ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು

ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು

Comments

ಬರಹ

ಸಂಘಪರಿವಾರದ ಮುಖವಾಣಿಯಂತಿರುವ ಕನ್ನಡ ದಿನಪತ್ರಿಕೆಯೊಂದರ ಓದುಗರ ಪತ್ರಗಳ ಅಂಕಣದಲ್ಲಿ ಇತ್ತೀಚೆಗೆ ಅಮೆರಿಕದ ಟೆಕ್ಸಾಸಿನಿಂದ ವೆಂಕಟೇಶ್ ಎಂಬುವರು ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳನ್ನು ಹಾಕಿದ್ದಾರೆ. ಆ ಪ್ರಶ್ನೆಗಳು ಕ್ರಿಶ್ಚಿಯನ್ನರನ್ನೇ ಕುರಿತಿರುವಂತೆ ತೋರುತ್ತದೆ. ನಾನೇನೂ ಬುದ್ಧಿಜೀವಿಯಲ್ಲ, ಹಾಗೆಂದರೇನೆಂದೂ ನನಗೆ ತಿಳಿಯದು. ನನ್ನ ಅನ್ನವನ್ನು ನಾನೇ ದುಡಿದು ತಿನ್ನುತ್ತಿರುವುದರಿಂದ ನಾನು ಶ್ರಮಜೀವಿಯಾಗಿದ್ದೇನೆ. ನಾನು ಕ್ರೈಸ್ತ ಧರ್ಮವನ್ನು ಆಚರಿಸುತ್ತಿರುವುದರಿಂದ ಈ ಪ್ರಶ್ನೆಗಳಿಗೆ ಉತ್ತರಿಸಲು ಅರ್ಹ ಎಂದುಕೊಂಡಿದ್ದೇನೆ.
ಮೃದುಧೋರಣೆಯಲ್ಲಿದ್ದ ನನ್ನ ಉತ್ತರಗಳನ್ನು ಆ ಪತ್ರಿಕೆಗೆ ಕಳಿಸಿದ್ದೆನಾದರೂ ಅವು ಪ್ರಕಟಗೊಳ್ಳಲಿಲ್ಲ. ಅಷ್ಟೇ ಏಕೆ ಎಷ್ಟೋ ದಿನಗಳಿಂದಲೂ ಆ ಪತ್ರಿಕೆಯು ಒಂದೇ ಬದಿಯ ಧೋರಣೆಯುಳ್ಳ ಸುದ್ದಿ ಮತ್ತು ಪತ್ರಗಳನ್ನೇ ಪ್ರಕಟಿಸುತ್ತಿರುವುದರಿಂದ ಇನ್ನೊಂದು ಬದಿಯಲ್ಲಿರುವ ನನ್ನಂಥವರ ಪತ್ರ ಪ್ರಕಟವಾಗುವ ನಿರೀಕ್ಷೆಯೂ ನನ್ನಂಥವರಿಗಿಲ್ಲ.
ಆ ಪತ್ರಿಕೆಯಲ್ಲಿದ್ದಂಥವೇ ಕೆಲ ಪ್ರಶ್ನೆಗಳು ಸಂಪದದಲ್ಲೂ ಕಂಡಿದ್ದವು. ಅವುಗಳಲ್ಲಿ ಹಲವು ಸಜ್ಜನಿಕೆಯ ಮೇರೆ ಮೀರಿದ್ದರಿಂದಲೂ ಮತ್ತೂ ಕೆಲವು ಖಾಲಿ ಬಿಂದಿಗೆಗಳ ಶಬ್ದ ಮಾಡುತ್ತಿದ್ದರಿಂದಲೂ ಅವನ್ನು ಉದಾಸೀನ ಮಾಡಿದ್ದೆ. ಈ ಪತ್ರಿಕೆಯಲ್ಲಿ ಕೇಳಲಾದ ಕೆಲ ಪ್ರಶ್ನೆಗಳು ಅಂಥವೇ ಆಗಿದ್ದರೂ ಅದೇ ಧಾಟಿಯಲ್ಲಿ ಉತ್ತರಿಸುವುದು ಅನಿವಾರ್ಯವಾಗಿದೆ. ನನ್ನ ಕೆಲ ಉತ್ತರಗಳಲ್ಲಿ ಕೆಲ ಪ್ರಶ್ನೆಗಳೂ ಒಡಮೂಡಿವೆ, ಅಮೆರಿಕದ ವೆಂಕಟೇಶ್ ಅವರು ಅವಕ್ಕೆ ಉತ್ತರಿಸಿದರೆ ನನಗೂ ಸಂತೋಷ.

೧. ಕ್ರಿಶ್ಚಿಯನ್ನರಿಗೆ ಯೇಸುವಿಗಿಂತ ಮೊದಲು ದೇವರೇ ಇರಲಿಲ್ಲವೇ?
ನಾವು ಕ್ರಿಶ್ಚಿಯನ್ನರು ಸರ್ವಶಕ್ತನೂ ಮಹಿಮಾನ್ವಿತನೂ ಆದ ಏಕದೇವರನ್ನು ಪೂಜಿಸುತ್ತೇವೆ. ಯೇಸುಕ್ರಿಸ್ತನು ಅದೇ ಸರ್ವಶಕ್ತದೇವರ ಮನುಷ್ಯಾವತಾರವೆಂದು ನಂಬುವುದರಿಂದ ಆತನನ್ನು ದೇವಪುತ್ರನೆಂದು, ದೇವರಾತ್ಮನೆಂದು ಮಾತ್ರವಲ್ಲ ಆತನೇ ಸ್ವತಃ ದೇವರೆಂದು ಆರಾಧಿಸುತ್ತೇವೆ. ದೇವರು, ದೇವಪುತ್ರ ಮತ್ತು ದೇವರಾತ್ಮ ಎಂಬ ಭಾವಗಳ ಸಂಮಿಶ್ರವೇ ಪರಮತ್ರಿತ್ವ Holy Trinity ಎಂಬ ಪರಿಕಲ್ಪನೆಯಾಗಿದೆ.

