ಲೇಖನಗಳು-೨

ಲೇಖನಗಳು-೨

ಬರಹ

ಪರಂಪರಾಗತ ಆಹಾರ

ಅಂದಿನಿಂದ ಇಂದಿಗೆ
ಆಹಾರ ಪರಿವರ್ತನೆಯಾದ ಬಗೆ

ಅಂದು ಬರೀ ಸಸ್ಯಸಂಕುಲ. ಮೊದಲು ನೀರಿನಲ್ಲಿ ಜೀವಿಯ ಆಗಮನ, ನಂತರ ಭೂಮಿಯ ಮೇಲೆ ಪ್ರಾಣಿಯ ಹುಟ್ಟು. ಅಮೀಬಾದಿಂದ ಪ್ರಾರಂಭ, ಮಾನವನಲ್ಲಿ ಕೊನೆ. ಮೊದಲ ಮಾನವನ ಆಹಾರ ಏನಿದ್ದರಬಹುದು? ಕೈನಲ್ಲಿ ಕೊಡಲ್ಲಿ ಇಲ್ಲ, ಹಾರ ಪಿಕಾಸಿಗಳಿಲ್ಲ, ಚಾಕು-ಚೂರಿಗಳಿಲ್ಲ. ಅವನ ಆಯುಧ-ಅವನ ಕೈ, ಕಾಲು, ಹಲ್ಲು, ಉಗುರು, ಮರವೇರಲು ಬಲಿಷ್ಟವಾದ ಕಾಲುಗಳು, ಹಾಗೆಯೇ ಬಲಿಷ್ಟ ತೋಳುಗಳು. ಹಣ್ಣುಗಳು, ಕಾಯಿಗಳು, ಎಲೆಗಳು, ಹೂವುಗಳು, ಎಷ್ಟೋ ಕಾಲ ಅವನ ಆಹಾರವಾಗಿರಲಿಕ್ಕೆ ಸಾಕು. ಮಳೆ ಬಂದಾಗ ಗಿಡಗಳನ್ನು ಕಿತ್ತ. ಅದರಡಿಯ ಗೆಡ್ಡೆಗಳನ್ನು ತಿಂದು ನೋಡಿದ. ಅವುಗಳನ್ನೂ ತನ್ನ ಆಹಾರಕ್ಕೆ ಸೇರಿಸಿಕೊಂಡ. ಕಲ್ಲುಗಳನ್ನು ಚೂಪು ಮಾಡುವ ಕಲೆ ಕಲಿತ. ಭೂಮಿಯ ಅಡಿಯ ಗೆಡ್ಡೆಗಳು ಶಾಶ್ವತವಾಗಿ ಅವನ ಆಹಾರಕ್ಕೆ ಸೇರಿದವು. ಸತತವಾಗಿ ಮಳೆಯ ಕಾಟ. ಗವಿಯಿಂದ ಹೊರಕ್ಕೆ ತಲೆ ಹಾಕಲು ಸಾಧ್ಯವಿಲ್ಲ. ಆಹಾರಕ್ಕೆ ಏನು ಮಾಡುವುದು? ಪ್ರಾಣಿಗಳು ಮತ್ತು ಅವುಗಳ ಹಾಲು ಅದಕ್ಕೆ ಉತ್ತರವಾಯಿತು. ಸಾಕು ಪ್ರಾಣಿಗಳು ಅವನ ಸಂಸಾರಕ್ಕೆ ಸೇರಿದವು. ಒಂದು ದಿನ ಬೇಸಗೆಯ ಮುಸ್ಸಂಜೆ, ಎರಡು ಕಲ್ಲುಗಳನ್ನು ಅಕಸ್ಮಾತ್ ಕುಟ್ಟಿದ. ಹಾ ಬೆಳಕು! ಒಣತರಗೆಲೆಗೆ ಅದರ ಸ್ಪರ್ಶ-ಬೆಂಕಿಯ ಹುಟ್ಟು. ಮೊದಲು ಚಳಿಗಾಲದಲ್ಲಿ ಮೈಕಾಯಿಸಿಕೊಳ್ಳಲು, ರಾತ್ರಿಯ ವೇಳೆ ಬೆಳಕಿಗಾಗಿ ಬೆಂಕಿಯನ್ನು ಬಳಸುತ್ತಲಿದ್ದ. ಒಮ್ಮೆ ಒಂದು ಪ್ರಾಣಿಯು ಆಕಸ್ಮಿಕವಾಗಿ ಬೆಂಕಿಗೆ ಬಿತ್ತು. ಅದು ಬೆಂದುಹೋಯಿತು. ಆ ಪ್ರಾಣಿಯನ್ನು ಹೊರಕ್ಕೆ ತೆಗೆದು ಬಿಸುಟ. ಆಗ ಅವನ ಬೆರಳುಗಳು ಬೆಂದಮಾಂಸದಲ್ಲಿ ಊರಲ್ಪಟ್ಟವು. ಶಾಖವನ್ನು ತಡೆಯಲಾರದೆ ಬೆರಳು ಬಾಯಿಗೆ ಹೋಯಿತು. ಅಬ್ಬ, ಏನು ರುಚಿ! ಪ್ರಾರಂಭವಾಯಿತು ರುಚಿಯ ಆಟ. ಮುಂದೆ ಉಪ್ಪಿನ ಶೋಧ, ಉಪ್ಪು ನೀರಿನಲ್ಲಿ ಬೇಯಿಸಿದ ಮಾಂಸ ಇನ್ನೂ ಹೆಚ್ಚು ರುಚಿಯಾಗಿರಲಿಕ್ಕೆ ಸಾಕು. ಉಪ್ಪಿನಿಂದ ವಸ್ತುಗಳು ಕೆಡದಂತೆ ಕೆಲವು ದಿವಸಗಳು ಇಡಬಹುದೆಂಬ ಅರಿವು. ಒಂದೊಂದು ಅನ್ವೇಷಣೆಗೂ ಬಹಳ ಕಾಲದ ಅಂತರ. ಈಗ ಮಳೆ ಬಂದರೆ ಮೊದಲಿನ ಭಯವಿಲ್ಲ. ಆಹಾರವನ್ನು ಸಂಗ್ರಹಿಸಬಹುದು. ಕೆಡದಂತೆ ಕೆಲವು ದಿವಸಗಳು ಇಡಬಹುದು. ಒಮ್ಮೆ ಕೆಲವು ಕಾಳುಗಳು ಗವಿಯ ಮುಂದೆ ಉದುರಿದವು. ಮಳೆ ಬಂತು. ಒಂದೊಂದು ಕಾಳೂ ಒಂದೊಂದು ಗಿಡವಾಯಿತು. ಎಳೆಯ ಕಾಳು ತಿನ್ನಲು ಬಲುರುಚಿ. ಒಂದು ಕಾಳು ಮೊಳಕೆಯೊಡೆದು ಒಂದು ಗಿಡ. ಗಿಡದ ತುಂಬಾ ಕಾಳುಗಳು. ಮನುಜನ ಆಹಾರದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿತು. ವ್ಯವಸಾಯದ ಪ್ರಾರಂಭ. ಅಷ್ಟು ಹೊತ್ತಿಗೆ ಬೆಂಕಿಯ ಉಗಮವಾಗಿ ಬಹಳ ವರ್ಷಗಳೇ ಆಗಿದ್ದಿತು. ಎಲ್ಲವನ್ನೂ ಬೇಯಿಸುವ ಚಪಲ. ಕಾಳುಗಳನ್ನು ಬೇಯಿಸಿ ಅದಕ್ಕೆ ಉಪ್ಪು ಹಚ್ಚಿ ತಿಂದ. ಬಹಳ ರುಚಿಯಾಗಿತ್ತು. ಒಂದು ವರ್ಷ ಮಳೆ ಬಂದರೆ ಸಾಕು. ಮುಂದಿನ ವರ್ಷ ಮಳೆ ಬರದಿದ್ದರೂ ಭಯವಿಲ್ಲ. ಕಣಜದಲ್ಲಿ ಹಿಂದಿನ ವರ್ಷದ ಬೆಳೆಯೇ ಇರುತ್ತಿತ್ತು. ಇದಕ್ಕೆಲ್ಲಾ ಶರೀರಶ್ರಮ. ಉತ್ತು, ಬಿತ್ತಿ, ಕಾಳನ್ನು ಬೆಳೆಯಬೇಕು. ಅದಕ್ಕೆ ಪ್ರಾಣಿಗಳ ಉಪಯೋಗ ಕಲಿತ. ಮೊದಲು ಆಳುಗಳಿರಲಿಲ್ಲ. ಸ್ವಂತ ಬೇಸಾಯ. ನಂತರ ಆಳುಗಳಾಗಿ ಕೆಲವರು ಮಾಡಲ್ಪಟ್ಟರು. ಒಟ್ಟಿನಲ್ಲಿ ಆಳು, ಕಾಳು, ಮಳೆ, ಇವುಗಳ ಮೇಲೆ ಅವಲಂಬನೆ. ಆ ಕಾಳನ್ನು ತಿನ್ನಲು ಯೋಗ್ಯವಾಗಿ ಮಾಡಲು ಅನೇಕ ಸಂಸ್ಕರಣೆ, ಕುಟ್ಟಬೇಕು, ಬೀಸಬೇಕು, ಅದಕ್ಕಾಗಿಯೇ ಬಹಳಷ್ಟು ವೇಳೆಯನ್ನು ಉಪಯೋಗಿಸಬೇಕಾಗಿತ್ತು. ಬಿಡುವಿಲ್ಲದ ದುಡಿಮೆ. ದುಡಿಮೆಯ ಜತೆ-ಜತೆಯಲ್ಲಿಯೇ ಹಾಡು, ಕುಣಿತ, ಕೋಲಾಟ. ಊಟದ ಜತೆಯಾಗಿ ಕಲೆಯ ಬೆಳವಣಿಗೆ. ಅದರಿಂದ ಆಯಾಸ ಪರಿಹಾರ. ಅವನ ದುಡಿಮೆಯ ಫಲ ಸುಗ್ಗಿ. ಆಗ ಅವನ ಹಿಗ್ಗಿಗೆ ಪಾರವಿಲ್ಲ. ತಿನ್ನುವ ಒಂದೊಂದು ತುತ್ತಿಗೂ ಬೆಲೆ-ಬೆವರು. ಅದರಿಂದ ಊಟಕ್ಕೆ ರುಚಿ. ಸಾಗಾಣಿಕೆಗೆ ಅವಕಾಶವಿಲ್ಲ. ಒಂದು ಪ್ರದೇಶದ ಬೆಳೆ ಅಲ್ಲಿಗೇ ಆಹಾರ.

ಅಜ್ಜಿಯ ಅಡುಗೆಮನೆ : ಬೆಂಕಿಯ ಅವಿಷ್ಕಾರದಿಂದ ಅಡುಗೆಯ ಪ್ರಾರಂಭ. ಅಡುಗೇಮನೆಯೇ ಪ್ರಯೋಗಶಾಲೆ. ಅಜ್ಜಿಯೇ ವಿಜ್ನಾನಿ. ರುಚಿಯೇ ಮೂಲಮಂತ್ರ. ಮನೆಮಂದಿಯೆಲ್ಲಾ ಆ ತಂತ್ರಕ್ಕೆ ಬಲಿ. ಅನುಭವದಿಂದ ಔಷಧೀಯ ಸಸ್ಯಗಳು ಅಡುಗೆಯ ಮನೆಯನ್ನು ಸೇರಿದವು. ಅದರ ಫಲವೇ ಮೆಣಸು, ಜೀರಿಗೆ, ಮೆಂಥ್ಯ ಇತ್ಯಾದಿಗಳು ಅಡುಗೆಯ ಡಬ್ಬಿಗೆ ಬಂದವು. ಅದರ ಹಿತ-ಮಿತ ಬಳಕೆ ಶರೀರಕ್ಕೆ ಔಷಧವಾಗುವುದೆನ್ನುವ ಅರಿವು. ಒಂದೊಂದು ಹಂತದ ಬದಲಾವಣೆಯಲ್ಲಿಯೂ ಮೊದಲು ಹೊಸದರ ವಿರುದ್ಧ ಘರ್ಷಣೆ, ನಂತರ ಹೊಂದಾಣಿಕೆ. ಕಡೆಯದಾಗಿ ಒಂದು ಮಧ್ಯಮಾರ್ಗ.

