ಜಾಲ್ಮೀಕಿಯ ರಾಮಾಯಣ-ಮರಾಠಿಯಿಂದ ಹಾಸ್ಯ ಲೇಖನ
(ಶ್ರೀ ಪು.ಲ.ದೇಶಪಾಂಡೆಯವರು ಮರಾಠಿಯ ಪ್ರಖ್ಯಾತ ಹಾಸ್ಯ ಸಾಹಿತಿ . ಅವರ ಲೇಖನಗಳ ಅನುವಾದ ಸಂಗ್ರಹವೊಂದು ಕನ್ನಡದಲ್ಲಿ ಪ್ರಕಟವಾಗಿದೆ. ಈಗ ಅದು ನನ್ನ ಹತ್ತಿರ ಇಲ್ಲ; ಆದರೆ ಅಲ್ಲಿನ ಒಂದು ಲೇಖನ ನಿಮ್ಮ ಸಂತೋಷಕ್ಕಾಗಿ ಇಲ್ಲಿದೆ.)
ಜಾಲ್ಮೀಕಿಯ ರಾಮಾಯಣ
------------------
ಪೀಠಿಕೆ.
ಕಾಲ ಬದಲಾಗುತ್ತಿದೆ. ಅದರೊಂದಿಗೆ ಎಲ್ಲರೂ ಬದಲಾಗಬೇಕು. ಪ್ರಾಚೀನ ಸಾಹಿತ್ಯವೂ ಬದಲಾಗಬೇಕು. ಏಕೆಂದರೆ ಅದು ಪ್ರತಿಗಾಮಿ ಸಾಹಿತ್ಯವಾಗಿದೆ. ನಿಜವನ್ನು ಮಾತಾಡುವ ಹರಿಶ್ಚಂದ್ರನಂತಹವರು ಅಲ್ಲಿ ಬರುತ್ತಾರೆ . ನ್ಯಾಶನಲ್ ಇಂಟರೆಸ್ಟ್ ನೋಡದೆ ತಮ್ಮ ಬಂದು ಬಾಂಧವರೊಡನೆ ಗುರು-ಹಿರಿಯರೊಡನೆ ಯುದ್ಧ ಮಾಡುವ ಕೃಷ್ಣಾರ್ಜುನರು ಅಲ್ಲಿದ್ದಾರೆ . ಅಫ್ಜಲ್ ಖಾನ್ ನನ್ನು ಮೋಸದಿಂದ ಹಿಂಸಾತ್ಮಕವಾಗಿ ಕೊಲ್ಲುವ ಶಿವಾಜಿಯೂ ಇಂಗ್ಲೀಷರಿಗೆ ಅತಿಥಿಗಳಿಗೆ ಸಲ್ಲಿಸಬೇಕಾದ ಗೌರವ ಸೌಕರ್ಯಗಳನ್ನು ಸಲ್ಲಿಸದೆ ಅತಿಥಿ ಧರ್ಮವನ್ನು ಮರೆತ ಕ್ರಾಂತಿಕಾರಿಗಳು ಪ್ರಾಚೀನ ಕಾಲದಲ್ಲಿ ಇದ್ದರು .
ತಾತ್ಪರ್ಯವೆಂದರೆ ಕಾಲ ಬದಲಾಗುತ್ತಿದೆ. ಅದರೊಂದಿಗೆ ನಾವೂ ಬದಲಾಗಬೇಕು. ಈ ಬದಲಾವಣೆಯ ಕಾಳಜಿ ನಮ್ಮಲ್ಲಿರಬೇಕು . ನಮ್ಮ ಸುದೈವ ಅಂಥ ಜನ ನಮ್ಮ ನಡುವೆ ಇದ್ದಾರೆ. ಅದಕ್ಕೆ ಪುರಾವೆ ಈ "ಜಾಲ್ಮೀಕಿ ರಾಮಾಯಣ."
ಯಾರು ಈ ಜಾಲ್ಮೀಕಿ?
ಈತ ಹುಟ್ಟಿದ ಹನ್ನೆರಡನೇ ದಿನ ಹೆಸರು ಇಟ್ಟಾಗಲೇ "ಹೆಸರು ಬದಲಿಸಿರಿ" ಎಂದು ಆಕ್ರೋಶ ಮಾಡಿದನಂತೆ. ಪ್ರತಿ ಸಂಗತಿಯನ್ನೂ ಬದಲಿಸಬೇಕೆಂದು ಆಗಿನಿಂದಲೇ ಹಟ ಹಿಡಿಯುತ್ತಿದ್ದ. ಎಲ್ಲರೂ 'ಚಿಣಿ-ಫಣಿ' ಆಡಿದರೆ ಇವ 'ಫಣಿ-ಚಿಣಿ' ಆಡುತ್ತಿದ್ದ. 'ಕಬಡ್ಡಿ-ಕಬಡ್ಡಿ'ಯನ್ನು ''ಕಬಡ್ಡಿ-ಕಬಡ್ಡಿ' ಎನ್ನುತ್ತಿದ್ದ. 'ಖೋಖೋ' ದಲ್ಲಿ ಎರಡನೇ 'ಖೋ' ಅನ್ನು ಮೊದಲು ಉಚ್ಚರಿಸಿ ಆಟದ ಹೆಸರನ್ನು 'ಖೋಖೋ' ಎಂದು ಬದಲಿಸಿದ. ಶಾಲೆಗಳನ್ನು , ಶಿಕ್ಷಕರನ್ನು ಬದಲಿಸಿದ . ಹೀಗೆ ಇನ್ನೂ ಏನೇನನ್ನು ಬದಲಿಸಿದ ಅದೆಲ್ಲ ವಿವರವನ್ನು ಇಲ್ಲಿ ಕೊಡಲು ಸಾಧ್ಯವಿಲ್ಲ . ಆದರೆ 'ಜಾಲ್ಮೀಕಿ ರಾಮಾಯಣ'ದಿಂದ ಅವನ ಹೆಸರು ಅಜರಾಮರವಾಯಿತು. ಪ್ರಾಚೀನ ಕಾಲದಲ್ಲಿ ವಾಲ್ಮೀಕಿ ಬರೆದಿದ್ದ ರಾಮಾಯಣದ ಕಾಂಡಗಳು ಕೊಳೆತು ಹೋಗಿರುವದರಿಂದ ಈ ರಾಮಾಯಣವನ್ನು ಅವನು ಬರೆದೆ ಎಂದು ಹೇಳಿದ್ದಾನೆ.
ಜಗತ್ತಿನಲ್ಲಿ ಯಾರೂ ಯಾರ ಭಾವನೆಯನ್ನೂ ನೋಯಿಸಬಾರದು ಎಂಬುದು ಈ ಕೃತಿಯ ವೈಶಿಷ್ಟ್ಯವಾಗಿದೆ . ಇದರ ಮುಖ್ಯ ಭಾಗಗಳನ್ನು ನಿಮಗಾಗಿ ಸಂಗ್ರಹಿಸಲಾಗಿದೆ
ಅಯೋದ್ಯೆಯಲ್ಲಿ ಯಾರಿಗೂ ಯಾರೊಂದಿಗೂ ತಂಟೆಗಳಿರಲಿಲ್ಲ. ದಶರಥನ ರಾಣಿಯರು ತಮ್ಮತಮ್ಮಲ್ಲಿ ಜಗಳವಾಡುತ್ತಿರಲಿಲ್ಲ . ಕೌಸಲ್ಯೆ ಅಕ್ಕಿ ಹಸನು ಮಾಡುತ್ತಿದ್ದಳು . ಕೈಕೇಯಿ ಮಣ್ಣಿನ ಗಡಿಗೆಗಳಲ್ಲಿ ಸರಯೂ ನದಿಯಿಂದ ನೀರನ್ನು ಹೊತ್ತು ತರುತ್ತಿದ್ದಳು. ಸುಮಿತ್ರೆ ಒಲೆ ಹೊತ್ತಿಸುತಿದ್ದಳು. ಹೀಗೆ ಮೂವರೂ ಸೇರಿ ಅಡಿಗೆ ಮಾಡಿ ಅತಿಥಿಗಳ ದಾರಿ ಕಾಯುತ್ತಿದ್ದರು. ಈ ಎಲ್ಲ ಜನ ಗುಡಿಸಲಲ್ಲಿ ವಾಸಿಸುತ್ತಿದ್ದರು. ಈ ಗುಡಿಸಲುಗಳು ಆಶ್ರಮಗಳಂತೆ ಇರುತ್ತಿದ್ದುದರಿಂದ ಮನೆಗಳಿಗೆ ಗೃಹಸ್ಥಾಶ್ರಮ ಎನ್ನುತ್ತಿದ್ದರು. ಕೆಲವರಂತೂ ಆಶ್ರಮಗಳನ್ನು ಕೂಡ ಕಟ್ಟುತ್ತಿರಲಿಲ್ಲ. ಅವರ ಮುಖ್ಯ ವೃತ್ತಿ 'ಅತಿಥಿ' ಎಂಬುದೇ ಆಗಿತ್ತು. ಪ್ರತಿದಿನ ಅತಿಥಿಗಳಿಗೆ ಊಟ ಹಾಕದಿದ್ದರೆ ಗೃಹಸ್ಥರಿಗೆ ಪುಣ್ಯ ದೊರೆಯುತ್ತಿದ್ದಿಲ್ಲ. ಆದ್ದರಿಂದ ಇತರರಿಗೆ ಪುಣ್ಯ ದೊರಕಿಸಿ ಕೊಡುವ ಸದುದ್ದೇಶದಿಂದ ಕೆಲವರು 'ಅತಿಥಿ' ವೃತ್ತಿಯನ್ನು ಮಾಡುವದು ಅನಿವಾರ್ಯವಾಗಿತ್ತು.
ಪುರುಷರು ಹೊಲಕ್ಕೆ ಹೋಗುತ್ತಿದ್ದರು. ಬೇಕಾದವರು ಬೇಕಾದ ಹೊಲದಲ್ಲಿ ಕೆಲಸ ಮಾಡುತ್ತಿದ್ದರು . ಮತ್ತು ಬೇಕಾದ ಹೊಲದಿಂದ ಬೇಕಾದಷ್ಟು ಬೆಳೆ ಕೊಯ್ದು ತರುತಿದ್ದರು . ಊರಲ್ಲಿ ಅಪರಾಧಗಳೇ ಜರುಗುತ್ತಿದ್ದಿಲ್ಲವಾದ್ದರಿಂದ ಪೋಲೀಸರೂ ಹೊಲದಲ್ಲಿ ಕೆಲಸ ಮಾಡುತ್ತಿದ್ದರು . ಬೇಸರವಾದಾಗ 'ಅತಿಥಿ' ಕೆಲಸ ಮಾಡುತ್ತಿದ್ದರು.
ದಶರಥನ ಮಕ್ಕಳು ತಮ್ಮತಮ್ಮಲ್ಲಿ ಜಗಳ ಆಡುತ್ತಿರಲಿಲ್ಲ. ಅವರು ವಸಿಷ್ಠರ ಶಾಲೆಗೆ ಹೋಗುತ್ತಿದ್ದರು . ಅವರು ಪ್ರಾತ್ಯಕ್ಷಿಕೆಯ ಪದ್ದತಿಯಂತೆ ಕಲಿಸುತ್ತಿದ್ದರು .
ಇಕ್ಷ್ವಾಕು ವಂಶದ ಪರಿಚಯವನ್ನು ಅವರು ಮಕ್ಕಳಿಗೆ ಹೇಗೆ ಮಾಡಿಕೊಟ್ಟರು ನೋಡೋಣ . ಒಂದು ದಿನ ಅವರು ಬರುವಾಗ ಕಬ್ಬಿನ ಗಳವನ್ನು ಹಿಡಿದುಕೊಂಡು ಬಂದರು . ಹುಡುಗರು ಅವರಿಗೆ ಪ್ರಣಾಮ ಮಾಡಿದರು . "ಲೋಕದ ಕಲ್ಯಾಣ ವಾಗಲಿ" ಎಂದು ಅವ್ರು ಪ್ರತಿ ವಂದನೆ ಮಾಡಿದರು.
"ಲೋಕಪುತ್ರರೆ , ಇಂದು ನಾನು ಬರುವಾಗ ಏನು ತಂದಿದ್ದೇನೆ?" ವಸಿಶ್ಟರು ಕೇಳಿದರು. "ಕಮಂಡಲು" ಶತೃಘ್ನ ಹೇಳಿದನು. "ಯೋಗ್ಯ , ಇನ್ನೂ ಏನು ತಂದಿದ್ದೇನೆ? ".