೨. ವಿಗ್ರಹಾರಾಧನೆಯನ್ನು ವಿರೋಧಿಸುವ ಕ್ರಿಶ್ಚಿಯನ್ನರಿಗೆ ಯೇಸುವಿನ ವಿಗ್ರಹ ಏಕೆ, ಶಿಲುಬೆ ಏಕೆ?
ಶಿಲುಬೆ ಮತ್ತು ಯೇಸುವಿನ ಮೂರ್ತಿಗಳನ್ನು ಕಂಡಾಗ ನಮಗೆ ದೇವರ ಅಪಾರವಾದ ಪ್ರೀತಿ ತ್ಯಾಗ ಮತ್ತು ಬಲಿದಾನಗಳ ಸ್ಮರಣೆಯಾಗುತ್ತದೆ. ಆದ್ದರಿಂದ ಶಿಲುಬೆ ನಮ್ಮ ದೈನಂದಿನ ಬದುಕಿನ ಮೂಲಚಿಹ್ನೆಯಾಗುತ್ತದೆ. ನಮ್ಮ ಮನದಲ್ಲೂ ಮನೆಯಲ್ಲೂ ದೇಹದಲ್ಲೂ ದೇಗುಲದಲ್ಲೂ ಶಿಲುಬೆಯೇ ಲಾಂಛನವಾಗಿರುವುದರಲ್ಲಿ ತಪ್ಪೇನು? ನಾವು ಅವುಗಳನ್ನು ತ್ಯಾಗಪ್ರೀತಿಗಳ ಸಂಕೇತವಾಗಿ ಭಕ್ತಿಯಿಂದ ಕಾಣುತ್ತೇವೆ ಹೊರತು ಆರಾಧಿಸುವುದಿಲ್ಲ.

೩. ಶಿಲುಬೆಯನ್ನು ಕೊರಳಿಗೆ, ಕಾರು, ವ್ಯಾನು, ವಾಹನಗಳಲ್ಲಿ ಹಾಕಿಕೊಂಡು ಅದಕ್ಕೆ ನಮಿಸಿ ಮುತ್ತುಕೊಟ್ಟರೆ ಏನರ್ಥ?
ಮೇಲಿನ ಉತ್ತರವನ್ನೇ ನೋಡಿ.

೪. ಮತಾಂತರ ಆದಮೇಲೆ ನಮ್ಮ ಕುಂಕುಮ, ಸೀರೆ, ಕಾಲುಂಗುರ, ಬಳೆ, ಗೆಜ್ಜೆ, ತಾಳಿ, ಬಿಳಿಪಂಚೆ ಇವೆಲ್ಲ ಯಾಕೆ? ನಮ್ಮ ದೇವರು, ಧರ್ಮವನ್ನೇ ದ್ವೇಷಿಸಿ ಹೋದಮೇಲೆ “ನಮ್ಮದನ್ನು” ಯಾಕೆ ಬಳಸುತ್ತೀರಿ?
. . . ದ್ವೇಷಿಸಿ ಹೋದಮೇಲೆ ಎನ್ನುವುದನ್ನು ಬಿಟ್ಟುಹೋದ ಮೇಲೆ ಎಂದು ತಿದ್ದಿಕೊಂಡರೆ ಒಳ್ಳೆಯದು. ಕುಂಕುಮ, ಸೀರೆ, ಕಾಲುಂಗುರ, ಬಳೆ, ಗೆಜ್ಜೆ, ತಾಳಿ, ಬಿಳಿಪಂಚೆ ಇವೆಲ್ಲ ಸಂಸ್ಕೃತಿಯ ಒಂದು ಭಾಗ ಅಲ್ಲವೇ? ಅವು ಹೇಗೆ ಧರ್ಮದ ಪ್ರತೀಕವಾಗುತ್ತವೆ. ನಿಮ್ಮ ಪಂಚೆಯನ್ನು ನಾವು ಬಳಸುತ್ತಿದ್ದೇವೆ ಎಂದರೆ ತಪ್ಪಾಗುತ್ತದೆ, ನಾವು ನಮ್ಮ ಪಂಚೆಯನ್ನೇ ಬಳಸುತ್ತಿದ್ದೇವೆ. ಅಂದಹಾಗೆ ನಮ್ಮ ದೇಶವನ್ನು ಬಿಟ್ಟುಹೋಗಿ ಅಮೆರಿಕದಲ್ಲಿರುವ ನೀವು ತಲೆ ಬೋಳಿಸಿಕೊಂಡು ಪಂಚೆಯುಟ್ಟು ಅರೆಬೆತ್ತಲೆಯಾಗಿದ್ದೀರಾ ಅಥವಾ ಪ್ಯಾಂಟು ಶರಟು ತೊಟ್ಟುಕೊಂಡಿದ್ದೀರಾ?

೫. ಗಂಡಸು-ಗಂಡಸು ಹೆಂಗಸು-ಹೆಂಗಸು ಮದುವೆಯಾಗುವ ಪದ್ಧತಿಗೆ ಚರ್ಚುಗಳೇ ಒಪ್ಪಿಗೆ ಕೊಟ್ಟಮೇಲೆ ನೈತಿಕತೆ ಎಲ್ಲಿ ಉಳಿಯಿತು?
ಗಂಡಸು-ಗಂಡಸು ಹೆಂಗಸು-ಹೆಂಗಸು ಮದುವೆಯಾಗುವ ಪದ್ಧತಿಯನ್ನು ಚರ್ಚು ಒಪ್ಪುವುದಿಲ್ಲ. ಆದರೆ ಅದೇ ಸಂದರ್ಭದಲ್ಲಿ ಚರ್ಚು ನೆಲದ ನಿಯಮವನ್ನು ಗೌರವಿಸುತ್ತದೆ. ಸ್ಥಳೀಯ ಸರ್ಕಾರಗಳು ಸ್ಥಳೀಯ ಸಂಸತ್ತುಗಳು ಈ ಅನಿಷ್ಟ ಪದ್ಧತಿಯನ್ನು ಸುದೀರ್ಘ ಚರ್ಚೆಯ ನಂತರ ಮಾನ್ಯ ಮಾಡಿದಾಗ ಚರ್ಚು ಗೋಣು ಅಲ್ಲಾಡಿಸಿದೆಯೇ ಹೊರತು ಅದು ಮಾನ್ಯವೆಂದು ತಾನೆಂದೂ ಫರ್ಮಾನು ಹೊರಡಿಸಿಲ್ಲ. ಸೀಜರನದನ್ನು ಸೀಜರನಿಗೆ ಸಲ್ಲಿಸು ಎಂದು ಯೇಸುಕ್ರಿಸ್ತನೇ ಹೇಳಿದ್ದಾನೆ.

