾಗಿ ಮಂಡಿಸಿದ ವಾದದ ಲಾಭ ಪಡೆದು ಛೀಮಾರಿಯಿಂದ ಪಾರಾದರು! ಇದು ನ್ಯಾಯಾಂಗದ ಭ್ರಷ್ಟಾಚಾರ ಕುರಿತು ನಮ್ಮ ಸಂಸತ್ತಿನ ಧೋರಣೆ!

ಇನ್ನು ಘಾಝಿಯಾಬಾದ್ ಜಿಲ್ಲಾ ನ್ಯಾಯಾಲಯದ ನಾಲ್ಕನೇ ದರ್ಜೆ ನೌಕರರ ಪ್ರಾವಿಡೆಂಟ್ ನಿಧಿಯ ದುರುಪಯೋಗ ಪ್ರಕರಣವಂತೂ ಗಾಬರಿ ಹುಟ್ಟಿಸುವಂತಹುದು. 2002 ಮತ್ತು 2007ರ ನಡುವೆ ನ್ಯಾಯಾಲಯದ ಅಶುತೋಶ್ ಆಸ್ಥಾನ ಎಂಬ ಖಜಾನೆ ಅಧಿಕಾರಿ ಸುಳ್ಳು ಸಹಿ ಮಾಡಿ ನಿಧಿಯಿಂದ ಈವರೆಗೆ 23 ಕೋಟಿ ರೂಪಾಯಿಗಳನ್ನು ಹೊರ ತೆಗೆದು ತಾನೂ ತಿಂದಿದ್ದಲ್ಲದೆ, ವಿವಿಧ ಹಂತಗಳ ನ್ಯಾಯಾಧೀಶರಿಗೂ ವಿವಿಧ ರೂಪಗಳ 'ಉಡುಗೊರೆ'ಗಳ ಮೂಲಕ ತಿನ್ನಿಸಿದ್ದಾನೆ ಎಂಬುದು ಅದೇ ನ್ಯಾಯಾಲಯದ ಈಗಿನ ನ್ಯಾಯಾಧೀಶೆ ರಮಾ ಜೈನ್ ಅವರು ಆಜ್ಞಾಪಿಸಿದ ತನಿಖೆ ಬಹಿರಂಗಪಡಿಸಿದೆ. ಇವರಲ್ಲಿ ಉತ್ತರ ಪ್ರದೇಶದ ಶ್ರೇಷ್ಠ ನ್ಯಾಯಾಲಯಗಳಲ್ಲಿನ ಹಲವು ನ್ಯಾಯಾಧೀಶರುಗಳಲ್ಲದೆ, ಸರ್ವೋನ್ನತ ನ್ಯಾಯಾಲಯದ ಈಗಿನ ಒಬ್ಬ ನ್ಯಾಯಾಧೀಶರೂ ಫಲಾನುಭವಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣ ಬಹಿರಂಗ ವಿಚಾರಣೆಗೆ ಒಳಪಡದಂತೆ ನ್ಯಾಯಾಂಗ ಅಧಿಕಾರಿಗಳ ಮಟ್ಟದಲ್ಲಿ ಪ್ರಯತ್ನಗಳು ನಡೆದಾಗ, ಆಡಳಿತ ಪಾರದರ್ಶಕತೆಯನ್ನು ಕುರಿತ ಸ್ವಯಂಸೇವಾ ಸಂಸ್ಥೆಯೊಂದು ಸರ್ವೋನ್ನತ ನ್ಯಾಯಾಲಯದಲ್ಲಿ ಸಿ.ಬಿ.ಐ. ತನಿಖೆಗಾಗಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ದಾಖಲಿಸಿತು. ಅದರ ಪರವಾಗಿ, ರಾಷ್ಟ್ರ ಕಂಡ ಅತ್ಯುತ್ತಮ ಕಾನೂನು ಮಂತ್ರಿಗಳಲೊಬ್ಬರಾದ ಸುಪ್ರಸಿದ್ಧ ಸಾರ್ವಜನಿಕ ಹಿತಾಸಕ್ತಿಯ ವಕೀಲ ಶಾಂತಿಭೂಷಣ್ ಮತ್ತು ಅವರ ಪರಂಪರೆಯನ್ನು ಮುಂದುವರೆಸಿರುವ ಅವರ ಪುತ್ರ ಪ್ರಶಾಂತ್ ಭೂಷಣ್ ಮಂಡಿಸಿದ ವಾದ ನ್ಯಾಯಾಧೀಶರುಗಳನ್ನೂ ತಲ್ಲಣಗೊಳಿಸುವಂತಿತ್ತು! ಈ ಸಂಬಂಧದಲ್ಲಿ ನಡೆದ ತಂದೆ - ಮಗನ ಮತ್ತು ನ್ಯಾಯಾಧೀಶರ ನಡುವಣ ವಾಗ್ವಾದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಸದ್ಯದ ನಮ್ಮ ನ್ಯಾಯಾಂಗದ ಸಂದಿಗ್ಧತೆ ಮತ್ತು ಸಂಕಟಗಳನ್ನು ಪ್ರತಿಬಿಂಬಿಸುವಂತಿತ್ತು. 'ನ್ಯಾಯಾಧೀಶರೇನೂ ದೇವಲೋಕದಿಂದ ಇಳಿದು ಬಂದಿಲ್ಲ! ಅವರೂ ಸಾರ್ವಜನಿಕ ಪರಿಶೀಲನೆಗೆ ಒಳಗಾಗಬೇಕು ಮತ್ತು ಸಾರ್ವಜನಿಕ ಹಣಕಾಸಿಗೆ ಜವಾಬ್ದಾರರಾಗಬೇಕು' ಎಂಬುದು ಭೂಷಣ್ದ್ವಯರ ವಾದವಾದರೆ, ಇಂತಹ ಮಾತುಗಳು ಮಿತಿ ಮೀರಿದವು ಮತ್ತು ನ್ಯಾಯಾಂಗ ನಿಂದನೆಗೆ ದಾರಿ ಮಾಡಿಕೊಟ್ಟಾವು ಎಂಬುದು ನ್ಯಾಯಾಧೀಶರ ಎಚ್ಚರಿಕೆ! ಈ ಪ್ರಕರಣ ಮತ್ತೆ ಮುಂದಿನ ಅಕ್ಟೋ.22ರಂದು ವಿಚಾರಣೆಗೆ ಬರಲಿದೆ.

ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಬಹುದಾದ ಇನ್ನೊಂದು ಪ್ರಕರಣವೆಂದರೆ, ನಮ್ಮ ನೌಕಾದಳದ ಮಾಜಿ ಮುಖ್ಯಸ್ಥ ಮತ್ತು ಈಗಿನ ದೊಡ್ಡ ಶಸ್ತ್ರಾಸ್ತ್ರ ವ್ಯಾಪಾರಿ ಜ||ನಂದಾ ಅವರ ಮಗ ಸಂಜೀವ ನಂದ ತನ್ನ ಸ್ನೇಹಿತರೊಂದಿಗೆ ಕುಡಿದು ನಾಲ್ಕಾರು ಜನರ ಮೇಲೆ ತನ್ನ ವೈಭವೋಪೇತ ಬಿ.ಎಂ.