ಅವರು "ಮಹಾತ್ಮ"

ಅವರು "ಮಹಾತ್ಮ"

ಬರಹ

ಓದುತ್ತಾ ಹೋದಂತೆ ಅಬ್ಬಾ... "ನನ್ನ ಸತ್ಯಾನ್ವೇಷಣೆ" ಪುಸ್ತಕ ಓದಿ ನನಗಾದ ಅನುಭವ ಇದು. ನಿಜಕ್ಕೂ ಅಸಮಾನ್ಯ ವ್ಯಕ್ತಿ ಅವರು. ವ್ಯಕ್ತಿಯೊಬ್ಬ ಬೆಳೆದ ಬಗೆಯನ್ನು ತಿಳಿಯಬೇಕೆಂದರೆ ಗಾಂಧೀಜಿಯವರ ಆತ್ಮಕತೆ ಓದಬೇಕು.

ಗಾಂಧೀಜಿಯವರು ಬಾಲ್ಯದಿಂದಲೂ ಅವರ ಕಡೆಯ ದಿನದವರೆಗೆ ಅನೇಕ ಏಕವ್ಯಕ್ತಿ ಕೆಲವೊಮ್ಮೆ ಸಾಂಘಿಕ ಪ್ರಯತ್ನಗಳನ್ನು ಮಾಡುತ್ತಲೇ ಬದುಕಿದವರು. ಶಾಕಾಹಾರಿಗಳಾಗಿ, ಪರಮ ದೈವಭಕ್ತರಾಗಿ, ಸಸ್ಯಹಾರಿ, ಆಯುರ್ವೇದ ಚಿಕಿತ್ಸೆ ಬಳಸುತ್ತಾ, ವಿದೇಶಗಳಲ್ಲೂ ತಮ್ಮ ಶ್ರಮ ಸಂಕಲ್ಪವನ್ನು ಓರೆಗೆ ಹಚ್ಚಿದವರು. ತಮ್ಮ ಮಗ "ಮಣಿಪಾಲ"ನ ಮೇಲೆ ನೀರಿನ ಪ್ರಯೋಗ ಹಾಗೂ ಸ್ವತಃ ತಾವೇ ಮಣ್ಣಿನ ಚಿಕಿತ್ಸೆಗೆ ಒಳಗಾಗಿದ್ದರು. ಹೀಗೆ ಅನೇಕ ವಿಚಾರಗಳನ್ನು ಪ್ರಯೋಗಾತ್ಮಕವಾಗಿ ಅನುಭವಿಸಿದ್ದರಿಂದಲೇ ಅವರ ಘನತೆ ಮತ್ತು ಮೌಲ್ಯಗಳು ಹೆಚ್ಚಿದ್ದನ್ನು ಕಾಣಬಹುದು.

ಹಡಗಿನ ನಾವಿಕನ ಮಾತಿಗೆ ಮರುಳಾಗಿ ವೇಶ್ಯಾಗೃಹದ ಬಳಿ ತೆರಳಿ ಬಳಿಕ ಧಿಕ್ಕರಿಸಿದ್ದು. ತಾಯಿಗೆ ಕೊಟ್ಟಿದ್ದ ವಚನವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದು, ಪತ್ನಿ ಕಸ್ತೂರಿ ಬಾರವರ ಬಳಿ ಬ್ರಹ್ಮಚರ್ಯ ಪಾಲಿಸಿದ್ದು, ಟ್ರಾನ್ಸವಾಲ್ ಮತ್ತು ಜೋಹಾನ್ಸ್ಬರ್ಗ್‌‌ನಲ್ಲಿ ಭಾರತದ ಕೂಲಿ ಅಳುಗಳ ಪರವಾಗಿ ಹೋರಾಡಿ ಜಯಶೀಲರಾಗಿದ್ದು. ಇಂತಹ ಅನೇಕ ಹೋರಾಟದಿಂದ ಗಾಂಧೀಜಿಯವರು ಇತರರಿಗೆ ಮಾದರಿಯಾಗುತ್ತಾರೆ.

ಅವರ ಸಾಮಾಜಿಕ ಕಳಕಳಿ, ಕಾರ್ಮಿಕ ಪರ ಹೋರಾಟ, ಆಫ್ರಿಕಾದಲ್ಲಿ ಅನುಭವಕ್ಕೆ ಬಂದ ಸತ್ಯಸಂಗತಿ ಇತ್ಯಾದಿಗಳನ್ನು ಭಾರತದ ಜನತೆಗೆ ತಿಳಿಸಲು ಪ್ರಯತ್ನಿಸಿದಾಗ ಭಾರತದ " ಅಮೃತಬಜಾರ್‌" ಪತ್ರಿಕೆ ಇವರ ಮನವಿಯನ್ನು ತಿರಸ್ಕರಿಸಿದ್ದು ಖೇದದ ಸಂಗತಿಯೇ ಸರಿ. ಆದರೆ, ಇದೇ ವಿಚಾರವನ್ನು ಆಂಗ್ಲರ ಒಡೆತನದ ಪತ್ರಿಕೆಗಳಾದ "ದಿ ಸ್ಟೇಟ್‌ಮ್ಯಾನ್" ಮತ್ತು "ಇಂಗ್ಲೀಷ್‌ಮ್ಯಾನ್‌" ಪತ್ರಿಕೆಗಳು ಗಾಂದೀಜಿಯವರ ವಿಚಾರಗಳನ್ನು ಪ್ರಕಟಿಸಲು ಮುಂದೆ ಬಂದವು. ಅವರ ಬರವಣಿಗೆಯ ಅಸ್ಪೃಶ್ಯರ ಹೋರಾಟದ ನಾಯಕನಿಗೆ ಸಿಕ್ಕ ಫಲವೇ ಎಂದು ಕರೆಯಬಹುದಲ್ಲವೇ...

ವಿಪರ್ಯಾಸವೆಂದರೆ ಇಂದಿನ ದಿನಗಳಲ್ಲಿ ಗಾಂಧೀಜಿಯವರ ಹೋರಾಟ, ವಿಚಾರಗಳು ಯಾವ ರೀತಿ ಉಳಿದುಕೊಂಡಿವೆ ಎಂಬುದಾಗಿದೆ. ಅವುಗಳ ಅರ್ಥೈಸುವಿಕೆ ಹೇಗೆ? ನಿಜವಾದ ಸಾಮಾಜಿಕ ಕಳಕಳಿ ಎಂದರೇನು? ಎಂಬುದು ಇಂದಿಗೆ ನಮ್ಮನ್ನು ಕಾಡುತ್ತಿರುವ ಯಕ್ಷಪ್ರಶ್ನೆಗಳಾಗಿವೆ.

ಗಾಂಧೀಜಿ ಬಯಸಿದ್ದು ಗ್ರಾಮ ಸ್ವರಾಜ್ಯ, ಆತ್ಮಾಭಿನಾವುಳ್ಳ ಸರ್ವತಂತ್ರ ಸ್ವತಂತ್ರ ದೇಶ. ಆದ್ರೆ, ಅದು ಇಂದು ನನಸಾಗಿಲ್ಲ. ಸ್ವಾತಂತ್ರೈ ಹೋರಾಟದಲ್ಲಿ ಭಾಗಿಯಾಗಿ ದಶಕಗಳ ಕಾಲ ದೇಶವಾಳಿದ ಕಾಂಗ್ರೆಸ್ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಾ ಕಾಲಹರಣ ಮಾಡಿದಷ್ಟೇ ಶಕ್ತವಾಯಿತು.

ಉಳಿದ ಪಕ್ಷಗಳು ಗಾಂದೀಜಿಯವರ ಚಿಂತನೆಗಳನ್ನು ಅಲ್ಲಗೆಳೆಯಲೂ ಇಲ್ಲ. ಪುರಸ್ಕರಿಸಿಯೂ ಇಲ್ಲ. ಕೆಲವೊಮ್ಮೆ ತಮ್ಮ ಲಾಭಕ್ಕೆ ಗಾಂಧೀಜಿಯವರ ತತ್ವಕ್ಕೂ ನಮ್ಮ ತತ್ವಕ್ಕೂ ಸಾಮ್ಯತೆ ಇದೆ ಅನ್ನುವ ಅನುಕೂಲ ಸಿಂಧು ರಾಜಕಾರಣ ಮಾಡತೊಡಗಿದವು.
ಒಟ್ಟಿನಲ್ಲಿ ಗಾಂಧೀಜಿ ವಿಚಾರಧಾರೆಗಳಿಗೆ ಹಲವು ರಾಜಕೀಯ ಪಕ್ಷಗಳಿಂದ ತಿಲಾಮಜಲಿ ಬಿದ್ದದಂತೂ ಸತ್ಯ.

ಸ್ವಾತಂತ್ರ ಚಳುವಳಿ ಸಂದರ್ಭದಲ್ಲಿ ತೀವ್ರಗಾಮಿಗಳಾಗಿದ್ದ ಭಗತ್ ಸಿಂಗ್, ಚಂದ್ರಶೇಖರ್‍ ಆಜಾದ್, ನೇತಾಜಿ ಹಾಗೂ ಅರವಿಂದ್ ಘೋಷ್ ರಂತಹ ಕ್ರಾಂತಿಕಾರಿಗಳಿಗೆ ಗಾಂಧೀಜಿಯವರು ಮಣೆ ಹಾಕಲಿಲ್ಲ. ಭಗತ್‌ ಸಿಂಗ್ ಮರಣ ದಂಡನೆಯನ್ನು ತಪ್ಪಿಸಲು ಗಾಂಧೀಜಿಯವರು ಯಾವುದೇ ರೀತಿಯ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಎಂಬುದು ಎಡಪಂಥೀಯ ಹಾಗೂ ಅವರ ಬೆಂಬಲವಿರುವ ಸಂಘಟನೆಗಳ ವಾದವಾಗಿದೆ.

ಪೆರಿಯಾರ್‍, ಜ್ಯೋತಿಬಾಪುಲೆ ಹಾಗೂ ನಾರಾಯಣಗುರು ಅವರಂತಹ ಅನೇಕ ಧೀಮಂತರು ಈ ಸಮಾಜದ ಬದಲಾವಣೆಗೆ ಬಹುವಾಗಿ ಪ್ರಯತ್ನಿಸಿದ್ದರು. ಶತಮಾನಗಳ ಹಿಂದೆಯೇ ಬುದ್ಧ ಬಸವಣ್ಣರೂ ಸಮಾಜದ ಡೊಂಕು ತಿದ್ಧಲು ಪ್ರಯತ್ನಿಸಿದ್ದರು. ಅಂತಹವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಗಾಂದೀಜಿಯವರಿಗೆ ರವೀಂದ್ರನಾಥರು "ಮಹಾತ್ಮ" ಎಂಬ ಬಿರುದು ನೀಡಿದ್ದು ಅತಿಶಯೋಕ್ತಿಯೇನಲ್ಲ.

- ಬಾಲರಾಜ್ ಡಿ.ಕೆ