"ಮಾತನಾಡುವ ಪುಸ್ತಕಗಳ" ಗ್ರಂಥಾಲಯ

"ಮಾತನಾಡುವ ಪುಸ್ತಕಗಳ" ಗ್ರಂಥಾಲಯ

ಬರಹ


ದಿಗಂಬರವಾದ,ಬುದ್ಧಿಸಂ,ಕಮ್ಯುನಿಸಂ ಇತ್ಯಾದಿ ಹದಿನಾಲ್ಕು ವಿಷಯಗಳ ಬಗ್ಗೆ ಜೀವಂತ ಪುಸ್ತಕಗಳನ್ನು ಒದಗಿಸುವ ಸೇವೆಯನ್ನು ಕ್ಯಾಲಿಫೋರ್ನಿಯಾದ ಸ್ಯಾಂಟಾ ಮೋನಿಕಾ ಸಾರ್ವಜನಿಕ ಲೈಬ್ರೇರಿಯು ಒದಗಿಸುತ್ತದೆ.ವಿಷಯತಜ್ಞರನ್ನೇ "ಮಾತನಾಡುವ ಪುಸ್ತಕಗಳು" ಎಂದು ಪರಿಗಣಿಸುವ ಈ ಗ್ರಂಥಾಲಯ, ತನ್ನ ಸದಸ್ಯರಿಗೆ ಪುಸ್ತಕಗಳನ್ನು ಎರವಲು ಕೊಡುವಂತೆ ಈ ಪುಸ್ತಕಗಳನ್ನೂ ಎರವಲು ನೀಡುತ್ತದೆ. ಅದರೆ ಇವನ್ನು ದಿನಗಟ್ಟಲೆ ಇಟ್ಟುಕೊಳ್ಳುವ ಹಾಗಿಲ್ಲ. ಈ "ಪುಸ್ತಕಗಳನ್ನು" ಓದುವುದೂ ಸಾಧ್ಯವಿಲ್ಲವಲ್ಲ! ಹಾಗಾಗಿ ಎರವಲು ಪಡೆದ "ಜೀವಂತ ಪುಸ್ತಕ"ದ ಜತೆ ಅರ್ಧ ಗಂಟೆ ಮಾತನಾಡಿ, ಸುಸ್ಥಿತಿಯಲ್ಲಿ ಅದನ್ನು ಗ್ರಂಥಾಲಯಕ್ಕೆ ಮರಳಿಸುವ ಜವಾಬ್ದಾರಿಯೊಂದಿಗೆ ಮಾತನಾಡುವ ಪುಸ್ತಕಗಳ ಎರವಲು ಪಡೆಯಬಹುದು. ಆದರೆ ಗ್ರಂಥಾಲಯದೊಳಗೆ ಮಾತುಕತೆಗೆ ಅವಕಾಶ ನೀಡಿದರೆ ಇತರರಿಗೆ ತೊಂದರೆಯಾಗುತ್ತದೆ ಎಂಬ ದೃಷ್ಟಿಯಿಂದ,ಪುಸ್ತಕಗಳನ್ನು ಹೊರಗೊಯ್ದು ಸಂಭಾಷಿಸಲು ಹೇಳಲಾಗುತ್ತದೆ.ವಿಷಯ ಪರಿಣತರೊಂದಿಗೆ ಸಂಭಾಷಿಸಿ,ಅರ್ಧ ತಾಸಿನೊಳಗೆ ಮುಗಿಸಲಾಗದವರು ಮುಂದೆ ಎರವಲು ಪಡೆಯಲು ಅವಕಾಶ ಸಿಗುತ್ತದೆ. ಮಾತನಾಡುವ ಪುಸ್ತಕದ ಬೇಡಿಕೆಯನ್ನವಲಂಬಿಸಿ, ಇದಕ್ಕೆ ಸಮಯ ನಿಗದಿ ಮಾಡಲಾಗುತ್ತದೆ.ಪುಸ್ತಕವನ್ನು ಒಯ್ಯುವಾಗ ಜಾಗ್ರತೆ ವಹಿಸುವಂತೆ, ಈ ಪುಸ್ತಕಗಳನ್ನೂ ಜಾಗ್ರತೆಯಿಂದ ಉಪಯೋಗಿಸಿ ಮರಳಿಸಲು ಸದಸ್ಯರನ್ನು ಗ್ರಂಥಾಲಯ ಕೇಳುತ್ತದೆ. ಯಾವ ಸ್ಥಿತಿಯಲ್ಲಿ ಪುಸ್ತಕವನ್ನು ಒಯ್ಯಲಾಯಿತೋ ಅದೇ ಸ್ಥಿತಿಯಲ್ಲಿ ಮರಳಿಸುವುದು ಸದಸ್ಯನ ಜವಾಬ್ದಾರಿಯಾಗಿರುತ್ತದೆ.