ಡಬ್ಲ್ಯು. ವಾಹನವನ್ನು ಹರಿಸಿಕೊಂಡುಹೋದ ಮೊಕದ್ದಮೆ. ಇದರಲ್ಲಿ ಆಪಾದಿತರ ಪರ ವಕಾಲತ್ತು ವಹಿಸಿದ್ದ ಹಿರಿಯ ವಕೀಲ ಆನಂದ್, ಸರ್ಕಾರದ ಪರವಾಗಿ ವಕಾಲತ್ತು ವಹಿಸಿದ್ದ ಇನ್ನೋರ್ವ ಹಿರಿಯ ವಕೀಲ ಅಯೂಬ್ ಖಾನ್ರೊಂದಿಗೆ ಶಾಮೀಲಾಗಿ ಸಾಕ್ಷಿಯನ್ನು 'ಖರೀದಿ' ಮಾಡುವ ಪ್ರಯತ್ನದಲ್ಲಿದ್ದಾಗ ಮಾಧ್ಯಮವೊಂದರ ಕುಟುಕು ಕಾರ್ಯಾಚರಣೆಯಿಂದಾಗಿ ಸಿಕ್ಕಿ ಬಿದ್ದು ಈ ಇಬ್ಬರೂ ಈಗ ಆರು ತಿಂಗಳುಗಳ ಕಾಲ ನ್ಯಾಯಾಲಯಗಳಿಂದ ಬಹಿಷ್ಕರಿಸಲ್ಪಟ್ಟಿರುವುದು. ಇವರಿಗೆ ಈ ಶಿಕ್ಷೆ ಸಾಕೆ ಎಂಬುದು ಬೇರೆ ಪ್ರಶ್ನೆಯಾದರೂ, ಇದು ನಮ್ಮ ನ್ಯಾಯಪದ್ಧತಿ ತನ್ನ ವೃತ್ತಿಪರತೆಯನ್ನೂ, ಅದಕ್ಕಿಂತ ಹೆಚ್ಚಾಗಿ ತನ್ನ ಆತ್ಮಸಾಕ್ಷಿಯನೂ ಕಳೆದುಕೊಂಡು ಒಂದು ವ್ಯಾಪಾರ ಮಾತ್ರವಾಗಿ ಪರಿವರ್ತಿತವಾಗುತ್ತಿರುವುದರ ಸೂಚನೆಯಾಗಿದೆ.

ಇವೆಲ್ಲವೂ ಸ್ಪಷ್ಟಪಡಿಸುವುದೇನೆಂದರೆ. ಶಾಂತಿಭೂಷಣ್ ಹೇಳಿದಂತೆ ನ್ಯಾಯಾಧೀಶರೂ ಹುಲುಮಾನವರಾಗಿದ್ದು, ಅವರ ವಿಶೇಷ ರೀತಿಯ ಕರ್ತವ್ಯಗಳ ಕಾರಣದಿಂದಾಗಿ ಅವರನ್ನು ವಿಶೇಷ ಸ್ಥಾನಮಾನಗಳಲ್ಲಿರಿಸಿದ್ದ ರಕ್ಷಣಾ ಗೋಡೆಗಳು ಕುಸಿಯತೊಡಗಿದ್ದು, ಅವರೂ ಹೊರಗಿನ ಸಾಮಾಜಿಕ ವಾತಾವರಣದ ಮಾಲಿನ್ಯಕ್ಕೆ ಸಿಕ್ಕಿದ್ದಾರೆ. ಇತ್ತೀಚೆಗಂತೂ ನಮ್ಮ ನ್ಯಾಯಾಂಗ, ಸಂವಿಧಾನದ ಭಾವನೆಗಳಿಗಿಂತ ಹೆಚ್ಚಾಗಿ ಜಾಗತೀಕರಣದ ಒತ್ತಡಗಳಿಂದ ಪ್ರಭಾವಿತವಾಗುತ್ತಿದೆ ಎನ್ನಿಸತೊಡಗಿದೆ. ರಾಜ್ಯಸಭೆ ಚುನಾವಣಾ ನಿಯಮಗಳಿಗೆ ತಂದ ತಿದ್ದುಪಡಿಯನ್ನು ಸಂವಿಧಾನಬದ್ಧ ಎಂದು ಸರ್ವೋನ್ನತ ನ್ಯಾಯಾಲಯ ಎತ್ತಿಹಿಡಿದಿರುವ ಮತ್ತು ವಿದ್ಯಾರ್ಥಿಗಳ ಶಿಕ್ಷಣ ಮಾಧ್ಯಮದ ಪ್ರಶ್ನೆಯನ್ನು ಮೂಲಭೂತ ಸ್ವಾತಂತ್ರ್ಯಗಳ ಪರಿಮಿತಿಯಲ್ಲಿ ಪರಿಶೀಲಿಸಿ ನಮ್ಮ ರಾಜ್ಯದ ಶ್ರೇಷ್ಠ ನ್ಯಾಯಾಲಯ ನೀಡಿರುವ ತೀರ್ಪು ಇದಕ್ಕೆ ಎರಡು ಉದಾಹರಣೆಗಳಷ್ಟೆ.