೬. ಮಾನವನಾಗಿದ್ದ ಯೇಸು ಸತ್ತು ಮತ್ತೆ ಹುಟ್ಟಿಬರುತ್ತಾನೆ ಎನ್ನುವುದಾದರೆ ಪುನರ್ಜನ್ಮದಲ್ಲಿ ನಂಬಿಕೆ ಇದೆ ಎಂದಾಯಿತು. ಹಾಗಾದರೆ ಹಿಂದೂಗಳ ಜನ್ಮ ಕಲ್ಪನೆಗೆ ಯಾಕೆ ಕಲ್ಲುಹಾಕುತ್ತೀರಿ?
ಏಳೇಳುಜನ್ಮ ಕ್ರಿಮಿಯಾಗಿ ಹುಟ್ಟುವ ಅಥವಾ ಹಿಂದಿನ ಜನ್ಮದಲ್ಲಿ ನಾಯಿಯಾಗಿದ್ದು ಮುಂದಿನ ಜನ್ಮದಲ್ಲಿ ಬೆಕ್ಕಾಗಿ ಹುಟ್ಟುವ ಪ್ರಕ್ರಿಯೆಗಳನ್ನು ನಾವು ನಂಬುವುದಿಲ್ಲ. ಕ್ರಿಶ್ಚಿಯನ್ನರ ನಂಬಿಕೆ ಇರುವುದು ಪುನರ್ಜನ್ಮದಲ್ಲಿ ಅಲ್ಲ, ಪುನರುತ್ಥಾನದಲ್ಲಿ. ಮನುಷ್ಯರೂಪದ ಯೇಸುಕ್ರಿಸ್ತ ಸತ್ತು ದೇವಸ್ವರೂಪಿಯಾಗಿ ಕಾಣಿಸಿಕೊಳ್ಳುವುದೇ ಪುನರುತ್ಥಾನ. ಕ್ರೈಸ್ತದೀಕ್ಷೆ ಪಡೆದ ಮರುಗಳಿಗೆಯೇ ಮನುಷ್ಯನಿಗೆ ಮರುಹುಟ್ಟು ಪ್ರಾರಂಭ ಎನ್ನುವುದು ನಮ್ಮ ಸಿದ್ಧಾಂತ.

೭. ಯೇಸು ೧೮ ರಿಂದ ೩೨ನೇ ವಯಸ್ಸಿನವರೆಗೆ ಎಲ್ಲಿದ್ದ? ವ್ಯಾಟಿಕನ್ ಏಕೆ ಬಾಯಿ ಬಿಡುತ್ತಿಲ್ಲ? ಇದರ ಬಗ್ಗೆ ಪಶ್ಚಿಮದ ಕ್ರಿಶ್ಚಿಯನ್ನರ ಪ್ರಶ್ನೆಗೆ ಉತ್ತರ ಕೊಡಲಾಗಲಿಲ್ಲ ಯಾಕೆ?
ಎರಡು ಸಾವಿರ ವರ್ಷಗಳ ಹಿಂದೆ ಯೇಸು ತನ್ನ ಯೌವನಾವಸ್ಥೆಯಲ್ಲಿ ಗಿಲ್ಲಿದಾಂಡು ಆಡಿದನೋ, ಉನ್ನತ ವ್ಯಾಸಂಗ ಮಾಡಿದನೋ ಅಥವಾ ತನ್ನಪ್ಪನೊಂದಿಗೆ ಬಡಗಿ ಕೆಲಸ ಮಾಡಿದನೋ ಅದು ಅಮುಖ್ಯ. ಋಷಿಮೂಲ ಹುಡುಕಬಾರದೆನ್ನುತ್ತಾರೆ. ಆದರೆ ಯೇಸುಕ್ರಿಸ್ತನ ಈ ವಿಷಯದಲ್ಲಿ ಬಾಯಿ ಬಿಡಬಾರದಂಥ ಸಂಗತಿ ಏನೂ ಇಲ್ಲ. ಇಂಥ ಪ್ರಶ್ನೆಯನ್ನು ಚಿಕ್ಕ ಮಗೂನೂ ಕೇಳುತ್ತೆ. ಒಂದೂರಲ್ಲಿ ಒಬ್ಬ ರಾಜ ಇದ್ದ ಅಂತ ಪ್ರಾರಂಭಿಸಿ ಎಲ್ಲರೂ ಸುಖವಾಗಿದ್ದರು ಎಂದು ಮುಕ್ತಾಯ ಹಾಡಿದ ಮೇಲೂ ಆಮೇಲೇನಾಯ್ತು ಅನ್ನೋದು ಎಲ್ಲರ ಜಾಯಮಾನ. ಪಶ್ಚಿಮದವರು ವಿಜ್ಞಾನದಲ್ಲಿ ಮುಂದು. ಅವರು ಪ್ರಶ್ನೆ ಮಾಡುವುದರಲ್ಲಿ ಅಸಹಜವೇನೂ ಇಲ್ಲ.

೮. ಯೇಸು ನಳಂದ ವಿಶ್ವವಿದ್ಯಾಲಯದಲ್ಲಿ ಕಲಿತದ್ದು ಸುಳ್ಳೇ?
ಹಾಗೆ ಹೇಳಿಕೊಳ್ಳೋದರಿಂದ ನಿಮ್ಮ ಹಿರಿಮೆ ಹೆಚ್ಚಾಗೋದಿದ್ದರೆ ನಮ್ಮ ಅಭ್ಯಂತರವೇನೂ ಇಲ್ಲ. ಇದರ ಬಗ್ಗೆ ನಿಮ್ಮಲ್ಲೇನಾದರೂ ನಿಖರ ಮಾಹಿತಿ ಇದ್ದರೆ ಬಯಲಿಗಿಡಿ. ಊಹಾಪೋಹಗಳು ಬೇಡ.