"ಅಗಸನು ಒಗೆದಿಟ್ಟ ಶಾಟಿ" ಭರತನು ಹೇಳಿದನು.
"ಯೋಗ್ಯ , ಲಕ್ಷ್ಮಣ , ನೀನೇಕೆ ಉತ್ತರ ಕೊಡುವದಿಲ್ಲ? "
"ಲೋಕಗುರೂಜಿ. ನನ್ನ ಜ್ಯೇಷ್ಠ ಬಂಧು ರಾಮನು ಏನು ಹೇಳುವನೋ ಅದೇ ನನ್ನ ಉತ್ತರ . ಅವನನ್ನೇ ಕೇಳಿರಿ"
"ರಾಮಚಂದ್ರಾ , ನಾನು ಬರುವಾಗ ಏನು ತಂದಿದ್ದೇನೆ? ನೀನು ಹೇಳು"
"ಕಬ್ಬು" ರಾಮ ನುಡಿದನು .
"ಕಬ್ಬು" ಲಕ್ಷ್ಮಣನೂ ನುಡಿದನು .
"ಯೋಗ್ಯ , ಕಬ್ಬು ಇದು ಲೋಕ ಭಾಷೆಯಲ್ಲಾಯಿತು .ದೇವ ವಾಣಿ(ಸಂಸ್ಕೃತ) ಯಲ್ಲಿ ? "
"ಕಬ್ಬಂ" ಭರತ ಹೇಳಿದನು . ಶತ್ರುಘ್ನ ನಕ್ಕನು . ಅನಂತರ ರಾಮನು ನಕ್ಕನು . ರಾಮನು ನಕ್ಕದ್ದರಿಂದ ಲಕ್ಷ್ಮಣನೂ ನಕ್ಕನು .
"ನಗಬಾರದು . ನಗುವುದರಿಂದ ಇತರರ ಭಾವನೆಗಳಿಗೆ ನೋವಾಗುತ್ತದೆ. ರಾಮಚಂದ್ರಾ , ದೇವವಾಣಿಯಲ್ಲಿ ಕಬ್ಬಿಗೆ ಏನನ್ನುತ್ತಾರೆ ? "
"ಇಕ್ಷು" ರಾಮ ಹೇಳಿದನು.
"ಇಕ್ಷು" ಲಕ್ಷ್ಮಣನೂ ಹೇಳಿದನು.
"ಯೋಗ್ಯ, ಲೋಕಪುತ್ರರೆ , ಮಾತು ಈ ಶಬ್ದಕ್ಕೆ ದೇವವಾಣಿಯಲ್ಲಿ ಏನನ್ನುತ್ತಾರೆ ?"
"ಭಾಷಾ " ಭರತನೆಂದ.
"ವಾಣಿ" ಶತ್ರುಘ್ನ ನೆಂದ.
"ವಾಕ್" ರಾಮ ಹೇಳಿದನು.
"ವಾಕ್" ಲಕ್ಷ್ಮಣನೂ ಹೇಳಿದನು.
"ವಾಕ್ ಎನ್ನುವದೇ ಯೋಗ್ಯ ! ಇನ್ನು ಇಕ್ಷುವಿಗೆ ವಾಕ್ ಜೋಡಿಸಿದರೆ ಎನಾಗುತ್ತದೆ?
"ಅವೆರಡನ್ನು ಜೋಡಿಸಲು ಬರುವದಿಲ್ಲ" ಭರತನೆಂದ.
"ಜೋಡಿಸಲು ಬಂದರೆ ಏನಾಗುತ್ತದೆ? "
"ಇಕ್ಷ್ವಾಕ್" ರಾಮ ಹೇಳಿದ . ಕೂಡಲೇ ಲಕ್ಷ್ಮಣನೂ ಹಾಗೇ ಹೇಳಿದನು.
"ಧನ್ಯ ! ಧನ್ಯ ! ಇನ್ನು ಅದಕ್ಕೆ ಉ ಪ್ರತ್ಯಯ ಹಚ್ಚಿದರೆ ಏನಾಗುತ್ತದೆ ? "
"ಏನೂ ಆಗುವದಿಲ್ಲ " ಭರತನೆಂದ.
"ಏಕೆ? 'ಇಕ್ಷ್ವಾಕ್' ಗೆ 'ಉ' ಪ್ರತ್ಯಯ ಹಚ್ಚಿದರೆ ಏನಾಗುತ್ತದೆ ?"
