ಏನೀ ಮಹಾನಂದವೇ? ಓ ಭಾಮಿನಿ!

ಏನೀ ಮಹಾನಂದವೇ? ಓ ಭಾಮಿನಿ!

ಕೆಲವು ದಿನಗಳ ಹಿಂದೆ 'ಭಾಮೆಯ ನೋಡಲು ತಾ ಬಂದ' ಅನ್ನೋ ಬರಹದಲ್ಲಿ ಹಿಂದೋಳ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ. ಇವತ್ತು ಇನ್ನೊಂದು ಸ್ವಲ್ಪ ಮುಂದುವರೆಸೋಣವೇ?

ಹಿಂದೋಳದಲ್ಲಿ ಬೇಕಾದಷ್ಟು ಚಿತ್ರಗೀತೆಗಳಿವೆ ಅಂತ ಹೇಳಿದ್ದೆ. ಕಳೆದ ಬರಹಗಳಲ್ಲಿ ಇಲ್ಲದೇ ಇರೋ ಕೆಲವು ಒಳ್ಳೇ ಉದಾಹರಣೆಗಳು ಅಂದರೆ, ರಾಜ್‍ಕುಮಾರ್ ಮತ್ತೆ ವಾಣಿ ಜಯರಾಂ ಅವರು ಹಾಡಿರೋ ಶ್ರಾವಣ ಬಂತು ಚಿತ್ರದ ಬಾನಿನ ಅಂಚಿಂದ ಬಂದೆ ಅನ್ನೋ ಹಾಡು; ಹಾಗೇನೇ ಮಲಯಮಾರುತ ಚಿತ್ರದಲ್ಲಿ ಏಸುದಾಸ್ ಅವರು ಹಾಡಿರೋ ನಟನವಿಶಾರದ ನಟಶೇಖರ ಅನ್ನೋ ಗೀತೆ; ಮತ್ತೆ ರವಿಚಂದ್ರನ್ ಅವರು ನಟಿಸಿರೋ ಒಂದು ಚಿತ್ರ (ಹೆಸರು ಮರೆತಿದ್ದೇನೆ)ದಲ್ಲಿನ ನೀನು ನೀನೇ ಅಲ್ಲಿ ನಾನು ನಾನೇ ಅನ್ನೋ ಹಾಡು - ಇಂತಹವುಗಳನ್ನ ನೆನೆಯಬಹುದು.

ನಾನು ಮೊದಲೇ ಹೇಳಿದಂತೆ, ಹಿಂದೋಳ ರಾಗದಲ್ಲಿ ಬರುವುದು ಐದು ಸ್ವರಗಳು ಮಾತ್ರ. ಷಡ್ಜ, ಸಾಧಾರಣ ಗಾಂಧಾರ, ಶುದ್ಧ ಮಧ್ಯಮ, ಶುದ್ಧ ಧೈವತ ಮತ್ತು ಕೈಶಿಕಿ ನಿಷಾದ. ಇದನ್ನು ಕರ್ನಾಟಕ ಸಂಗೀತ ಲಿಪಿಯಲ್ಲಿ ಹೀಗೆ ಸೂಚಿಸುವುದು ರೂಢಿ.

ಆರೋಹಣ: ಸ ಗ೨ ಮ೧ ದ೧ ನಿ೨ ಸ
ಅವರೋಹಣ: ಸ ನಿ೨ ದ೧ ಮ೧ ಗ೨ ಸ

ಹಿಂದೂಸ್ತಾನಿಯಲ್ಲಾದರೆ, ಗಾಂಧಾರ, ಧೈವತ, ನಿಷಾದಗಳನ್ನು ಕೋಮಲವೆಂದೂ, ಮಧ್ಯಮವನ್ನು ಶುದ್ಧವೆಂದೂ ಕರೆಯುತ್ತಾರೆ. ಹಿಂದೂಸ್ತಾನಿಯ ಮಾಲಕೌಂಸ್ ರಾಗವೂ, ಕರ್ನಾಟಕ ಸಂಗೀತದ ಹಿಂದೋಳವೂ  ಒಂದೇ ನಾಣ್ಯದ ಎರಡು ಮುಖಗಳು ಎನ್ನಬಹುದು. ಅಲ್ಲದೇ, ಆರೋಹಣ ಅವರೋಹಣಗಳನ್ನು ನೀರವಾಗಿ ಸೂಚಿಸಿದ್ದರೂ, ಸ-ಮ, ಗ-ದ, ಮ-ನಿ, ದ-ಸ ಮೊದಲಾದ ವರ್ಜ್ಯ ಪ್ರಯೋಗಗಳು ಈ ರಾಗಕ್ಕೊಂದು ಹೊಳಹನ್ನು ತಂದು ಕೊಡುತ್ತವೆ.