೯. ಯೇಸು ಕಾಶ್ಮೀರಕ್ಕೂ ಟಿಬೆಟಿಗೂ ಭುವನೇಶ್ವರದ ದೇವಾಲಯಕ್ಕೂ ಭೇಟಿಕೊಟ್ಟ ಪ್ರೂಫ್ ತೋರಿಸಿದರೆ ನೀವು ಹೇಳುತ್ತಿರುವುದು ಸುಳ್ಳು ಎಂದು ಒಪ್ಪಿಕೊಳ್ಳುತ್ತೀರಾ?
ನೀವು ಹೇಳುತ್ತಿರುವ ಸ್ಥಳಗಳೆಲ್ಲ ಯೇಸುಕ್ರಿಸ್ತನ ಕಾಲದಲ್ಲಿ ಬೌದ್ಧಮತವನ್ನು ಉಚ್ಛ್ರಾಯ ಸ್ಥಿತಿಯಲ್ಲಿ ಅನುಭವಿಸುತ್ತಿದ್ದವು. ಅದೇನೋ ಪ್ರೂಫ್ ಅಂತೀರಲ್ಲ ಅದನ್ನು ತೋರಿಸಿ, ಆಮೇಲೆ ಸುಳ್ಳು ಮತ್ತು ಸತ್ಯಗಳ ನಿಷ್ಕರ್ಷೆ ಮಾಡೋಣ.

೧೦. ಹಿಂದೂಗಳ ಜಾತಿ ಪದ್ಧತಿ ಬಗ್ಗೆ ಮಾತಾಡುವ ಕ್ರಿಶ್ಚಿಯನ್ನರೆ, ನಿಮ್ಮದು ಜಾತಿಯಿಲ್ಲದ ಧರ್ಮ ಅಲ್ಲವೇ? ನಿಜ ಹೇಳಿ ಎಷ್ಟು ಜಾತಿಗಳಿವೆ? (ಎನ್ ಸೈಕ್ಲೋಪೀಡಿಯಾ ಪ್ರಕಾರ ೧೯೫೦ರ ಸುಮಾರಿಗೆ ೨೦೦ಕ್ಕಿಂತ ಹೆಚ್ಚು ಒಳಪಂಗಡಗಳಿದ್ದವು)
ಹೌದು ನಮ್ಮದು ಜಾತಿಯಿಲ್ಲದ ಧರ್ಮ ಎಂದು ನೀವು ಹೇಳುವುದನ್ನು ನಾವು ಹೆಮ್ಮೆಯಿಂದ ಒಪ್ಪುತ್ತೇವೆ. ನಮ್ಮಲ್ಲಿ ಜಾತಿಗಳಿಲ್ಲವೆಂಬುದನ್ನು ನೀವೂ ನಾವೂ ಒಪ್ಪಿಕೊಂಡಮೇಲೆ “ನಿಜ ಹೇಳಿ ಎಷ್ಟು ಜಾತಿಗಳಿವೆ?” ಎಂಬ ನಿಮ್ಮ ಪ್ರಶ್ನೆ ಯಾರನ್ನು ಕುರಿತಾಗಿದೆ? ಎನ್ ಸೈಕ್ಲೋಪೀಡಿಯಾ ಪ್ರಕಾರ ೧೯೫೦ರ ಸುಮಾರಿಗೆ ೨೦೦ಕ್ಕಿಂತ ಹೆಚ್ಚು ಒಳಪಂಗಡಗಳಿದ್ದವು ಎಂದು ಹೇಳಿದ್ದೀರಿ. ಆಗಲಿ ಇದನ್ನು ಕ್ರೈಸ್ತಧರ್ಮದಲ್ಲಿನ ಒಳಪಂಗಡಗಳು ಎಂದು ಪರಿಭಾವಿಸಿಕೊಂಡರೂ, ಒಳಪಂಗಡಗಳು ಜಾತಿಗಳಾಗುವುದಿಲ್ಲ. ಪ್ರದೇಶಭೇದ, ಬೋಧನಾಶೈಲಿ, ಆಚರಣಾಶೈಲಿ, ವಿಭಿನ್ನಸಂಸ್ಕೃತಿಗಳ ಕಾರಣದಿಂದ ಇಂಥ ಒಳಪಂಗಡಗಳು ಉಂಟಾಗುತ್ತವೆ. ಆದರೆ ಎಲ್ಲರಿಗೂ ಆರಾಧ್ಯದೈವ ಯೇಸುಕ್ರಿಸ್ತನೇ. ನಾವು ಪರಸ್ಪರರನ್ನು ಕ್ರಿಶ್ಚಿಯನ್ನರೆಂದೇ ಕರೆದುಕೊಳ್ಳುತ್ತೇವೆ.

೧೧. ಶೇಕಡಾ ೮೦ ಕ್ಕಿಂತಲೂ ಹೆಚ್ಚಾಗಿರುವ ಅಮೆರಿಕದಲ್ಲಿ “ಅತ್ಯಂತ ಪವಿತ್ರವಾದ ಕ್ರಿಶ್ಚಿಯನ್” ಧರ್ಮವನ್ನು ಹೆಚ್ಚಿನವರು ಇಷ್ಟಪಟ್ಟು ಆಚರಿಸುವುದಿಲ್ಲ. ಅವರು ಭಾರತದವರಷ್ಟು ಮೂರ್ಖರಲ್ಲ ಎಂದುಕೊಳ್ಳೋಣವೇ?
ಇಷ್ಟಪಟ್ಟು ಆಚರಿಸುವುದು ಮತ್ತು ಇಷ್ಟಪಡದೇ ಆಚರಿಸುವುದಕ್ಕೆ ನೀವು ಬಳಸಿದ ಮಾನದಂಡ ಎಂತದ್ದೋ ತಿಳಿಯದು. ಧರ್ಮಾಚರಣೆ ತೋರಿಕೆಯದಾಗಿರಬೇಕೋ ಅಥವಾ ಆತ್ಮದ ಒಳಾವರಣಕ್ಕೆ ಸೀಮಿತವಾಗಿರಬೇಕೋ ಎಂಬುದನ್ನು ವಿಶದೀಕರಿಸಿ. ನೀವು ಮೂರ್ಖರಾಗಿರಬಹುದೇನೋ ಆದರೆ ಎಲ್ಲ ಭಾರತೀಯರೂ ಮೂರ್ಖರಲ್ಲ.