ಉದಾಹರಣೆಗೆ, ಬೇಯಿಸಿದ್ದು ಹಾಗೂ ಹಸಿಯದು ಇವೆರಡರಲ್ಲಿ ಯಾವುದು ಶ್ರೇಷ್ಠ? - ಹಸಿಯಾದದ್ದು.

ಆದ್ದರಿಂದಲೇ ಬೇಯಿಸಿದ್ದು ಮುಸುರೆ. ಹಾಲೂ ಹಣ್ಣಿಗೆ ಯಾವ ನಿರ್ಬಂಧವೂ ಇಲ್ಲ. ದೇವರಿಗೆ. ಬಾಳೆಯಹಣ್ಣು, ತೆಂಗಿನಕಾಯಿ, ಹಸಿಯಹಾಲು. ಆದರೆ ಮುಸುರೆಯ ಬಳಕೆಗೆ ಅನೇಕ ಬಂಧನ. ಅದನ್ನು ಮಡಿ ಮಾಡಬೇಕು. ಮಡಿ ಎಂದರೆ ಶುಚಿ. ವಸ್ತುತಃ ಬೇಯಿಸಿದ್ದು ಶುಚಿಯಲ್ಲ. ಅದನ್ನು ಮಂತ್ರದ ಮೂಲಕವೋ ತಂತ್ರದ ಮೂಲಕವೋ ಶುಚಿ ಮಾಡಬೇಕು. ಅದಕ್ಕೆ ಅನೇಕ ನಿಯಮಗಳು. ಆದರೆ ಬೇಯಿಸಿದ ಅಡುಗೆಗಿರುವ ರುಚಿ ಹಾಗೂ ಅನೇಕ ಅನುಕೂಲಗಳಿಗೆ ಸಿಕ್ಕಿದ ಮನುಷ್ಯ ಅದನ್ನು ಬಿಡಲಾರ. ಅದರ ಅತಿ ಬಳಕೆಗೂ ಕಡಿವಾಣ ಹಾಕಬೇಕು. ಅದರ ಫಲವೇ ಹದಿನೈದು ದಿವಸಗಳಿಗೊಮ್ಮೆ ಉಪವಾಸ. ಜತೆಗೆ ಊಟದಲ್ಲಿ ಅರ್ಧದಷ್ಟಾದರೂ ಹಸಿಯ ವಸ್ತುಗಳ ಬಳಕೆ.

