ನಮ್ಮನ್ನೂ ಬದುಕಲು ಬಿಡಿ..!

ನಮ್ಮನ್ನೂ ಬದುಕಲು ಬಿಡಿ..!

ನಿಮಗೆ ನಾವು ಅದೆಷ್ಟು ಉಪಕಾರಿಯಾಗಿದ್ದೇವೆ. ಇಷ್ಟು ದಿನ ನಮ್ಮನ್ನು ನೋಡಿ ಸಂತಸ ಪಟ್ಟವರು ನೀವು. ನಮ್ಮನ್ನು ನೋಡಲು ಬಂದವರು ಹಲವರು. ಈ ಮಹಾನಗರಿಯಲ್ಲೇ ತಾಳ ವೂರಿದವರೂ ಅನೇಕರು. ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ನಮ್ಮ ನಗು, ನಮ್ಮ ಚೆಲುವು, ವಿಶಾಲ ದೇಹ... ಆದರೆ ಯಾಕೆ ಇಂದು ನೀವು ನಮ್ಮನ್ನೇ ನಿರ್ಲಕ್ಷೀಸುತ್ತಿರೀ, ನಮ್ಮ ಬುಡಕ್ಕೆ ಯಾಕೇ ಕತ್ತರಿ ಹಾಕುವಿರಿ ? ನಾವು ನಿಮಗೆ ಅಷ್ಟು ಬೇಡವಾಗಿದ್ದೇವೆಯೇ ? ಯಾಕೆ ಗೆಳೆಯರೇ, ಕಾಂಕ್ರಿಟ್ ಕಾಡಿನ ಮೋಹ ನಿಮಗೆ ?.... ಹೌದು. ಈ ಮುಗ್ಧ ಮರಗಳ ಇಂತಹ ಹಲವು ಪ್ರಶ್ನೆಗಳಿಗೆ ಇಂದು ಉತ್ತರ ಹುಡುಕಲೇಬೇಕಾಗಿದೆ.

ಬೆಂಗಳೂರು ಎಂಬ ಮಾಯಾನಗರಿ ಇಂದು ಊಹೆಗೂ ನಿಲುಕದಂತೆ ಬೆಳೆಯುತ್ತಿದೆ ನಿಜ. ಅದು ನಮ್ಮ ಪ್ರಗತಿಯ ದ್ಯೋತಕವೋ ? ಒಪ್ಪೋಣ. ಹೆಮ್ಮೆ ಪಡೋಣ. ಆದರೆ ನಾವು ಅಭಿವೃದ್ಧಿ ಹೆಸರಿನಲ್ಲಿ ಏನು ಮಾಡುತ್ತಿದ್ದೇವೆ, ಯಾವುದು ಸುಂದರ ನಗರಿ ಎಂದು ಹೆಸರು ಮಾಡಿತ್ತೋ ಅದರ ಅಪೋಶನ ತೆಗೆದುಕೊಂಡು ಮತ್ತೊಂದು ಹೊಸ ಲೋಕ ಕಟ್ಟಲು ಹೋಗುತ್ತಿದ್ದೇವೆಯೇ ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕಾಡಲು ನಮ್ಮ ಸುತ್ತಲಿನ ಮರಗಳ ಮಾರಣಹೋಮ ನಡೆಯುತ್ತಿರುವುದೇ ಸಾಕ್ಷಿ. ರಸ್ತೆ ಬದಿಗಳಲ್ಲಿ ಅದೆಷ್ಟು ಮರಗಳು ವಿಶಾಲ ಆಗಸಕ್ಕೆ ಸೆಡ್ಡು ಹೊಡೆದು ನಿಂತಿದ್ದವು. ರಸ್ತೆಯ ಮೇಲೆ ಕೇವಲ ಹೊನ್ನ ಚುಕ್ಕಿಗಳಿಗಷ್ಟೆ ತಾವಿತ್ತು. ಸೂರ್ಯನ ಸಾಹಸಕ್ಕೆ ಅವು ತಡೆಯೊಡ್ಡಿ, ನೆರಳಿನ ತಂಪನ್ನು ನೀಡಿದ್ದವು. ಆದರೆ ಇಂದು ಕೆಲವು ರಸ್ತೆಗಳು ವಿಸ್ತರಿಸುತ್ತಿವೆ. ಅದಕ್ಕಾಗಿ ಮರಗಳು ಉರುಳುತ್ತಿವೆ. ಇಂದು ಸಂಜೆ ನೋಡಿದ ಮರಗಳು ನಾಳೆ ಮುಂಜಾವಿಗೆ ಇರುವುದಿಲ್ಲ, ರಾತ್ರೋ ರಾತ್ರಿ ಕಗ್ಗೊಲೆ ನಡೆದುಹೋಗಿರುತ್ತದೆ. ಯಾಕೇ ಹೀಗೆ ? ಮರಗಳನ್ನು ಉರುಳಿಸುವುದು ಯಾವ ಪುರುಷಾರ್ಥಕ್ಕಾಗಿ? ಇಷ್ಟಕ್ಕೂ ರಸ್ತೆಗಳ ವಿಸ್ತರಣೆ ಮಾಡಿದರೆ ನಗರದ ಸಂಚಾರ ದಟ್ಟಣೆ ಕಡಿಮೆಯಾಗುವುದೇ? ಈ ನಿಟ್ಟಿನಲ್ಲಿ ಅಲೋಚಿಸಬೇಕಾದ್ದು ಅನಿವಾರ್ಯವಾಗಿದೆ. ಈಗಾಗಲೇ ಬೆಂಗಳೂರಿನ ಭೂಮಿಗೆ ಚಿನ್ನದ ಬೆಲೆ ಬಂದಿರುವುದರಿಂದ ನಗರದ ಕೆರೆ, ಕುಂಟೆಗಳನ್ನು ಬಿಡದಂತೆ ಮನೆಗಳನ್ನು ಕಟ್ಟಲಾಗುತ್ತದೆ. ಇನ್ನೂ ಆನೇಕಲ್ ಸೇರಿದಂತೆ ನಗರದ ಸುತ್ತಲಿನ ತಾಲೂಕು, ಗ್ರಾಮಗಳು ಅಲ್ಲಿನ ಕೃಷಿ ಭೂಮಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ನಲುಗಿಹೋಗಿವೆ. ಈ ಎಲ್ಲಾ ಕಾರಣಗಳಿಂದ ಉದ್ಯಾನನಗರಿಗೆ ಇರುವ ಹಸಿರು ವಲಯ ( ಗ್ರೀನ್ ಬೆಲ್ಟ್ ) ಕ್ಷೀಣಿಸುತ್ತಿದೆ. ಪ್ರತಿವರ್ಷ ಸಾವಿರಾರು ಮರಗಳು ಸದ್ದಿಲ್ಲದೇ ಉರುಳುತ್ತಿವೆ.