೧೨. ಅತ್ಯಂತ ವೈಭವೋಪೇತವಾಗಿ ಕಟ್ಟಿರುವ ಅಮೆರಿಕದ ಚರ್ಚುಗಳು ಯಾಕೆ ಖಾಲಿ ಹೊಡೆಯುತ್ತಿರುತ್ತವೆ?
ಅವು ಖಾಲಿ ಇರುವ ಸಮಯದಲ್ಲಿ ನೀವೇಕೆ ಅಲ್ಲಿಗೆ ಹೋದಿರಿ. ಇರಲಿ ಬಿಡಿ ಅದು ನಿಮ್ಮ ಖಾಸಗಿ ವಿಷಯ. ಅಲ್ಲಿ ನೀವು ಜನಸಂದಣಿಯನ್ನು ನೋಡಬೇಕಾದರೆ ಭಾನುವಾರದಂದು ಪೂಜಾಸಮಯದಲ್ಲಿ ಹೋಗಿ ನೋಡಿರಿ.

೧೩. ಅಮೆರಿಕದ ಚರ್ಚುಗಳನ್ನು ಅಲ್ಲಿನ ಕ್ರಿಶ್ಚಿಯನ್ನರೇ ಯಾಕೆ ಹಿಂದೂ ದೇವಾಲಯಗಳಾಗಿ ಪರಿವರ್ತಿಸುತ್ತಿದ್ದಾರೆ?
ಹೌದೇ, ಅಮೆರಿಕದ ಚರ್ಚುಗಳೆಲ್ಲ ಹಿಂದೂ ದೇವಾಲಯಗಳಾಗುತ್ತಿವೆಯೇ ! ಆಶ್ಚರ್ಯ!

೧೪. ಪಶ್ಚಿಮದ ರಾಷ್ಟ್ರಗಳಲ್ಲಿ ಕ್ರಿಶ್ಚಿಯನ್ನರು ಯಾಕೆ ಸ್ವಯಿಚ್ಛೆಯಿಂದ ಹಿಂದೂ ದೇವಾಲಯಕ್ಕೆ ಬರುತ್ತಾರೆ?
ನಿಮ್ಮ ದೇಶದಲ್ಲಂತೂ ಅವರನ್ನು ನೀವು ಒಳಕ್ಕೆ ಸೇರಿಸಿಕೊಳ್ಳಲ್ಲ, ಅದಕ್ಕೇ ಅವರ ದೇಶದಲ್ಲೇ ಹೋಗಿಬರ್ತಾರೆ. ನಾವೂನೂ ಬೇಲೂರು, ಹಳೆಬೀಡು, ಬಾದಾಮಿ, ಐಹೊಳೆ, ಪಟ್ಟದಕಲ್ಲು ಅಲ್ಲಿಗೆಲ್ಲ ಹೋಗ್ತೀವಿ ಅಣ್ಣ. ಈ ಎರಡೂ ವಿಷಯಗಳು ನಿಮಗೆ ಹೆಮ್ಮೆ ತರುತ್ತೋ, ನಾಚಿಕೆ ತರುತ್ತೋ?

೧೫. ಅಮೆರಿಕದ ಸಂಸತ್ತಿನಲ್ಲಿ ಅಲ್ಲಿಯ ಕ್ರಿಶ್ಚಿಯನ್ನರೇ ಹಿಂದೂ ಸಂತನನ್ನು ಮಂತ್ರಪಠನಕ್ಕೆಂದು ಕರೆಸಿದ್ದೇಕೆ?
ಈ ವಿಷಯಕ್ಕೆ ಸಂತೋಷ ಪಡೋದು ಬಿಟ್ಟು ಕಣಿ ಕೇಳ್ತಾ ಇದೀರಲ್ಲಾ, ಅವರ ಹೃದಯ ವೈಶಾಲ್ಯಕ್ಕೆ ತಲೆದೂಗಿ ಸ್ವಾಮಿ. ನಮ್ಮ ವಿವೇಕಾನಂದರನ್ನು ಹಾಡಿ ಹೊಗಳಿದ ದೇಶ ಅದು, ಅಲ್ಲಿಂದ ಬಂದ ವಿವೇಕಾನಂದರನ್ನು ನಮ್ಮ ದೇಶದವರು ಹೇಗೆ ಬರಮಾಡಿಕೊಂಡರು ಅನ್ನೋದು ನಿಮಗೆ ಗೊತ್ತಿದ್ದರೆ ತಿಳಿಸ್ತೀರಾ?

೧೬. ಮತಾಂತರಗೊಂಡ ಮೇಲೆ ಎಲ್ಲರೂ ಕ್ರಿಶ್ಚಿಯನ್ನರೇ ಅಲ್ಲವೇ? ಆದರೆ ಕೆಳವರ್ಗದವರನ್ನು ಯಾಕೆ ಹತ್ತಿರ ಸೇರಿಸುವುದಿಲ್ಲ? ದಲಿತ ಕ್ರಿಶ್ಚಿಯನ್ನರು ಎಂದರೆ ಏನರ್ಥ?
ಅಯ್ಯೋ ನಮ್ಮ ದೇವಾಲಯಗಳಿಗೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಇಂಥಾವರು ಬರಬಾರದೆಂದು ನಾವೇನೂ ಬೋರ್ಡು ಹಾಕ್ಕೊಂಡಿಲ್ಲ. “ಹಚಾ, ದೂರ ನಿಂತ್ಕೋ, ಹತ್ತಿರ ಬರಬೇಡ, ಶ್ವಪಚನೇ” ಅಂತಲೂ ಅನ್ನೋದಿಲ್ಲ. ದಲಿತ ಕ್ರಿಶ್ಚಿಯನ್ನರೆಂದು ನಾವು ಯಾರನ್ನೂ ಕರೆಯುತ್ತಿಲ್ಲ. ದಲಿತರಾಗಿದ್ದು ಈಗ ಕ್ರಿಶ್ಚಿಯನ್ನರಾದವರಲ್ಲಿ ತಮ್ಮ ಹಿಂದಿನ ಬದುಕಿನ ಬಗ್ಗೆ ರೂಢಿಗತವಾದ ಕೀಳರಿಮೆ ಬಹುಶಃ ಒಂದು ಪೀಳಿಗೆಯ ನಂತರ ನಿವಾರಣೆಯಾಗುತ್ತೇನೋ ಅನಿಸುತ್ತೆ.