"ಇಕ್ಷ್ವಾಕು " ರಾಮ , ಲಕ್ಷ್ಮಣ , ಭರತ , ಶತ್ರುಘ್ನರು ಏಕಕಾಲದಲ್ಲಿ ಹೇಳಿದರು.
"ಇಕ್ಷ್ವಾಕು!" ಗಡ್ಡದ ಮೇಲಿನ ಬೆವರನ್ನು ಒರೆಸಿಕೊಳ್ಳುತ್ತ ವಸಿಷ್ಠರು ಉದ್ಗರಿಸಿದರು ."ಧನ್ಯ! ನಾನೇ ಧನ್ಯ !! ಲೋಕಪುತ್ರರೆ , ಇಂದು ನಾವು ಈ ಇಕ್ಷ್ವಾಕು ವಂಶದ ಮಾಹಿತಿಯನ್ನು ಮಾಡಿಕೊಳ್ಳೋಣ" ಎಂದು ಮುಂದುವರೆಸಿದರು .
ಸೀತೆಯ ಶೋಧ .
ಹನುಮಂತನು ಸೀತೆಯನ್ನು ಅಶೋಕವನದಲ್ಲಿ ಕಂಡನು . ಅವನು ಅವಳನ್ನು ತನ್ನೊಂದಿಗೆ ಕರೆದುಕೊಂಡು ಬರಬಹುದಾಗಿತ್ತು . ಆದರೆ ಶ್ರೀಲಂಕೆ ಒಂದು ಸ್ವತಂತ್ರ ರಾಷ್ಟ್ರ ವಾದ್ದರಿಂದ ಆ ಸರಕಾರದ ಒಪ್ಪಿಗೆ ಯಿಲ್ಲದೆ ಹಾಗೆ ಮಾಡುವಂತಿರಲಿಲ್ಲ . ಮುಂದೆ ಏನೂ ತೋಚದೆ ಹಿಂಸಾತ್ಮಕ ಚಳುವಳಿ ಆರಂಭಿಸುವ ವಿಚಾರದಿಂದ ವಿದ್ವಂಸಕ ಕಾರ್ಯಕೆ ಇಳಿದನು . ಶ್ರೀ ಲಂಕೆಯ ಸರಕಾರ ಅವನನ್ನು ಬಂದಿಸಿತು.
ಅವನು ಮರಳಿ ಬಂದ ನಂತರ ಲಂಕೆಯ ಮೇಲೆ ದಾಳಿ ಮಾಡಲು ವಾನರ ಪುಢಾರಿಗಳು ಸೂಚಿಸಿದರು . ಆದರೆ ಅಂತರ್ರಾಷ್ಟ್ರೀಯ ಶಾಂತಿಗೆ ಮಹತ್ವ ಕೊಟ್ಟು ರಾಮನು ಸಮುದ್ರದ ಮೇಲೆ ಸೇತುವೆಯನ್ನು ಕಟ್ಟಿಸಿ ದಂಡಕಾರಣ್ಯ ಮತ್ತು ಲಂಕಾ ಇವುಗಳ ಸಂಬಂಧಗಳನ್ನು ಬಲಪಡಿಸಿದನು.
ಸೇತುವೆ ಕಟ್ಟಿ ಆದ ಮೇಲೆ ರಾಮ , ಲಕ್ಷ್ಮಣ , ಸುಗ್ರೀವ ಇವರನ್ನೊಳಗೊಂಡ ಶಿಷ್ಟ ಮಂಡಳವೊಂದು ಲಂಕೆಗೆ ತೆರಳಿ ರಾವಣನನ್ನು ಭೇಟಿಯಾಯಿತು . ರಾವಣನ ರಾಜ್ಯದಲ್ಲಿ ಹತ್ತು ಮಂತ್ರಿಗಳಿದ್ದರು. ಅವರು ಹತ್ತು ರೀತಿಯಲ್ಲಿ ಪರಸ್ಪರ ವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದರು. ಆದ್ದರಿಂದಲೆ ರಾವಣನು ಹತ್ತು ತಲೆಗಳಿಂದ ಮಾತಾಡುತ್ತಾನೆ ಎಂದು ಜನ ಹೇಳುತ್ತಿದ್ದರು. ಸಮಯಕ್ಕೆ ಸರಿಯಾಗಿ ಹೇಳಿಕೆಗಳನ್ನು ಕೊಡಲು ಮತ್ತು ಬದಲಿಸಲು ರಾವಣನ ಈ ವ್ಯವಸ್ಥೆಯನ್ನು ರಾಮನು ಬಹಳ ಮೆಚ್ಚಿಕೊಂಡನು. ಮತ್ತು ತನ್ನ ರಾಜ್ಯದಲ್ಲಿ ಇಂತಹದೇ ವ್ಯವಸ್ಥೆಯನ್ನು ಜಾರಿಗೆ ತರಲು ಬಯಸಿದನು. ಸೀತೆಯ ವಿಷಯವೊಂದನ್ನು ಬಿಟ್ಟು ರಾಮನು ರಾವಣನೊಂದಿಗೆ ಅನೇಕ ವಿಚಾರ ವಿನಿಮಯ ಮಾಡಿದನು . ಸಿಂಹಳೀ ಜಾನಪದ ನೃತ್ಯವನ್ನು ಎಲ್ಲರೂ ಆನಂದಿಸಿದರು . ಅನಂತರ ಲಂಕಾ ಸರಕಾರವು ರಾಮರಾಜ್ಯದೊಡನೆಯ ಸಂಬಂದ ಕುರಿತು ಒಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿತು. ಸೀತೆಯ ವಿಷಯವನ್ನು ಚರ್ಚಿಸಲು ಹನುಮಂತನು ಪದೇ ಪದೇ ಪ್ರಯತ್ನಿಸಿದರೂ ರಾಮನು ಅವನ ಬಾಲವನ್ನು ಕಾಲಿನಿಂದ ಒತ್ತಿ ಒತ್ತಿ ಸುಮ್ಮನಾಗಿಸುತ್ತಿದ್ದನು.
ಮಾತು-ಕತೆ ಮುಕ್ತಾಯವಾದ ಮರುದಿನ ಎಲ್ಲರೂ ವಿಶ್ರಾಂತಿಗಾಗಿ ಉದ್ಯಾನವೊಂದರಲ್ಲಿ ಉಳಿದುಕೊಂಡರು. ರಾಮನು ತನ್ನ ಧನುರ್ವಿದ್ಯಾ ಪ್ರದರ್ಶನಕ್ಕೆಂದು ಒಂದು ತೆಂಗಿನ ಗಿಡದ ತೆಂಗಿನ ಕಾಯೊಂದಕ್ಕೆ ಗುರಿ ಮಾಡಿ ಒಂದು ಬಾಣ ಬಿಟ್ಟನು . ಅದೇ ಸಮಯಕ್ಕೆ ಅಕಸ್ಮಾತ್ತಾಗಿ ಆ ತೆಂಗಿನ ಗಿಡದ ಹಿಂದೆ ಇದ್ದ ಮಹಲಿನ ಕಿಟಕಿಯಿಂದ ರಾವಣನು ತಲೆ ಹೊರಗೆ ಹಾಕಿ ಇಣುಕಿ ನೋಡಿದಾಗ ಈ ಬಾಣವು ಅವನಿಗೆ ಬಡಿದು , ಕಿಟಕಿಯಿಂದ ಬಿದ್ದು ಸತ್ತನು . ಅನಂತರ ರಾಜ ವೈದ್ಯರು ಬಂದು ' ಆಕಸ್ಮಿಕದಿಂದ ಆದ ಸಾವು' ಎಂದು ಸರ್ಟಿಪಿ಼ಕೇಟ್ ಕೊಟ್ಟರು . ಅದರಿಂದ ರಾಮನ ಮೇಲೆ ಯಾವ ಅಪವಾದವೂ ಬರಲಿಲ್ಲ . ಹೀಗಾಗಿ ಈ ಎಲ್ಲ ಪ್ರಕರಣಗಳು ಅತ್ಯಂತ ಸೌಹಾರ್ದಯುತವಾದ ವಾತಾವರಣದಲ್ಲಿ ಬಗೆಹರಿದವು .
- ಇದು ಮರಾಠಿಯ ಪು. ಲ. ದೇಶಪಾಂಡೆಯವರ ವಿಡಂಬನೆಯ ಒಂದು ಮಾದರಿ