ಝೆನ್: ಕಿರು ಪರಿಚಯ

ಝೆನ್: ಕಿರು ಪರಿಚಯ

ಬರಹ
ಸಂಸ್ಕೃತದ ಧ್ಯಾನ ಎಂಬ ಪದ ಚೀನೀ ಭಾಷೆಯಲ್ಲಿ ಛಾನ್ ಎಂದಾಗಿ, ಅಲ್ಲಿಂದ ಜಪಾನೀ ಸಂಸ್ಕೃತಿಯಲ್ಲಿ ಝೆನ್ ಎಂದು ಪರಿಚಯಗೊಂಡಿತು. ಇದು ಜಪಾನಿನ ಬೌದ್ಧಧರ್ಮದ ಒಂದು ಪ್ರಮುಖ ಧಾರೆಯಾಗಿ ಬೆಳೆಯಿತು. ಧ್ಯಾನದ ಮುಖಾಂತರ “ಬೋಧಿ” ಸತ್ವವನ್ನು ಹೊಂದಬಹುದೆಂಬುದು ಈ ಪಂಥದ ನಂಬಿಕೆ. ಗೌತಮನಾದ ಬುದ್ಧನು ಧ್ಯಾನದ ಮೂಲಕವೇ ತನ್ನ ಬೋಧಿ-ಸತ್ವವನ್ನು ಪಡೆದವನು. ಧ್ಯಾನ ಮುಖ್ಯವಾದ ಈ ಪಂಥವು ಕ್ರಿಶ ೬ನೆಯ ಶತಮಾನದಲ್ಲಿ ಮಹಾಯಾನ ಬೌದ್ಧರ ಮೂಲಕ ಛಾನ್ ಎಂಬ ಹೆಸರಿನಲ್ಲಿ ಪ್ರಚಾರಕ್ಕೆ ಬಂದಿತು. ಹಲವಾರು ಶತಮಾನಗಳ ತರುವಾಯ ಈ ಪಂಥವು ಜಪಾನನ್ನು ಪ್ರವೇಶಿಸಿತು. ಹನ್ನೆರಡನೆಯ ಶತಮಾನದ ಜಪಾನಿನನಲ್ಲಿ ಸಮೃದ್ಧವಾಗಿ ಬೆಳೆಯಿತು. ಸಮಾಧಾನ ಚಿತ್ತ, ನಿರ್ಭಯತೆ, ಸಹಜಸ್ಫೂರ್ತತೆಯ ಗುಣ ಇವೆಲ್ಲ ಪ್ರಬುದ್ಧ ಮನಸ್ಸಿನ ಲಕ್ಷಣಗಳು. ಇವು ಧ್ಯಾನದ ಉಪ ಲಾಭಗಳಾಗಿ ದೊರೆಯುವುದೆಂದು ಕಂಡುಕೊಂಡ ಜಪಾನೀ ಸಂಸ್ಕೃತಿಯಲ್ಲಿ ಝೆನ್ ಅತ್ಯಂತ ಪ್ರಭಾವಶಾಲಿಯಾಗಿ ಬೆಳೆಯಿತು. ಪ್ರತಿಯೊಬ್ಬರಲ್ಲೂ ಬೋಧಿಯು ಸತ್ವವಾಗಿ ಇದ್ದೇ ಇರುತ್ತದೆ. ಮೌಢ್ಯದ ಕಾರಣದಿಂದ ಈ ಸತ್ವವು ಸುಪ್ತವಾಗಿಯೇ ಉಳಿದುಬಿಡುತ್ತದೆ. ಸೂತ್ರಗಳ ಪಠಣ, ಪುಣ್ಯಕಾರ್ಯಗಳನ್ನು ಮಾಡಬೇಕೆಂಬ ಹಟ, ಪೂಜೆ, ಆರಾಧನೆ, ಧಾರ್ಮಿಕ ಆಚರಣೆ ಇಂಥವನ್ನೆಲ್ಲ ಮಾಡುವ ಮೂಲಕ ಯಾರೂ ತಮ್ಮಲ್ಲಿರುವ ಈ ಬೋಧಿ-ಸತ್ವವನ್ನು