ಪರಿಸ್ಥಿತಿ ಈ ಮಟ್ಟ ತಲುಪಿರುವಾಗ ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ - ಅದರಲ್ಲೂ ವಿಶೇಷವಾಗಿ ಸಾಮಾನ್ಯ ಆಡಳಿತ ಮಟ್ಟ ಎಲ್ಲ ಕ್ಷೇತ್ರಗಳಲ್ಲೂ ಕುಸಿಯುತ್ತಿದ್ದು, ಸರ್ಕಾರವೂ ತನ್ನ ಹತೋಟಿಯ ವ್ಯಾಪ್ತಿಯನ್ನು ಕ್ರಮೇಣ ಖಾಸಗಿಯವರಿಗೆ ಬಿಟ್ಟುಕೊಡುತ್ತಿರುವ ಕಾರಣದಿಂದಾಗಿ, ಜನತೆ ಗತಿ ಕಾಣದೆ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮತ್ತು ನೆಲೆಗಳಲ್ಲಿ ನ್ಯಾಯಾಂಗದ ಮೊರೆ ಹೋಗಲಾರಂಭಿಸಿರುವ ಈ ಸಂದರ್ಭದಲ್ಲಿ - ಸಾಮಾನ್ಯ ಜನತೆಯ ಹಕ್ಕು ಬಾಧ್ಯತೆಗಳ ರಕ್ಷಣೆಗೆ ಕೊನೆಯ ಪರಿಹಾರ ವೇದಿಕೆಯಾಗಿರುವ 'ನ್ಯಾಯಾಂಗ'ವನ್ನು ತುರ್ತು ಕ್ರಮಗಳ ಮೂಲಕ ರಕ್ಷಿಸಿಕೊಳ್ಳುವ ತುರ್ತು ಅಗತ್ಯ ಈಗ ಉಂಟಾಗಿದೆ. 'ಹರ ಕೊಲ್ಲಲ್ ಪರ ಕಾಯ್ವನೇ!' ಎಂದು ಆತಂಕ ಪಡುವಂತಾಗಿದೆ. ಹಾಗಾಗಿ, ಧೂಳು ತಿನ್ನುತ್ತಿರುವ ಧರ್ಮವೀರ ನೇತೃತ್ವದ ಪೋಲೀಸ್ ಸುಧಾರಣಾ ಆಯೋಗ ಮತ್ತು ನ್ಯಾ||ವಿ.ಎಸ್ ಮಳಿಮಠರ ನೇತೃತ್ವದ ಭಾರತೀಯ ದಂಡಸಂಹಿತೆ ಸುಧಾರಣಾ ಆಯೋಗಗಳ ಶಿಫಾರಸ್‌ಗಳನ್ನಲ್ಲದೆ, ನ್ಯಾಯಾಂಗ ಪ್ರಾಧಿಕಾರವೊಂದರ ರಚನೆಯ ಮೂಲಕ ಉನ್ನತ ನ್ಯಾಯಾಂಗದ ಕಾರ್ಯನಿರ್ವಹಣೆಯ ಮೇಲೆ ನಿಗಾ ಇಡುವ ಸಲಹೆಯನ್ನು ಈಗಲಾದರೂ ಸಕ್ರಿಯವಾಗಿ ಪರಿಶೀಲಿಸುವ ಕಡೆ ಸರ್ಕಾರದ ಗಮನ ಹರಿಸಬೇಕಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬಲ್ಲ ಕೆಲವರಾದರೂ ಇಂದು ನ್ಯಾಯಾಂಗದ ಉನ್ನತ ಸ್ಥಾನಗಳಲ್ಲಿರುವುದು ನಮ್ಮ ಸುಯೋಗವೆಂದೇ ಭಾವಿಸಿ, ಈ ಸಮಗ್ರ ಸ್ವಚ್ಛತಾ ಕಾರ್ಯಾಚರಣೆಯನ್ನು ತುರ್ತಾಗಿ ಆರಂಭಿಸಬೇಕಿದೆ.