ಪಿತೃ ವಾತ್ಸಲ್ಯ

ಪಿತೃ ವಾತ್ಸಲ್ಯ

ಬರಹ

ನವರಾತ್ರಿಯ ಒಂದು ರಜಾ ದಿನ, ಪ್ರಥಮ ಪಿ.ಯು. ಓದುತ್ತಿದ್ದ ನಾನು, ಅಮ್ಮ ಮಾಡಿಕೊಟ್ಟ ಕಾಫಿ ಹೀರುತ್ತಾ, ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದ ಸೂರ್ಯಾಸ್ತಮಾನವನ್ನು ಒಂದು ರೀತಿಯ ನಿರ್ಲಿಪ್ತತೆಯಿಂದ ನೋಡುತ್ತಿದ್ದೆ. ಸಮಯ ಕಳೆದಂತೆ, ಪಡುವಣದಿಂದ ಮುಗಿಲೆದ್ದು, ವಿವಿಧಾಕೃತಿಯನ್ನು ತಳೆದು, ಬಣ್ಣ ಬಳಿದುಕೊಂಡ ಆಗಸ ಆಕರ್ಷಕವಾಗಿ ಕಾಣಿಸತೊಡಗಿತು. ಮಧ್ಯಾಹ್ನದಿಂದ ಒಂದೇ ಸಮನೆ ಓದುತ್ತಿದ್ದ ನನಗೆ, ಮನದ ವಿಶ್ರಾಂತಿಗಾಗಿ ಬದಲಾವಣೆಯ ಅಗತ್ಯ ತೋರಿದ್ದರಿಂದ, ಅಮ್ಮನಿಗೆ ತಿಳಿಸಿ, ನನ್ನ ಸೈಕಲ್ ಏರಿ, ಮನೆಯಿಂದ ೧ ಕಿ.ಮೀ. ದೂರವಿರುವ ಕಡಲಿನ ಕಡೆಗೆ ತೆರಳಿದೆನು. ಹೊರಡುವಾಗ ಸೂರ್ಯ ಮುಳುಗಿದ ಕೆಲವು ಗಳಿಗೆಯಲ್ಲಿ ಮನೆ ಸೇರುತ್ತೇನೆ ಎಂದೂ, ನೀರಿಗಿಳಿಯುವುದಿಲ್ಲ ಎಂದು ಮನೆಯವರಿಗೆ ಭರವಸೆಯಿತ್ತು ಬಂದಿದ್ದೆ.

ದಾರಿಯ ಇಕ್ಕೆಲಗಳಲ್ಲಿ ಕೊಯ್ಲಿಗೆ ಸಿದ್ಧವಾಗಿ ನಿಂತಿರುವ, ತೆನೆ ತುಂಬಿ, ಸುಳಿದಾಡುವ ಗಾಳಿಗೆ ತೆಲೆದೂಗುವ ಭತ್ತದ ಗದ್ದೆ, ಮಧ್ಯದಲ್ಲಿ ಅಲ್ಲಲ್ಲಿ ಎತ್ತರವಾಗಿ ತಲೆಯೆತ್ತಿ ನಿಂತ ತಾಳೆ ಮರಗಳು, ಅದರ ಗರಿಗಳಿಗೆ ಜೋತು ಬಿದ್ದಂತೆ ಕಟ್ಟಿದ ಗೀಜಗನ ಗೂಡು, ದಾರಿಯಲ್ಲಿ ಕಡಲಿನ ಹಿನ್ನೀರಿಗೆ ಹಾಕಿದ ಪುಟ್ಟ ಸೇತುವೆ, ಅದರ ಮಗ್ಗುಲಲ್ಲಿರುವ ಮೀನಿನ ಕಾರ್ಖಾನೆ, ಮುಂದೆ ಸಿಗುವ ಹೊಯಿಗೆಯ ಬೆಟ್ಟು, ಅದರ ನೆತ್ತಿಯಲ್ಲೊಂದು ಬೊಬ್ಬರ್ಯನ ಗುಡಿ, ಸುತ್ತ ಗಾಳಿ ಮರ, ಪಕ್ಕದಲ್ಲಿನ ಶಾಲೆಯ ಆಟದ ಮೈದಾನದಲ್ಲಿ ಆಡುತ್ತಿರುವ ಹುಡುಗರ ತಂಡ, ಚಿಕ್ಕ ಪುಟ್ಟ ಅಂಗಡಿಗಳು, ಮೀನು ಸಂರಕ್ಷಣೆಗಾಗಿ ತಯಾರಿಸುವ ಮಂಜುಗಡ್ಡೆ ಕಾರ್ಖಾನೆ, ಬಂಡೆಯಂತಹ ಮಂಜುಗಡ್ಡೆಯನ್ನು ದೊಡ್ಡ ದೊಡ್ಡ ಸುತ್ತಿಗೆಯಲ್ಲಿ ಪುಡಿ ಮಾಡಿ ಮೀನಿನ ಲಾರಿಯಲ್ಲಿ ತುಂಬಿಸುವ ಮೊಗವೀರರು, ಕಳ್ಳಿನಂಗಡಿ, ಪುಡಿ ಮೀನು ಮಾರುವ ಬೆಸ್ತರ ಹೆಂಗಸರು, ಅವರು ಬಿಸಾಕಬಹುದಾದಂತಹ ಹಾಳಾದ ಮೀನಿಗಾಗಿ ಆಸೆಯಿಂದ ನೋಡುತ್ತಿರುವ ನಾಯಿಗಳು, ಬೆಕ್ಕುಗಳು, ಆಗ್ಗೆ ಸುಮಾರು ೧೦ ವರ್ಷದಿಂದಲೂ ನೋಡುತ್ತಿರುವುದು ಇದೇ ಸನ್ನಿವೇಷದ ಪುನರಾವರ್ತೆನೆಯಾದರೂ, ಆ ದಾರಿಯಲ್ಲಿ ಸಾಗುವುದು ಇಂದಿಗೂ ಕೂಡ ನನಗೆ ಪ್ರಿಯವಾಗಿದೆ.

ಕಡಲು ಸಮೀಪಿಸುತ್ತಿದ್ದಂತೆ ದಂಡೆಯಲ್ಲಿ ವಿಶಾಲವಾಗಿ ಹರಡಿದ ತೆಂಗಿನ ತೋಪು, ಶುಭ್ರವಾದ ಬಿಳಿ ಬಣ್ಣದ ಹೊಯಿಗೆ ರಾಶಿ,ಸ್ವಾಗತಿಸುತ್ತಿತ್ತು.ಕಡಲಿನಲ್ಲಿ ಬಹು ದೂರ ಸಾಗಿ, ಮೀನಿನ ಹೊರೆ ಹೊತ್ತುಕೊಂಡು ಮರಳಿದ್ದ ಮರದ ದೋಣಿಗಳು, ದಡದಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು. ಕಡಲ ಹಕ್ಕಿಗಳು ತೆರೆಯ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕಿ, ಏಡಿಗಳನ್ನು ಹಿಡಿಯುವ ಕಾರ್ಯದಲ್ಲಿ ಮಗ್ನವಾಗಿತ್ತು. ಸೈಕಲ್ಲಿನಿಂದ ಇಳಿದು ಹೊಯಿಗೆಯಲ್ಲಿ ನಡೆಯುತ್ತಾ, ನನ್ನ ಆಗಮನದಿಂದ ಬೆದರಿದ ಏಡಿಗಳನ್ನು ಅವುಗಳ ಗೂಡಿಗೆ ಓಡಿಸುತ್ತಾ ಮುಂದುವರೆಯುತ್ತಿದ್ದೆ. ನಶೆಯೇರಿಸಿಕೊಂಡು ದಾರಿಯಲ್ಲಿ ತಿರುಗುತ್ತಿರುವವರನ್ನು ಮಾತನಾಡಿಸುತ್ತಾ, ಅವರು ವಿರಳವಾಗತೊಡಗಿದ ನಂತರ ನಡಿಗೆಯನ್ನು ನಿಲ್ಲಿಸಿ ಮರಳಿನ ಮೇಲೆ ಮಲಗಿ ಆಗಸದ ಸವಿಯನ್ನು ಸವಿಯತೊಡಗಿದೆ.