ಮುಕ್ತ ಜ್ಞಾನ ಭಂಡಾರ - ಕನ್ನಡ ವಿಕಿಪೀಡಿಯ

ಮುಕ್ತ ಜ್ಞಾನ ಭಂಡಾರ - ಕನ್ನಡ ವಿಕಿಪೀಡಿಯ

ಬರಹ

ಮುಕ್ತ ಜ್ಞಾನ ಭಂಡಾರ - ಕನ್ನಡ ವಿಕಿಪೀಡಿಯ

ಹಿಂದೊಮ್ಮೆ ವಸ್ತುಗಳ ಬಗ್ಗೆ, ವಿಷಯಗಳ ಬಗ್ಗೆ ಮಾಹಿತಿ ಹುಡುಕಲು ಗ್ರಂಥಾಲಯವೇ ಬೀಡು. ಅಲ್ಲಿರುವ ಪುಸ್ತಕಗಳನ್ನೆಲ್ಲಾ ಹೆಕ್ಕಿ ತೆಗೆದು, ಮಾಹಿತಿ ಹುಡುಕಬೇಕಿತ್ತು. ಮಾಹಿತಿ ತಂತ್ರಜ್ಞಾನದಲ್ಲಿ ಬೆಳವಣಿಗೆಗಳಾದಂತೆ, ಅಂತರಜಾಲ ಮನೆಮನೆಗಳನ್ನು ಪ್ರವೇಶಿಸಿದಂತೆ ಮಾಹಿತಿ ಹುಡುಕುವುದು ಈಗಾದರೋ ಅತಿ ಸುಲಭವಾಗಿದೆ. ಈಗ ಮಾಡಬೇಕಾದದ್ದು ಇಷ್ಟೆ: ಗಣಕದಲ್ಲಿ ತಮ್ಮ ನೆಚ್ಚಿನ ಬ್ರೌಸರ್ ತೆರೆದು ನೆಚ್ಚಿನ Search engineನಲ್ಲಿ ಟೈಪ್ ಮಾಡಿ ಬಟ್ಟನ್ ಕ್ಲಿಕ್ ಮಾಡುವುದು! ಇಂತಹದೇ ಒಂದು ಮಾಹಿತಿತಂತ್ರಜ್ಞಾನದ ಬೆಳವಣಿಗೆ ಆನ್ಲೈನ್ ಎನ್ಸೈಕ್ಲೋಪೀಡಿಯಾ ಅಥವಾ ಅಂತರಜಾಲದಲ್ಲಿ ಲಭ್ಯವಿರುವ ವಿಶ್ವಕೋಶಗಳು. ಬ್ರಿಟ್ಯಾನಿಕಾ, ಎನ್ಕಾರ್ಟ ಇವೇ ಮೊದಲಾದಂತೆ ಹಲವು ಆಂಗ್ಲ ಭಾಷೆಯ ವಿಶ್ವಕೋಶಗಳು ಅಂತರಜಾಲದಲ್ಲಿ ಲಭ್ಯ. ಆದರಿವು ಸಂಪೂರ್ಣವಾಗಿ ಮುಕ್ತವಾಗಿಯೋ ಅಥವಾ ಉಚಿತವಾಗಿಯೋ ದೊರಕದು. ಕೆಲವೊಮ್ಮೆ ಅವುಗಳಲ್ಲಿರುವ ಮಾಹಿತಿ ಏಕಮುಖವುಳ್ಳದ್ದಾಗಿರುವ ಸನ್ನಿವೇಶಗಳೂ ಉಂಟು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೆಲವರು ಚಿಂತಕರು ಪ್ರಾರಂಭಿಸಿದ ವಿಶ್ವಕೋಶಗಳ ಸಮೂಹ - ವಿಕಿಪೀಡಿಯ. ವಿಕಿಪೀಡಿಯಾದಲ್ಲಿ ಹಲವು ಭಾಷೆಗಳ ವಿಶ್ವಕೋಶಗಳು ಲಭ್ಯವಿದೆ. ಇವೆಲ್ಲ ವಿಶ್ವಕೋಶಗಳನ್ನು ಓದುಗರ ಮುಂದಿಡುವಲ್ಲಿ, ಹಾಗೂ ಸಂಯೋಜಿಸುವಲ್ಲಿ 'ವಿಕಿ' ತಂತ್ರಾಜ್ಞಾನವನ್ನುಪಯೋಗಿಸುವ ತಂತ್ರಾಂಶವೊಂದನ್ನು ಬಳಸಲಾಗುತ್ತದೆ.