ಪುಸ್ತಕದ ಮನೋಸ್ಥಿತಿಯನ್ನೂ ಇದ್ದ ಸ್ಥಿತಿಯಲ್ಲಿಯೇ ಉಳಿಸಿಕೊಳ್ಳುವುದೂ ಸದಸ್ಯನ ಕರ್ತವ್ಯ.ದಿಗಂಬರವಾದಿ ಬಟ್ಟೆ ಧರಿಸುತ್ತಾನೋ ಇಲ್ಲವೋ ಎಂಬಂತಹ ವಿಷಯಗಳ ಬಗ್ಗೆ ಈ ರೀತಿಯ ಸಂವಹನ ಹೆಚ್ಚು ಬೆಳಕು ಚೆಲ್ಲುತ್ತದೆ ಎನ್ನುವುದು ಸ್ಪಷ್ಟ!
----------------------------------------
ಮುಹೂರ್ತ ನೋಡಿ ಚಂದ್ರಯಾನಕ್ಕೆ ಸಜ್ಜಾಗಿರುವ ಇಸ್ರೋ!
ನಮ್ಮ ವಿಜ್ಞಾನಿಗಳು ರಾಕೆಟ್ ಉಡಾವಣೆಗೆ ಮುಹೂರ್ತ ನೋಡುತ್ತಾರೆ ಎನ್ನುವುದು ಹಳೆಯ ಆರೋಪ. ಆದರೆ ಇದು ಆರೋಪ ಅಲ್ಲ ಸತ್ಯ ವಿಷಯ ಎನ್ನುವವರೂ ಇದ್ದಾರೆ.ಇಸ್ರೋದ ವಿಜ್ಞಾನಿಗಳಲ್ಲಿ ಜ್ಯೋತಿಷ್ಯದ ಹವ್ಯಾಸವನ್ನು ಗಂಭೀರವಾಗಿ ಪರಿಗಣಿಸಿದವರೂ ಇರುವುದರಿಂದ ಅವರು ಚಂದ್ರಯಾನದ ಮುಹೂರ್ತ ಇಡಲು ಇತರ ಜ್ಯೋತಿಷ್ಯಿಗಳ ಮೊರೆ ಹೋಗ ಬೇಕಿಲ್ಲ. ಅಕ್ಟೋಬರ್ ಇಪ್ಪತ್ತೆರಡು ಶುಭಮುಹೂರ್ತವೆಂದು ಈ ಆಸ್ಥಾನ ಜ್ಯೋತಿಷಿಗಳು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಪ್ರತಿ ರಾಕೆಟ್ ಉಡ್ಡಯನದ ಸಂದರ್ಭದಲ್ಲೂ ರಾಕೆಟುಗಳ ಪ್ರತಿಕೃತಿಗಳನ್ನು ಮಾಡಿ,ಅದನ್ನು ತಿರುಪತಿಯಲ್ಲಿ ಬಾಲಾಜಿಯ ಪದತಲದಲ್ಲಿ ಅರ್ಪಿಸುವ ಕ್ರಮವನ್ನು ಇಸ್ರೋದ ಈ ವಿಜ್ಞಾನಿಗಳು ಮರೆಯುವುದಿಲ್ಲವಂತೆ. ಈ ಸಲವೂ ಉಡ್ದಯನದ ಸಿದ್ಧತೆಯ ಜತೆಗೆ ಈ ತಿರುಪತಿ ಸೇವೆಯನ್ನು ಮಾಡಲೂ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವೆನಿಸುತ್ತದೆ.