೧೭. ಭಾರತದಲ್ಲಿ ಮೊದಲೇ ಜಾತಿಗಳು ಜಾಸ್ತಿ ಇವೆ, ನೀವ್ಯಾಕೆ ಮತ್ತೆ ಹೊಸ ಜಾತಿಗಳನ್ನು ಹುಟ್ಟುಹಾಕುತ್ತಿದ್ದೀರಾ? ಭಾರತ ಸಂವಿಧಾನವನ್ನೇ ದೂಷಿಸುವ ನಿಮಗೆ ರಿಸರ್ವೇಶನ್ ಕೊಟ್ಟರೂ ದಲಿತ ಕ್ರೈಸ್ತ ಎಂದು ಪ್ರತ್ಯೇಕ ಕೆಟಗರಿ ಕೊಡುವುದರಲ್ಲಿ ಅರ್ಥವೇನಿದೆ?
ನಮ್ಮಲ್ಲಿ ಜಾತಿಸಂಕರ ಇದೆ ಅನ್ನೋದನ್ನ ಒಪ್ಪೋಣ, ಆದರೆ ಹೊಸಜಾತಿಗಳ ಹುಟ್ಟು ಅನ್ನೋದು ನಮ್ಮ ಮಾತಲ್ಲ. ಇನ್ನು ಭಾರತ ಸಂವಿಧಾನದ ಬಗ್ಗೆ ನಮಗೆ ಅಪಾರ ಗೌರವವಿದೆ, ’ಸೀಜರನದನ್ನು ಸೀಜರನಿಗೆ ಸಲ್ಲಿಸು’ ಎನ್ನುವ ಯೇಸುಕ್ರಿಸ್ತನ ಮಾತನ್ನು ನಾವು ಪಾಲಿಸುತ್ತೇವೆ. ಅಲ್ಲದೆ ಸಂವಿಧಾನವನ್ನು ದೂಷಿಸಿ ಕಾನೂನನ್ನು ಕೈಗೆತ್ತಿಕೊಂಡವರು ನಾವಲ್ಲ ನೀವೆಂದು ಘಂಟಾಘೋಷವಾಗಿ ಹೇಳುತ್ತೇವೆ.
ದಲಿತ ಕ್ರೈಸ್ತರ ಕುರಿತ ಉತ್ತರ ಮೇಲೆಯೇ ಇದೆ ನೋಡಿ.

೧೮. ಕರ್ನಾಟಕದಲ್ಲಿ ಅತ್ಯಂತ ಶ್ರೀಮಂತರು ಅಂದರೆ ಕ್ರಿಶ್ಚಿಯನ್ನರು ಎಂದು ಸಮೀಕ್ಷೆ ಹೇಳುತ್ತದೆ. ಹಾಗಾದರೆ ಕಡುಬಡವರನ್ನು ಬಿಟ್ಟರೆ ನಿಮಗೇಕೆ ರಿಸರ್ವೇಶನ್?
ಹೌದು ಅಣ್ಣ, ಕ್ರಿಶ್ಚಿಯನ್ನರು ಹೃದಯಶ್ರೀಮಂತರು. ಆದರೆ ಆರ್ಥಿಕವಾಗಿ ಕಡುಬಡವರೂ ಇದ್ದಾರಣ್ಣ.

೧೯. ಅಮೆರಿಕ, ಯೂರೋಪ್ ಸರ್ಕಾರಗಳು ಚರ್ಚುಗಳನ್ನು ಏಕೆ ದೂರ ಇಡುತ್ತವೆ?
ರಾಜಕೀಯವೇ ಬೇರೆ, ಧರ್ಮವೇ ಬೇರೆ ಎಂಬುದನ್ನು ಅವು ಮನಗಂಡಿವೆ. ನಮ್ಮಲ್ಲಾದರೋ ಸರ್ಕಾರಗಳು ಮಠಾಧಿಪತಿಗಳ ಕಾಲಲ್ಲಿ ಬಿದ್ದು ಹೊರಳಾಡ್ತವೆ, ತತ್ವ ಆದರ್ಶ ಮೌಲ್ಯ ರಾಜನೀತಿ ಎಲ್ಲವನ್ನೂ ಗಾಳಿಗೆ ತೂರಿ ಮಠಗಳನ್ನೇ ಮಾರುತ್ತವೆ, ಪರಭಾರೆ ಮಾಡುತ್ತವೆ, ಗುಡಿಯೊಳಗೆ ನುಗ್ಗಿ ಧಾಂಧಲೆ ನಡೆಸಿ ಹೆಂಗಸರ ಮೇಲೂ ಕೈ ಮಾಡ್ತವೆ, ಅದೇ ನಮ್ಮ ದೌರ್ಭಾಗ್ಯ.