ಹೀಗೆಯೇ ಉಪ್ಪಿನ ಬಳಕೆಯ ಬಗ್ಗೆ. ಉಪ್ಪನ್ನು ಆಹಾರವಾಗಿ ಬಳಸಲು ಕಲಿತವನು ಮಾನವನೊಬ್ಬನೇ. ಅದರ ಅತಿ ಬಳಕೆ ತಪ್ಪೆಂಬ ಅಭಿಪ್ರಾಯ ಮನಸ್ಸಿನಲ್ಲಿತ್ತು. ಅದಕ್ಕಾಗಿ ಅನೇಕ ಬಂಧನಗಳು. ಹಬ್ಬ-ಹರಿದಿನಗಳಲ್ಲಿ ಉಪ್ಪಿಲ್ಲದ ಕೆಲವು ಪದಾರ್ಥಗಳಿರಬೇಕು. ಕೆಲವು ದೇವರುಗಳಿಗೆ ಉಪ್ಪಿಲ್ಲದ ಅಡುಗೆಯೇ ಬೇಕು. ಅದನ್ನೇ ಭಕ್ತರೂ ಭುಂಜಿಸಬೇಕು. ನಾಗಪ್ಪನಿಗೆ ತನಿ ಎರೆದರೆ ಸಪ್ಪೆ ಹೆಸರುಬೇಳೆ, ಸೌತೇಕಾಯಿ, ಇದೆಲ್ಲಾ ಬಹಳ ಹಿಂದಿದ್ದ ನಿಯಮಗಳು. ನಾಲಗೆ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿತು. ಅಡುಗೆ ಪ್ರಧಾನ ಕಲೆಯಾಯಿತು. ರುಚಿಯೇ ಅದರ ಜೀವಾಳ.

ತಂತ್ರಜ್ನಾನದ ಆಗಮನ : ಹಿಂದೆ ಹೇಳಿದ್ದೆಲ್ಲಾ ಬಹಳ, ಬಹಳ ಹಳೆಯ ಕತೆ. ಒಂದು ಪ್ರದೇಶದ ಜನರಿಗೆ ಮತ್ತೊಂದು ಪ್ರದೇಶದ ಜನರ ಜೀವನ ಪರಿಚಯವಿಲ್ಲದ ಕಾಲದ ಕತೆ. ಸಮುದ್ರಯಾನ ಪ್ರಾರಂಭವಾದ ಮೇಲೆ ಸಂಪರ್ಕ ಪ್ರಾರಂಭವಾಯ್ತು. ಭಾರತದ ಮಸಾಲೆ ಐರೋಪ್ಯರ ಮನಗೆದ್ದಿತು. ಹಾಗೆಯೇ ಭಾರತ ಕತೆಯೂ ಕೂಡ. ಮೈಲಿಗೆಯಾಗಿದ್ದ ಕಾಫಿ ಮಡಿಯುಟ್ಟು ಅಜ್ಜಿಯ ಅಡುಗೆಯ ಮನೆ ಸೇರಿತು. ಹೀಗೆಯೇ ಸಕ್ಕರೆ, ಬ್ರೆಡ್, ಐಸ್ ಕ್ರೀಮ್, ಇತ್ಯಾದಿಗಳು ನಮ್ಮ ದೈನಂದಿನ ಆಹಾರದಲ್ಲಿ ಸೇರಿದವು. ಸಾರಿಗೆ ಸಂಪರ್ಕಗಳು ಹೆಚ್ಚಿದಂತೆ ಒಂದು ಪ್ರದೇಶದ ಆಹಾರ ಅಲ್ಲಿಗೇ ಸೀಮಿತವಾಗಿರದೇ ಇತರ ಪ್ರದೇಶಗಳಲ್ಲೂ ದೊರೆಯುವಂತಾಯ್ತು. ಉದಾಹರಣೆಗೆ, ಬರೀ ಅಕ್ಕಿ, ರಾಗಿ ಬಳಸುತ್ತಿದ್ದ ನಮ್ಮ ಪ್ರದೇಶಕ್ಕೆ ಗೋಧಿಯ ಆಗಮನವಾಯ್ತು. ಹಾಗೆಯೇ ಸೇಬು ಇತ್ಯಾದಿ ಹಣ್ಣುಗಳು, ಪರಂಪರೆಯಿಂದ ಬಂದ ಆಹಾರ ಪದಾರ್ಥಗಳೂ ಬದಲಾವಣೆಯಾದವು. ಬೀಜವನ್ನು ಬಿತ್ತುವುದರಿಂದ ಹಿಡಿದು ನಮ್ಮ ಹೊಟ್ಟೆಯನ್ನು ಸೇರುವವರೆಗೂ ಅನೇಕ ಸಂಸ್ಕರಣಗಳಿಗೆ ಆಹಾರ ಒಳಗಾಗುತ್ತದೆ. ಇದಕ್ಕೆಲ್ಲಾ ತಂತ್ರಜ್ನಾನವೇ ಕಾರಣ. ತಾಂತ್ರಿಕತೆ, ಆಹಾರದ ಉತ್ಪಾದನೆಯಲ್ಲಿನ ಶರೀರಶ್ರಮ ಹಾಗೂ ವೇಳೆಯನ್ನು ಕಡಿಮೆ ಮಾಡಿತು. ಹೆಚ್ಚು ಬೆಳೆ ಬೆಳೆಯಲು ಅನುಕೂಲ ಮಾಡಿದೆ. ಆದರೆ ಗುಣಮಟ್ಟದ ಗತಿ? ಅದರ ಚಿಂತನೆಯ ಅವಶ್ಯಕತೆಯಿಲ್ಲವೆಂದುಕೊಂಡಿದೆ ಸಮಾಜ. ಈಗ ಭತ್ತ ಕುಟ್ಟುವ ಅವಶ್ಯಕತೆಯಿಲ್ಲ. ರಾಗಿ ಬೀಸಬೇಕಿಲ್ಲ. ಅಲ್ಲದೆ ಅಡುಗೇಮನೆಯ ಒಳಕ್ಕೂ ತಂತ್ರಜ್ನಾನ ತಲೆ ಹಾಕಿದೆ. ಇಂದು ಅಡುಗೇಮನೆ ಎಂದರೆ ಹಿಂದಿನ ಕಾಲದ, ಹೊಗೆಯಿಂದ ಕೂಡಿದ ಒಂದು ಕಪ್ಪುಕೋಣೆಯಲ್ಲ. ಅದು ಒಂದು ಪ್ರಯೋಗಾಲಯದಂತೆ ಕಾಣುತ್ತದೆ. ವಿದ್ಯುತ್ ಗುಂಡಿ ಒತ್ತಿದರೆ ಊಟ ತಯಾರು. ಸ್ವಚ್ಚತೆಯ ದೃಷ್ಟಿಯಿಂದ ಇದು ಸರಿ. ಶರೀರಶ್ರಮ ಕಡಿಮೆ, ಅದೂ ಒಪ್ಪೋಣ. ಪರಿವರ್ತನೆಯಿಂದ ಆಹಾರದ ಗುಣಮಟ್ಟ ಹೆಚ್ಚಿದೆಯೋ, ಕಡಿಮೆಯಾಗಿದೆಯೋ? ರುಚಿಯ ಪ್ರಜ್ನೆ, ಅಜ್ಜಿಯ ಅಡುಗೇಮನೆಯಿಂದ ಹೋಟೆಲ್, ಬೇಕರಿ, ರಸ್ತೆಯ ಪಕ್ಕದ ತಿಂಡಿಯ ಗಾಡಿ, ಇತ್ಯಾದಿಗಳಿಗೆ ಸ್ಥಳಾಂತರಿಸಲ್ಪಟ್ಟಿದೆ. ಕೆಲವು ತಿಂಡಿಗಳಿಗೆ ಅವೇ ಹಳೆಯ ಹೆಸರಿದ್ದರೂ ರೂಪ, ಬಣ್ಣ, ತೂಕ, ಎಲ್ಲದರಲ್ಲೂ ಪರಿವರ್ತನೆಯಾಗಿದೆ. ಉದಾಹರಣೆಗೆ ಇಡ್ಲಿ, ಅಜ್ಜಿ ಅಂದು