ವಿಕಿ ತಂತ್ರಜ್ಞಾನ:

ಜಗತ್ತಿನ ಹಲವೆಡೆ ಇರುವ ಹಲವು ಲೇಖಕರು ಒಂದೇ ವಿಷಯದ ಬಗ್ಗೆ ಒಟ್ಟುಗೂಡಿ ಬರೆಯುವುದನ್ನು ಅನುವುಮಾಡಿಕೊಡಲು ಬಂದದ್ದು 'ವಿಕಿ' ತಂತ್ರಜ್ಞಾನ. ಇದರ ಪ್ರಮುಖ ಉಪಯೋಗ 'Collaboration' ಅಥವಾ ಸಹಯೋಗ. ಇದಲ್ಲದೇ ಸಂಪಾದನೆ ಕೆಲಸಗಳನ್ನು ಸುಲಭಗೊಳಿಸುವ ವ್ಯವಸ್ಥೆಯಿಂದ ಕೂಡಿದ ಈ ತಂತ್ರಜ್ಞಾನ, ಲೇಖನಗಳನ್ನು ಒಟ್ಟುಗೂಡಿಸುವ ಕಾರ್ಯವನ್ನು ಚುರುಕುಗೊಳಿಸುತ್ತದೆ. ಈ‌ ತಂತ್ರಜ್ಞಾನದ ಉಪಯೋಗ ಇನ್ನೂ ಹಲವಾರು. ವಿಕಿಪೀಡಿಯಾದಲ್ಲಿ ಉಪಯೋಗಿಸುವ 'ಮೀಡಿಯವಿಕಿ' ತಂತ್ರಾಂಶ ಕೂಡ ಇಂತಹ ವಿಕಿ ತಂತ್ರಜ್ಞಾನವನ್ನು ಉಪಯೋಗಿಸುತ್ತದೆ.

ಕನ್ನಡದಲ್ಲಿ ವಿಕಿಪೀಡಿಯ...

