ನನ್ನ ಮಗ ಫೇಲಾದ

ನನ್ನ ಮಗ ಫೇಲಾದ

ನನ್ನ ಮಗ ಓದುತ್ತಿದ್ದ ಸ್ಕೂಲು ಬದಲಾಯಿಸಬೇಕಾದ ಅನಿವಾರ್ಯತೆ ಉಂಟಾಯಿತು. ಬೇರೆ ಶಾಲೆಗೆ ಹಾಕಿದೆವು. ಅಲ್ಲಿ CBSE ಸಿಲಬಸ್ಸು.

ಮೊದಲು ಎರಡು ಮೂರು ತಿಂಗಳು ಕಷ್ಟಪಟ್ಟ. ಶಾಲೆಯ ಟೆಸ್ಟುಗಳಲ್ಲಿ ಒಳ್ಳೆಯ ಮಾರ್ಕು ಬರಲಿಲ್ಲ. ಹೊಸ ಶಾಲೆ, ಹೊಸ ಮೇಷ್ಟರುಗಳು, ಹೊಸ ಕ್ಲಾಸ್ಮೇಟುಗಳು , ಹಾಗಾಗಿ ನಾವು ತಲೆ ಬಿಸಿ ಮಾಡಿಕೊಳ್ಳಲಿಲ್ಲ. ಕಾಲಕ್ರಮೇಣ ಸರಿಯಾಗುತ್ತೆ ಅಂತ ಸುಮ್ಮನಿದ್ದೆವು.

mid term ಪರೀಕ್ಷೆ ಆಯಿತು. ಆದಮೇಲೆ ಶಾಲೆಯಲ್ಲಿ ಓಪನ್ ಡೇ ಇತ್ತು ( ಪಾಲಕರು ಟೀಚರುಗಳನ್ನು ಭೇಟಿ ಮಾಡಿ ಮಕ್ಕಳ ಪ್ರಗತಿ ಬಗ್ಯೆ ಮಾತಾಡಿಕೊಳ್ಳುವ ದಿನ). ನಾನೊಬ್ಬನೇ ಹೋದೆ.

ನನ್ನ ಮಗನ ಕ್ಲಾಸ್ ಟೀಚರು , ನಾನು ಯಾರ ಪಾಲಕ ಎಂದು ತಿಳಿದ ಕೂಡಲೇ, ಸೌಜನ್ಯದಿಂದ (ಸ್ವಲ್ಪ ಜಾಸ್ತಿಯೇ ಅನ್ನಬಹುದು) , ಕರೆದು ಕೂರಿಸಿದರು. ಹಾಗೇ ನನ್ನ ಪಾಳಿ ಬರುವುದನ್ನು ಕಾಯುತ್ತಾ ಕೂತೆ. ನನ್ನ ಸರದಿ ಬಂದಾಗ , ಕೈಗೆ ಮಾರ್ಕ್ಸ್ ಕಾರ್ಡು ಕೊಟ್ಟು , ಮತ್ತೊಂದು ಪಿಂಕ್ ಸ್ಲಿಪ್ (ಹೌದು ಈ ಶಾಲೆಯಲ್ಲೂ ಪಿಂಕ್ ಸ್ಲಿಪ್ !!) ಮೇಜಿನ ಮೇಲಿಟ್ಟು ಇದರ ಮೇಲೆ ಸಹಿ ಮಾಡಿ ಅಂದರು.