ತಯಾರಿಸುತ್ತಿದ್ದ ಇಡ್ಲಿಯೇ ಬೇರೆ, ಇಂದು ನಾವು ತಿನ್ನುತ್ತಿರುವ ಇಡ್ಲಿಯೇ ಬೇರೆ. ಆ ಇಡ್ಲಿಯಲ್ಲಿ ಉದ್ದಿನ ಕಾಳಿನ ಕಪ್ಪು, ಕೆಂಪು ಅಕ್ಕಿಯ ಕಂಪು ಇರುತ್ತಿತ್ತು. ಇಂದಿನ ಕೊಕ್ಕರೆಯ ರೆಕ್ಕೆಯಂತಹ ಬಿಳಿಯ ಹಗುರವಾದ ಇಡ್ಲಿ ಎಲ್ಲಿ? ಹಿಂದಿನ ಆ ದಪ್ಪ, ಕಪ್ಪು, ಕೆಂಪು ಇಡ್ಲಿ ಎಲ್ಲಿ? ಅದರಲ್ಲೂ ಹೋಟಲಿನದು ಹೂವಿನಂತಹುದು. ಎಲ್ಲಿ ಹಾರಿಹೋಗುತ್ತದೋ ಏನೊ? ಅದಕ್ಕೇ ಅದು 'ದರ್ಶಿನಿ'! ಅಕ್ಕಿಯನ್ನು ಪೂರ್ಣವಾಗಿ ಪಾಲೀಶ್ ಮಾಡಿಸಿ ಉಪಯೋಗಿಸಲಾಗುತ್ತಿದೆ. ಬಿಳಿಯ ಬ್ರೆಡ್, ಕಾಫಿ, ಟೀಗಳ ಅತಿ ಸೇವನೆ, ಹೋಟೆಲ್ ತಿಂಡಿಗಳು, ಬೇಕರಿಯ ತಿಂಡಿಗಳು, ಡಬ್ಬದ ಆಹಾರಗಳು, ಇನ್ನೂ ಮುಂದೆ ಹೋಗಿ ಫಾಸ್ಟ್ ಫ಼ುಡ್ ಯುಗ ಪ್ರಾರಂಭವಾಗಿದೆ. ಇವೆಲ್ಲಾ ತಾಂತ್ರಿಕತೆಯ ಕೊಡುಗೆ. ಇದನ್ನು ವಿಜ್ನಾನ ಒಪ್ಪಿದೆಯೇ?

ಪರಂಪರಾಗತ ಆಹಾರ, ತಾಂತ್ರಿಕತೆಯಿಂದಾಯ್ತು ಸುಂದರ
ಆದರೆ ಅದರ ಸತ್ವ ಹಾರಿಹೋಯಿತು ಬಹಳ ದೂರ.

ಕೃಪೆ : ಮನುಜಾ! ಏನು ನಿನ್ನ ಆಹಾರ? ಎಂಬ ಪುಸ್ತಕದಿಂದ
ಬರೆದವರು : ತುಮಕೂರಿನ ಜಿ.ವಿ.ವಿ.ಶಾಸ್ತ್ರಿ
ಸಂಗ್ರಹಿಸಿದವರು : ೧) ಎಲ್. ಅರುಣ್
೯೮೮೬೪ ೧೭೨೫೨
ಈಮೈಲ್ : ಪರಿಸರಪ್ರೇಮಿ ಅಟ್ ಯಾಹೂ.ಕಾಮ್
ಅರುಣ್.ಎಲ್ಲೆನ್ ಅಟ್ ಆರ್.ಹೆಚ್.ಎಮ್.ಕೊ.ಇನ್
೨) ಹೆಚ್.ಕೆ.ಸತ್ಯಪ್ರಕಾಶ್
೯೮೮೬೩ ೩೪೬೬೭
ಈಮೈಲ್ : ಆರೋಗ್ಯಸಥ್ಯ ಅಟ್ ಯಾಹೂ.ಕೊ.ಇನ್
ಸತ್ಯ.ಪ್ರಕಾಶ್ ಅಟ್ ಆರ್.ಹೆಚ್.ಎಮ್.ಕೊ.ಇನ್
ಸತ್ಯಪ್ರಕಾಶ್.ಹೆಚ್ಕೆ ಅಟ್ ಜಿಮೈಲ್.ಕಾಮ್