----------------------------------------------
ಮನೆಗೆ ಪೈಪಿನಲ್ಲಿ ಅಡುಗೆ ಅನಿಲ!
ಅಪಾರ್ಟ್‌ಮೆಂಟುಗಳಲ್ಲಿ ಪ್ರತಿ ಮನೆಯವರೂ ಪ್ರತ್ಯೇಕವಾಗಿ ಅಡುಗೆ ಅನಿಲ ಸಿಲಿಂಡರುಗಳನ್ನು ಹೊಂದಿರುತ್ತಾರೆ. ಒಬ್ಬ ವ್ಯಕ್ತಿಯು ಅಜಾರೂಗಕನಾಗಿದ್ದರೆ, ಅಲ್ಲಿ ಅನಿಲದ ಜಾಡಿ ಸಿಡಿದು,ಇಡೀ ಕಟ್ಟಡವು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದ್ದೇ ಇದೆ. ಜತೆಗೆ ಅನಿಲದ ಜಾಡಿ ಯಾವಾಗೆಂದರೆ ಆಗ ಖಾಲಿಯಾಗಿ, ಮನೆಯವರು ತಾಪತ್ರಯ ಪಡುವ ಸಂದರ್ಭಗಳೂ ಇವೆ. ಈಗ ಹೊಸ ಅಪಾರ್ಟ್‌ಮೆಂಟುಗಳಲ್ಲಿ, ಅಡುಗೆ ಅನಿಲವನ್ನು ಪೈಪ್ ಮೂಲಕ ಪೂರೈಸುವ ವ್ಯವಸ್ಥೆ ಇರುತ್ತದೆ. ಮುಂಬೈ, ಗುಜರಾತ್ ಅಂತಹ ಕಡೆ, ಅಡುಗೆ ಅನಿಲವು ಕೊಳಾಯಿ ಮೂಲಕ ಲಭ್ಯವಿರುವುದರಿಂದ ಅಲ್ಲಿ ಹೀಗೆ ಪೂರೈಕೆಯಾಗುವುದರಲ್ಲಿ ಆಶ್ಚರ್ಯವಿಲ್ಲ. ಆದರೀಗ ಉಡುಪಿಯಂತಹ ಪಟ್ಟಣಗಳಲ್ಲೂ ಇಂತಹ ಸೇವೆ ಅವಶ್ಯಕವೆನಿಸುವಾಗ,ಅದನ್ನು ನೀಡುವುದು ಹೇಗೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.ಅಡುಗೆ ಅನಿಲ ಪೂರೈಸುವ ಕಂಪೆನಿಗಳು ಇಂತಹ ಸೇವೆ ನೀಡಲು ನೆರವಾಗುತ್ತವೆ.ಜಾಡಿಗಳನ್ನು ಇಡಲು ಅಪಾರ್ಟ್‌ಮೆಂಟುಗಳಲ್ಲಿ ಪ್ರತ್ಯೇಕ ಸ್ಥಳ ಇರಬೇಕು.ಹಲವಾರು ಸಿಲಿಂಡರುಗಳನ್ನು ಒಂದೇ ವ್ಯವಸ್ಥೆಯಲ್ಲಿ ಅಳವಡಿಸಿ, ಪೈಪು ಸಂಪರ್ಕವನ್ನು ಪ್ರತಿಮನೆಗೂ ಕೊಡಲಾಗುತ್ತದೆ.ಪ್ರತಿ ಮನೆಯಲ್ಲಿ ಬಳಕೆಯಾಗುವ ಅನಿಲದ ಪ್ರಮಾಣವನ್ನು ಮೀಟರ್ ಬಳಸಿ,ಲೆಕ್ಕ ಹಾಕಿ,ಮಾಸಿಕ ಬಿಲ್ ನೀಡಲಾಗುತ್ತದೆ. ಜಾಡಿಗಳು ಖರ್ಚಾದಂತೆಲ್ಲಾ, ಸೂಚನೆ ಸಿಗುವುದರಿಂದ, ಅವನ್ನು ಬದಲಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ.ಈ ಕೆಲಸವನ್ನು ನಿರ್ವಹಿಸಲು ಅಪಾರ್ಟ್‍ಮೆಂಟಿನ ಮನೆಯವರು ಯಾರನ್ನಾದರೂ ನೇಮಿಸಬಹುದು, ಇಲ್ಲವೇ ಈ ಸೇವೆಯನ್ನು ಹೊರಗುತ್ತಿಗೆ ನೀಡಬಹುದು. ಕೇಂದ್ರೀಕೃತ ವ್ಯವಸ್ಥೆಯಾದ್ದರಿಂದ, ಇಲ್ಲಿ ಸುರಕ್ಷಾ ವ್ಯವಸ್ಥೆಗಳನ್ನು ಅಳವಡಿಸುವುದು ಹೆಚ್ಚು ಸುಲಭ ಮತ್ತು ಖರ್ಚೂ ಕಡಿಮೆ.