ಚಿತ್ರಗೀತೆಗಳಷ್ಟೇ ಅಲ್ಲ. ಸುಗಮಸಂಗೀತದಲ್ಲೂ ಈ ರಾಗ ಪ್ರಚಲಿತವೇ. ಡಿವಿಜಿ ಅವರ ಪ್ರಸಿದ್ಧ ಅಂತಃಪುರಗೀ ಏನೀ ಮಹಾನಂದವೇ? ಓ ಭಾಮಿನೀ ಎಂಬ ಈ ಹಾಡನ್ನು ಯಾರು ತಾನೇ ಕೇಳಿಲ್ಲ? ಕೇಳಿಲ್ಲದಿದ್ದರೆ, ಕೊಂಡಿ ಚಿಟುಕಿಸಿ, ಕೇಳಿ! ಹಿಂದೋಳಕ್ಕೊಂದೊಳ್ಳೆ ಉದಾಹರಣೆ ಇದು.

ಇನ್ನು ಶಾಸ್ತ್ರೀಯ ಸಂಗೀತಕ್ಕೆ ಬಂದರೆ, ಹಿಂದೋಳ ವಿಸ್ತರಿಸಿ ಹಾಡಬಲ್ಲಂತಹ ಒಂದು ರಾಗ.ಹಿಂದೋಳ ರಾಗದಲ್ಲಿ ರಚನೆಗಳಿಗೆ ಯಾವ ಕೊರತೆಯೂ ಇಲ್ಲ. ಕೆಲವು ಉದಾಹರಣೆಗಳನ್ನಷ್ಟೇ ಇಲ್ಲಿ ಕೊಡುವೆ.

೧೯೮೦ರ ದಶಕದಲ್ಲಿ, ಶಂಕರಾಭರಣಂ ಎಂಬ ತೆಲುಗು ಚಿತ್ರದ ದೆಸೆಯಿಂದ ಎಲ್ಲರ ಬಾಯಲ್ಲಿಯೂ ಸಾಮಜವರಗಮನ ಎಂಬ ಹಾಡು ನಲಿದಾಡಿತ್ತು. ಇದು ತ್ಯಾಗರಾಜರು ಹಿಂದೋಳದಲ್ಲಿ ಮಾಡಿರುವ ಒಂದು ರಚನೆ. ಇದನ್ನು ಇಲ್ಲಿ ಡಾ|ನಾಗವಲ್ಲಿ ನಾಗರಾಜ್ ಮತ್ತು ವಿದುಷಿ ರಂಜನಿ ನಾಗರಾಜ್ ಅವರ ಜೋಡಿಗಾಯನದಲ್ಲಿ ಇಲ್ಲಿ ಕೇಳಿ.

ಈ ಮೇಲಿನ ರಚನೆಯನ್ನು ಹಾಡಿರುವುದರಲ್ಲಿರುವ ಒಂದು ವಿಶೇಷದ ಬಗ್ಗೆ ಕೇಳುಗರ ಗಮನ ಸೆಳೆಯಬಯಸುತ್ತೇನೆ. ಅನುಪಲ್ಲವಿಯಲ್ಲಿ ಬರುವ 'ಸಾಮನಿಗಮಜಸುಧಾ' ಎಂಬ ಸಾಲಿನಲ್ಲಿ ಬರುವ ಸಾಮನಿಗಮ ಎಂಬ ಸಾಹಿತ್ಯಕ್ಕೆ ಬರುವ ಸ್ವರಗಳೂ ಕೂಡ ಸಾಮನಿಗಮ ಎಂದೇ. ಇಂದಹದ್ದಕ್ಕೆ ಸ್ವರಾಕ್ಷರ ಸಾಹಿತ್ಯವೆಂಬ ಪಾರಿಭಾಷಿಕ ಹೆಸರಿದೆ.

ಇನ್ನೇನು ದಸರಾ ಹಬ್ಬ ಬಂತಲ್ಲ? ದಸರೆಗೂ ಮೈಸೂರಿಗೂ ಬಿಡದ ನಂಟು. ಅದಕ್ಕೇ ಈ ಮುಂದಿನ ರಚನೆಯನ್ನು ಕೇಳಿಸಲು ನಾನು ಆಯ್ದುಕೊಂಡೆ. ಕೇಳಿ - ಮೇಲಿನ ಗಾಯಕಿಯರದ್ದೇ ಸ್ವರದಲ್ಲಿ ಜಯಚಾಮರಾಜೇಂದ್ರ ಒಡೆಯರ ರಚನೆ- ಚಿಂತಯಾಮಿ ಜಗದಂಬಾ.