೨೦. ಸರ್ವಧರ್ಮದವರನ್ನೂ ಸಮಾನವಾಗಿ ಕಾಣುವ ನೀವು ನಮ್ಮ ಬಾಲಬಾಲೆಯರು ಕುಂಕುಮ ಬಳೆ ಕಡಗ ಗೆಜ್ಜೆ ಹಾಕುವುದನ್ನು ಯಾಕೆ ವಿರೋಧಿಸುತ್ತೀರಿ?
ಅಯ್ಯೋ ವರ್ಷಕ್ಕೊಮ್ಮೆ ಫ್ಯಾನ್ಸಿ ಡ್ರೆಸ್ ದಿನ ಅದನ್ನು ತಡೆಯೋದಿಲ್ಲ ಸ್ವಾಮಿ. ಉಳಿದಂತೆ ಎಲ್ಲ ದಿನ ಯೂನಿಫಾರ್ಮಿಟಿ ಇರಬೇಕು ಅನ್ತೀವಿ. ಅದು ಸರ್ಕಾರದ ನೀತಿ ಕೂಡಾ. ನಿಮ್ಮವರೇ ನಡೆಸುವ ಶಾಲೆಗಳಲ್ಲೂ ಈ ವಿರೋಧ ಇದೆ. ಬೆಂಗಳೂರಿನಲ್ಲಿರುವ ಬಾಲೆಯರು ಕುಂಕುಮ ಇಟ್ಟುಕೊಳ್ಳೋದಿಲ್ಲ, ಬದಲಿಗೆ ಟ್ಯಾಟೂ ಹಚ್ಚಿಕೊಳ್ಳುತ್ತಾರೆ.

೨೧. ನಿಮ್ಮ ಶಾಲೆಗಳಲ್ಲಿ ನಮ್ಮ ಮಕ್ಕಳು ಕನ್ನಡ (ಅಥವಾ ಯಾವುದೇ ಪ್ರಾಂತೀಯ ಭಾಷೆ) ಮಾತಾಡಿದರೆ ೧೦, ೨೦, ೫೦, ೧೦೦ ರೂಪಾಯಿ ದಂಡ ಹಾಕುವುದು ಅಪರಾಧ ಅಲ್ಲವೇ?
ಕ್ರಿಶ್ಚಿಯನ್ ಶಾಲೆಗಳು ಮಾತ್ರವಲ್ಲ ಇತರರು ನಡೆಸುವ ಎಲ್ಲ ಆಂಗ್ಲಮಾಧ್ಯಮದ ಶಾಲೆಗಳಲ್ಲೂ ಇದೇ ಗೋಳು. ಅಂಥ ಶಾಲೆಗೆ ಯಾಕೆ ನಿಮ್ಮ ಮಕ್ಕಳನ್ನು ಸೇರಿಸುತ್ತೀರಿ?

೨೨. ನೀವು ಮಾತ್ರ ಶಿಲುಬೆ ಧರಿಸಬಹುದು (ಪ್ರತಿಯೊಬ್ಬ ಸಿಸ್ಟರ್ ದೊಡ್ಡದಾದ ಶಿಲುಬೆ ಧರಿಸುತ್ತಾರೆ) ನಮ್ಮ ಮಕ್ಕಳು ಬೊಟ್ಟು ಇಡಬಾರದೇ?
ಸಿಸ್ಟರ್ ಆದವರಿಗೆ ಶಿಲುಬೆ ಸಂನ್ಯಾಸದ ಸಂಕೇತ. ನಿಮ್ಮ ಮಕ್ಕಳಿಗೆ ಬೊಟ್ಟು ಯಾವ ಸಂಕೇತ ಹೇಳುವಿರಾ? ಸರ್ಕಾರದ ಶೈಕ್ಷಣಿಕ ನೀತಿಯಂತೆ ಶಾಲೆಗಳಲ್ಲಿ ಸಮಾನತೆ ನಿಯಮ ಇದೆ. ಕುಲ ಅಂತಸ್ತು ಐಶ್ವರ್ಯ ಜಾತಿ ಧರ್ಮಗಳು ಮಕ್ಕಳ ಮನಸ್ಸಿನಲ್ಲಿ ತರತಮ ಭಾವ ತಾರದಿರಲೆಂದು ಒಂದು ಯೂನಿಫಾರ್ಮಿಟಿ ಪಾಲಿಸಲಾಗುತ್ತದೆ. ನಮ್ಮ ಶಾಲೆಗಳಲ್ಲಿ ನಿಮ್ಮವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಬೋಧಕವರ್ಗಕ್ಕೆ ಯಾರಾದರೂ ಕುಂಕುಮ ಬಳೆ ಇತ್ಯಾದಿ ಧರಿಸಬೇಡಿ ಎಂದಿದ್ದಾರೆಯೇ?
೨೩. ನಿಮ್ಮ ಧರ್ಮ ಅಷ್ಟು ಗಟ್ಟಿಯಾಗಿ ಸತ್ಯದಿಂದ ಕೂಡಿದ್ದರೆ ಬೇರೆ ಧರ್ಮದವರೇ ಬಂದು ಸೇರಿಕೊಳ್ಳುತ್ತಿದ್ದೆವು. ನೀವು ಮನೆಮನೆಬಾಗಿಲಿಗೆ (ಭಿಕ್ಷುಕರ ಥರ) ಬಂದು ಹಣದ ಆಮಿಷ ತೋರಿಸುವ ಅವಶ್ಯಕತೆ ಇತ್ತೇ? ಅಥವಾ ಹೊಸ ತರದ ಉದ್ಯೋಗ ಆವಿಷ್ಕಾರವೇ?
ವೆಂಕಟೇಶ್ ಅವರೇ, ಬೆಂಗಳೂರಿನ ಅಥವಾ ಮಂಗಳೂರಿನ ಬಾಲಕಯೇಸು ದೇವಾಲಯ, ಬೆಂಗಳೂರಿನ ಸಂತ ಮೇರಿ ಬೆಸಿಲಿಕಾ, ಕಾರ್ಕಳದ ಸಂತ ಲಾರೆನ್ಸರ ಪುಣ್ಯಕ್ಷೇತ್ರ, ದೋರನಹಳ್ಳಿಯ ಸಂತ ಅಂತೋಣಿ ಪುಣ್ಯಕ್ಷೇತ್ರ, ಹರಿಹರದ ಸತ್ಯಮ್ಮ ಮೇರಿಮಾತೆಯ ಪುಣ್ಯಕ್ಷೇತ್ರ, ತಂಜಾವೂರಿನ ವೇಲಾಂಕಣ್ಣಿ ಮೇರಿಮಾತೆಯ ಪುಣ್ಯಕ್ಷೇತ್ರ, ಬೊಂಬಾಯಿಯ ಮೇರಿ ಚರ್ಚ್ ಇಲ್ಲೆಲ್ಲ ಕ್ರಿಶ್ಚಿಯನ್ನರಿಗಿಂತ ಹೆಚ್ಚಾಗಿ ಬೇರೆ ಧರ್ಮದವರೇ ಬರುತ್ತಾರೆ ಎಂಬುದನ್ನು ನೀವೇ ಖುದ್ದಾಗಿ ನೋಡಿ ತಿಳಿದುಕೊಳ್ಳಬಹುದು.
ಮನುಷ್ಯನನ್ನು ಮನುಷ್ಯನಂತೆ ಕಾಣು ಎಂಬ ಯೇಸುನುಡಿಯನ್ನು ಜಗತ್ತಿನೆಲ್ಲೆಡೆ ಸಾರುವುದಕ್ಕೆ ನಾವು ಬದ್ದರಾಗಿದ್ದೇವೆ. ನನಗೆ ಸತ್ಯದ ಸಾಕ್ಷಾತ್ಕಾರವಾಯಿತು, ಬಾ ನೀನೂ ಅದರಲ್ಲಿ ಪಾಲುಗಾರನಾಗು ಎನ್ನುವುದು ಉದಾತ್ತತೆಯ ಪರಮಾವಧಿ. ಧರ್ಮಪ್ರಚಾರ ಎನ್ನುವುದು ಎಲ್ಲ ಕಾಲದೇಶಗಳಲ್ಲೂ ಅವಿರತವಾಗಿ ನಡೆದು ಬಂದಿದೆ. ಸಾಮ್ರಾಟ ಅಶೋಕನಿಂದ ಹಿಡಿದು ಪುರಂದರ ಕನಕರವರೆಗೆ ಮಾತ್ರವಲ್ಲ ಪ್ರಭುಪಾದ, ನಾರಾಯಣಗುರುವಿನ ವರೆಗೆ ಎಲ್ಲರೂ ಮಾಡಿದ್ದು ಅದನ್ನೇ. “ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸು, ಸೆರೆಯೊಳ್ ಸಿಲುಕಿದ ಅನಾಥರಂ ಬಿಡಿಸು . . “ ಎಂಬ ಮಾತೃವಾಣಿಯಂತೆ, ಅಸಹಾಯಕರಿಗೆ ನೆರವು, ಶೋಷಿತರಿಗೆ ಸಾಂತ್ವನ, ರೋಗಿಗಳಿಗೆ ಉಪಚಾರ, ಖಿನ್ನರಿಗೆ ಧೈರ್ಯ, ಅಪರಾಧಿಗಳಿಗೆ ಆತ್ಮೋದ್ಧಾರ, ದುಶ್ಚಟದಾಸರಿಗೆ ಹಿತನುಡಿ ಮುಂತಾದವನ್ನು ನೀನು ಮಾಡಿದೆಯಾದರೆ ಅವೆಲ್ಲವೂ ತನಗೆ ತಲುಪುತ್ತದೆಂದು ಯೇಸುವಾಣಿ ಹೇಳುತ್ತದೆ. ಇದೇನೂ ನಮ್ಮ ಉದ್ಯೋಗವಲ್ಲ ಸ್ವಾಮಿ, ನಮ್ಮ ಧರ್ಮ.
ಅದು ಹಾಗಿರಲಿ, ನೀವೇ ಭಿಕ್ಷುಕರ ಥರ ಅಮೆರಿಕಕ್ಕೆ ಹೋಗಿದ್ದಲ್ಲದೆ ಅಲ್ಲಿಂದ ಈ ರೀತಿ ಬರೆಯೋದು ಯಾಕೋ ಸರಿಕಾಣೊಲ್ಲ.