ಅರಳಿಸಿಕೊಳ್ಳುವುದು ಸಾಧ್ಯವಿಲ್ಲ. ದಿನ ನಿತ್ಯದ ವ್ಯವಹಾರದ ತಾರ್ಕಿಕ ಸೀಮೆಗಳನ್ನು ಉಲ್ಲಂಘಿಸಿ ಝೆನ್ ಎಂಬ ಬೋಧಿ-ಸತ್ವ ತಟ್ಟನೆ ಮೈದೋರಿಬಿಡುತ್ತದೆ. ಹಾಗಾಗುವುದೇ ಸಾಕ್ಷಾತ್ಕಾರ. ಇಂಥ ಸಾಕ್ಷಾತ್ಕಾರವನ್ನು, “ಕಂಡವರಿಗಲ್ಲ, ಕಂಡವರಿಗಷ್ಟೆ ಕಾಣುವ” ಸಹಜ ಅಚ್ಚರಿಯನ್ನು, ಚೀನೀ ಭಾಷೆಯಲ್ಲಿ ವೂ ಎಂದು, ಜಪಾನೀ ಭಾಷೆಯಲ್ಲಿ ಸತೋರಿ ಎಂದು ಕರೆಯುತ್ತಾರೆ. ಅಭ್ಯಾಸದ ಮೂಲಕವೂ ಸಾಕ್ಷಾತ್ಕಾರವನ್ನು ಪಡೆಯಬಹುದೆಂಬುದು ಝೆನ್‌ನ ವಿಶ್ವಾಸ. ಹಾಗಾಗುವುದಕ್ಕೆ ತಕ್ಕ ಗುರುವಿನ ಮಾರ್ಗದರ್ಶನ ದೊರೆಯಬೇಕು. ಸಾಕ್ಷಾತ್ಕಾರಕ್ಕೆ, ಸಾಕ್ಷಾತ್ಕಾರ ಕ್ಷಣದ ಸತೋರಿಯನ್ನು ಅನುಭವಕ್ಕೆ ತಂದುಕೊಳ್ಳುವುದಕ್ಕೆ ದಾರಿಗಳು ಇವೆಯೆ? ಇವೆ ಎಂದು ಝೆನ್ ನಂಬುತ್ತದೆ. ಇಂಥದೇ ದಾರಿ ಸರಿಯಾದ ದಾರಿ ಎಂಬ ಹಟದಲ್ಲಿ ಝೆನ್ ನಲ್ಲಿ ಕೂಡ ಅನೇಕ ಪಂಥಗಳು ಹುಟ್ಟಿಕೊಂಡವು. ಇವುಗಳಲ್ಲಿ ರಿನ್‌ಝಾಯ್ (ಚೀನೀ ಭಾಷೆಯಲ್ಲಿ ಲಿನ್-ಚೀ), ಸೊಟೋ (ಚೀನೀ ಭಾಷೆಯಲ್ಲಿ ತ್ಸ ಒ-ತುಂಗ್) ಒಬಕು (ಚೀನೀ ಭಾಷೆಯಲ್ಲಿ ಹುವಾಂಗ್-ಪೊ) ಎಂದು ಕರೆಯಲಾಗುವ ಪಂಥಗಳು ಮುಖ್ಯವಾದ ಪಂಥಗಳು. ರಿನ್‌ಝಾಯ್ ಪಂಥವು ಎನ್‌ಸಾಯಿ ಎಂಬ ಗುರುವಿನ ಮೂಲಕ ಜಪಾನಿನಲ್ಲಿ ೧೧೯೧ರಲ್ಲಿ ಪ್ರಚಾರಕ್ಕೆ ಬಂದಿತು. ಕೋನ್‌ಗಳು ಮನಸ್ಸಿಗೆ ಉಂಟುಮಾಡುವ ಆಘಾತ, ಕೋನ್‌ನಲ್ಲಿರುವ ವಿರೋಧಾಭಾಸಗಳನ್ನು ಕುರಿತ ಧ್ಯಾನ, ಇವುಗಳ ಮೂಲಕ ಸಾಕ್ಷಾತ್ಕಾರದ ದಾರಿ ಸುಗಮವಾಗುತ್ತದೆ ಎಂಬುದು ಈ ಪಂಥದ ನಂಬಿಕೆ. ಕೋನ್ ಎಂದರೆ ಒಂದು ಬಗೆಯ ಒಗಟು ಕಥೆ. ಕನ್ನಡದ ಬೆಡಗಿನ ವಚನಗಳು, ಕನಕ ದಾಸರ ಮುಂಡಿಗೆಗಳು ಇತ್ಯಾದಿಗಳಂತೆ ಕೋನ್ ಕೂಡ ವಿರೋಧಾಭಾಸವನ್ನು ಒಳಗೊಂಡ ಕಿರು ಕಥೆಗಳು. ಈ ವಿರೋಧಾಭಾಸವನ್ನು ಕುರಿತು ಧ್ಯಾನಿಸುವುದು ಕೂಡ ಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡುತ್ತದೆ. ತಾವೊ, ದಾವ್ ದೆ ಚಾಂಗ್ ಎಂದೆಲ್ಲ ಕನ್ನಡದಲ್ಲಿ ಬರೆಯಲಾಗುವ ತ್ಸಾ ಒ-ತುಂಗ್ ಜಪಾನಿನನ್ಲಿ ಸೊಟೊ ಎಂಬ ಹೆಸರನ್ನು ಪಡೆಯಿತು. ಚೀನಾದಿಂದ ೧೨೨೭ರಲ್ಲಿ ಜಪಾನಿಗೆ ಹಿಂದಿರುಗಿದ ದಾಗೆನ್ ಎಂಬಾತ ಇದನ್ನು ಬೆಳೆಸಿದ. ಈ ಪಂಥದವರು ಝಾಝೆನ್ ಎಂದು ಕರೆಯಲಾಗುವ ಧ್ಯಾನ ಪದ್ಧತಿಗೆ ಪ್ರಾಮುಖ್ಯ ನೀಡುತ್ತಾರೆ. ಜಪಾನಿನಲ್ಲಿ ಇನ್‌ಜೆನ್ ಎಮದು ಪ್ರಸಿದ್ಧನಾಗಿರುವ ಚೀನೀ ಸಂತ ಇನ್-ವುವಾನ್ ೧೬೫೪ರಲ್ಲಿ ಒಬುಕು ಎಂಬ ಝೆನ್ ಪಂಥವನ್ನು ಸ್ಥಾಪಿಸಿದ. ಇದನ್ನು ಚೀನೀ ಭಾಷೆಯಲ್ಲಿ ಹುವಾಂಗ್-ಪೊ ಎನ್ನುತ್ತಾರೆ. ಇದು ರಿನ್‌ಝಾಯ್ ಪಂಥದಂತೆ ಕೋನ್‌ಗಳನ್ನೂ ಅಮಿತಾಭ ಬುದ್ಧನನ್ನು (ಅಮಿತ-ಅಪರಿಮಿತ, ಆಭ-ಬೆಳಕು) ಕುರಿತ ಪ್ರಾರ್ಥನೆಯನ್ನೂ ಅಳವಡಿಸಿಕೊಂಡಿದೆ. ಹದಿನಾರನೆಯ ಶತಮಾನದ ಜಪಾನಿನಲ್ಲಿ ರಾಜಕೀಯ ತಳಮಳ ತುಂಬಿತ್ತು. ಆ ಅವಧಿಯಲ್ಲಿ ಝೆನ್ ಗುರುಗಳು ತಮ್ಮ ಕೌಶಲವನ್ನು ಬಳಸಿಕೊಂಡು ರಾಯಭಾರಿಗಳಾಗಿ, ಅಧಿಕಾರಿಗಳಾಗಿ, ಸಂಸ್ಕೃತಿಯ ಸಂರಕ್ಷಕರಾಗಿ ಕೆಲಸ ಮಾಡಿದರು. ಕಲೆ, ಸಾಹಿತ್ಯ, ಚಹಾಪಾನದ ಸಂಸ್ಕೃತಿ, ನೋ ರಂಗಭೂಮಿ ಇವೆಲ್ಲ ಬೆಳೆದು ಸಮೃದ್ಧಗೊಂಡದ್ದಕ್ಕೆ ಝೆನ್ ಗುರುಗಳೆ ಮುಖ್ಯ ಕಾರಣ. ಹದಿನೇಳು ಹದಿನೆಂಟನೆಯ ಶತಮಾನಗಳಲ್ಲಿ, ತೊಕಗುವಾ ವಂಶದ ಆಳ್ವಿಕೆಯಲ್ಲಿ ನವ ಕನ್‌ಫೂಶಿಯನ್ ವಾದವು ಜಪಾನಿನ ಜನರ ಬದುಕಿನ ಮೇಲೆ ದೊಡ್ದ ಪರಿಣಾಮವನ್ನು ಬೀರಿತು. ಈ ತತ್ವ ಮತ್ತು ಸಿದ್ಧಾಂತಗಳು ಜಪಾನಿನಲ್ಲಿ ಪ್ರಚುರಗೊಳ್ಳುವುದಕ್ಕೂ ಝೆನ್ ಗುರುಗಳೇ ಕಾರಣ. ಆಧುನಿಕ ಜಪಾನಿನಲ್ಲಿ ಸುಮಾರು ಒಂದು ಕೋತಿ ಝೆನ್ ಪಂಥೀಯರಿದ್ದಾರೆ. ಇಪ್ಪತ್ತನೆಯ ಶತಮಾನದಲ್ಲಿ ಝೆನ್‌ನ ವಿವಿಧ ಅಂಶಗಳ ಬಗ್ಗೆ ಪಾಶ್ಚಾತ್ಯ ಜಗತ್ತಿನಲ್ಲೂ ಆಸಕ್ತಿ ಹೆಚ್ಚಿತು. ಉತ್ತರ ಅಮೆರಿಕ ಮತ್ತು ಯೂರೋಪುಗಳಲ್ಲಿ ಝನ್ ಅಭ್ಯಾಸದಲ್ಲಿ ತೊಡಗಿರುವ ಅನೇಕ ಸಣ್ಣ ದೊಡ್ಡ ಗುಂಪುಗಳು ಇವೆ. ಕಳೆದ ಸುಮಾರು ಇಪ್ಪತ್ತು ವರ್ಷಗಳಲ್ಲಿ ಶ್ರೀ ಕೆ.ವಿ. ಸುಬ್ಬಣ್ಣ ಅವರ ಝೆನ್ ಕಥೆಗಳು ಒಳಗೊಂಡಂತೆ ಅನೇಕರ ಮುಖಾಂತರ ಝೆನ್ ಕತೆಗಳು ಕನ್ನಡಕ್ಕೆ ಬಂದಿವೆ. ಶ್ರೀ ಯು. ಆರ್. ಅನಂತಮೂರ್ತಿಯವರು ದಾವ್ ದ ಜಿಂಗ್ ಎಂಬ ಹೆಸರಿನಲ್ಲಿ ತಾವೊ ತತ್ವಗಳನ್ನು ಪರಿಚಯಿಸಿದ್ದಾರೆ. ಇಲ್ಲಿ ಇದುವರೆಗೂ ಪರಿಚಯಗೊಂಡಿರದ ಕಥೆಗಳಿಗೆ ಪ್ರಾಮುಖ್ಯ ನೀಡಿ ಸುಮಾರು ನೂರು ಕತೆಗಳನ್ನು ನೀಡುವ ಉದ್ದೇಶವಿದೆ. ತಬ್ಬಿಬ್ಬುಮಾಡುವ, ಕೆಣಕುವ, ಕಚಗುಳಿ ಇಡುವ ಈ ಕತೆಗಳನ್ನು ಮೆಲುಕು ಹಾಕಿದರೆ ಹೊಸ ಬೆಳಕು ಹೊಳೆದಂತೆ ಆಗುತ್ತದೆ.