ಇನ್ನು ದಾಸರ ರಚನೆಗಳಿಗೆ ಬಂದರೆ, ಹಲವಾರು ರಚನೆಗಳನ್ನು ಹಿಂದೋಳದಲ್ಲಿ ಹಾಡುವುದು ರೂಢಿಯಾಗಿದೆ. ಹೆಚ್ಚಿನ ದಾಸರ ರಚನೆಗಳ ಮೂಲ ಮಟ್ಟುಗಳು ಮರೆತಿರುವುದೂ, ಮತ್ತೆ ಹಿಂದೋಳ ರಾಗ ಜನರನ್ನು ರಂಜಿಸುವುದೂ ಇದಕ್ಕೆ ಕಾರಣವಿರಬಹುದು.ವಿದ್ಯಾಭೂಷಣರು ಹಾಡಿ ಪ್ರಸಿದ್ಧಗೊಳಿಸಿದ 'ಮಧುಕರ ವೃತ್ತಿ ಎನ್ನದು' ಎಂಬ ರಚನೆ ಹಿಂದೋಳರಾಗದಲ್ಲೇ ಇದೆ. ಹಾಗೇ, ಪುರಂದರ ದಾಸರ 'ಯಾರೇ ರಂಗನ, ಯಾರೇ ಕೃಷ್ಣನ' ಎಂಬ ರಚನೆಯನ್ನೂ ಕೂಡ ಹಿಂದೋಳದಲ್ಲಿ ಹಾಡುವುದೇ ರೂಢಿ. ಅದನ್ನು ಇಲ್ಲಿ ಕೀಬೋರ್ಡ್ ಸತ್ಯ ಅವರ, ಮತ್ತಿನ್ಯಾವ, ಕೀಬೋರ್ಡ್ :) ವಾದನದಲ್ಲಿ ಕೇಳಿ!

ಭಾರತೀಯ ಸಂಗೀತದ ವಿಶೇಷವೆಂದರೆ, ರಾಗಗಳನ್ನು ಬೆಳೆಸುವ ರೀತಿ. ಇದಕ್ಕೆ ರಾಗಾಲಾಪನೆ ಎಂದು ಹೆಸರು. ಈಗ ಇಲ್ಲಿ ನೋಡಿ: ಹಿಂದೋಳ ರಾಗದ ಆಲಾಪನೆಯ ಒಂದು ಚುಟುಕು. ಹಾಡಿರುವುದು ಶ್ರೀ ಟಿ.ಎನ್.ಶೇಷಗೋಪಾಲನ್.

ತಾನ ಎನ್ನುವುದು ಕರ್ನಾಟಕ ಸಂಗೀತದ ಒಂದು ವಿಶಿಷ್ಟ ಪರಂಪರೆ. ರಾಗವನ್ನು, ಲಯಬದ್ಧವಾಗಿ, ತಾನಂತಾನಂ (ಅಥವಾ ಅನಂತಾನಂತ) ಎಂಬ ಶಬ್ದಗಳಲ್ಲಿ ವಿಸ್ತರಿಸುವುದರಿಂದ, ಇದಕ್ಕೆ ತಾನ ಎಂಬ ಹೆಸರು ಬಂದಿದೆ. ಅದರಲ್ಲಿಯೂ, ವೀಣೆಯಲ್ಲಿ ಕೇಳುವ ತಾನದ ಸೊಗಸೇ ಸೊಗಸು. ಇಲ್ಲಿ ಕೇಳಿ; ಡಿ.ಶ್ರೀನಿವಾಸ್ ನುಡಿಸುವ ಹಿಂದೋಳರಾಗದ ತಾನ.

ಎಷ್ಟೋ ಬಾರಿ ಸಂಗೀತ ಕಚೇರಿಯನ್ನು ಒಂದು ತಿಲ್ಲಾನದೊಂದಿಗೆ ಮುಗಿಸುವುದುಂಟು. ಹಾಗಾಗಿ, ಇವತ್ತು ಈ ಬರಹವನ್ನು, ಬಾಲಮುರಳಿಕೃಷ್ಣ ಅವರ ಹಾಡಿರುವ, ಅವರೇ ರಚಿಸಿರುವ,  ಹಿಂದೋಳ ರಾಗದ ತಿಲ್ಲಾನದೊಂದಿಗೆ ಮುಗಿಸುತ್ತಿದ್ದೇನೆ.

ಕೇಳಿ ಆನಂದಿಸಿದ್ದೀರಿ ಎಂದುಕೊಳ್ಳುವೆ!

-ಹಂಸಾನಂದಿ

Rating
No votes yet

Comments