ಇದೇ ವೇಳೆ ನಗರದ ಅನೇಕ ರಸ್ತೆಗಳ ಅಗಲೀಕರಣಕ್ಕೆ ಬಿಬಿಎಂಪಿ ಯೋಜನೆ ರೂಪಿಸಿದೆ. ಆದರೆ ಅಲ್ಲೂ ಮರಗಳ ಮಾರಣಹೋಮಕ್ಕೆ ಸಜ್ಜಾಗಿರುವ ಹಿನ್ನಲೆಯಲ್ಲಿ, ಪರಿಸರ ಪ್ರೇಮಿಗಳು ಈಗಾಗಲೇ ಕೋಟ್೯ ಮೆಟ್ಟಿಲೇರಿದ್ದಾರೆ. ಇಷ್ಟಾದರೂ, ಮೊಂಡು ಹಠಕ್ಕೆ ಬಿದ್ದವರಂತೆ ಬಿಬಿಎಂಪಿ ಅಧಿಕಾರಿಗಳು ಮರಗಳನ್ನು ಎಗ್ಗಿಲ್ಲದೇ ಕಡಿದುರುಳಿಸುತ್ತಿದ್ದಾರೆ. ನಗರದ ಸ್ವಾಸ್ಥವನ್ನು ಕೆಡಿಸುತ್ತಿದ್ದಾರೆ. ಈಗಾಗಲೇ ಬೆಂಗಳೂರಿನ ಹವಾಮಾನದಲ್ಲಿ ಬದಲಾವಣೆಯಾಗುತ್ತಿರುವುದನ್ನು ಗಮನಿಸಿದರೆ, ಮುಂದೊಂದು ದಿನ ನಗರದಲ್ಲಿ ಉಷ್ಣಾಂಶ ಅಸಹನೀಯ ಮಟ್ಟಕ್ಕೆ ಏರುವುದರಲ್ಲಿ ಸಂಶಯವಿಲ್ಲ. ಇಂದು ಯಾವುದನ್ನು ಏರ್‍ ಕಂಡೀಷನ್ ಸಿಟಿ ಎಂದು ಹೆಮ್ಮೆಯಿಂದ ಹೇಳಿ ಬಿಗುತ್ತಿದೇವೆಯೋ, ಅದು ಮುಂದೆ ನೆನಪು ಮಾತ್ರವಾಗಿ ಉಳಿಯಬಹುದು.

ಬೆಂಗಳೂರನ್ನು ಬಿಟ್ಟರೆ ಬಹುಶಃ ದೇಶದ ಯಾವುದೇ ಮಹಾನಗರದಲ್ಲಿ ಇಂತಹ ಬೃಹತ್ ಮರಗಳು ಕಾಣಲು ಸಾಧ್ಯವಿಲ್ಲ. ಇವು ನಗರಕ್ಕೆ ಶೋಭೆ. ವಾಯುಮಾಲಿನ್ಯ ನಿಯಂತ್ರಕಗಳು, ಅಲ್ಲದೇ ಸ್ವಚ್ಛ ಗಾಳಿ, ನೆರಳು ನೀಡುತ್ತಾ ಎಲ್ಲರ ಮನೋ ಉಲ್ಲಾಸಕ್ಕೆ ಕಾರಣವಾಗಿವೆ. ಇವುಗಳನ್ನು ಉಳಿಸುವುದು ನಮ್ಮೇಲ್ಲರ ಕರ್ತವ್ಯ. ಇನ್ನಾದರೂ ಸರ್ಕಾರ, ಅಧಿಕಾರಿಗಳು ಈ ನಿಟ್ಟಿನಲ್ಲಿ ಯೋಚಿಸುವಂತಾಗಲಿ. ಉದ್ಯಾನ ನಗರಿ, ಹಸಿರಿನ ಬೀಡಾಗಿ ಕಂಗೊಳಿಸಲಿ....

- ಸುರೇಶ್ ಬಾಬು .ಜಿ ( ಗೋಸುಬಾ )

Rating
No votes yet

Comments