೨೪. ಮತಪ್ರಚಾರಕ್ಕಾಗಿ ಹಿಂದೂಗಳ ಮನೆಬಾಗಿಲಿಗೆ ನಿಮ್ಮ ದೂತರನ್ನು ಕಳಿಸುತ್ತೀರಲ್ಲ, ಮುಸ್ಲಿಮರ ಮನೆಬಾಗಿಲಿಗೆ ಯಾಕೆ ಕಳಿಸುವುದಿಲ್ಲ? ಸತ್ಯದ ದಾರಿಯಲ್ಲಿ ಭಯವೇ?
ಯೇಸುವಾಣಿಯನ್ನು ಸಾರುವಲ್ಲಿ ಯಾವುದೇ ತಾರತಮ್ಯವಿಲ್ಲ. ಕ್ರೈಸ್ತರು ಮತ್ತು ಮುಸಲ್ಮಾನರಲ್ಲಿ ಸಾಂಸ್ಕೃತಿಕ ಭೇದವಿರಬಹುದೇ ಹೊರತು ಧರ್ಮದ ಕುರಿತಂತೆ ಒಂದು ಅವಿನಾಭಾವ ಸಂಬಂಧವಿದೆ. ಪವಿತ್ರ ಕುರಾನಿನ ಪ್ರಕಾರ ಮುಸಲ್ಮಾನರು ಯೇಸುಕ್ರಿಸ್ತನನ್ನು “ನಬಿ” (ದೇವರ ಸಂದೇಶವಾಹಕ) ಎಂದೂ, ಕಡೆಯ ದಿನದಂದು ಆತನೇ ಅಂತಿಮ ತೀರ್ಪು ನೀಡುತ್ತಾನೆಂದೂ ನಂಬುತ್ತಾರೆ. ಅಲ್ಲದೆ ವಯಸ್ಸಾದ ಮುಸಲ್ಮಾನರಿಗೆ ಕ್ರಿಶ್ಚಿಯನ್ ವೃದ್ದಾಶ್ರಮಗಳಲ್ಲೇ ನೆಮ್ಮದಿ ಸಿಗುತ್ತದೆ.

೨೫. ಮ್ಯಾಕ್ಸ್ ಮುಲ್ಲರ್ ಪ್ರತಿಪಾದಿಸಿದ್ದೇನು?
ಗೊತ್ತಿದ್ದರೆ ತಿಳಿಸಿರಿ. ಹಾಗೆಯೇ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಕರ್ಮಠರ ಬಗ್ಗೆ ಹೇಳಿದ್ದೇನು ಅನ್ನೋದರ ಬಗ್ಗೆಯೂ ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet