ಮರೆವೆನೆಂತು ಅ.ರಾ.ಸೇ. ಅವರ ಹಾಸ್ಯವನು ?

ಮರೆವೆನೆಂತು ಅ.ರಾ.ಸೇ. ಅವರ ಹಾಸ್ಯವನು ?

ಹಾಸ್ಯ ಸಾಹಿತಿ ಶ್ರೀಯುತ ಅ.ರಾ.ಸೇ. ಅವರ ಲೇಖನಗಳೆಂದರೆ ನನಗೆ ಪಂಚ ಪ್ರಾಣ. ಸುಮಾರು ೨೫ ವರ್ಷಗಳಿಂದ ಅವರ ಲೇಖನಗಳನ್ನು ಗಮನಿಸುತ್ತಿದ್ದೇನೆ. ಪ್ರಜಾವಾಣಿ/ಉದಯವಾಣಿ ದೀಪಾವಳಿ ಮತ್ತು ಸುಧಾ ಉಗಾದಿ ವಿಶೇಷಾಂಕ ಕೈಗೆ ಬಂದ ಕೂಡಲೇ ಪರಿವಿಡಿಯಲ್ಲಿ ಅವರ ಹೆಸರು ಹುಡುಕಿ ಆ ಪೇಜಿಗೆ ಹೋಗುತ್ತಿದ್ದೆ . ( ಈ ತರಹ ಇನ್ನೊಂದು ನಾನು ಹುಡುಕುತ್ತಿದ್ದ ಹೆಸರು ಶ್ರೀ ಕೇ. ಫ. ಅವರದು . ಅವರ ಲೇಖನಗಳು ಬಿಡಿ ಬಿಡಿಯಾಗಿ ಆಗಾಗ ಸುಧಾ , ತುಷಾರಗಳಲ್ಲಿ ನೋಡಿದ್ದುಂಟು . ಅವೆಲ್ಲವನ್ನು ಕತ್ತರಿಸಿಟ್ಟುಕೊಂಡಿದ್ದೇನೆ. ಈಗ ನಿಮಗೆ ಪ್ರಿಸಂ ಅಥವಾ ಅಂಕಿತ ಪ್ರಕಾಶನದವರು ( ಅಥವಾ ಅಪರಂಜಿ?) ಪ್ರಕಟಿಸುತ್ತಿರುವ ಹಾಸ್ಯಸಾಹಿತ್ಯದಲ್ಲಿ ಸಿಗಬಹುದು . ಅವರದು ಒಂದು ಧಾರಾವಾಹಿ ಹಾಸ್ಯ ಕಾದಂಬರಿ ತುಷಾರದಲ್ಲಿ ಸೊಗದಿರುಳು-ನಲ್ವಗಲು ಎಂಬ ಹೆಸರಿನಲ್ಲಿ ಬಂದಿತ್ತು . ನಾನು ಕತ್ತರಿಸಿಟ್ಟುಕೊಳ್ಳಲಿಲ್ಲ. 'ನಗೆಮುಗಿಲು' ಎಂಬ ಕವಿತೆಗಳ ಸಂಕಲನದ ಹೊರತಾಗಿ ಬೇರೆ ಪುಸ್ತಕ ಬಂದದ್ದು ನನಗೆ ಗೊತ್ತಿಲ್ಲ . ( ಯಾರಿಗಾದರೂ ಗೊತ್ತಿದ್ದರೆ ತಿಳಿಸಿ) .
'ನಗೆ ಮುಗಿಲು' ಅನಿರೀಕ್ಷಿತವಾಗಿ ನನಗೆ ಧಾರವಾಡದಲ್ಲಿ ನನಗೆ ಬರೀ ನಾಲ್ಕು ರೂಪಾಯಿಗೆ ಸಿಕ್ಕಿತು . ಅದರಲ್ಲಿ ನಾನು ನೋಡಿದ ಕವನವೊಂದರ ಸಾಲುಗಳು ಹೀಗಿವೆ . ನೆನಪಿನಲ್ಲಿ ಉಳಿದ , ಎಂದೂ ಮರೆಯಲಾಗದ ಸಾಲುಗಳನ್ನು ಇಲ್ಲಿ ಬರೆಯುತ್ತಿದ್ದೇನೆ .

