ದಸರಾ ಹಬ್ಬ

ದಸರಾ ಹಬ್ಬ

ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಮಂಗಳವಾರ ಬೆಳಿಗ್ಗೆ 10-50ಕ್ಕೆ ಸಿದ್ದಗಂಗಾ ಮಠದ ಶ್ರೀಗಳಾದ ಡಾ.ಶಿವಕುಮಾರ್ ಸ್ವಾಮೀಜಿಯವರು ಚಾಮುಂಡಿಬೆಟ್ಟದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. ಸಾಂಸ್ಕೃತಿಕ ನಗರದಾದ್ಯಂತ ಪ್ರವಾಸಿಗರ ಮಹಾಪೂರವೇ ತುಂಬಿದ್ದು,ಎಲ್ಲೆಡೆ ಶೃಂಗಾರದಿಂದ ಕಂಗೊಳಿಸುತ್ತಿರುವ ದಸರಾಕ್ಕೆ ಇಂದು ಚಾಲನೆ ದೊರೆತಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಮೈಸೂರು ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಬಾರಿಯ ದಸರಾಕ್ಕೆ ಸುಮಾರು 10 ಕೋಟಿ ರೂಪಾಯಿಗಳ ನೆರವು ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ತಿಳಿಸಿದರು. ಅಲ್ಲದೇ ಜಾಗತಿಕ ಮಟ್ಟದಲ್ಲಿ ಮೈಸೂರು ದಸರಾಕ್ಕೆ ವಿಶಿಷ್ಟ ಮೆರಗು ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪೂರ್ಣಪ್ರಮಾಣದ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ದಸರಾ ಹಬ್ಬವು ನಮ್ಮ ಕನ್ನಡಿಗರ ನಾಡ ಹಬ್ಬ. ವಿಶೇಷವಾಗಿ ಮೈಸೂರಿನಲ್ಲಿ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆ ದೀಪಾಲಂಕಾರಗೊಳಿಸಲಾಗುತ್ತದೆ. ಮೈಸೂರು ಮಹಾನಗರವು ಕನ್ನಡ ನಾಡಿನ ಸಂಸ್ಕೃತಿಯ ರಾಜಧಾನಿ. ಮೈಸೂರು ದಸರಾ ಎಂದರೆ ಅದು ಸಂಬ್ರಮದ ನಮ್ಮ ನಾಡ ಹಬ್ಬ. ಆಶ್ವಯುಜ ಮಾಸದ ಪಾಡ್ಯದಿಂದ ಪ್ರಾರಂಭವಾಗಿ ದಶಮಿಯ ಪೂರ್ತಿ ಹತ್ತು ದಿನಗಳ ತನಕ ಆಚರಣೆಯಲ್ಲಿ ಇರುತ್ತದೆ. ಹತ್ತು ದಿನಗಳಲ್ಲಿ ಮೊದಲ ಒಂಬತ್ತು ದಿನಗಳು ನವರಾತ್ರಿ ಎನಿಸಿ ಕಡೆಯ ಹತ್ತನೇ ದಿನ ವಿಜಯದಶಮಿ ಎಂದು ಆಚರಣೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಇನ್ನೊಂದು ವಿಶೇಷ ಮನೆಗಳಲ್ಲಿ ಗೊಂಬೆ ಕೂರಿಸುವುದು. ಹಂತ ಹಂತವಾಗಿ ಮೆಟ್ಟಿಲುಗಳನ್ನು ನಿರ್ಮಿಸಿ, ಪಟ್ಟದ ಗೊಂಬೆ ಮತ್ತು ಇತರ ಗೊಂಬೆಗಳನ್ನು ಕೂರಿಸುವರು . ಇದಕ್ಕೆ ಅಂತಾನೇ ಮದುವೆಗಳಲ್ಲಿ ನೂತನ ದಂಪತಿಗಳಿಗೆ ತೇಗ ಅಥವಾ ಚಂದನದ ಮರದಿಂದ ಮಾಡಿದ ಗೊಂಬೆಗಳನ್ನು ನೀಡುವರು. ಪ್ರತಿದಿನ ಸಂಜೆಯ ವೇಳೆಯಲ್ಲಿ ಪುಟ್ಟ ಮಕ್ಕಳನ್ನು ಕರೆದು ಗೊಂಬೆ ಬಾಗಿನ ಎಂದು ತಿಂಡಿಗಳನ್ನು ಕೊಡುವರು. ಮೈಸೂರನ್ನು ಆಳಿದ ರಾಜ ಮನೆತನವಾದ ಒಡೆಯರ ಕುಲದೇವತೆಯಾದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ವಿಜಯದಶಮಿಯಂದು ಯುದ್ಧಕ್ಕಾಗಿ ಬಳಸುವ ಎಲ್ಲಾ ಆಯುಧ, ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ. ದಸರ ಸಮಯದಲ್ಲಿ ನಡೆಯುವ ಇನ್ನೊಂದು ಕಾಯಕ್ರಮವೆಂದರೆ ಮಹಾರಾಜರ ಖಾಸಗಿ ದರ್ಬಾರ್. ಅಂಬಾ ವಿಲಾಸ ಅರಮನೆಯಲ್ಲಿ ನವರಾತ್ರಿಯ ಒಂಭತ್ತು ದಿನಗಳು ನಡೆಯುವ ಒಂದು ವಿಶಿಷ್ಟ ಕಾರ್ಯಕ್ರಮ. ದಸರಾ ಪ್ರಾರಂಭವಾಗುವ ಮೊದಲು ನಾಲ್ಕು ಟನ್ ತೂಗುವ ಮೈಸೂರಿನ ಅತ್ಯಂತ ಪ್ರಾಚೀನ ರತ್ನ ಸಿಂಹಾಸನವನ್ನು ತಂದು ಅಣಿಗೊಳಿಸಲಾಗುತ್ತದೆ. ಒಡೆಯರ್ ಮನೆತನದ ರಾಜ ಪೂಜಾವಿಧಾನಗಳನ್ನು ನೆರವೇರಿಸಿ, ಸುಮಾರು ನಲವತ್ತೈದು ನಿಮಿಷಗಳ ಕಾಲ ಖಾಸಗಿ ದರ್ಬಾರ್ ನಿರ್ವಹಿಸುವ ಸಂಪ್ರದಾಯವಿದೆ. ಹಿಂದೆ ರಾಜಾಡಳಿತವಿದ್ದ ಕಾಲದಲ್ಲಿ ಯಾವ ರೀತಿ ಮಹಾರಾಜರ ದರ್ಬಾರ್ ನಡೆಯುತ್ತಿತ್ತೂ ಅದೇ ರೀತಿ, ಕಂಕಣಧಾರಿಯಾದ ಒಡೆಯರ್ ರತ್ನ ಖಚಿತ ಸಿಂಹಾಸನಾರೂಢರಾಗಿ, ಪರಂಪರಾಗತ ವಿಧಿವಿಧಾನಗಳಂತೆ ದರ್ಬಾರ್ ನಡೆಸುತ್ತಾರೆ. ಈ ದರ್ಬಾರ್ ನಡೆಯುವ ಹಾಲ್‍ನಲ್ಲಿ ರಾಜ ಪರಿವಾರದವರು, ರಾಜ ಪುರೋಹಿತರು, ಅತಿಥಿ ಗಣ್ಯರು, ದೇವಾಲಯಗಳ ಅರ್ಚಕರು, ಅರಮನೆ ಸೇವಕರು ಮುಂತಾಗಿ ಎಲ್ಲರೂ ಹಾಜರಿರುತ್ತಾರೆ. ಈ ಖಾಸಗಿ ದರ್ಬಾರ್ ನೋಡಿದರೆ, ಹಿಂದಿನ ಕಾಲದಲ್ಲಿ ಇದ್ದ ಅರಮನೆಗಳಲ್ಲಿ ನಡೆಯುತಿದ್ದ ಆಚರಣೆಗಳ ಕಲ್ಪನೆ ಬರುತ್ತದೆ. ಪ್ರತಿವರ್ಷವೂ ತಪ್ಪದೆ ನಡೆಯುವ ಈ ಖಾಸಗಿ ದರ್ಬಾರ್ ದಸರ ಮಹೋತ್ಸವದ ಒಂದು ಪ್ರಮುಖ ಆಕರ್ಷಣೆಯಾಗಿದೆ. ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ. ಸಂಗೀತ, ಸಾಹಿತ್ಯ, ನಾಟಕಗಳು, ಚಿತ್ರಕಲೆ, ಕ್ರೀಡೆಗಳು, ನೃತ್ಯಕಲೆ, ಜಾನಪದಕಲೆ, ಹರಿಕಿರ್ತನೆ, ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾ ಪ್ರೇಮಿಗಳಿಗೆ ಮನರಂಜನೆಯನ್ನು ಉಂಟುಮಾಡುತ್ತದೆ. ಇದರ ಜೊತೆಗೆ ಪ್ರಶಸ್ತಿ ಪಡೆದ ಹಲವಾರು ಚಲನಚಿತ್ರ ಪ್ರದರ್ಶನವನ್ನು ಸಹ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುತ್ತಾರೆ ಇದರಿಂದ ಚಿತ್ರರಸಿಕರಿಗೆ ಮುದನೀಡುತ್ತದೆ. ಇದರ ಜೊತೆಗೆ ಅರಮನೆ ಮತ್ತು ಎಲ್ಲಾ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿರುತ್ತಾರೆ. ಇದರಿಂದ ಇಡೀ ಮೈಸೂರು ನಗರ ಬೆಳಕಿನಿಂದ ತುಂಬಿರುತ್ತದೆ. ಈ ಎಲ್ಲಾ ದೃಶ್ಯಗಳನ್ನು ನೋಡಲು ಲಕ್ಷಾಂತರ ಜನರು ಕರ್ನಾಟಕ ರಾಜ್ಯ ಮಾತ್ರ ವಲ್ಲದೆ ಬೇರೆ ಬೇರೆ ರಾಜ್ಯಗಳಿಂದ ಮತ್ತು ವಿದೇಶಗಳಿಂದ ಸಹ ಬರುತ್ತಾರೆ. ಈ ದಸರಾ ಹಬ್ಬವನ್ನು ನಮ್ಮ ಹಳ್ಳಿಗಳಲ್ಲಿ ಸಹ ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಈ ಜಂಬೂಸವಾರಿಯ ದಿನ ತಮ್ಮ ತಮ್ಮ ಮನೆಯಲ್ಲಿರುವ ಎತ್ತಿನಬಂಡಿ, ಹಸುಗಳನ್ನು, ವಾಹನಗಳನ್ನು ತೊಳೆದು ಸಿಂಗಾರವನ್ನು ಮಾಡಿ ಊರಿನ ಸುತ್ತಲೂ ಸಹ ಮೆರವಣಿಗೆಯನ್ನು ಮಾಡುತ್ತಾರೆ. ಇದನ್ನು ನೋಡಲು ಊರಿನ ಎಲ್ಲಾ ಜನರು ಭಾಗವಹಿಸಿ ನೋಡಿ ಸಂತೋಷ ಪಡುತ್ತಾರೆ.

Rating
No votes yet

Comments