ವಿಶ್ವಕೋಶಗಳು ನೂರೆಂಟಿವೆ; ಕನ್ನಡದಲ್ಲಿ ಮಾತ್ರ ಬೆರಳೆಣಿಕೆಯಷ್ಟು. ಅದರಲ್ಲೂ ಅಂತರಜಾಲದಲ್ಲಿ ಲಭ್ಯವಿದ್ದವು ಸೊನ್ನೆ. ಕಳೆದ ವರ್ಷ ಪ್ರಾರಂಭಿಸಲಾದ ಕನ್ನಡ ವಿಕಿಪೀಡಿಯ - ವಿಕಿಪೀಡಿಯಾದ ಕನ್ನಡ ಅವತರಣಿಕೆ, ಈಗ ೭೦೦ಕ್ಕೂ ಹೆಚ್ಚು ಲೇಖನಗಳನ್ನೊಳಗೊಂಡಿದೆ. ಸಾಹಿತಿಗಳು, ಸಂಗೀತಗಾರರು, ಸ್ವಾತಂತ್ರ್ಯ ಹೋರಾಟಗಾರರು, ಇತಿಹಾಸ, ವಿಜ್ಞಾನ, ಭೂಗೋಳ - ಹೀಗೆ ಹಲವು ವಿಷಯಗಳ ಬಗೆಗಿನ ನೂರಾರು ಲೇಖನಗಳಿವೆ. ಭಾರತೀಯ ಭಾಷಾ ವಿಕಿಪೀಡಿಯಗಳಲ್ಲಿ ಅತಿ ಹೆಚ್ಚು ಸಂಪೂರ್ಣ ಲೇಖನಗಳನ್ನು ಹೊಂದಿರುವ ಗೌರವ ಕನ್ನಡದ್ದು. [:http://kn.wikipedia.org/] ಎಂಬ URL ಅಡಿ ಲಭ್ಯವಿರುವ ಕನ್ನಡ ವಿಕಿಪೀಡಿಯಕ್ಕೆ ಹಲವು ಕನ್ನಡಿಗರು ದಿನನಿತ್ಯ ಭೇಟಿ ನೀಡುತ್ತಾರೆ. ಕನ್ನಡ ವಿಕಿಪೀಡಿಯಾದಲ್ಲಿ ಲೇಖನಗಳನ್ನು ಬರೆಯುವವರು, ಮಾಹಿತಿ ಸೇರಿಸುವವರು ಅದನ್ನೋದುವ ಸದಸ್ಯರು. ತಮಗಿಷ್ಟವಾದ, ತಮಗೆ ತಿಳಿದ ಲೇಖನಗಳನ್ನು ಸೇರಿಸಲು ವಿಕಿಪೀಡಿಯ ತನ್ನ ಓದುಗರಿಗೆ ಅನುಮತಿ ನೀಡುತ್ತದೆ. ಅಲ್ಲದೇ ಲೇಖನಗಳಲ್ಲಿ ತಪ್ಪು ಕಂಡುಬಂದಲ್ಲಿ ಸರಿಪಡಿಸಲು ಕೂಡ ಓದುಗರಿಗೆ ಅನುಮತಿಯಿರುತ್ತದೆ. ಒಟ್ಟಾರೆ, ಎಲ್ಲರೂ ಇದರಲ್ಲಿರುವ ಲೇಖನಗಳಿಗೆ ತಮಗೆ ತಿಳಿದ ಮಾಹಿತಿ ಸೇರಿಸಬಹುದು; ತಪ್ಪುಗಳನ್ನು ತಿದ್ದಬಹುದು; ಹೊಸ ಲೇಖನಗಳನ್ನು ಪ್ರಾರಂಭಿಸಬಹುದು. "ಅರೆರೆ! ಹೀಗಾದರೆ ಮನಬಂದಂತೆ ಬರೆಯುವುದಕ್ಕೆ, ತಪ್ಪು ಮಾಹಿತಿ ಸೇರಿಸುವುದಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆಯಲ್ಲವೇ?" ಎಂಬ ಆಲೋಚನೆ ನಿಮ್ಮಲ್ಲಿ ಮೂಡಬಹುದು. ಎಲ್ಲರಿಗೂ ಮುಕ್ತವಾಗಿರಿಸಿದ ವಿಕಿಯಲ್ಲಿ ಮಾಹಿತಿ ಸೇರಿಸುವದರಿಂದ ಯಾರನ್ನೂ ತಡೆಗಟ್ಟಲಾಗದು, ಆದರೆ ಅಂತಹ ಒಂದು ಸೇರ್ಪಡೆಯಾದಲ್ಲಿ ತಪ್ಪು ಮಾಹಿತಿಯನ್ನು ಕಿತ್ತೊಗೆದು ಹಿಂದಿನದಂತೆ ಮಾಡಲು ವಿಕಿಯಲ್ಲಿ ಸವಲತ್ತುಗಳಿರುತ್ತವೆ. ಅಲ್ಲದೇ ಒಳ್ಳೆಯ ಸಮುದಾಯ ರೂಪುಗೊಂಡಾಗ ಇಂತಹ ಸನ್ನಿವೇಶಗಳು ಬಂದೆರಗುವುದು ಬಹಳ ಕಡಿಮೆ. ವಿಕಿಪೀಡಿಯದ ನಿರ್ವಾಹಕರು, ನೂರಾರು ಸದಸ್ಯರು ಸಮಯದಿಂದ ಸಮಯಕ್ಕೆ ವಿಕಿಪೀಡಿಯದಲ್ಲಾಗುವ ಬದಲಾವಣೆಗಳ ಮೇಲೆ ನಿಗಾ ವಹಿಸಿಯೇ ಇರುತ್ತಾರೆ. ಕನ್ನಡ ವಿಕಿಪೀಡಿಯದಲ್ಲಿರುವ ಮಾಹಿತಿ ಮುಕ್ತವಾದದ್ದು - ಎಲ್ಲರೂ ಮಾಹಿತಿಯನ್ನು ಬಳಸಬಹುದು, ತಮಗಿಷ್ಟ ಬಂದಂತೆ ಉಪಯೋಗಿಸಬಹುದು. ವಿಕಿಪೀಡಿಯದಲ್ಲಿರುವ ಎಲ್ಲ ಮಾಹಿತಿ ಜಿ ಎನ್ ಯು ಮುಕ್ತ ಡಾಕ್ಯುಮೆಂಟೇಶನ್ ಲೈಸೆನ್ಸಿನ ಅಡಿ ಲಭ್ಯ. ವಿಕಿಪೀಡಿಯಾಕ್ಕೆ ಮಾಹಿತಿ ಸೇರಿಸುವ ಮೂಲಕ ಸದಸ್ಯರು ಮುಕ್ತ ಲೈಸೆನ್ಸಿನ ಅಡಿ ಅವರ ಕಾಣಿಕೆಗಳನ್ನು ನೀಡಲು ಸಮ್ಮತಿಸಿರುತ್ತಾರೆ - ಇದು ವಿಕಿಪೀಡಿಯಾದ ಕಾಯಿದೆ; ಈ ಮೂಲಕ ವಿಕಿಪೀಡಿಯ ಎಲ್ಲರಿಗೂ ಮುಕ್ತವಾಗಿ ಲಭ್ಯವಿರುವಂತೆ, ಜನಸಾಮಾನ್ಯರಿಗೆ ಉಚಿತವಾಗಿ ದೊರೆಯುವಂತೆ ನೋಡಿಕೊಳ್ಳಲಾಗುತ್ತದೆ.