ಮರೆವೆನೆಂತು ಭರಮಸಾಗರವನು ?
ಅಲ್ಲಿ ಸೊಳ್ಳೆಗಳ ಮಧುರ ಝೇಂಕರವನು ?

( ಅಲ್ಲಿ ತೇಲಿ ಬರುವ ಮಿರಚಿಯ ಪರಿಮಳವನು? - ಇದು ನಾನು ಸೇರಿಸಿಕೊಳ್ಳುವ ಸಾಲು!)

ಮೂಕರ್ಜಿಯ ಬರೆದೇ ಪುರವ ಕಟ್ಟಿದ ಪ್ರಮುಖರಲ್ಲುಂಟು....
ಹೋಟಲು ಚಹವ ಕುಡಿದೇ ಹೊಲವ ಮಾರಿದವರಲ್ಲುಂಟು ...

ರಾಮನೆಂತು ವನದಿ ಅಯೋಧ್ಯೆಯ ನೆನೆನೆನೆದು ಅತ್ತನೋ ,
ಪಂಪನೆಂತು ಬನವಾಸಿಯ ನೆನೆದನೋ ...
( ಅಂತು ನಾನು ನೆನೆವೆ ಭರಮಸಾಗರವನು )...

ಅವರ ಬರವಣಿಗೆಯ ಶೈಲಿ ತುಂಬ ಚೆನ್ನಾಗಿದೆ ... ಇನ್ನಷ್ಟನ್ನು ಇನ್ನೊಮ್ಮೆ ಬರೆಯುವೆ.

Rating
No votes yet

Comments

Submitted by shreekant.mishrikoti Sat, 04/11/2015 - 19:25

kanaja.in/archives/dinamani/ಅ-ರಾ-ಸೇ-ಅ-ರಾ-ಸೇತುರಾಮರಾವ್
ಹಾಸ್ಯ ಸಾಹಿತಿ, ಅರಾಸೇ ಕಾವ್ಯನಾಮದಿಂದ ಪರಿಚಿತರಾಗಿದ್ದ ಎ.ಆರ್.ಸೇತೂರಾಮರಾವ್ (84) ಅವರು ಅನಾರೋಗ್ಯದಿಂದ ಗುರುವಾರ ರಾತ್ರಿ ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾದರು
ತುಂಬಶ್ರೇಷ್ಠ ತರಗತಿಯ ಹಾಸ್ಯವನ್ನು ಬಹುಕಾಲ ಕನ್ನಡಿಗರಿಗೆ ಉಣಬಡಿಸಿದ ಶ್ರೀಯತರು ಇಂದು ನಮ್ಮನ್ನು ಅಗಲಿದ್ದಾರೆ. ಅವರು ಅನೇಕ ಆಧ್ಯಾತ್ಮ ಗ್ರಂಥಗಳನ್ನೂ ಬರೆದಿದ್ದಾರೆ. ಅವರ ಕೆಲವು ಹಾಸ್ಯ ಬರಹಗಳ ಸಂಗ್ರಹ -ಶೀನಣ್ಣನ ರೋಮಾನ್ಸ ಎಂಬ ಪುಸ್ತಕದಲ್ಲಿ ನೋಡುಬಹುದು.( ಈ ಪುಸ್ತಕವು ಪೇಟೆಯಲ್ಲಿ ಈಗ ಲಭ್ಯ ಇದೆ ). ಅವರ ಅನೇಕ ಬರಹಗಳನ್ನು ಕೊರವಂಜಿ ಮಾಸಪತ್ರಿಕೆಯ 25 ವರ್ಷಗಳ ಸಂಗ್ರಹದ ಸಿಡಿಯಲ್ಲಿ ಓದಬಹುದಾಗಿದೆ . ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತ ಅವರಿಗೆ ನಮ್ಮೆಲ್ಲರ ಶ್ರದ್ಧಾಂಜಲಿಗಳು .