---------------------------------------------------------
ಭಾರತದ ಮೊದಲ ಗ್ರಾಫಿಕ್ಸ್ ಚಿಪ್
ಸಂಪೂರ್ಣವಾಗಿ ಭಾರತದಲ್ಲೇ ಅಭಿವೃದ್ಧಿಯಾದ ಗ್ರಾಫಿಕ್ಸ್ ಚಿಪ್‌ನ್ನು ಎನ್‌ವಿಡಿಯಾವು ಈಗ ಬಿಡುಗಡೆ ಮಾಡಿದ್ದು,ಇದನ್ನು ಆಪಲ್ ಕಂಪೆನಿಯ ಹೊಸ ಮ್ಯಾಕ್‌ಬುಕ್ ಲ್ಯಾಪ್‌ಟಾಪ್‌ಗಳಲ್ಲಿ ಬಳಸಲಾಗುತ್ತದೆ.ಗ್ರಾಫಿಕ್ ಚಿಪ್ ಸಾಮಾನ್ಯವಾಗಿ ಬಳಕೆಯಾಗುವ ಕಂಪ್ಯೂಟರ್ ಸಂಸ್ಕಾರಕಕ್ಕೆ ನೆರವು ನೀಡಲು ಇರುವ ಚಿಪ್ ಆಗಿದೆ. ವಿಡಿಯೋ,ಸಂಗೀತದಂತಹ ಸಂಕೇತಗಳನ್ನು ಸಂಸ್ಕರಿಸಲು ಈ ಚಿಪ್ ಬೇಕು. ಈ ಬಹುಮಾಧ್ಯಮ ಕೆಲಸಗಳಿಗೆ ಸಾಮಾನ್ಯ ಸಂಸ್ಕಾರಕವನ್ನು ಅವಲಂಬಿಸಿದರೆ, ಅದು ಇತರ ಕೆಲಸಗಳನ್ನು ನಿರ್ವಹಿಸಲು ಅಡ್ದಿಯಾಗುವುದರಿಂದ, ಈ ಕೆಲಸಗಳಿಗೇ ಪ್ರತ್ಯೇಕ ಚಿಪ್ ಬಳಕೆಯಾಗುತ್ತದೆ.ಎನ್‌ವಿಡಿಯಾದ ಎಪ್ಪತ್ತು ಜನರ ತಂಡ ಈ ವಿನ್ಯಾಸ ಕೆಲಸಕ್ಕೆ ದುಡಿದಿದೆ.ಇತರ ಗ್ರಾಫಿಕ್ಸ್ ಚಿಪ್‌ಗಳ ಐದು ಪಟ್ಟು ವೇಗದಲ್ಲಿ ಈ ಹೊಸ ಸಂಸ್ಕಾರಕ ಕೆಲಸ ಮಾಡುತ್ತದೆ. ಅದರೆ ಇದರ ಗಾತ್ರ ಸಾಮಾನ್ಯ ಚಿಪ್‌ಗಳಿಗಿಂತ ಕಮ್ಮಿ.ಇದರಲ್ಲಿ ಹದಿನಾರು ಕೋರ್‌ಗಳು ಇವೆ. ಚಿಪ್ ಬಳಸುವ ವಿದ್ಯುಚ್ಛಕ್ತಿಯೂ ಕಡಿಮೆ. ಹೀಗಾಗಿ ಲ್ಯಾಪ್‌ಟಾಪ್ ಬ್ಯಾಟರಿ ಹೆಚ್ಚು ಹೊತ್ತು  ಕೆಲಸ ಮಾಡಲು ಶಕ್ತವಾಗುತ್ತದೆ.