ಏನಪ್ಪಾ ಇದು ಅಂತ ಓದಿ ನೋಡಿದೆ. ಅದು ಯಾವುದೇ ವಿಷಯದಲ್ಲಿ ಫೇಲಾದ ಮಕ್ಕಳ ಪಾಲಕರಿಗೆ ಶಾಲೆ ಜಾರಿ ಮಾಡುವ Advisory Note. ಅದರಲ್ಲಿ ಇಂಥಾ ಹುಡುಗ /ಗಿ ಇಂಥಾ ವಿಷಯದಲ್ಲಿ ಫೇಲಾಗಿರುವುದರಿಂದ ಪಾಲಕರು ವಿಶೇಷ ಗಮನ ಕೊಟ್ಟು ಮಕ್ಕಳ ಓದಿನಲ್ಲಿ ಪ್ರಗತಿ ಬರುವಂತೆ ಮಾಡಬೇಕು . ಇಲ್ಲದಿದ್ದರೆ.......... ಇತ್ಯಾದಿ ಇತ್ಯಾದಿ ಬರೆದಿದ್ದರು. ಏನೂ ಅರ್ಥವಾಗಲಿಲ್ಲ. ಕೈಯಲ್ಲಿದ್ದ ಮಾರ್ಕ್ಸ್ ಕಾರ್ಡಿನ ವಿವರ ನೋಡಿದೆ. ಗಣಿತದಲ್ಲಿ ೩೦ ಅಂಕ ಬಂದಿತ್ತು. ಅದರ ಕೆಳಗೆ ಕೆಂಪು ಶಾಯಿಯಲ್ಲಿ ಗೆರೆ ಎಳೆದಿದ್ದರು. ಮತ್ತೆ ಪಿಂಕ್ ಸ್ಲಿಪ್ ನೋಡಿದೆ. ಅದರಲ್ಲಿ ಗಣಿತದ ಪ್ರಸ್ತಾಪ ಇತ್ತು.ಈಗ ಸ್ವಲ್ಪ ಅರ್ಥವಾಯಿತು. ನನ್ನ ಮಗ midterm ಪರೀಕ್ಷೆಯಲ್ಲಿ ಗಣಿತದಲ್ಲಿ ಫೇಲಾಗಿದ್ದಾನೆ. ಅದಕ್ಕೆ ಶಾಲೆಯವರು ಎಚ್ಚರಿಕೆ ಕೊಟ್ಟಿದ್ದಾರೆ ಅಂತ.ಅಷ್ಟೇ ಅಲ್ಲ ಅಲ್ಲಿಯವರೆಗೂ ಆದ ಎಲ್ಲಾಟೆಸ್ಟುಗಳ ಮಾರ್ಕು ಮತ್ತು mid term ಪರೀಕ್ಷೆಯ ಮಾರ್ಕು ಎಲ್ಲಾ ಸೇರಿಸಿ ಯಾವುದೋ ಕಾಂಪ್ಲಿಕೇಟೆಡ್ ಫಾರ್ಮುಲಾ ಹಾಕಿ overall ಮಾರ್ಕು ಲೆಕ್ಕ ಹಾಕುತ್ತಾರೆ ಅಂತಲೂ ತಿಳಿಯಿತು.

ವಾಪಸು ಮನೆಗೆ ಹೊರಟೆ. ದಾರಿಯುದ್ದಕ್ಕೂ ಇದೇ ಯೋಚನೆ. ಇದು ಯಾಕೆ ಹೀಗಾಯಿತು. ಹಳೆಯ ಸ್ಕೂಲಿನಲ್ಲಿ ಚೆನ್ನಾಗಿಯೇ ಮಾರ್ಕ್ಸ್ ತೆಗೀತಿದ್ದನಲ್ಲ. ಫೇಲಾಗೋದು ಅಂದರೆ.... ಇತ್ಯಾದಿ ಇತ್ಯಾದಿ. ಮನಸ್ಸಿಗೆ ಬಹಳ ಬೇಜಾರಾಯಿತು. ಅದರೊಂದಿಗೆ ಮಗನ ಬಗ್ಯೆ ಸಿಟ್ಟಿನ ಬದಲು ಕನಿಕರ ಶುರುವಾಯಿತು. ಈಗ ಬೈಯ್ಯಬಾರದು. ಒಳ್ಳೆ ಮಾತಿನಲ್ಲಿ ತಿಳಿಹೇಳಬೇಕು ಅಂತ ನಿರ್ಧಾರ ಮಾಡಿದೆ.

ಮನಗೆ ಬಂದೆ. ಮಗ ಒಬ್ಬನೇ ಮನೆಯಲ್ಲಿದ್ದ. ಅವನನ್ನು ಹತ್ತಿರ ಕೂರಿಸಿಕೊಂಡು ಮುಂದಿನ ಒಂದು ಘಂಟೆ ದೊಡ್ಡ ಲೆಕ್ಚರು ಕೊಟ್ಟೆ. ನೀನು ಫೇಲಾಗಿದ್ದೀಯ ಎಂದು ಹೇಳಲಿಲ್ಲ. ಅವನಿಗೆ ಗೊತ್ತಿರಬೇಕು ಎಂದು ನನಗೆ ಖಚಿತವಾಗಿತ್ತು. ನನ್ನ ಉಪನ್ಯಾಸ ಎಷ್ಟು ಪರಿಣಾಮಕಾರಿಯಾಗಿತ್ತು ಅಂದರೆ ಅವನ ಕಣ್ಣಲ್ಲಿ ನೀರು ಬಂತು.

ಸ್ವಲ್ಪ ಹೊತ್ತಿಗೆ ನನ್ನ ಹೆಂಡತಿ ಬಂದಳು. ಅವಳಿಗೆ ಮಗ ಫೇಲಾಗಿರುವ ವಿಷಯ ಹೇಳಿ , ಅವನಿಗೆ ಬೈಯ್ಯಬೇಡ ಎಂದು ವಾರ್ನಿಂಗ್ ಕೊಟ್ಟೆ. ಅವಳು ನಂಬಲಿಕ್ಕೇ ತಯಾರಾಗಲಿಲ್ಲ. ಕೊನೆಗೆ ಪಿಂಕ್ ಸ್ಲಿಪ್ ತೋರಿಸಿದೆ.