ನನಗೆ ಸೂರ್ಯಾಸ್ತಮಾನಕ್ಕಿಂತಲೂ, ಅದರ ನಂತರ ಮುಗಿಲಿನಲ್ಲಾಗುವ ಕಲಾಕೃತಿಯನ್ನು ನೋಡುವುದು ಹೆಚ್ಚು ಪ್ರಿಯ. ಸೂರ್ಯಾಸ್ತಮಾನದಲ್ಲಿ ಕೇವಲ ಹಳದಿ, ಕಿತ್ತಳೆ ವರ್ಣಸಂಯೋಜನೆಯಿದ್ದರೆ, ಅದರ ನಂತರದ ಬಣ್ಣಗಳಾದರೋ ಹಲವು ಬಗೆಯದು, ಅದು ರಚಿಸುವ ಕಲಾಕೃತಿ ಪ್ರತಿ ದಿನವೂ ವಿನೂತನ.

ಕತ್ತಲಾಗತೊಡಗಿದ್ದರಿಂದ ಮರಳುವ ನಿರ್ಧಾರ ಮಾಡಿದೆ. ಮತ್ತೆ ಸೈಕಲ್ ಹತ್ತಿ, ದಾರಿದೀಪವಿಲ್ಲದ, ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ನಿಧಾನಕ್ಕೆ ಸಾಗುತ್ತಿರಬೇಕಾದರೆ, ನನ್ನ ಸ್ನೇಹಿತನ ಬಳಿಯಿರುವ ಪುಸ್ತಕದ ನೆನಪಾಯಿತು. ನಾನು ಹಲವು ದಿನಗಳಿಂದ ಓದಬೇಕೆಂದಿದ್ದ ಪುಸ್ತಕವನ್ನು ಅವನು ಓದಿ ಮುಗಿಸಿದ್ದರಿಂದ, ಅದನ್ನು ಎರವಲು ತಂದು ಓದಬೇಕೆಂದಿದ್ದೆ. ೧೦ ನಿಮಿಷದ ಕೆಲಸ ಎಂದು ಬಗೆದು ಮನೆಯಕಡೆ ಹೋಗದೆ ಸ್ನೇಹಿತನ ಮನೆಯ ಕಡೆ ಸಾಗಿದೆನು. ಕುಶಲೋಪರಿಯನಂತರ ಪುಸ್ತಕವನ್ನು ಕೊಂಡು ಮನೆಗೆ ಮರಳಬೇಕೆಂದಿರುವಾಗ, ಸ್ನೇಹಿತನ ಅಜ್ಜಿ "ನವರಾತ್ರಿ ಪೂಜೆಯ ಊಟ ಮಾಡಿ ಹೋಗು" ಎಂದರುಹಿದರು. ಬಳಕೆಯ ಮನೆಯಾದ್ದರಿಂದ ಹಾಗೂ ಭೋಜನ ಪ್ರಿಯನಾದ್ದರಿಂದ, ಅವರ ಮಾತಿಗೆ ಒಪ್ಪಿ, ಸ್ನೇಹಿತನೊಂದಿಗೆ ಹರಟೆ ಕೊಚ್ಚುತ್ತಾ ಕುಳಿತೆ. ಪುರೋಹಿತರ ಮನೆಯಾದ್ದರಿಂದ ಪೂಜೆ ಸಾವಕಾಶವಾಗಿಯೇ ಸಾಗಿತು. ೮:೩೦ರ ಸಮಯಕ್ಕೆ ಊಟದ ಕರೆ ಬಂದದ್ದರಿಂದ ಕೈ ಕಾಲು ತೊಳೆದು, ಬಾಳೆ ಎಲೆಯ ಮುಂದೆ ಕುಳಿತೆನು. ಕೋಸುಂಬರಿ, ಚಟ್ನಿ, ಮೂರ್ನಾಲ್ಕು ಬಗೆಯ ಪಲ್ಯ, ಚಿತ್ರಾನ್ನ, ಅನ್ನ, ಅದರ ಮೇಲೊಂದಿಷ್ಟು ತುಪ್ಪ, ಕೊನೇಯದಾಗಿ ತೊವ್ವೆ ಬಡಿಸಿದ ಮೇಲೆ "ಹರಹರ ಮಹದೇವ" ಎಂಬ ಘೋಷಣೆಯೊಂದಿಗೆ ನಮ್ಮ ಊಟ ಆರಂಭವಾಯಿತು. ಪದ್ಧತಿಯಂತೆ ಸುತ್ತು ಕಟ್ಟಿ, ಬಡಿಸಿದ ಪದಾರ್ಥಗಳನ್ನು ಒಂದೊಂದಾಗಿ ಭುಂಜಿಸುತ್ತಿದ್ದಂತೆ, ಒಂದರ ಹಿಂದೊಂದರಂತೆ, ಸಾರು,ಹಪ್ಪಳ, ಸಂಡಿಗೆ, ಸೌತೇಕಾಯಿ ಹುಳಿ, ಅನಾನಾಸಿನ ಮುದ್ದು ಹುಳಿ, ಬದನೇಕಾಯಿ ಕಾಯಿ ಹುಳಿ, ಅಲಸಂಡೆಯ ಮಜ್ಜಿಗೆ ಹುಳಿ,ವಿವಿಧ ಬಗೆಯ ಭಕ್ಷ್ಯಗಳು, ಬೆಲ್ಲದ ಪಾಯಸ, ಹಣ್ಣಿನ ರಸಾಯನಗಳನ್ನು ಸವಿದು, ಮಜ್ಜಿಗೆಗಾಗಿ ಅನ್ನ ಹಾಕಿಸಿಕೊಂಡು ಕಟ್ಟೆ ಕಟ್ಟುತ್ತಿರಬೇಕಾದರೆ ಅವರ ಮನೆಯ ದೂರವಾಣಿ ರಿಂಗಿಸಲಾರಂಭಿಸಿತು. ಸ್ನೇಹಿತ ಕರೆಯನ್ನು ಸ್ವೀಕರಿಸಿ "ಹೌದು ಇಲ್ಲೇ ಊಟ ಮಾಡುತ್ತಾ ಇದ್ದಾನೆ" ಎಂದು ನನ್ನ ಕಡೆ ನೋಡಿ, ನಿಮ್ಮ ಮನೆಯವರು ಎಂದು ಅರುಹಿದ.

೬ ಗಂಟೆಗೆ ಮನೆ ಬಿಟ್ಟ ಒಬ್ಬನೇ ಮಗ, ಮನೆಗೆ ಹಿಂದಿರುಗದೇ ಇದ್ದುದಕ್ಕಾಗಿ ಗಾಬರಿಯಾಗಿ ಕರೆ ಮಾಡಿರಬಹುದೆಂದು ತಿಳಿದು, ಊಟ ಮುಗಿಸಿ ಆತುರ, ಅಳುಕಿನೊಂದಿಗೆ ಮನೆಯ ಕಡೆ ತೆರಳಿದೆ. ದಾರಿಯಲ್ಲಿ ಸಿಕ್ಕಿದ ಎಲ್ಲಾ ಅಂಗಡಿಯವರ ನೋಟ ಎಂದಿನಂತಿರದೆ ವಿಚಿತ್ರವಾಗಿತ್ತು. ಮನೆಗೆ ಹೋದರೆ,ಅಪ್ಪ, ಅಮ್ಮ, ಎದುರು ಮನೆ ಚಿಕ್ಕಪ್ಪ, ಪಕ್ಕದೂರಿನ ಬಾವ,ಅಕ್ಕಂದಿರು, ಪಕ್ಕದ ಮನೆಯವರು ಎಲ್ಲರೂ ನನ್ನ ಬರವಿಗಾಗಿ ಕಾದಿದ್ದರು. ನನ್ನ ಬೇಜವಾಬ್ದಾರಿ ತನಕ್ಕೆ, ಎಲ್ಲರಿಂದಲೂ ಮಂಗಳಾರತಿ ಮಾಡಿಸಿಕೊಂಡು, ಎನೂ ಮಾತನಾಡದೆ ಚಾಪೆ ಬಿಡಿಸಿ ಮಲಗಿದೆ. ಕೇವಲ ಮನೆಗೆ ತಿಳಿಸದೆ ಊಟಕ್ಕೆ ಹೋಗಿದ್ದಕ್ಕಾಗಿ, ಊರನ್ನೆಲ್ಲಾ ಹುಡುಕಿ, ನನ್ನ ಮಾನ ಕಳೆದು ಹಾಕಿದರಲ್ಲಾ, ನಾನು ನಾಳೆಯಿಂದ ಊರಿನವರಿಗೆ ಹೇಗೆ ಮುಖ ತೋರಿಸಲಿ, ಅವರು ಕೇಳುವ ಪ್ರಶ್ನೆಗಳಿಗೆ ಏನೆಂದು ಉತ್ತರ ಕೊಡಲಿ, ಎಂದು ಅಪ್ಪನ ಮೇಲೆ ಕೋಪಗೊಂಡೆ. ನನ್ನ ಮೊಂಡುತನಕ್ಕೆ ಬೇಸತ್ತು ನನ್ನ ಅಮ್ಮ ನಾ ಮಲಗಿದ್ದಲ್ಲಿಗೆ ಬಂದು ನಡೆದ ಘಟನೆಯನ್ನು ಸವಿಸ್ತಾರವಾಗಿ ಹೇಳತೊಡಗಿದಳು. ೭:೩೦ ಆದರೂ ಕಡಲಿನಿಂದ ಹಿಂದಿರುಗದಿದ್ದರಿಂದ ನೀರಿಗಿಳಿದು ಏನಾದರೂ ಅನಾಹುತ ಮಾಡಿಕೊಂಡೆನೋ ಎಂದು ಬಗೆದ ಅಪ್ಪ, ಉಬ್ಬಸದಿಂದ ಏಗುತ್ತಿರುವ ಶರೀರ ಹೊತ್ತುಕೊಂಡು, ಕಡಲಿನವರೆಗೂ ಕಾಲ್ನಡಿಗೆಯಿಂದ ಸಾಗಿ, ಎರಡು ಮಗ್ಗುಲಲ್ಲೂ ತಮ್ಮ ಕುರುಡು ಟಾರ್ಚ್ನಿಂದ ಹುಡುಕಿ, ನನ್ನ ಕುರುಹು ಕಾಣದೆ, ಎಲ್ಲಾ ಅಂಗಡಿಗಳಲ್ಲೂ ವಿಚಾರಿಸಿ ಅಲ್ಲಿಯೂ ಎನೂ ಸುಳಿವು ದೊರಕದೆ, ಒಬ್ಬೊಬ್ಬರಿಗಾಗಿ ಕರೆ ಮಾಡ ತೊಡಗಿ, ನನ್ನ ಸ್ನೇಹಿತನ ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಮೇಲೇ ಅವರು ನಿರಮ್ಮಳರಾದರೆಂದು. ಇದನ್ನು ಕೇಳುತ್ತಾ ನನ್ನ ದಿಂಬು ನನಗರಿವಿಲ್ಲದಂತೆಯೇ ತೋಯ್ದಿತ್ತು, ಈ ವರ್ಷ ಎಂದಿಗಿಂತ ತುಸು ಹೆಚ್ಚೇ ಉಬ್ಬಸದಿಂದ ಬಳಲಿದ್ದರೂ, ಅವರು ತೋರಿದ ಮಮತೆಯ ಮುಂದೆ ನನ್ನ ಅವಮಾನ ತುಂಬಾ ಚಿಕ್ಕದೆನಿಸಿತು.