ದ್ವಿರುಕ್ತಿ ದ್ವಿರುಕ್ತಿ - ೩ : ಚಾತಕ

ದ್ವಿರುಕ್ತಿ ದ್ವಿರುಕ್ತಿ - ೩ : ಚಾತಕ

[ ನನ್ನ ಸೈಟಿನಿಂದ ಬರಹವನ್ನು ಆಗಾಗ ತೆಗೆದು ಸಂಪದಕ್ಕೆ ಹಾಕುವ (ದುರ್)ಅಭ್ಯಾಸ ಬೆಳೆದುಬಿಟ್ಟಿದೆ. ಇದೂ ಸೇರಿ ಮೂರನೆಯ ಬಾರಿ ಹಾಗೆ ಹಾಕುತ್ತಿರುವುದು. ಅಂತಲೆ, ಇದು ದ್ವಿರುಕ್ತಿ; ಮುಂದೂ ಮಾಡಬಹುದಾದ್ದರಿಂದ ಇದು ಒಂದು ಮಾಲಿಕೆ; ಸದ್ಯದ್ದು ಮೂರನೆಯದು ]

ಕಾತರಿಸಿ ಕಾಯುವವರನ್ನು ಚಾತಕನಿಗೆ ಹೋಲಿಸುವುದು ಕವಿಸಮಯ. ಚಾತಕ ಪಕ್ಷಿಯು ನೆಲದ ಮೇಲೆ ಬಿದ್ದ ನೀರನ್ನು ಕುಡಿಯುವುದಿಲ್ಲವಂತೆ. ಮಳೆಯ ಹನಿ ನೇರವಾಗಿ ಗಂಟಲೊಳಗೆ ಇಳಿದರೆ ನೀರುಂಟು, ಇಲ್ಲವಾದರಿಲ್ಲ. ಅಂತಲೆ, ಚಾತಕವು ಮಳೆಯ ಮೋಡವನ್ನು ಕಾಯುತ್ತ, ಮೋಡ ಕಂಡೊಡನೆಯೆ ದೀನಸ್ವರದಲ್ಲಿ ಹಾಡುವುದಂತೆ. ಹಾಗೊಂದು ಚಾತಕನಿಗೆ ಭರ್ತೃಹರಿಯ ಕೆಳೆತನದ ಕಿವಿಮಾತು ಇದು:

रॆ रॆ चातक सावधानमनसा मित्र क्शणं श्रूयतां ।
अंभॊदाः बहवॊ वसंति गगने सर्वॆऽपि नैकादृशाः ।
कॆचिद्वृष्टिभिरार्द्रयंति वसुधां गर्जंति कॆचिद्वृथा ।
यं यं पश्यसि तस्य तस्य पुरतः मा ब्रूहि दीनं वचः ॥

ಎಲೆಲೆ ಗೆಳೆಯ ಚಾತಕನೆ, ಕೆಳೆಯ ನುಡಿಯ ಕೇಳು
ಬಾನಿನಲ್ಲಿ ತೇಲುವವು ಮೋಡಗಳು ಹಲವು
ಹನಿಸಿ ನೀರು ನೆಲವ ತೊಯ್ಸಿ ಸಾರುವವು ಕೆಲವು
ಧ್ವನಿಸಿ ಸುಳ್ಳೆ ಹುಸಿಯ ಆಶೆ ತೋರುವವು ಕೆಲವು
ನಿನ್ನ ದೈನ್ಯ ಎಲ್ಲರಲ್ಲಿ ಫಲಿತಕ್ಕೆ ಬಾರದು

[ ಕವಿ अंभॊदाः ಎಂದಿರುವುದನ್ನು ಗಮನಿಸಿರಿ: ಸುಳ್ಳೆ ಗುಡುಗಿದ ಮೋಡದಲ್ಲಿ ನೀರಿಲ್ಲವೆಂದಲ್ಲ, ಕೊಡುವ ಮನಸ್ಸಿಲ್ಲ ಅಷ್ಟೆ ]

Rating
No votes yet