ಹೊಸ ಚಿಗುರು ಹಳೆ ಬೇರು

ಹೊಸ ಚಿಗುರು ಹಳೆ ಬೇರು

ಬರಹ

ನಾನೊಂದು ಬೀಜ ಆಳಕ್ಕಿಳಿದ ಬೇರಿನಿಂದ ಬದುಕುಳಿದ ಮರದಲ್ಲಿ ಹುಟ್ಟು ಪಡೆದ ಕಾಯಿಯೊಳಗಿನ ಚಿಕ್ಕ ರೂಪ.
ಚರಿತ್ರೆಯೆಂಬ ಮಣ್ಣಿನ ಆಳದಲಿ ಎಷ್ಟು ದಿಕ್ಕಿಗೆ ಹಬ್ಬಿದೆಯೋ ಆ ನನ್ನಮೂಲ ಸ್ವರೂಪ.

ಇತಿಹಾಸದ ಆಳವರಿತಷ್ಟೂ,ಅರ್ಥ ಸವಿದಷ್ಟೂ ಬೇರು ಬಧ್ರವಾಗುತ್ತದೆ.ಅಸ್ತಿತ್ವವು ಅಲ್ಲಾಡದಂತೆ ನಿಲ್ಲುತ್ತದೆ. ಚಿಗುರು ಜೀವಕಳೆಯನು ಚೆಲ್ಲಿ ಹೊಸತೆನಿಸುತ್ತದೆ. ಸತ್ವವಿಲ್ಲದ ಬೇರಿಂದ ತಲೆ ಯೆತ್ತಿದ ರಂಬೆಗಳಿಗೆ ಚಿಗುರೆಂಬುದು ಮೊಳೆಯುತ್ತಿರುವಂತೇ ತಲೆಯೆತ್ತಲಾಗದೆ ಬದುಕಿನ ಧಗೆಯಲ್ಲಿ ಸುಟ್ಟು ಕರುಕಲಾಗಿ,ವಸಂತದ ಚೆಲುವೇ ಮಾಯವಾಗುತ್ತದೆ.

'ಚರಿತ್ರೆ ಇಡುವ ಹೆಜ್ಜೆಗೆ ಗಚ್ಚನೀಡಲಿ'ನಮ್ಮ ಪುರಾತನ ಪರಂಪರೆಯ ಮಹಾಕಾವ್ಯಗಳು,ಕಥೆಗಳು ,ಸೃಷ್ಟಿಯ ಪ್ರತಿಯೊಂದು ಹೆಜ್ಜೆಯೂ ಹೊಸಬೆಳಕಿಗೆ,ಬದುಕಿಗೆ ಹೊಳಪು ತರುತ್ತದೆ.ನಮ್ಮ ಪೂರ್ವಿಕರ ಯೋಚನೆಯ ಬಲದಲ್ಲಿ,ನಮ್ಮ ಪ್ರತಿ ಕ್ಷಣದ ನಿರ್ಧಾರಗಳನ್ನು ತಪ್ಪು ಒಪ್ಪುಗಳ ಮಥನ ಮಾಡಿ ಮುನ್ನಡೆಯುತ್ತಿದ್ದೇವೆ.ಬದುಕಿನ ಹೊಸಚಿಗುರು ಹೆಮ್ಮರವಾಗಿ ಬೆಳೆಯಲಿ.

ಉತ್ತಮ ಅಡಿಪಾಯದಂತೆ ನೆಲೆನಿಂತ ಸ್ರುಷ್ಟಿಯೆಂಬ ಹಳೆ ಬೇರಿಗೆ ಕಾರಣವಾದ ಮೂಲ ಶಕ್ತಿ ಮರೆಯಲ್ಲಿದೆ ಎಂಬುದನ್ನು ಪ್ರತಿ ಚಿಗುರೂ ನಂಬುತ್ತದೆ.ನಮಗೆಲ್ಲರಿಗೂ ಗುರುತಿಸಲು ಹೆಸರಿರುವಂತೆ ಆ ಶಕ್ತಿಗೂ ಒಂದು ಗುರುತಿನ ಹೆಸರಾಗಿ ದೇವರೆಂದು ಹೇಳೊಣಾ. ಈ ಶಕ್ತಿಯೆಡೆಗಿನ ನಂಬಿಕೆ ಎಂಬ ಮಣ್ಣಲಿ ನಮ್ಮ ಬದುಕಿನ ಬೇರು ಚಲಿಸಿದರೆ,ಶತಶತಮಾನಗಳ ಉಳಿವು.

ನ ದೇವೋ ವಿದ್ಯತೇ ಕಾಷ್ಠೇ ನ ಪಾಷಾಣೇ ನ ಮೃಣ್ಮಯೇ
ಭಾವೇ ಹಿ ವಿದ್ಯತೇ ದೇವಃ ತಸ್ಮಾತ್ ಭಾವೋ ಹಿ ಕಾರಣಮ್
ದೇವರಿರುವುದು ಮರದಲ್ಲಾಗಲೀ,ಕಲ್ಲಿನಲ್ಲಾಗಲೀ ಅಥವಾ ಮಣ್ಣಿನಲ್ಲಾಗಲೀ ಅಲ್ಲಾ. ಆತನಿರುವುದು ಪೂಜಿಸುವ ಉಪಾಸಕರ ಭಾವನೆಯಲ್ಲಿ ಅದುದರಿಂದ ಮನಸಿನ ಭಾವನೆಯೇ ಎಲ್ಲಕ್ಕೂ ಕಾರಣ.

ಅಂದರೆ ಬಾವಶುದ್ಧಿಯೇ ದೈವಸ್ವರೂಪ. ಹೊಸಚಿಗುರು ಹಳೆಬೇರಿನ ಸತ್ವದಿಂದ ಬೆಳೆಯಬೇಕು.ಅದು ತನ್ನ ಬಾವಶುದ್ಧಿಯಿಂದ,ಮೂಲಯುಕ್ತಿಯಿಂದ ತನ್ನ ಬೇರಿನ ಹರವನ್ನು ಹರಡಬೇಕು.ಹೊಸತನವನ್ನೂ ಮೈಗೂಡಿಸಿಕೊಂಡು ವಿಭಿನ್ನವಾಗಿ ವಿಶಾಲವಾಗಿ ಬೆಳೆದು ನಿಂತು ಕೊನೆಗೊಮ್ಮೆ ಬೇರಾಗಿ ಶಾಶ್ವತವಾಗಬೇಕು.ಇನ್ನೊಂದು ಹೊಸ ಹುಟ್ಟು ಹೊಸ ಚಿಗುರಿಗೆ ಮಾದರಿಯಾಗಿ ನಿಲ್ಲಬೇಕು

ಧರೆಯ ನೀರ್ಗಾಗಸದ ನೀರಿಳಿದು ಬೆರೆವಂತೆ
ನರನ ಪ್ರಾಕ್ತನಕೆ ನೂತನಸತ್ವ ಬೆರೆತು
ಪರಿವುದೀ ವಿಶ್ವಜೀವನಲಹರಿಯನವರತ
ಚಿರಪ್ರತ್ನನೂತ್ನ ಜಗ-ಮಂಕುತಿಮ್ಮ