ಕನ್ನಡ ವಿಕಿಪೀಡಿಯಾದ ಪಕ್ಷಿನೋಟ:

(ಜೂನ್ ೨೦೦೫ರಂತೆ) ಸದಸ್ಯರು:೧೧೦ ನಿರ್ವಾಹಕರು: ೩ ಪುಟಗಳು: ೨೯೦೫ ಲೇಖನಗಳು: ೭೨೨

ಕನ್ನಡ ವಿಕಿಪೀಡಿಯ ಮತ್ತು ಯುನಿಕೋಡ್:

ಕನ್ನಡ ವಿಕಿಪೀಡಿಯ ಯುನಿಕೋಡ್ ಬಳಸುತ್ತದೆ. ಯುನಿಕೋಡ್ ಎಂದರೆ ಒಂದು ಅಂತರರಾಷ್ತ್ರೀಯ ನಿರ್ಧಿಷ್ಟಮಾನ. ಇದರ ಧ್ಯೇಯ - ಎಲ್ಲಾ ಮಾನವ ಭಾಷೆಗಳಲ್ಲಿ ಬೇಕಾಗುವ ಪ್ರತಿಯೊಂದು ಅಕ್ಷರಕ್ಕೂ ಆಕರದಲ್ಲಿ ಒಂದು ಅಪೂರ್ವ (Unique) ಇಂಟಿಜರ್ ಸಂಖ್ಯೆಯನ್ನು ಕೊಡುವುದು. ಈ ಕೋಡ್ ಸಂಖ್ಯೆಯನ್ನು ಕೋಡ್ ಪಾಯಿಂಟ್ ಎನ್ನುತ್ತಾರೆ. ಕನ್ನಡ ಮತ್ತು ಇತರೆ ಕಾಂಪ್ಲೆಕ್ಸ್ ಸ್ಕ್ರಿಪ್ಟ್ ಭಾಷೆಗಳನ್ನು ಗಣಕೀಕರಿಸಲು ಯುನಿಕೋಡ್ ಬಳಸುವ ಮೂಲಕ ಕಂಪ್ಯೂಟರಿನಲ್ಲಿ ಈ ಭಾಷೆಗಳ ಉಪಯೋಗಕ್ಕೆ ಹಲವು ಸವಲತ್ತುಗಳು ದೊರೆಯುತ್ತವೆ. ಉದಾಹರಣೆಗೆ, ಹಿಂದಿನಂತೆ ಹಲವು ಫಾಂಟ್ ಗಳನ್ನು ಅನುಸ್ಥಾಪಿಸುವ ಪರಿಸ್ಥಿತಿ ಬರದು. ಒಂದೇ ಯುನಿಕೋಡ್ ಫಾಂಟ್ ಸಾಕು. ಅಲ್ಲದೇ, ಆಂಗ್ಲ ಭಾಷೆಗಿರುವಂತೆ ಪುಟಗಳಲ್ಲಿ "Search" ಕೂಡ ಮಾಡಬಹುದು. ಆದರೆ ಯುನಿಕೋಡ್ ಸವಲತ್ತು ಕೇವಲ ಹೊಸ ಆಪರೇಟಿಂಗ್ ಸಿಸ್ಟಮ್ (Operating System)ಗಳಲ್ಲಿ ದೊರೆಯುತ್ತದೆ. ಹೊಸ ತಂತ್ರಜ್ಞಾನವಾದ್ದರಿಂದ ವಿಂಡೋಸ್ ೯೮, ವಿಂಡೋಸ್ ೨೦೦೦ ಹಾಗೂ ಇನ್ನಿತರ ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಇದು ದೊರೆಯದು. ಇತ್ತೀಚೆಗಿನ ಲಿನಕ್ಸ್ (ರೆಡ್‌ಹ್ಯಾಟ್, ಫೆಡೋರಾ, ಮ್ಯಾಂಡ್ರೇಕ್, ಉಬುಂಟು) ಹಾಗೂ ವಿಂಡೋಸ್ ಎಕ್ಸ್ ಪಿ ಯುನಿಕೋಡ್‌ನೊಂದಿಗೆ ಬರುತ್ತವೆ. ನಿಮ್ಮ ಕಂಪ್ಯೂಟರಿನಲ್ಲಿ ಯುನಿಕೋಡ್ ಒದಗಿಸಿಕೊಳ್ಳುವಂತೆ ಮಾಡಲು ಕೆಳಗಿನ ಅಂತರಜಾಲ ಸಂಪರ್ಕಕ್ಕೆ ಭೇಟಿ ಕೊಡಿ: [:http://kn.wikipedia.org/wiki/Wikipedia:Kannada_Support]

ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸುವುದು:

ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸುವುದು ಸುಲಭ, ನಿಮಗಿಷ್ಟವಾದ ಯಾವುದಾದರೊಂದು ಲೇಖನ ತೆಗೆದು, ನಿಮಗೆ ತಿಳಿದ ಹೆಚ್ಚಿನ ಮಾಹಿತಿಯನ್ನು ಆ ಲೇಖನಕ್ಕೆ ಸೇರಿಸಬಹುದು. ಇಲ್ಲವಾದಲ್ಲಿ ಈಗಾಗಲೇ ವಿಕಿಪೀಡಿಯದಲ್ಲಿ ಪ್ರಾರಂಭ ಮಾಡದೇ ಇರುವ ಯಾವುದಾದರೂ ವಿಷಯದ ಬಗ್ಗೆ ಲೇಖನವನ್ನು ಪ್ರಾರಂಭಿಸಬಹುದು. ಅಲ್ಲದೇ, ಲೇಖನಗಳಲ್ಲಿರುವ ಕಾಗುಣಿತ, ವ್ಯಾಕರಣ ದೋಷಗಳನ್ನು ತೆಗೆದು ಹಾಕಲು ಕೂಡ ಸಹಾಯ ಮಾಡಬಹುದು. ವಿಕಿಪೀಡಿಯಕ್ಕೆ ಬರುವ ಹೊಸಬರಿಗೆ ಸಮುದಾಯಪುಟದಲ್ಲಿ ಹಲವು ಕೈಪಿಡಿಗಳಿವೆ. ಸಮುದಾಯ ಪುಟಕ್ಕೆ ಹೋಗಲು ನಿಮ್ಮ ಬ್ರೌಸರಿನಲ್ಲಿ ಕೆಳಗಿನ URL ಟೈಪ್ ಮಾಡಬೇಕು: [:http://kn.wikipedia.org/wiki/Wikipedia:Community_Portal] ವಿಕಿಪೀಡಿಯಾದಲ್ಲಿರುವ ಲೇಖನಗಳಿಗೆ ಮಾಡಿದ ಪ್ರತಿಯೊಂದು ಬದಲಾವಣೆಯೂ ದಾಖಲಾಗಿರುತ್ತದೆ. (ಚಿತ್ರ ೩ ನೋಡಿ) ಯಾವ ಸದಸ್ಯರು ಯಾವ ಯಾವ ಬದಲಾವಣೆ ಮಾಡಿದರು ಹಾಗೂ ಯಾವ ಸಮಯದಲ್ಲಿ ಮಾಡಿದರೆಂಬುದನ್ನೂ ಕಂಡುಕೊಳ್ಳಬಹುದು. ವಿಕಿಪೀಡಿಯ ಸದಸ್ಯರು ಸಾಮಾನ್ಯವಾಗಿ ಚರ್ಚೆ ನಡೆಸುವ ಒಂದು ಮೇಯ್ಲಿಂಗ್ ಲಿಸ್ಟ್ ಕೂಡ ಇದೆ. ಇದರ URL: [:http://mail.wikipedia.org/mailman/listinfo/wikikn-l] ಉತ್ಸುಕರು ಈ ಮೇಯ್ಲಿಂಗ್ ಲಿಸ್ಟಿಗೆ ಸದಸ್ಯರಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಸಂಪಾದನೆ ಮಾಡಲು ಸಹಾಯವಾಗುವಂತೆ (ಹರಿ ಪ್ರಸಾದ್ ನಾಡಿಗ್ ಕನ್ನಡ ವಿಕಿಪೀಡಿಯಾದ ನಿರ್ವಾಹಕರಲ್ಲೊಬ್ಬರು. ಇವರನ್ನು hpnadig @ gmail.comನಲ್ಲಿ ಸಂಪರ್ಕಿಸಬಹುದು)