-----------------------------------
ಟಾಟಾ ಸ್ಕೈ:ವೈಯುಕ್ತಿಕ ವಿಡಿಯೋ ರೆಕಾರ್ಡರ್ ಸೇವೆ
ಟಾಟಾ ಸ್ಕೈ ಕಂಪೆನಿಯು ಸದ್ಯ ಡಿಟಿಎಚ್ ಸೇವೆ ಒದಗಿಸುತ್ತಿರುವುದು ಎಲ್ಲರಿಗೂ ಗೊತ್ತು. ಈಗ ಈ ಸೇವೆಯಲ್ಲಿ ವಿಡಿಯೋ ರೆಕಾರ್ಡ್ ಸೇವೆಯನ್ನೂ ಪಡೆಯಬಹುದು. ಸುಮಾರು ಒಂಭತ್ತು ಸಾವಿರ ಖರ್ಚು ಮಾಡಿದರೆ, ನಿಮಗೆ ಸೆಟ್ ಟಾಪ್ ಬಾಕ್ಸ್ ನೀಡಲಾಗುತ್ತದೆ. ಈ ಸಾಧನದಲ್ಲಿ ಹಾರ್ಡ್-ಡಿಸ್ಕ್ ಇದೆ. ಹೀಗಾಗಿ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡಲು ಅವಕಾಶ ಸಿಗುತ್ತದೆ. ಎರಡು ಕಾರ್ಯಕ್ರಮಗಳನ್ನು ಮುದ್ರಿಸಿಡಬಹುದು. ಹಾಗಾಗಿ ಸೀರಿಯಲ್ ತಪ್ಪಿಸಿಕೊಳ್ಳುವ ಭಯ ಬೇಕಿಲ್ಲ. ಮನೆಯಲ್ಲಿ ಯಾರಾದರೂ ವೀಕ್ಷಿಸುತ್ತಿರುವ ಕಾರ್ಯಕ್ರಮವನ್ನೂ ಬೇಕೆಂದರೆ ಮುದ್ರಿಸಿಡಬಹುದು.ವಿಡಿಯೋ ರೆಕಾರ್ಡರ್‌ನ್ನು ಹೋಲುವ ಸೇವೆಯಿದಾದ್ದರಿಂದ, ತಡೆದು ತಡೆದು ವೀಕ್ಷಿಸುವ,ಬೇಡವಾದ್ದನ್ನು ಹಾರಿಸಿ ನೋಡುವ ಸೌಲಭ್ಯ ಸಿಗುತ್ತದೆ.ಸಾಮಾನ್ಯವಾಗಿ ನಲುವತ್ತೈದು ಗಂಟೆ ಟಿವಿ ಕಾರ್ಯಕ್ರಮಗಳನ್ನು ಮುದ್ರಿಸಲು ಅಗತ್ಯವಾದ ನೂರಾರುವತ್ತು ಗಿಗಾಬೈಟು ಸ್ಮರಣಸಾಮರ್ಥ್ಯ ಇಲ್ಲಿ ಲಭ್ಯ.
*ಅಶೋಕ್‌ಕುಮಾರ್ ಎ

 

 

ಅಶೋಕ್ ವರ್ಲ್ಡ್

ಉದಯವಾಣಿ

ಇ-ಲೋಕ-   (20/10/2008)