"ಅಲ್ಲಾರೀ. ಅವನು ಟೆಸ್ಟು , midterm ಪರೀಕ್ಷೇಲಿ ಕಮ್ಮಿ ಮಾರ್ಕು ತಗೊಂಡಿರೋದು ಹೌದು. ಆದರೆ ಫೇಲಾಗೋ ಅಷ್ಟು ಕಮ್ಮಿ ಎಂದೂ ಬಂದಿರಲಿಲ್ಲ " ಅಂತ ಗುಡುಗಿ, ಮಗನಿಗೆ ಅಲ್ಲಿಯವರೆಗೂ ಆದ ಟೆಸ್ಟುಗಳ ಉತ್ತರ ಪತ್ರಿಕೆ ತಗೊಂಬಾ ಅಂತ ಆರ್ಡರು ಮಾಡಿದಳು. ಅವೇನು ತಕ್ಷಣ ಕೈಗೆ ಸಿಗುತ್ತವೆಯೇ. ಎಲ್ಲೆಲ್ಲೋ ಪಸರಿಸಿದ್ದ ಅವನ್ನೆಲ್ಲಾ ಒಟ್ಟು ಮಾಡಿ ನೋಡಿದೆವು. ಗಣಿತದಲ್ಲಿ ಕಮ್ಮಿ ಮಾರ್ಕು ಬಂದದದ್ದು ಖಾತ್ರಿಯಾಯಿತು.

“ಸರಿ, ಆದರೆ ಯಾವುದೇ ಟೆಸ್ಟು ಮತ್ತೆ midterm ಪರೀಕ್ಷೇಲಿ ಪಾಸಿಂಗ್ ಮಾರ್ಕ್ಸ್ ಗಿಂದ ಜಾಸ್ತೀನೇ ಬಂದಿರುವಾಗ, overall ಫೇಲ್ ಆಗಿರೋದು ಹೇಗೆ " ಅಂದಳು.

ಹೌದಲ್ಲಾ, ನನಗಿದು ಹೊಳೆದೇ ಇರಲಿಲ್ಲ. ಮತ್ತೆ ಚೆಕ್ ಮಾಡಿದೆ. ಯಾವ ಟೆಸ್ಟಿನಲ್ಲೂ ಫೇಲಾಗಿರಲಿಲ್ಲ. Midterm ಪರೀಕ್ಷೆಯ್ಲೂ ಪಾಸಿಂಗ್ ಮಾರ್ಕಿಗಿಂದ ಜಾಸ್ತೀನೇ ಇತ್ತು. ಅಂದ ಮೇಲೇ ಫೇಲ್ ಆಗಿರೋದು ಹೇಗೆ. ಶಾಲೆಯವರಿಗೆ explanation ಕೇಳಬೇಕು ಅಂತ ನಿರ್ಧಾರ ಮಾಡಿ , ನನಗೆ ಬರೋ ಇಂಗ್ಲೀಷ್ ಎಲ್ಲಾ ಉಪಯೋಗಿಸಿ, ಮತ್ತೊಮ್ಮೆ ಅವನ ರಿಸಲ್ಟ್ ಪರಿಶೀಲಿಸುವಂತೆ ವಿನಂತಿಸಿ, ಕಾಗದ ಬರೆದೆ. ಅದರೊಂದಿಗೆ ಪಿಂಕ್ ಸ್ಲಿಪ್ ಮತ್ತು ಎಲ್ಲಾ ಟೆಸ್ಟುಗಳ ಉತ್ತರ ಪತ್ರಿಕೆಗಳ ಕಾಪಿ ಲಗತ್ತಿಸಿ , ಟೀಚರಿಗೆ ಕಳಿಸಿಕೊಟ್ಟೆ.

ಕ್ಲಾಸ್ ಟೀಚರು ಮತ್ತೊಮ್ಮೆ ಎಲ್ಲಾ ಪರಿಶೀಲಿಸಿ, ತಪ್ಪಾಗಿರುವುದನ್ನು ಒಪ್ಪಿಕೊಂಡು , ತಿದ್ದಿದರು. ಪಿಂಕ್ ಸ್ಲಿಪ್ ವಾಪಸು ತಗೊಂಡರು. ಅಂತೂ ಸುಖಾಂತ್ಯವಾಯಿತು.
ನಂತರ ನನ್ನ ಮಗ ಚೇತರಿಸಿಕೊಂಡು ಶಾಲೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾನೆ.

ಆದರೆ ಆ ಒಂದು ದಿನ ನ್ನ ಮಗ ಫೇಲಾಗಿದ್ದಾನೆ ಅಂತ ತಿಳಿದಾಗ , ನಮ್ಮೆಲ್ಲರ ಪ್ರತಿಕ್ರಿಯೆ , ಮನಸ್ಸಿನಲ್ಲಿ ಉಂಟಾದ ಭಾವನೆಗಳು ಇವೆಲ್ಲಾ ಇನ್ನೂ ಮನಸ್ಸಿಂದ ಮರೆಯಾಗಿಲ್ಲ.

Rating
No votes yet

Comments